SIR ಅವೈಜ್ಞಾನಿಕ, ಅಸಂವಿಧಾನಿಕ: ಜಾರಿಗೆ ನಾಗರೀಕ ಮತಕಾವಲು ಸಮಿತಿ ವಿರೋಧ

ಬೆಂಗಳೂರು: ಕರ್ನಾಟಕದ ಮತದಾರರ ಹಕ್ಕನ್ನು ರಕ್ಷಿಸಿಕೊಳ್ಳಲು ರಾಜ್ಯ ಮಟ್ಟದಿಂದ ಬೂತ್‌ ಮಟ್ಟದ ತನಕ ನಾಗರೀಕ ಮತ ಕಾವಲು ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಒಕ್ಕೊರಲ ಜೊತೆ ಜುಲೈ 6ರಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. SIR 

SIR ಎಂಬುದು ಅವೈಜ್ಞಾನಿಕವಾದ, ಅಸಂವಿಧಾನಿಕವಾದ, ದೋಷಪೂರಿತವಾದ ಹಾಗೂ ದುರುದ್ದೇಶಪೂರಿತವಾದ ಪ್ರಕ್ರಿಯೆ ಆಗಿರುವುದರಿಂದ, SIR ನಡೆದಿರುವ ರಾಜ್ಯಗಳಲ್ಲಿ ಲಕ್ಷಾಂತರ ಅರ್ಹ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿರುವುದರಿಂದ ಸಮಗ್ರ ಅವಲೋಕನವಾಗಿ, ಜನಸ್ನೇಹಿ ತಿದ್ದುಪಡಿಗಳನ್ನು ಮಾಡದೆ ಜಾರಿಗೊಳಿಸಬಾರದು ಎಂದು ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಒಕ್ಕೊರಲ ಜೊತೆ ಒತ್ತಾಯಿಸಿದ್ದೆವು.

ಇದಕ್ಕಾಗಿ “SIR ವಿರೋಧಿ ಕರ್ನಾಟಕ ಎಂಬ ವೇದಿಕೆಯನ್ನೂ ರೂಪಿಸಿಕೊಂಡು ಸಾಕಷ್ಟು ಪ್ರಚಾರ, ಪ್ರತಿಭಟನೆ, ಒತ್ತಡ ಹೇರುವ ಚಟುವಟಿಕೆಗಳನ್ನು ನಡೆಸಿದ್ದೆವು. ದುರಂತವೆಂದರೆ ಚುನಾವಣಾ ಆಯೋಗ ಒಂದಿಂಚಿನ ಬದಲಾವಣೆಗಳನ್ನೂ ಮಾಡಿಲ್ಲ. ಕನಿಷ್ಟ ನಾವು ಬರೆದಿರುವ ನೂರಾರು ಪತ್ರಗಳಿಗೆ ಔಪಚಾರಿಕ ಉತ್ತರವನ್ನೂ ಕೊಟ್ಟಿಲ್ಲ. ಸರ್ವಾಧಿಕಾರಿ ರೀತಿಯಲ್ಲಿ SIR ಅನ್ನು ಜಾರಿಗೊಳಿಸುತ್ತಿದೆ. ಇಡೀ ಪ್ರಕ್ರಿಯೆ ಗೊಂದಲದ ಗೂಡಾಗಿ, ಸಾಕಷ್ಟು ಅವ್ಯವಸ್ಥಿತವಾಗಿ ನಡಿಯುತ್ತಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ: ಮೋದಿ – ಬಿಜೆಪಿ ಮೇಲೆ ರಾಜಕೀಯ ಒತ್ತಡ ಏಕೆ ಹೆಚ್ಚಾಗಿದೆ?

ಇದೆಲ್ಲದರ ಜೊತೆಗೆ ಬಂಗಾಳದಲ್ಲಿ ಜಾರಿಗೆ ತರಲಾದ “ತಾರ್ಕಿಕ ವ್ಯತ್ಯಾಸ (ಲಾಜಜಿಕಲ್‌ ಡಿಸ್ಕ್ರಿಪೆನ್ಸಿ)” ಸಾಫ್ಟ್‌ ವೇರ್‌ ಅನ್ನು ಕರ್ನಾಟಕದಲ್ಲೂ ಬಳಸಲು ತೀರ್ಮಾನಿಸಿರುವುದರಿಂದ ಮತ್ತು ಬಂಗಾಳಕ್ಕಿಂತ ಹೆಚ್ಚು ಮಾನದಂಡಗಳನ್ನು ಪಟ್ಟಿ ಮಾಡಿರುವುದರಿಂದ ಒಂದು ಕೋಟಿಗಿಂತ ಹೆಚ್ಚು ಜನರಿಗೆ ಮುಂದಿನ ತಿಂಗಳು ನೋಟೀಸ್‌ ಜಾರಿಯಾಗುವ ಸಂಭವವಿದೆ. ಎಲ್ಲರೂ ದಾಖಲೆ ಜೋಡಿಸಲು ಪರದಾಡಬೇಕಾದ ಅರಾಜಕ ಪರಿಸ್ಥಿತಿ ನಿರ್ಮಾಣವಾಗಲಿದೆ. ಲಕ್ಷಾಂತರ ಸಂಖ್ಯೆಯ ಅರ್ಹ ಮತದಾರರು, ವಿಶೇಷವಾಗಿ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ – ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜನಜಾತಿಗಳ ಕಡುಬಡವರು, ಅನಕ್ಷರಸ್ಥರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ.

ಕರ್ನಾಟಕದ ಮತದಾರರ, ವಿಶೇಷವಾಗಿ ದುರ್ಬಲ ಸಮುದಾಯಗಳ ಹಕ್ಕನ್ನು ರಕ್ಷಿಸಲು ಕರ್ನಾಟಕದ ನಾಗರೀಕ ಸಂಘಟನೆಗಳು ಹಾಗೂ ಪಕ್ಷಗಳೆಲ್ಲಾ ಸೇರಿ ನಾಗರೀಕ ಮತ ಕಾವಲು ಸಮಿತಿ ಹೆಸರಿನಲ್ಲಿ ವಿಶಾಲವಾದ ಮತ್ತು ವಿಶಿಷ್ಟವಾದ ಅಭಿಯಾನವನ್ನು ಬೂತ್‌ ಮಟ್ಟದವರೆಗೂ ಕಟ್ಟಿ ನಡೆಸಲು ತೀರ್ಮಾನಿಸಿವೆ.

ಮತ ಕಾವಲು ಸಮಿತಿ ಕೆಳಕಂಡ ಐದು ಪ್ರಮುಖ ಗುರಿಗಳನ್ನು ಇಟ್ಟುಕೊಂಡಿದೆ.

1. SIR ಪ್ರಕ್ರಿಯೆಯಲ್ಲಿ ಜನರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಪ್ರತಿನಿತ್ಯ ಗ್ರೌಂಡ್‌ ರಿಪೋರ್ಟ್‌ ಸಂಗ್ರಹಿಸಿ ಸಂಬಂಧಿತ ಅಧಿಕಾರಿಗಳ ಹಾಗೂ ಮಾಧ್ಯಮಗಳ ಗಮನಕ್ಕೆ ತರುವುದು.

2. ಸಾಧ್ಯವಾದಷ್ಟು ಮಟ್ಟಿಗೆ ಜನರ ಗೊಂದಲಗಳಿಗೆ ಪರಿಹಾರ ಸೂಚಿಸಿ ಸೂಕ್ತ ರೀತಿಯಲ್ಲಿ ನೊಂದಾವಣಿ ಮಾಡಿಕೊಳ್ಳಲು ನೆರವಾಗುವುದು.

3. ಜನರ ನೆರವಿಗಾಗಿ ಕರ್ನಾಟಕ ಸರ್ಕಾರ ಪ್ರಾರಂಭಿಸುವುದಾಗಿ ಹೇಳಿರುವ “ಹೆಲ್ಪ್‌ ಡೆಸ್ಕ್‌” ಮತ್ತು ಶಾಶ್ವತ ವಾಸ ಧೃಡೀಕರಣ ಪತ್ರ; ವಿತರಿಸುವ ಪ್ರಕ್ರಿಯೆ ಕಾರ್ಯರೂಪಕ್ಕೆ ಬರುವಂತೆ ನಿಗರಾಣಿವಹಿಸುವುದು. ಅಗತ್ಯ ನೆರವನ್ನು ನೀಡುವುದು.

4. ಪ್ರತಿ ಬೂತಿನಲ್ಲಿರುವ ಅರ್ಹ ಮತದಾರರ ಪಟ್ಟಿ ಮಾಡುವುದು, ನೋಟೀಸ್‌ ಪಡೆದ ಅರ್ಹ ಮತದಾರರನ್ನು ಗುರುತಿಸಿ ನೆರವಾಗುವುದು, ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಡುವ ಮತದಾರರನ್ನು ಸಂಘಟಿಸಿ ಅವರ ಸೇರ್ಪಡೆಗಾಗಿ ಅಗತ್ಯ ಪ್ರಯತ್ನ ಹಾಗೂ ಹೋರಾಟಗಳನ್ನು ಮಾಡುವುದು.

5. ಅರ್ಹ ಮತದಾರರ ರಕ್ಷಣೆಗಾಗಿ “ವಿಶೇಷ ಗ್ರಾಮ/ವಾರ್ಡ್‌ ಸಭೆ”ಗಳನ್ನು ಕರೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುವುದು.

ಈ ಐದು ಅಂಶಗಳ ಜಾರಿಗಾಗಿ ಇದೇ 8 ರಿಂದ 15 ರ ತನಕ ರಾಜ್ಯ ಮಟ್ಟದಿಂದ ಬೂತ್‌ ಮಟ್ಟದ ತನಕ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಜಾತಂತ್ರದ ಬುನಾದಿಯನ್ನು ಭದ್ರವಾಗುಳಿಸಿಕೊಳ್ಳಲು ನಡೆಯುತ್ತಿರುವ ಈ ಅಭಿಯಾನದಲ್ಲಿ ಎಲ್ಲಾ ಜವಬ್ದಾರಿಯುತ ನಾಗರೀಕರು, ವಿಶೇಷವಾಗಿ ಯುವಕ-ಯುವತಿಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕೋರುತ್ತಿದ್ದೇವೆ. “ಮತ ಕಾವಲು ಅಭಿಯಾನ”ದ ಭಾಗವಾಗಲು ಬಯಸುವವರು ಮೊಬೈಲ್‌ ನಂಬರ್‌ 96060 87560ಗೆ ಮಿಸ್ಡ್ ಕಾಲ್‌ ಕೊಡಬೇಕೆಂದು ಮನವಿ ಮಾಡುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ರೈತ ನಾಯಕ ವೀರ ಸಂಗಯ್ಯ, ನೂರ್ ಶ್ರೀಧರ್, ಸಿಪಿಐ(ಎಂ) ಮುಖಂಡ ಬಾಲಕೃಷ್ಣ ಶೆಟ್ಟಿ, ಎದ್ದೇಳು ಕರ್ನಾಟಕದ ತಾರಾರಾವ್, ಶ್ರೀರಾಮ್, ನಾಗೇಶ್ ಸೇರಿದಂತೆ ಹಲವರು ಇದ್ದರು.

ಇದನ್ನೂ ನೋಡಿ: ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು

Donate Janashakthi Media

Leave a Reply

Your email address will not be published. Required fields are marked *