ಬಲಪಂಥೀಯ ಕ್ರೂರ ಆಕ್ರಮಣ ಸುತ್ತುವರಿದಿರುವಾಗ ಲೂಲ ಅವರ ಗೆಲುವು ಭರವಸೆಯನ್ನು ಮೂಡಿಸುತ್ತದೆ. ಗೆಲುವು ಸಾಧ್ಯವಿದೆ ಎಂಬ ಆಶಾದಾಯಕ ವಾತಾವರಣವನ್ನು ಸೃಷ್ಟಿಸಿದೆ. ‘ಎಡಪಂಥೀಯರು ಎಂದಿಗೂ ಸೋಲಬಾರದು’ ಎಂಬ ವಿದ್ಯಾರ್ಥಿಗಳ ಘೋಷಣೆ ಮತ್ತು ಅಣಿನೆರೆಸಿದ ರೀತಿ ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಉರುಗ್ವೆಯ ಸೆನೇಟರ್ ಗೆಸ್ಟಾವೊ ಗೋನ್ಸಾಲ್ವೆಜ್ ‘ಬ್ರೆಚಾ’ ವಾರಪತ್ರಿಕೆಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. 2027 ರಲ್ಲಿ ಅರ್ಜೆಂಟೈನಾದಲ್ಲಿ, ಉರುಗ್ವೆಯಲ್ಲಿ 2029 ರಲ್ಲಿ ಚುನಾವಣೆಗಳು ನಡೆಯಲಿದ್ದು, ಲೂಲ ಅವರ ಗೆಲುವು ಈ ದೇಶಗಳ ಎಡಪಂಥೀಯರಲ್ಲಿ ಭರವಸೆಯನ್ನು ಮೂಡಿಸಿವೆ. ಬ್ರೆಜಿಲ್
ಸುದ್ದಿ ವಿಶ್ಲೇಷಣೆ: ಶ್ರೀನಿವಾಸನ್ ರಮಣಿ, ಚನ್ನೈ
ಅನುವಾದ: ಟಿ ಸುರೇಂದ್ರ ರಾವ್
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನ ಕೊನೆಯಲ್ಲಿ ಲೂಲ ಡ ಸಿಲ್ವ ಅವರು ತಮ್ಮ ದಾಖಲೆಯ ಮೂರನೇ ಅವಧಿಯ ನಂತರ ಅಧ್ಯಕ್ಷ ಸ್ಥಾನ ತೊರೆದು ಹೋಗಬೇಕಾದ ಸ್ಥಿತಿ ತಲುಪಿದ್ದರು. ಏಕೆಂದರೆ ಅವರು ವಿಪಕ್ಷದ ಫ್ಲೇವಿನೊ ಬೊಲ್ಸೆನಾರೊ ಅವರಿಗಿಂತ ಶೇಕಡಾ 1.8 ರಷ್ಟು ಕಡಿಮೆ ಮತವನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಲೂಲಾ ಅವರಿಗೆ ಶೇಕಡಾ 45.2 ರಷ್ಟು ಮತ ಬಂದಿದ್ದರೆ ಬೊಲ್ಸೆನಾರೋ ಅವರಿಗೆ ಶೇಕಡಾ 47 ರಷ್ಟು ಬಂದಿತ್ತು. 1998 ರಲ್ಲಿ ಪಡೆದ ಮತಕ್ಕಿಂತ ಶೇಕಡಾ 21 ರಷ್ಡು ಮತವನ್ನು ಲೂಲ ಪಡೆದಿದ್ದರು, ಏಕೆಂದರೆ ಅವರ ಅನುಯಾಯಿಗಳಲ್ಲಿ ಹಲವರು ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ.
ನಂತರದ ಮೂರು ವಾರಗಳಲ್ಲಿ, ಲೂಲ ಅವರು ನಿರೀಕ್ಷೆಗೂ ಮೀರಿದ ಗಮನಾರ್ಹ ಜನರನ್ನು ತಲುಪಲು ಸಾಧ್ಯವಾಗಿದೆ. ಮೊದಲನೆಯದಾಗಿ, ಮೊದಲ ಸುತ್ತು ಆದ ಮರುದಿನವೇ, ಫ್ಲಮಿನೆನ್ಸ್ ಫೆಡೆರಲ್ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಬೊಲ್ಸೆನಾರೊವಾದದ ವಿರುದ್ಧ ನಿಟೆರೊಯ್ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪ್ರಚಾರ ಮಾಡಿದರು. ಅದೂ ಅಲ್ಲದೆ, ಸಾವಿರಾರು ಯುವಜನರು ರಯೋ ಡಿ ಜನೈರೊ ನಗರದ ಕ್ಯಾಂಡೆಲೇರಿಯದ ಚೌಕವನ್ನು ವಶಪಡಿಸಿಕೊಂಡು ವ್ಯಾಪಕ ಪ್ರಚಾರ ಮಾಡಿದರು. ಅದೇ ರೀತಿಯಲ್ಲಿ, ವಿದ್ಯಾರ್ಥಿಗಳು, ಯುವಜನರು ಮತ್ತು ಕಾರ್ಮಿಕರು ಬ್ರೆಜಿಲಿನ ಉದ್ದಕ್ಕೂ ಎಲ್ಲಾ ನಗರ ಪ್ರದೇಶಗಳಲ್ಲಿ ಭಾರಿ ಪ್ರಚಾರ ನಡೆಸಿದರು. ಪ್ರತಿಭಟನಾಕಾರರು ಯಾವುದೇ ಪಕ್ಷಗಳ ಬ್ಯಾನರುಗಳನ್ನು ಹಿಡಿದುಕೊಳ್ಳದೆ ಒಟ್ಡುಗೂಡಿದ್ದರು. ಬೊಲ್ಸೆನಾರೋನ ಜನವಿರೋಧಿ ನೀತಿಗಳ ವಿರುದ್ಧ, ನಾಗರಿಕ ಹಕ್ಕುಗಳನ್ನು ನಾಶಮಾಡುತ್ತಿರುವ ಪುಂಡಪೋಕರಿಗಳ ವಿರುದ್ಧ ಹಾಗೂ ಜನಪರ ಸಂಘ ಸಂಸ್ಥೆಗಳನ್ನು ಬೆದರಿಸುತ್ತಿರುವ ತೀವ್ರ ಬಲಪಂಥೀಯ ಚಳವಳಿಯ ವಿರುದ್ಧ ನಡೆಸಿದ ಜನಾಂದೋಲನವು ಪರೋಕ್ಷವಾಗಿ ಲೂಲ ಪರವಾಗಿ ಜನರನ್ನು ಅಣಿನೆರೆಸುವಲ್ಲಿ ಸಹಾಯ ಮಾಡಿತು.
ಈ ಮಧ್ಯೆ, ಲೂಲ ಅವರು ತಮ್ಮ ದೃಷ್ಟಿಕೋನ ಬದಲಾಯಿಸಿದರು. ತಮ್ಮ ಪ್ರಚಾರದ ನಾಯಕತ್ವವನ್ನು ಬದಲಿಸಿದರು. ಕಾಂಗ್ರೆಸ್ ಸದಸ್ಯ ಆಂಡ್ರೆ ಜಾನೋನ್ಸ್ ಅವರು ವಾಟ್ಸ್ಯಾಪ್ ಬಳಸಿ “ಲೂಲ ಸೇನೆ” ಎಂಬ ವಾಹಿನಿಯೊಂದನ್ನು ಆರಂಭಿಸಿದರು. 10.8 ಮಿಲಿಯನ್ ಜನರು ಅದರ ಸದಸ್ಯರಾದರು, ಅದರ ಮೂಲಕ ಪ್ರತಿನಿತ್ಯ ವೀಡಿಯೋಗಳನ್ನು. ಹ್ಯಾಷ್- ಟ್ಯಾಗ್ ಗಳನ್ನು ಬಳಸಿ ಹೊಸ ಮತದಾರರಲ್ಲಿ ಕೂಡ ಪ್ರಚಾರ ಮಾಡಲಾಯಿತು ಮತ್ತು ಅದರಿಂದಾಗಿ ಇನ್ನೂ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಳ್ಳಲು ಸಾಧ್ಯವಾಯಿತು. ಈ ಅಂತರ್ಜಾಲ ಮಾಧ್ಯಮಗಳ ಕ್ರಿಯಾಶೀಲತೆ ಮತ್ತು ಬೀದಿ ಮಟ್ಟದ ಅಣಿನೆರೆಸುವಿಕೆಯ ಸಂಯೋಜನೆಯಿಂದಾಗಿ ಚುನಾವಣೆಯಲ್ಲಿ ಗೈರುಹಾಜರಾಗುವ ಮತ್ತು ನಿರ್ಧರಿಸದ ಮತದಾರರು ಲೂಲ ಅವರಿಗೆ ಬೆಂಬಲ ನೀಡುವಂತೆ ಪ್ರೇರೇಪಿಸಲಾಯಿತು.
ಲೂಲ ಅವರು ಸಹ ಅಂತರ್ಜಾಲದಲ್ಲಿ ಮತ್ತು ಬಹಿರಂಗ ಮಾಧ್ಯಮಗಳಲ್ಲಿ ಪ್ರಚಾರ ಸಂದೇಶಗಳನ್ನು ಕಳಿಸಿ ಹಲವು ಆಶ್ವಾಸನೆಗಳನ್ನು ನೀಡಿದರು; ದುಡಿಮೆಯ ಅವಧಿಯನ್ನು ಇಳಿಸುವುದು, ಋಣಭಾರ ಹೊಂದಿರುವ ಕುಟುಂಬಗಳಿಗೆ ಪರಿಹಾರ ನೀಡುವುದು, ಬೋಲ್ಸ ಕೌಟುಂಬಿಕ ಯೋಜನೆ ಅಡಿಯಲ್ಲಿ ಕಲ್ಯಾಣನಿಧಿ ಸಂದಾಯ ಯೋಜನೆ ವಿಸ್ತರಿಸುವುದು. ದೇಶದ ಸಾರ್ವಭೌಮತೆ ಮತ್ತು ಅಪರೂಪದ ಭೂ ಖನಿಜಗಳ ಬಗ್ಗೆ ಮಾತ್ರ ಮಾತನಾಡದೆ ಈ ಮೇಲಿನ ನಿರ್ದಿಷ್ಟ ಪರಿಹಾರ ಯೋಜನೆಗಳು ಮತದಾರರನ್ನು ಆಕರ್ಷಿಸಲು ಸಹಾಯಕವಾದವು. ಅವು ಎಷ್ಟರಮಟ್ಟಿಗೆ ಪ್ರತಿಫಲ ನೀಡಿದವೆಂದರೆ ಚುನಾವಣೆಯಲ್ಲಿ ಲೂಲ ಅವರಿಗೆ ಶೇಕಡಾ 51.79 ರಷ್ಟು ಮತಗಳು ಬಂದರೆ, ಬೊಲ್ಸೆನಾರೋಗೆ ಶೇಕಡಾ 48.21 ರಷ್ಟು ಮತಗಳು ಬಂದವು. ಅಂದರೆ ಮೊದಲ ಸುತ್ತಿನಲ್ಲಿ 2.2 ಮಿಲಿಯನ್ ಮತಗಳು ಕೊರತೆಯಾಗಿದ್ದರೆ, ಈ ಎರಡನೆ ಸುತ್ತಿನಲ್ಲಿ 4.4 ಮಿಲಿಯನ್ ಮತಗಳನ್ನು ಹೆಚ್ಚುವರಿಯಾಗಿ ಪಡೆಯಲು ಸಾಧ್ಯವಾಯಿತು. ಬ್ರೆಜಿಲ್
ಇದನ್ನೂ ಓದಿ : ಕರ್ನಾಟಕದಲ್ಲಿ 1.06 ಕೋಟಿ ಮತದಾರರ ಹೆಸರು ಡಿಲೀಟ್: ಎಸ್ಐಆರ್ ರದ್ದು ಕೋರಿ ‘SIR ವಿರೋಧಿ ಒಕ್ಕೂಟ’ ಆಗ್ರಹ
ಕಳೆದ ಮೂರು ವರ್ಷಗಳಲ್ಲಿ ಲ್ಯಾಟಿನ್ ಅಮೆರಿಕದಲ್ಲಿ “ಕೋಪದ ಅಲೆ” ಬೀಸುತ್ತಿತ್ತು ಎಂದು ಪತ್ರಕರ್ತ ವಿಜಯ್ ಪ್ರಶಾದ್ ವಿಶ್ಲೇಷಣೆ ಮಾಡಿದ್ದರು. ಅರ್ಜೆಂಟೈನಾ, ಚಿಲಿ, ಹೊಂಡುರಾಸ್ ಮತ್ತು ಕೊಲಂಬಿಯಾ ದೇಶಗಳ ಚುನಾವಣೆಗಳಲ್ಲಿ ಬಲಪಂಥೀಯರು ಅಧಿಕಾರಕ್ಕೆ ಬಂದಿದ್ದಾರೆ. ಅವರೆಲ್ಲರಿಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದರು. ಈ ಹಿಂದೆ ಲ್ಯಾಟಿನ್ ಅಮೆರಿಕಾದ ಸಮಾಜವಾದಿ ಎಡಪಂಥೀಯ ದೇಶವೆಂದು ಜನಜನಿತವಾಗಿದ್ದ ವೆನಿಜುವೇಲಾ ಈಗ ಬಹುಪಾಲu ಅಮೆರಿಕದ ಅಧೀನ ರಾಜ್ಯವಾಗಿ ಪರಿಣಮಿಸಿದೆ. ವೆನೆಜುವೆಲಾದ ಅಧ್ಯಕ್ಷರನ್ನು ಅವರ ಪತ್ನಿಯ ಸಮೇತ ಜನವರಿ 2026 ರಲ್ಲಿ ಅಪಹರಿಸಿ ನ್ಯೂಯಾರ್ಕಿನ ಜೈಲಿನಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ. ಮತ್ತು ವೆನೆಜುವೆಲಾದ ತೈಲ ಸಂಪತ್ತನ್ನು ಅಮೆರಿಕ ವಶಪಡಿಸಿಕೊಂಡು, ಆ ತೈಲ ಪ್ರದೇಶಗಳನ್ನು ಅಮೆರಿಕದ ಕಂಪನಿಗಳಿಗೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪಿನ ಅಭ್ಯರ್ಥಿಯಾಗಿದ್ದ ಬೊಲ್ಸೆನಾರೋನ ಸೋಲು ಟ್ರಂಪಿನ ಎರಡನೇ ಅಧಿಕಾರಾವಧಿಯಲ್ಲಿ ಅವನಿಗೆ ಉಂಟಾದ ಬಹು ದೊಡ್ಡ ಆಘಾತವೆಂದೇ ಹೇಳಬೇಕಾಗುತ್ತದೆ. ಈ ಭೂಖಂಡದ ಎಡ ಹಾಗೂ ಮಧ್ಯ ಎಡ ಸರ್ಕಾರಗಳಾಗಿರುವ ಮೆಕ್ಸಿಕೊ, ಉರುಗ್ವೆ ಮತ್ತು ಕ್ಯೂಬಾ ದೇಶಗಳು ಲೂಲ ಅವರ ವಿಜಯವನ್ನು ಅತ್ಯುತ್ಸಾಹದಿಂದ ಸ್ವಾಗತಿಸಿವೆ.
ಬಲಪಂಥೀಯ ಕ್ರೂರ ಆಕ್ರಮಣ ಸುತ್ತುವರಿದಿರುವಾಗ ಲೂಲ ಅವರ ಗೆಲುವು ಭರವಸೆಯನ್ನು ಮೂಡಿಸುತ್ತದೆ. ಗೆಲುವು ಸಾಧ್ಯವಿದೆ ಎಂಬ ಆಶಾದಾಯಕ ವಾತಾವರಣವನ್ನು ಸೃಷ್ಟಿಸಿದೆ. ‘ಎಡಪಂಥೀಯರು ಎಂದಿಗೂ ಸೋಲಬಾರದು’ ಎಂಬ ವಿದ್ಯಾರ್ಥಿಗಳ ಘೋಷಣೆ ಮತ್ತು ಅಣಿನೆರೆಸಿದ ರೀತಿ ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಉರುಗ್ವೆಯ ಸೆನೇಟರ್ ಗೆಸ್ಟಾವೊ ಗೋನ್ಸಾಲ್ವೆಜ್ ‘ಬ್ರೆಚಾ’ ವಾರಪತ್ರಿಕೆಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. 2027 ರಲ್ಲಿ ಅರ್ಜೆಂಟೈನಾದಲ್ಲಿ, ಉರುಗ್ವೆಯಲ್ಲಿ 2029 ರಲ್ಲಿ ಚುನಾವಣೆಗಳು ನಡೆಯಲಿದ್ದು, ಲೂಲ ಅವರ ಗೆಲುವು ಈ ದೇಶಗಳ ಎಡಪಂಥೀಯರಲ್ಲಿ ಭರವಸೆಯನ್ನು ಮೂಡಿಸಿವೆ.
ಬಹುಪಕ್ಷೀಯತೆ ಯೋಜನೆಗೆ ಕೂಡ ಇದು ಒಳ್ಳೆಯ ಸುದ್ದಿ. ಬ್ರಿಕ್ಸ್ ಕೂಟ ದೇಶಗಳ ಸಹಕಾರ ತತ್ವಕ್ಕೆ ಲೂಲ ನೇತೃತ್ವದ ಬ್ರೆಜಿಲ್ ಸಂಪೂರ್ಣ ಬೆಂಬಲ ನೀಡಿದೆ. ಆಯಕಟ್ಟಿನ ಸ್ವಾಯತ್ತತೆಗೆ ಒತ್ತು ನೀಡಿದೆ. ಅಮೆರಿಕ ಅಥವಾ ಚೈನಾದ ನೆರಳಿನಲ್ಲಿ ಬದುಕಿರಬೇಕಾದ ಅಗತ್ಯವಿಲ್ಲದೆ ಎಲ್ಲರ ಜತೆ ಮಾತನಾಡುವ ಸ್ವಾತಂತ್ರ್ಯ ಈಗ ನಮಗೆ ಇದೆ ಎಂದು ಲೂಲ ಅವರ ದೀರ್ಘಕಾಲೀನ ವಿದೇಶಿ ಸಚಿವರಾಗಿದ್ದ ಮತ್ತು ಈಗ ಅವರ ವಿಶೇಷ ಸಲಹೆಗಾರರಾಗಿರುವ ಸೆಲ್ಸೊ ಅಮೊರಿಮ್ ಈಗಿನ ಪರಿಸ್ಥಿತಿಯನ್ನು ಹೀಗೆ ವಿವರಿಸಿದ್ದಾರೆ. ಡಾಲರಿನ ಮೇಲೆ ಅವಲಂಬಿತರಾಗದೆ ಬ್ರಿಕ್ಸ್ ದೇಶಗಳ ನಡುವಿನ ವಾಣಿಜ್ಯ ವ್ಯವಹಾರಗಳನ್ನು ನಮ್ಮ ನಾಣ್ಯಗಳ ಆಧಾರದಲ್ಲಿಯೇ ನಡೆಸಬಹುದು ಎಂದು ಲೂಲ ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲ, ಬ್ರೆಟನ್ ಉಡ್ ಸಂಸ್ಥೆಗಳ (ವಿಶ್ವಬ್ಯಾಂಕ್, ಐಎಂಎಫ್ ಮತ್ತು ಡಬ್ಕ್ಯುಟಿಒ) ಮೇಲೆ ಅವಲಂಬಿತರಾಗದೆ, ಲೂಲ ಅವರ ವರ್ಕರ್ಸ್ ಪಕ್ಷದ ಮಾಜಿ ಅಧ್ಯಕ್ಷರಾದ ದಿಲ್ಮಾ ರೌಸೆಫ್ ಅವರು ಅಧ್ಯಕ್ಷರಾಗಿರುವ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ನ್ನೂ ಲೂಲ ಅವರು ಬೆಂಬಲಿಸಿದ್ದಾರೆ. ಭಾರತದಂತೆಯೇ ಬ್ರೆಜಿಲ್ ಕೂಡ ನ್ಯಾಷನಲ್ ಪೇಮೆಂಟ್ ಸಿಸ್ಟಮ್ ನಡುವಿನ ಕೊಂಡಿಯನ್ನು ಬೆಂಬಲಿಸಿದೆ. ಡಾಲರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದೆಂಬ ಕಾರಣದ ಬದಲು ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡಬಹುದೆಂಬದು ಭಾರತದ ನಿಲುವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಪಾತ್ರ ಇರಬೇಕೆಂಬುದನ್ನು ಕೂಡ ಭಾರತ ಮತ್ತು ಬ್ರೆಜಿಲ್ ದೇಶಗಳ ಒತ್ತಾಯವಾಗಿದೆ. ಅಮೆರಿಕದ ಟ್ರಂಪ್ ಆಡಳಿತದ ಕಾರ್ಯಾಚರಣೆಗಳನ್ನು ಟೀಕಿಸಿದ ಲೂಲ ಅವರು ಕಾನೂನು ಆಧಾರಿತ ಅಂತರ್ರಾಷ್ಟ್ರೀಯ ವ್ಯವಸ್ಥೆ ಇರಬೇಕೆನ್ನುವ ಸ್ಪಷ್ಟ ನಿಲುವನ್ನು ಹೊಂದಿದ್ದಾರೆ.
ಸದ್ಯದಲ್ಲಿ ಬ್ರೆಜಿಲ್ ನ ಆಂತರಿಕ ನಿರೀಕ್ಷೆಗಳನ್ನು ನಿರ್ವಹಿಸುವ ಕಾರ್ಯಕ್ಕೆ ಆದ್ಯತೆ ನೀಡುತ್ತಾರೆಯಾದರೂ, ತಮ್ಮ ಕಾರ್ಮಿಕ ವರ್ಗದ ಪರ ನಿಲುವನ್ನು ಇಟ್ಟುಕೊಂಡೇ, ಮಾತುಕತೆ ನಡೆಸಿ ಒಪ್ಪಂದಗಳನ್ನು ಮಾಡುವ ಕಲೆಯಲ್ಲಿ ಲೂಲ ಅವರು ನಿಸ್ಸೀಮರು. ಬ್ರೆಜಿಲ್ ನ ಕಾಂಗ್ರೆಸ್ಸಿನಲ್ಲಿ ಬೊಲ್ಸನಾರೋ ಲಿಬರಲ್ ಪಕ್ಷಕ್ಕೆ ಬಹುಮತ ಇರುವುದರಿಂದ, ಲೂಲ ಅವರ ಅಧ್ಯಕ್ಷ ಸ್ಥಾನದ ಅಧಿಕಾರ ಸೀಮಿತವಾಗಿರುತ್ತದೆ.
********
ಇದನ್ನೂ ನೋಡಿ : ನ್ಯಾಯ ಕೊಡಿಸುವವರಿಗೇ ರಕ್ಷಣೆ ಇಲ್ಲವೇ? ರಾಜ್ಯಾದ್ಯಂತ ಬೀದಿಗಿಳಿದ ವಕೀಲರು Janashakthi Media
