ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆ ಮಾಡಿದ ಭಾವುಕ ವಿಡಿಯೋವನ್ನು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರವಾಗಿ ಟೀಕಿಸಿದ್ದು, ಅದನ್ನು “ಬೂಟಾಟಿಕೆ ಮತ್ತು ಹಸಿ ಸುಳ್ಳು” ಎಂದು ವಾಗ್ದಾಳಿ ನಡೆಸಿದ್ದಾರೆ.
“ತಾನು ಮಾಡಿದರೆ ರಾಜತಂತ್ರ, ಇತರರು ಮಾಡಿದರೆ ಅಪರಾಧ ಎನ್ನುವ ಮಾತಿಗೆ ಮೋದಿ ಜೀವಂತ ಉದಾಹರಣೆ,” ಎಂದು ಹೇಳಿದ ಅವರು, “ನನ್ನನ್ನು ಹಾಗೂ ನನ್ನ ತಾಯಿಯನ್ನು ನಿಂದಿಸಿದವರನ್ನು ಕ್ಷಮಿಸಿದ್ದೇನೆ” ಎಂಬ ಪ್ರಧಾನಿಯ ಹೇಳಿಕೆಯನ್ನು ಭಾವುಕ ಅಭಿನಯವೆಂದು ಲೇವಡಿ ಮಾಡಿದ್ದಾರೆ.
ವಿರೋಧ ಪಕ್ಷದ ಮಹಿಳಾ ನಾಯಕರ ವಿರುದ್ಧ ವರ್ಷಗಳ ಕಾಲ ನಡೆದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಮೋದಿ ಮೌನವಾಗಿದ್ದರು ಎಂದು ಆರೋಪಿಸಿದ ಹರಿಪ್ರಸಾದ್, “ಇಂದು ಮಾತೃಗೌರವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದು ಅಗ್ನಿಶಾಮಕನಂತೆ ಪೋಸ್ ಕೊಡುವಂತಾಗಿದೆ,” ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಗೊಂದಲ: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಯಾವಾಗ?
ಗಾಂಧಿ ಕುಟುಂಬದ ಉದಾಹರಣೆ:
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರನ್ನು ಕಳೆದುಕೊಂಡರೂ ರಾಹುಲ್ ಗಾಂಧಿ ದ್ವೇಷವಿಲ್ಲದೆ ಕ್ಷಮೆ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕಾ ಗಾಂಧಿ ತಮ್ಮ ತಂದೆಯ ಹಂತಕಿಯನ್ನು ಜೈಲಿನಲ್ಲಿ ಭೇಟಿ ಮಾಡಿ ಮಾನವೀಯತೆ ತೋರಿದ್ದಾರೆ. “ಇದು ಕ್ಯಾಮೆರಾ ಮುಂದೆ ಮಾಡಿದ ಪ್ರದರ್ಶನವಲ್ಲ, ಬದುಕಿನಲ್ಲೇ ತೋರಿದ ಸಂಸ್ಕಾರ,” ಎಂದು ಹರಿಪ್ರಸಾದ್ ಹೇಳಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರೇಣುಕಾ ಚೌಧರಿ ಕುರಿತು ಮಾಡಿದ ಹೇಳಿಕೆಗಳ ಸಂದರ್ಭ ಮೋದಿ ಅವರ ಮೌನವನ್ನು ಪ್ರಶ್ನಿಸಿದ ಅವರು, ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಾಗಿದ್ದಾಗ ಆತ್ಮಸಾಕ್ಷಿ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ.
‘ತಾಯಿಯ ಹೆಸರಿನ ರಾಜಕೀಯ’ ಆರೋಪ:
ನೋಟು ಅಮಾನ್ಯೀಕರಣದ ವೇಳೆ ತಮ್ಮ ತಾಯಿಯನ್ನು ಬ್ಯಾಂಕ್ ಸಾಲಿನಲ್ಲಿ ನಿಲ್ಲಿಸಿ ಪ್ರಚಾರ ಪಡೆದಿದ್ದಾರೆ ಎಂದು ಆರೋಪಿಸಿದ ಹರಿಪ್ರಸಾದ್, “ಇದೀಗ ವಿದ್ಯಾರ್ಥಿಗಳ ಆಕ್ರೋಶದಿಂದ ಗಮನ ಬೇರೆಡೆ ಸೆಳೆಯಲು ಮತ್ತೆ ತಾಯಿಯ ಹೆಸರನ್ನು ಬಳಸುತ್ತಿದ್ದಾರೆ,” ಎಂದು ಹೇಳಿದ್ದಾರೆ.
ತಾಯಿಯ ಮೇಲಿನ ಪ್ರೀತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಅನೈತಿಕ ಎಂದು ಟೀಕಿಸಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಲ್ಲಿ ಸರ್ಕಾರ ಕ್ಷಮೆಯ ಅರ್ಹತೆಯಿಲ್ಲ ಎಂದು ಹೇಳಿದರು.
ವಿದ್ಯಾರ್ಥಿ ವಿಚಾರ:
ಪರೀಕ್ಷಾ ಅಕ್ರಮ ಮತ್ತು ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹರಿಪ್ರಸಾದ್, “ಮೊದಲು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ನಿಲ್ಲಿಸಿ, ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು. ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವುದೇ ಕ್ಷಮೆಯಲ್ಲ,” ಎಂದು ಹೇಳಿದರು.
“ಈ ರೀತಿಯ ನಾಟಕೀಯ ರಾಜಕಾರಣವನ್ನು ದೇಶದ ಯುವಜನತೆ ಮತ್ತು ಇತಿಹಾಸ ಕ್ಷಮಿಸುವುದಿಲ್ಲ,” ಎಂದು ಅವರು ಎಚ್ಚರಿಸಿದರು.
ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ
