ನೀಟ್‌ ಮತ್ತು ಎನ್‌ಟಿಎ ರದ್ದುಪಡಿಸಲು ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸಿ: ನಾಗರಿಕ ಸಮಾಜದ ಆಗ್ರಹ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಕಡ್ಡಾಯಗೊಳಿಸಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮುಂಬರುವ ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಬೇಕೆಂದು ಕರ್ನಾಟಕದ ನಾಗರಿಕ ಸಮಾಜದ ಪ್ರತಿನಿಧಿಗಳು ಆಗ್ರಹಿಸಿದ್ದಾರೆ. ನೀಟ್‌

ನೀಟ್‌ ವ್ಯವಸ್ಥೆಯು ಸಂವಿಧಾನದ ಒಕ್ಕೂಟ ತತ್ವ, ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವೈದ್ಯಕೀಯ ಪ್ರವೇಶದ ನೀತಿ ಮತ್ತು ಪ್ರಕ್ರಿಯೆಯನ್ನು ರಾಜ್ಯಗಳಿಗೆ ಮರಳಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಶಿಕ್ಷಣವು ಸಂವಿಧಾನದ ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಯ ವಿಷಯವಾಗಿದ್ದರೂ, ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ–2019ರ ಸೆಕ್ಷನ್‌ 14ರ ಮೂಲಕ ಏಕರೂಪದ ನೀಟ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವುದು ವೈದ್ಯಕೀಯ ಪ್ರವೇಶದಲ್ಲಿ ರಾಜ್ಯಗಳ ಅಧಿಕಾರವನ್ನು ಕುಗ್ಗಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ದೇಶದ ವಿವಿಧ ರಾಜ್ಯಗಳ ಪಠ್ಯಕ್ರಮ, ಭಾಷೆ, ಗ್ರಾಮೀಣ–ನಗರ ಅಸಮಾನತೆ ಹಾಗೂ ಸಾಮಾಜಿಕ–ಆರ್ಥಿಕ ವೈವಿಧ್ಯವನ್ನು ಪರಿಗಣಿಸದೆ ಒಂದೇ ಪರೀಕ್ಷೆಯನ್ನು ಅರ್ಹತೆಯ ಮಾನದಂಡವನ್ನಾಗಿ ಮಾಡುವುದು ವಾಸ್ತವ ಸಮಾನತೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಲಾಗಿದೆ.

ನೀಟ್‌ ಪರೀಕ್ಷೆಯು ವಿದ್ಯಾರ್ಥಿಗಳ ಎರಡು ವರ್ಷಗಳ ನಿರಂತರ ಕಲಿಕೆ ಮತ್ತು ಪರಿಶ್ರಮವನ್ನು ಒಂದೇ ದಿನದ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಗೆ ಸೀಮಿತಗೊಳಿಸಿದೆ ಎಂದು ನಾಗರಿಕ ಸಮಾಜದ ಪ್ರತಿನಿಧಿಗಳು ಹೇಳಿದ್ದಾರೆ. ದುಬಾರಿ ತರಬೇತಿ ಪಡೆಯುವ ಸಾಮರ್ಥ್ಯ ಹೊಂದಿರುವ ನಗರ ಮತ್ತು ಆರ್ಥಿಕವಾಗಿ ಸಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಸರ್ಕಾರಿ ಶಾಲೆ, ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮ ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅಸಮಾನ ಸ್ಪರ್ಧೆ ಎದುರಾಗುತ್ತಿದೆ ಎಂದು ತಿಳಿಸಿದ್ದಾರೆ. ನೀಟ್‌

ಇದರ ಜೊತೆಗೆ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ಲೋಪಗಳು ಹಾಗೂ ಅಂಕಗಳ ವಿಶ್ವಾಸಾರ್ಹತೆಯ ಕುರಿತ ವಿವಾದಗಳು ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ದ್ವಿತೀಯ ಪಿಯುಸಿ ಅಥವಾ +2ರ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಅಂಕಗಳ ಆಧಾರದ ಮೇಲೆ, ವೈಜ್ಞಾನಿಕ ನಾರ್ಮಲೈಸೇಷನ್‌ ಹಾಗೂ ಸಂವಿಧಾನಬದ್ಧ ಮೀಸಲಾತಿ ನಿಯಮಗಳನ್ನು ಪಾಲಿಸಿ ಪ್ರವೇಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದರಿಂದ ಶಾಲಾ ಶಿಕ್ಷಣಕ್ಕೆ ಮಹತ್ವ ದೊರೆಯುವುದರ ಜೊತೆಗೆ ಕೋಚಿಂಗ್‌ ಕೇಂದ್ರಗಳ ಅವಲಂಬನೆ, ಕುಟುಂಬಗಳ ಆರ್ಥಿಕ ಹೊರೆ ಮತ್ತು ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ಪಡೆಯಲು 2021ರಲ್ಲಿ ಪ್ರತ್ಯೇಕ ಮಸೂದೆ ಅಂಗೀಕರಿಸಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕವೂ ಸಂವಿಧಾನದ ಅನುಚ್ಛೇದ 254(2)ರ ಅಡಿಯಲ್ಲಿ ಅಗತ್ಯ ರಾಜ್ಯ ಶಾಸನ ರೂಪಿಸಿ ರಾಷ್ಟ್ರಪತಿಯ ಪರಿಗಣನೆಗೆ ಕಳುಹಿಸಬಹುದು ಎಂದು ನಾಗರಿಕ ಸಮಾಜದ ಪ್ರತಿನಿಧಿಗಳು ತಿಳಿಸಿದ್ದಾರೆ. ನೀಟ್‌

ಇದನ್ನೂ ಓದಿ : ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಒಡಿಶಾದಲ್ಲಿ ಭಾರಿ ಮಳೆ: ಆರೆಂಜ್ ಅಲರ್ಟ್

ಪ್ರಮುಖ ಆಗ್ರಹಗಳು

ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ನೀಟ್‌ ರದ್ದುಪಡಿಸಿ ವೈದ್ಯಕೀಯ ಪ್ರವೇಶದ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಎನ್‌ಟಿಎಯನ್ನು ರದ್ದುಪಡಿಸಿ ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.

ಅಲ್ಲದೆ, ದ್ವಿತೀಯ ಪಿಯುಸಿ/+2 ಅಂಕಗಳು, ವೈಜ್ಞಾನಿಕ ನಾರ್ಮಲೈಸೇಷನ್‌ ಮತ್ತು ಸಂವಿಧಾನಬದ್ಧ ಮೀಸಲಾತಿಯ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡುವ ರಾಜ್ಯ ನೀತಿ ರೂಪಿಸಬೇಕು. ತಮಿಳುನಾಡು ಮಾದರಿಯಲ್ಲಿ ಪ್ರತ್ಯೇಕ ಮಸೂದೆ ರೂಪಿಸಿ ರಾಷ್ಟ್ರಪತಿಯ ಅಂಕಿತಕ್ಕಾಗಿ ಕಳುಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು, ವೈದ್ಯಕೀಯ ಶಿಕ್ಷಣ ಪರಿಣತರು, ಸಾಮಾಜಿಕ ನ್ಯಾಯ ಚಳವಳಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಮತ್ತು ನೀಟ್‌ ವಿರೋಧಿ ನಿಲುವು ಹೊಂದಿರುವ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ರಾಜ್ಯಗಳ ಶೈಕ್ಷಣಿಕ ಹಕ್ಕು ಹಾಗೂ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ರಾಷ್ಟ್ರಮಟ್ಟದ ಪ್ರಯತ್ನವನ್ನು ಮುನ್ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ತಕ್ಷಣ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಮಾಜದ ಪ್ರತಿನಿಧಿಗಳು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ಮನವಿಗೆ ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನ್ಯಾಯಮೂರ್ತಿ ಗೋಪಾಲ ಗೌಡ, ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ಸಾಹಿತಿಗಳಾದ ಮೂಡ್ನಾಕೂಡ ಚಿನ್ನಸ್ವಾಮಿ, ಮೀನಾಕ್ಷಿ ಬಾಳಿ, ಚಿಂತಕರಾದ ಬಿ ಸುರೇಶ, ಚಂದ್ರಕಾಂತ ವಡ್ಡು, ಆಜ್ಮೀರ ನಂದಾಪುರ  ಪತ್ರಕರ್ತ ರಾಜಾರಾಮ ತಲ್ಲೂರು ಸೇರಿದಂತೆ 116 ಮಂದಿ ನಾಗರಿಕ ಸಮಾಜದ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.ನೀಟ್‌

ಇದನ್ನೂ ನೋಡಿ : ರೈತ–ಕಾರ್ಮಿಕರ ಜೈಲ್‌ ಭರೋ: ಕೇಂದ್ರದ ನೀತಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *