ಹಾಸನ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಬಕ್ರಿದ್ ಅನ್ನು ಮೇ 28ರಂದು ಜಿಲ್ಲೆಯಾದ್ಯಂತ ಭಕ್ತಿಭಾವ ಮತ್ತು ಸೌಹಾರ್ದತೆಯಿಂದ ಆಚರಿಸಲಾಗುತ್ತಿದ್ದು, ಗೋವಂಶದ ಯಾವುದೇ ಪ್ರಾಣಿಗಳನ್ನು ವಧೆ ಮಾಡದಂತೆ ಮುಸ್ಲಿಂ ಸಮುದಾಯಕ್ಕೆ ವಕೀಲರು ಹಾಗೂ ಮುಸ್ಲಿಂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಅನ್ಷಾದ್ ಇ ಪಾಳ್ಯ ಮನವಿ ಮಾಡಿದರು. ಬಕ್ರಿದ್
ಪತ್ರಿಕಾಗೋಷ್ಠಿಯಲ್ಲಿ ಮೇ 26ರಂದು ಮಾತನಾಡಿದ ಅವರು,ಇದೇ ಈ ವೇಳೆ, ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಜಾನುವಾರು ವಧೆ ಹಾಗೂ ಸಾಗಾಟ ಪ್ರತಿಬಂಧಕ ಕಾಯ್ದೆ-2020 ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಒಕ್ಕೂಟ, ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹಾಸನ ಜಿಲ್ಲೆಯಾದ್ಯಂತ ಗೋವಂಶದ ಯಾವುದೇ ಪ್ರಾಣಿಗಳನ್ನು ವಧೆ ಮಾಡದಂತೆ ಮುಸ್ಲಿಂ ಸಮುದಾಯಕ್ಕೆ ಕೋರಿದರು.
ಬಕ್ರಿದ್ ಹಬ್ಬ ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದ್ದು, ಈ ಸಂದರ್ಭದಲ್ಲಿ ಕುರಿ, ಮೇಕೆ, ಒಂಟೆ ಸೇರಿದಂತೆ ವಿವಿಧ ಪ್ರಾಣಿಗಳ ಕುರ್ಬಾನಿ ನೀಡುವುದು ಸಂಪ್ರದಾಯವಾಗಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಜಾನುವಾರು ವಧೆ ಹಾಗೂ ಸಾಗಾಟ ಪ್ರತಿಬಂಧಕ ಕಾಯ್ದೆಯನ್ನು ಕೆಲ ಸಂಘಟನೆಗಳು ಹಾಗೂ ಕೆಲವು ವ್ಯಕ್ತಿಗಳು ದುರುಪಯೋಗಪಡಿಸಿಕೊಂಡು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ- ಎಸ್‌ಐಆರ್
ಈ ಕಾಯ್ದೆ ಆಹಾರದ ಹಕ್ಕು, ಧಾರ್ಮಿಕ ಹಕ್ಕು ಹಾಗೂ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಉಂಟುಮಾಡುವಂತಹ ಅನೇಕ ಅಂಶಗಳು ಈ ಕಾಯ್ದೆಯಲ್ಲಿ ಅಡಕವಾಗಿವೆ ಎಂದು ಹೇಳಿದರು. “ನಾವು ಈ ನೆಲದ ಕಾನೂನಿಗೆ ಗೌರವ ನೀಡಿ ಸೌಹಾರ್ದತೆಯಿಂದ ಬದುಕುತ್ತಿರುವ ನಾಗರಿಕರು. ಆದರೆ ಕೋಮುವಾದದ ಮೂಲಕ ಸಮಾಜವನ್ನು ವಿಭಜಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದರಿಂದ ನಾವು ಬೆದರಿಕೊಳ್ಳುವುದಿಲ್ಲ” ಎಂದು ಮುಖಂಡರು ಸ್ಪಷ್ಟಪಡಿಸಿದರು.
ಜಾನುವಾರು ಸಾಗಾಟದ ಹೆಸರಿನಲ್ಲಿ ರೈತರು ಹಾಗೂ ವ್ಯಾಪಾರಸ್ಥರನ್ನು ತಡೆದು ವಾಹನಗಳನ್ನು ಪೊಲೀಸರಿಗೆ ಒಪ್ಪಿಸುವ ಘಟನೆಗಳು ಹೆಚ್ಚುತ್ತಿವೆ. ವಾರದ ಸಂತೆಯಲ್ಲಿ ಜಾನುವಾರು ಖರೀದಿಸಲು ಅವಕಾಶ ನೀಡಿ ನಂತರ ಸಾಗಾಟದ ವೇಳೆ ತಡೆದು ಕಿರುಕುಳ ನೀಡುವುದು ಅನ್ಯಾಯವಾಗಿದೆ ಎಂದು ಹೇಳಿದರು. ಇಂತಹ ಕ್ರಮಗಳಿಂದ ರೈತರು, ವ್ಯಾಪಾರಸ್ಥರು ಮತ್ತು ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ದೂರಿದರು.
ಇದಲ್ಲದೆ, ಹಾಸನ ನಗರದ ಮುಸ್ಲಿಂ ಸಮುದಾಯ ಹೆಚ್ಚಿರುವ ಮೊಹಲ್ಲಾಗಳಲ್ಲಿ ಬೆದರಿಕೆ ಹುಟ್ಟಿಸುವ ರೀತಿಯ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಿರುವುದು ಸಮುದಾಯದ ಆತಂಕಕ್ಕೆ ಕಾರಣವಾಗಿದೆ ಎಂದು ದೂರಿದರು.
ಯಾವುದೇ ಅಧಿಕೃತ ಸರ್ಕಾರದ ಪ್ರಕಟಣೆಗಳಿಲ್ಲದೇ ಅನಧಿಕೃತವಾಗಿ ಇಂತಹ ಬ್ಯಾನರ್‌ಗಳನ್ನು ಅಳವಡಿಸಿರುವುದು ಸರಿಯಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ತಕ್ಷಣವೇ ಇವುಗಳನ್ನು ತೆರವುಗೊಳಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಸಮುದಾಯ ಈಗಾಗಲೇ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿಗೆ ಕಾನೂನು ರೂಪಿಸುವ ಬದಲು, ಬೆದರಿಕೆ ಮತ್ತು ಒತ್ತಡದ ವಾತಾವರಣ ನಿರ್ಮಿಸುವುದು ಸರಿಯಲ್ಲ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಎಲ್ಲಾ ಮುಸ್ಲಿಂ ಸಂಘಟನೆಗಳ ಮುಖಂಡರು ಈ ಕುರಿತು ಚರ್ಚಿಸಿ, ಸರ್ಕಾರ ಈ ಕಾಯ್ದೆಯನ್ನು ವಾಪಸ್ಸು ಪಡೆಯುವವರೆಗೂ ಜಿಲ್ಲೆಯಾದ್ಯಂತ ಯಾರೂ ಗೋವಂಶದ ಪ್ರಾಣಿಗಳನ್ನು ವಧೆ ಮಾಡಬಾರದು ಹಾಗೂ ಜಾನುವಾರು ಸಂತೆಯಲ್ಲಿ ಭಾಗವಹಿಸಬಾರದು ಎಂದು ಒಮ್ಮತದ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು. ಈ
ಬಾರಿಯ ಬಕ್ರಿದ್ ಹಬ್ಬವನ್ನು ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯ ಸಂದೇಶದೊಂದಿಗೆ ಆಚರಿಸುವಂತೆ ಸಮುದಾಯದ ಜನರಿಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಯೂಸುಫ್ ಖಾನ್, ಅಮೀರ್ ಜಾನ್, ಇಮ್ರಾನ್ ಪಾಷಾ, ನಯೀಮ್, ಶಾಕಿರ್, ಸುಹೇಲ್, ಶಾನ್, ಮೆಹರಾಜ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media
