“ರಾಮ, ಕೃಷ್ಣ, ಶಿವ” – ಭ್ರಮೆಯಿಂದ ಮಾನವೀಯತೆಯ ಕಡೆಗೆ ಸಾಗುವ ರಂಗಪ್ರಯೋಗ

ಭರತಮುನಿಯ ‘ನಾಟ್ಯಶಾಸ್ತ್ರ’ದ ಪ್ರಕಾರ, ನಾಟಕವು ದುಃಖಿತರಿಗೆ, ಶ್ರಮಿಕರಿಗೆ ವಿಶ್ರಾಂತಿ ಮತ್ತು ಮನರಂಜನೆ ನೀಡುವ ಜೊತೆಗೆ, ಲೋಕದ ಆಗುಹೋಗುಗಳನ್ನು ಕಲಿಸುವ ‘ಶಿಕ್ಷಣ’ವೂ ಆಗಿರಬೇಕು. ಕೇವಲ ಮನರಂಜನೆಯಾದರೆ ಅದು ಟೊಳ್ಳಾಗುತ್ತದೆ; ಕೇವಲ ಶಿಕ್ಷಣವಾದರೆ ಅದು ಶುಷ್ಕ ಭಾಷಣವಾಗುತ್ತದೆ. ಪ್ರೇಕ್ಷಕನನ್ನು ಭಾವನಾತ್ಮಕವಾಗಿ ರಂಜಿಸುತ್ತಲೇ, ಆತನ ಅರಿವಿನ ಪರಿಧಿಯನ್ನು ವಿಸ್ತರಿಸುವುದು ರಂಗಭೂಮಿಯ ಮೂಲ ಶಕ್ತಿ. ಭ್ರಮೆ

– ಅಹಮದ್ ಹಗರೆ

ರಂಗಭೂಮಿ ಗತಕಾಲದ ಬೇರುಗಳಿಂದ ಸತ್ವವನ್ನು ಹೀರಿ, ಭವಿಷ್ಯದ ವೃಕ್ಷವನ್ನು ಬೆಳೆಸುವ ಮಾಧ್ಯಮ. ಪುರಾಣದ ಕಥೆಗಳನ್ನು ಅಥವಾ ಚಾರಿತ್ರಿಕ ಘಟನೆಗಳನ್ನು ರಂಗದ ಮೇಲೆ ತರುವುದು ಕೇವಲ ಹಿಂದಿನದನ್ನು ಕೆದಕುವುದಕ್ಕಲ್ಲ; ಬದಲಾಗಿ, ಆ ಮೂಲಕ ಇಂದಿನ ಸಮಾಜದ ಮೌಢ್ಯಗಳನ್ನು, ಅಧಿಕಾರಶಾಹಿಯನ್ನು ಪ್ರಶ್ನಿಸಿ, ಹೆಚ್ಚು ಪ್ರಬುದ್ಧವಾದ ಭವಿಷ್ಯಕ್ಕಾಗಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಲು. ಗತಕಾಲ ಇಲ್ಲಿ ಒಂದು ಕಚ್ಚಾವಸ್ತು ಮಾತ್ರ, ಅದರ ಗುರಿ ಭವಿಷ್ಯದ್ದೇ ಆಗಿರುತ್ತದೆ.

ಇತ್ತೀಚೆಗೆ ಹಾಸನದ ಕಲಾಭವನದಲ್ಲಿ ಉಡುಪಿಯ ‘ನಿರ್ದಿಗಂತ’ ರಂಗತಂಡವು ಪ್ರಸ್ತುತಪಡಿಸಿದ “ರಾಮ, ಕೃಷ್ಣ, ಶಿವ” ನಾಟಕವು, ಭರತಮುನಿಯ ನಾಟ್ಯಶಾಸ್ತ್ರದ ಆಶಯ ಹಾಗೂ ರಂಗಭೂಮಿಯ ನೈಜ ಗುರಿಯ ಹಿನ್ನೆಲೆಯಲ್ಲಿ ಕನ್ನಡ ರಂಗಭೂಮಿಯಲ್ಲಿ ಈಚೆಗೆ ಮೂಡಿಬಂದ ಅತ್ಯಂತ ಪ್ರಬುದ್ಧ ಹಾಗೂ ಚರ್ಚಾರ್ಹ ರಂಗಪ್ರಯೋಗವಾಗಿ ಹಾಸನದ ಜನತೆಯ ಗಮನ ಸೆಳೆಯಿತು. ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ, ಭಾರತೀಯರ ಜೀವನ ಮಾರ್ಗದಲ್ಲಿನ ಸುಖ-ದುಃಖ, ಜ್ಞಾನ-ಅಜ್ಞಾನ, ಮೌಢ್ಯ-ಕಂದಾಚಾರಗಳ ಜೀವಧಾತುಗಳಾದ ಮೂವರು ದೇವತೆಗಳನ್ನು (ರಾಮ, ಕೃಷ್ಣ, ಶಿವ) ದೇವರ ಸ್ಥಾನದಿಂದ ಕೆಳಗಿಳಿಸಿ, ರಕ್ತ-ಮಾಂಸಗಳ ಮನುಷ್ಯರನ್ನಾಗಿ ಹಾಗೂ ಭಾರತೀಯ ಮನಸ್ಸಿನ ಮನೋರಚನೆಗಳನ್ನಾಗಿ ವಿಶ್ಲೇಷಿಸಿದ ವಿಶಿಷ್ಟ ರಂಗಪ್ರಸ್ತುತಿ ಇದಾಗಿತ್ತು. ಭ್ರಮೆ

ಇದನ್ನೂ ಓದಿ: ವಿಧಾನ ಪರಿಷತ್‌ 12 ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪೈಪೋಟಿ

ಡಾ. ರಾಮ ಮನೋಹರ ಲೋಹಿಯಾ ಅವರ ಈ ಲೇಖನವನ್ನು ನೀನಾಸಂ ಸಂಸ್ಥಾಪಕರಾದ ಕೆ.ವಿ. ಸುಬ್ಬಣ್ಣ ಕನ್ನಡಕ್ಕೆ ಅನುವಾದಿಸಿದ್ದರು. ಆ ಲೇಖನವನ್ನು ಸೂಕ್ಷ್ಮಪ್ರಜ್ಞೆಯ ನಾಟಕಕಾರ ಹಾಗೂ ರಂಗನಿರ್ದೇಶಕ ಗಣೇಶ್ ಮಂದಾರ್ತಿಯವರು ವಾಸ್ತವದ ಜಾಗತಿಕ ನಡಾವಳಿಗಳ ಜೊತೆ ಸಮ್ಮಿಳನಗೊಳಿಸಿ, ಅತಿ ಸೂಕ್ಷ್ಮಮತಿಯಿಂದ ರಂಗರೂಪಕ್ಕಿಳಿಸಿದ್ದಾರೆ. ಪ್ರಬುದ್ಧ ಸಂಭಾಷಣೆಗಳ ಸಂವಾದದಲ್ಲಿ ಮೂಡಿಬಂದ ಜೀವಂತ ರೂಪಕವಿದು.

ನನಗೆ ಈ ರೂಪಕ ಮೂರು ನೆಲೆಗಳಲ್ಲಿ ತರಂಗಗಳನ್ನೆಬ್ಬಿಸಿ, ಹೊಸ ಲೋಕವೊಂದರಲ್ಲಿ ಸಂಚಲನ ಮೂಡಿಸಿತು. ಲೋಹಿಯಾ-ಸುಬ್ಬಣ್ಣ ಹಾಗೂ ಮಂದಾರ್ತಿಯವರ ತಾತ್ವಿಕ ಕಥಾಹರಿವನ್ನು ಜನರ ಎದೆಯಲ್ಲಿ ನಿತ್ಯ ವಿಮರ್ಶಿಸುವ ನದಿಯಾಗಿ ಹರಿಸಿದ ಶ್ರೇಯಸ್ಸು ವೇದಿಕೆಯ ಮೇಲಿದ್ದ ಕಲಾವಿದರದ್ದು. ಮಂಜು ಕಾಸರಗೋಡು, ಅಜಿತ್ ಸಿಂಹ, ನಯನ.ಸಿ, ರಾಧಾ ರಾಮಚಂದ್ರನ್ ಹಾಗೂ ಮಾಧವ ಜೋಗಿ—ಈ ಐವರು ನುರಿತ ಕಲಾವಿದರು ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಬಿಗಿಯಾದ ಕರಾರುವಾಕ್ ಸಂಭಾಷಣೆ, ರಂಗವನ್ನು ಬಳಸಿಕೊಂಡ ರೀತಿ ಮತ್ತು ಅವರ ‘ಟೈಮಿಂಗ್’ ನಿಜಕ್ಕೂ ಅದ್ಭುತವಾಗಿತ್ತು.

ಇದರ ಜೊತೆಗೆ ಪೃಥ್ವಿನ್ ಅವರ ಬೆಳಕಿನ ವಿನ್ಯಾಸ, ಗೋಪಿನಾಥ್ ಅವರ ರಂಗಪರಿಕರ, ಶುಭಕರ ಮತ್ತು ಕೃಷ್ಣ ಅಟ್ಟದಮನಿ ಅವರ ಮುದನೀಡುವ ಸಂಗೀತ ನಾಟಕದ ತೀವ್ರತೆಯನ್ನು ಹೆಚ್ಚಿಸಿವೆ. ರಾಮ-ಕೃಷ್ಣ-ಶಿವರನ್ನು ದೇವತೆಗಳ ಬದಲಿಗೆ ಸಾಮಾನ್ಯ ಮನುಷ್ಯರಂತೆ ತೋರಿಸುವಲ್ಲಿ ಮಂಜು ಕಾಸರಗೋಡು ಅವರ ವಸ್ತ್ರವಿನ್ಯಾಸ ಯಶಸ್ವಿಯಾಗಿದೆ.

ನಾಟಕದ ಈ ಒಟ್ಟಾರೆ ಪ್ರದರ್ಶನ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು (ಸ್ಪೀಚ್‌ಲೆಸ್). ಕಲಾವಿದರ ಈ ಅದ್ಭುತ ಪ್ರದರ್ಶನಕ್ಕೆ ಶಕ್ತಿ ತುಂಬಿದ್ದು ಲೋಹಿಯಾ ಅವರ ಚಿಂತನಶೀಲ ಬರಹ ಹಾಗೂ ಮಂದಾರ್ತಿಯವರ ಗಟ್ಟಿ ಸಂಭಾಷಣೆ ಎಂಬುದರಲ್ಲಿ ಎರಡು ಮಾತಿಲ್ಲ. ವೇದ, ಶಾಸ್ತ್ರ, ಪುರಾಣಗಳನ್ನು ಅಂಧವಾಗಿ ಅನುಸರಿಸುವ ಸಮಾಜದ ವಿರುದ್ಧ ಒಂದು ಪ್ರಶ್ನಾತ್ಮಕ ನಿಲುವನ್ನು ನಾಟಕವು ಆರಂಭದಲ್ಲೇ ತೆಗೆದುಕೊಳ್ಳುತ್ತದೆ. ಭ್ರಮೆಯಿಂದ ವಾಸ್ತವದ ಕಡೆಗೆ, ದೈವತ್ವದಿಂದ ಮಾನವೀಯತೆಯ ಕಡೆಗೆ ಸಾಗುವ ಒಂದು ಅಭೂತಪೂರ್ವ ರಂಗ ಪಯಣವನ್ನು ಈ ನಾಟಕ ಕಟ್ಟಿಕೊಡುತ್ತದೆ. ಹಾಗಾಗಿ, “ಇದು ಕೇವಲ ನಾಟಕವಲ್ಲ; ಇದು ರೂಪಕದ ಮೂಲಕ ಮಾತನಾಡುವ ನಾಟಕ.”

2. ನಾಟಕದ ಕಥಾವಸ್ತು, ಅದನ್ನು ಜಗಕ್ಕೆ ಅರ್ಪಿಸಿದ ರೀತಿ ಮತ್ತು ಉದ್ದೇಶ ಈ ನಾಟಕದ ಕಥಾವಸ್ತುವು ಸಾಂಪ್ರದಾಯಿಕ ಅರ್ಥದಲ್ಲಿ ‘ಆರಂಭ-ಮಧ್ಯ-ಅಂತ್ಯ’ಗಳನ್ನು ಹೊಂದಿದ ಸರಳ ಕಥೆಯಲ್ಲ. ಇದೊಂದು ಚಿಂತನೆಯ ಪ್ರವಾಹ. ಪುರಾಣದ ಮಹಾಪಾತ್ರಗಳು ತಮ್ಮದೇ ಕೃತ್ಯಗಳ ಹಾಗೂ ಮೌಲ್ಯಗಳ ಎದುರು ನ್ಯಾಯಾಂಗದ ಕಟಕಟೆಯಲ್ಲಿ ನಿಂತು ಉತ್ತರಿಸುವಂತಹ ವಾತಾವರಣವನ್ನು ರಂಗದ ಮೇಲೆ ಸೃಷ್ಟಿಸಲಾಗಿದೆ. ನಾಟಕವು ಮುಖ್ಯವಾಗಿ ಮೂರು ವಿಭಿನ್ನ ವ್ಯಕ್ತಿತ್ವಗಳನ್ನು ವಿಶ್ಲೇಷಿಸುತ್ತದೆ. ಇದರಲ್ಲಿ ರಾಮ ಮತ್ತು ಕೃಷ್ಣರ ಪಾತ್ರಗಳು ಗಟ್ಟಿ ಪ್ರಶ್ನೆಗಳ ಮೂಲಕ ದ್ವಂದ್ವಾತ್ಮಕವಾಗಿ (ಬೈನರಿಯಾಗಿ) ಚರ್ಚಿಸಲ್ಪಡುತ್ತವೆ:

· ರಾಮ (ಸೀಮಿತ ವ್ಯಕ್ತಿತ್ವ): ರಾಮನು ನಿಯಮಗಳ ವೃತ್ತದೊಳಗೆ ಬದುಕುವ, ಕಟ್ಟುಪಾಡುಗಳಿಗೆ ಶರಣಾಗುವ ‘ಸೀಮಿತ ವ್ಯಕ್ತಿತ್ವ’ದ ಸಂಕೇತ. ಸೀತಾಪಹರಣದ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯನಂತೆ ಆತ ವಿಲಪಿಸುವುದನ್ನು ಕುವೆಂಪು ಅವರ ‘ರಾಮಾಯಣದರ್ಶನಂ’ ಸಾಲುಗಳ ಮೂಲಕ ನಾಟಕ ಮಾರ್ಮಿಕವಾಗಿ ಚಿತ್ರಿಸುತ್ತದೆ. ವನವಾಸದ ನೆಪದಲ್ಲಿ ಆರ್ಯ ಸಂಸ್ಕೃತಿಯತ್ತ ದ್ರಾವಿಡ-ಬುಡಕಟ್ಟುಗಳನ್ನು ಸೆಳೆದು ಚಕ್ರಾಧಿಪತ್ಯ ಸ್ಥಾಪಿಸುವ ತಂತ್ರ, ಶೂರ್ಪನಖಿಯ ಮೇಲಿನ ಹಿಂಸೆ, ವಾಲಿ ವಧೆಯಲ್ಲಿನ ಧರ್ಮಸೂಕ್ಷ್ಮ, ಮತ್ತು ವಿಶೇಷವಾಗಿ ಶಂಭೂಕನ ವಧೆಯಲ್ಲಿನ ವರ್ಣಾಶ್ರಮದ ಕ್ರೌರ್ಯವನ್ನು ನಾಟಕವು ಕಟುವಾಗಿ ಪ್ರಶ್ನಿಸುತ್ತದೆ. ಶಂಭೂಕನು ಕೇಳುವ “ನಾನು ಮನುಷ್ಯ… ನೀನು ಯುಗಧರ್ಮ ಹೇಳ್ತೀಯಾ?” ಎಂಬ ಪ್ರಶ್ನೆ ರಾಮನನ್ನು ನೈತಿಕವಾಗಿ ನಡುಗಿಸುತ್ತದೆ.

· ಕೃಷ್ಣ (ಸಮೃದ್ಧ ವ್ಯಕ್ತಿತ್ವ): ರಾಮನಿಗೆ ತದ್ವಿರುದ್ಧವಾಗಿ, ಕೃಷ್ಣನು ಕಟ್ಟಳೆಗಳನ್ನು ಮೀರಿ ಹೊಸ ದಾರಿಗಳನ್ನು ಹುಡುಕುವ, ತಂತ್ರ-ಚಾತುರ್ಯದ ಪ್ರತೀಕವಾದ ‘ಸಮೃದ್ಧ ವ್ಯಕ್ತಿತ್ವ’ವನ್ನು ಲೋಹಿಯಾರ ಮಾತಿನ ಮೂಲಕವೇ ನಾಟಕ ಕಟ್ಟಿಕೊಡುತ್ತದೆ. ಇಂದ್ರಪೂಜೆಯನ್ನು ಪ್ರಶ್ನಿಸುವ ಮೂಲಕ ಧಾರ್ಮಿಕ ಮೌಢ್ಯಗಳನ್ನು ಒಡೆಯುವ ಯತ್ನ ಆತನದ್ದಾದರೂ, ಆತನ ‘ಲೀಲೆ’ಗಳ ಹಿಂದಿರುವ ಮಾನವೀಯ ಬೆಲೆಯನ್ನು ಕಥೆ ಮರೆಮಾಚುವುದಿಲ್ಲ. ಯುದ್ಧದ ಭೀಕರತೆ, ವಿಧವೆಯರ ರೋದನ, ಕುಂತಿ ಮತ್ತು ಗಾಂಧಾರಿಯ ಶಾಪಗಳು ಕೃಷ್ಣನ ಚಾತುರ್ಯವನ್ನು ಪ್ರಶ್ನಿಸುತ್ತವೆ. “ನೀನು ಗೆದ್ದೆಯಾ, ಅಥವಾ ನಾಶವನ್ನು ನಿರ್ಮಿಸಿದ್ದೀಯಾ?” ಎಂಬ ಪ್ರಶ್ನೆಗೆ, “ನಾನು ಪ್ರಯತ್ನಿಸಿದೆ… ಆದರೆ ಸೋತೆ” ಎಂದು ಕೃಷ್ಣ ಒಪ್ಪಿಕೊಳ್ಳುವ ದೃಶ್ಯ ಆತನ ಅಸಹಾಯಕತೆಯನ್ನು ತೋರುತ್ತದೆ.

· ಶಿವ (ಪ್ರಮಾಣತೀತ ವ್ಯಕ್ತಿತ್ವ): ಶಿವನು ಅಳತೆಗೆ ಸಿಗದ, ವೈರಾಗ್ಯ ಮತ್ತು ಅಂತರಂಗದ ಸ್ವಾತಂತ್ರ್ಯದ ಪ್ರತೀಕ. ವ್ಯವಸ್ಥೆ ಮತ್ತು ಸಂಪ್ರದಾಯದ ಮಿತಿಗಳ ಹೊರಗಿರುವ ಈತನ ವ್ಯಕ್ತಿತ್ವವು ಅಲ್ಲಮನ ಬಯಲಿಗೆ ಹತ್ತಿರವಾದದ್ದು. ದಾಕ್ಷಾಯಣಿಯ ಮೂಲಕ ಪಿತೃತ್ವ ಮತ್ತು ಅಧಿಕಾರದ ವಿರುದ್ಧದ ಪ್ರಶ್ನೆಗಳನ್ನು ಶಿವನ ಕಥಾನಕದಲ್ಲಿ ಎತ್ತಲಾಗಿದೆ. ಆದರೆ ಅದು ಅಸ್ಪಷ್ಟ, ಕ್ಲಿಯರ್ ಆಗಿಲ್ಲ ಎಂದೆನಿಸಿತು.

ಸ್ತ್ರೀ ದೃಷ್ಟಿಕೋನ – ಕಥೆಯ ಹೃದಯ:

ಪುರಾಣದ ಪಾತ್ರಗಳನ್ನು ಪುರುಷ ಪ್ರಧಾನ ನೆಲೆ ಮತ್ತು ವರ್ಣ ವ್ಯವಸ್ಥೆಯ ಆಧಾರದ ಮೇಲೆ ರೂಪಿಸಿದ ಸಮಾಜದ ಚಿಂತನೆಗಳು ನಮ್ಮ ಬದುಕಿನೊಳಗೆ ಆಳವಾಗಿ ನೆಲೆಯೂರಿವೆ. ಶಂಭೂಕ ವಧೆ, ವಾಲಿ ಹತ್ಯೆ, ಶೂರ್ಪನಖಿಯ ಅಂಗಭಂಗ, ಕರ್ಣನ ಕೊಲೆ—ಇವೆಲ್ಲವೂ “ಧರ್ಮರಾಜ್ಯ” ಸ್ಥಾಪನೆಯ ಭಾಗವೆಂದು ನ್ಯಾಯೀಕರಿಸಲ್ಪಟ್ಟಿವೆ ಮತ್ತು ಈ ರೀತಿಯ ಚಿಂತನೆ ನಮ್ಮ ಮನಸ್ಸಿನಲ್ಲಿ ಸಹಜವಾಗಿ ಸ್ವೀಕೃತವಾಗಿದೆ. ಆದರೆ, ಸ್ವಾತಂತ್ರ್ಯಾನಂತರದ ಪ್ರಜಾತಂತ್ರದ ಚಿಂತನೆಗಳು ಮತ್ತು ನವೋದಯ ಸಾಹಿತ್ಯದ ಪ್ರಭಾವದಿಂದ ಪುರಾಣಗಳ ಮರು-ಓದು ಆರಂಭವಾಯಿತು.

ಇದರೊಂದಿಗೆ ಸ್ತ್ರೀಪಾತ್ರಗಳ ದೃಷ್ಟಿಕೋನದಿಂದ ಪುರಾಣಗಳನ್ನು ಮರುಕಟ್ಟುವ ಪ್ರಯೋಗಗಳು ಪ್ರಾರಂಭವಾಗಿ, ನೆಪಥ್ಯಕ್ಕೆ ಸರಿದಿದ್ದ ಪಾತ್ರಗಳು ಹೊಸ ಜೀವ ಪಡೆದು ಪ್ರಧಾನ ಧಾರೆಯೊಳಗೆ ಪ್ರವೇಶಿಸತೊಡಗಿದವು. ಹೊಸ ಓದಿನ ಬರಹಗಾರ್ತಿ ದಯಾ ಗಂಗನಘಟ್ಟ ಅವರು ದುಶ್ಯಲೆಯ ಸಂಕಟವನ್ನು ಕೇಂದ್ರವಾಗಿಟ್ಟುಕೊಂಡು ಕೌರವ ಕಥನವನ್ನು ಮರುಕಟ್ಟಿದ ಪ್ರಯತ್ನ, ರುಮೆಯ (ರುಮಾಳ) ಎದೆಯ ಮಾತಿನ ಮೂಲಕ ವಾಲಿ–ಸುಗ್ರೀವರ ಕಥನವನ್ನು ಹೊಸ ದೃಷ್ಟಿಯಿಂದ ನಿರೂಪಿಸಿದ ಉದಾಹರಣೆಗಳು ಈ ನಾಟಕ ನೋಡಿದ ತಕ್ಷಣ ನೆನಪಿಗೆ ಬಂದು, ಆ ಮರುಕಟ್ಟುವ ಪ್ರಭಾವವನ್ನು ಸ್ಪಷ್ಟಪಡಿಸುತ್ತವೆ.

ಈ ಹಿನ್ನೆಲೆಯಲ್ಲಿ, ಡಾ. ರಾಮ ಮನೋಹರ ಲೋಹಿಯಾ ಅವರ ಚಿಂತನೆಯಾಧಾರಿತ “ರಾಮ, ಕೃಷ್ಣ, ಶಿವ” ನಾಟಕವು ತನ್ನ ನಿಜವಾದ ಶಕ್ತಿಯನ್ನು ಮಹಿಳಾ ಪಾತ್ರಗಳ ಮೂಲಕ ಅದ್ಭುತವಾಗಿ ವ್ಯಕ್ತಪಡಿಸುತ್ತದೆ. ಮಹಿಳಾ ಅನುಭವ ಮತ್ತು ನೋವಿನ ನೆಲೆಯಲ್ಲಿ ದೈವಿಕ ವ್ಯಕ್ತಿತ್ವಗಳನ್ನು ಸಾಮಾನ್ಯೀಕರಿಸಿ ವಿಶ್ಲೇಷಿಸಿರುವುದು ಈ ನಾಟಕದ ಅತ್ಯಂತ ಬಲಿಷ್ಠ ದೃಷ್ಟಿಕೋನ. ನಿರ್ದೇಶಕರು ಸಮಕಾಲೀನ ಸಂವೇದನೆಯೊಳಗೆ ಇದನ್ನು ಮರುಪರಿಶೀಲಿಸಿರುವುದು ನಾಟಕದ ದೊಡ್ಡ ಗೆಲುವಾಗಿದೆ. ಇಲ್ಲಿ ಸ್ತ್ರೀಪಾತ್ರಗಳು ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಬರಿಯ ಅಂಶಗಳಲ್ಲ—ಅವುಗಳೇ ಕಥೆಯ ಹೃದಯ:

·ಸೀತೆ (ನಿರಾಕರಣೆಯ ಧ್ವನಿ): ಸೀತೆ ರಾಮನನ್ನು ತಿರಸ್ಕರಿಸುವ ಕ್ಷಣ, ಪಿತೃಪ್ರಭುತ್ವದ ವಿರುದ್ಧದ ಸ್ಪಷ್ಟ ಪ್ರತಿರೋಧವಾಗಿ ಮೂಡಿಬರುತ್ತದೆ. “ರಾಮ, ನೀನು ರಾಜನಾಗಿ ಸೋತೆ, ಗಂಡನಾಗಿ ಸೋತೆ, ಈಗ ಅಪ್ಪನಾಗಿಯೂ ಸೋತೆ… ಅಂದು ನೀನು ನನ್ನನ್ನು ತಿರಸ್ಕರಿಸಿದ್ದೆ, ಇಂದು ನಾನು ನಿನ್ನನ್ನು ತಿರಸ್ಕರಿಸುತ್ತಿದ್ದೇನೆ!”

· ಶೂರ್ಪನಖಿ ಮತ್ತು ಅಹಲ್ಯೆ: ಶೂರ್ಪನಖಿಯ ಮೇಲಿನ ಹಿಂಸೆ ಮತ್ತು ಅಹಲ್ಯೆಯ ಮೌನದೊಳಗಿನ ನೋವಿನ ಅನಾವರಣವು ರಾಮನನ್ನು ನೈತಿಕವಾಗಿ ಸವಾಲು ಮಾಡುತ್ತದೆ. “ಜಾಗೃತ ತಪ್ಪಿ, ಈ ಹೆಣ್ಣೊಬ್ಬಳ ಮೂಗನ್ನು ‘ಪ್ರಮಾದ’ದಿಂದ ಕತ್ತರಿಸಿದ್ರಾ?” ವಾಲಿಯ ವಧೆ ಮತ್ತು ಶಂಭೂಕನ ಹತ್ಯೆಯ ಕುರಿತ ಪ್ರಶ್ನೆಗಳ ಎದುರು ರಾಮನ ಮೌನ ಹಾಗೂ ಆತನ ನಿರುತ್ತರತೆ “ಧರ್ಮ”ದ ಮಿತಿಗಳನ್ನು ಬಿಚ್ಚಿಡುತ್ತದೆ. “ಕಲ್ಲಾಗಿದ್ದ ಅಹಲ್ಯೆಗೆ ಲಿಂಗ ನೀಡಿದ ಮಹಾಪುರುಷ ನೀನೇ… ಆದರೆ ಮತ್ತೊಬ್ಬ ಅಹಲ್ಯೆಯನ್ನು ಸೃಷ್ಟಿಸಿದುದನ್ನು ನಿನಗೆ ಅರಿವಾಯಿತೇ?” ಭ್ರಮೆ

· ಕುಂತಿ, ಗಾಂಧಾರಿ ಮತ್ತು ರಾಧೆ: ಕುಂತಿ ಮತ್ತು ಗಾಂಧಾರಿಯ ಶಾಪಗಳು, ಯುದ್ಧದ ಪರಿಣಾಮವಾಗಿ ಸಾವಿರಾರು ಮಹಿಳೆಯರ ವಿಧವತ್ವ, ರಾಧೆ ಮತ್ತು ಇತರರ ಜೀವನದಲ್ಲಿ ಕೃಷ್ಣನ ಅಲಭ್ಯತೆ—ಇವೆಲ್ಲವೂ ಆತನ “ಲೀಲೆ”ಗಳ ಹಿಂದೆ ಇರುವ ಮಾನವೀಯ ಬೆಲೆಯನ್ನು ಬೆಳಗಿಸುತ್ತವೆ. ಭ್ರಮೆ

· ದಾಕ್ಷಾಯಣಿ/ಗೌರಿ (ಸ್ವಾಭಿಮಾನದ ಮರುಪ್ರಶ್ನೆ): ಶಿವನ ಸಂದರ್ಭದಲ್ಲಿಯೂ ದಾಕ್ಷಾಯಣಿಯ ಪ್ರಶ್ನೆಗಳು ಪುರುಷಾಧಿಕಾರದ ವಿರುದ್ಧದ ಪ್ರತಿರೋಧವನ್ನು ಸ್ಪಷ್ಟಪಡಿಸುತ್ತವೆ. “ಯಾವ ಯುಗಧರ್ಮ? ಯಾರಿಗೆ ನಿಯಮ?” (ಆದರೆ, ರಾಮ-ಕೃಷ್ಣರನ್ನು ಕಾಡುವಷ್ಟು ತೀವ್ರವಾಗಿ ಶಿವನನ್ನು ಕಾಡದಿರುವುದು, ಶಿವನ ವಿಷಯದಲ್ಲಿ ಕೊಂಚ ರಿಯಾಯಿತಿ ತೋರಿದರೇನೋ ಎಂಬ ಭಾವನೆ ಮೂಡಿಸುತ್ತದೆ).

ಪುರಾಣವನ್ನು ಪುರುಷಕೇಂದ್ರಿತ ವೃತ್ತದಿಂದ ಹೊರತೆಗೆದು, ಮಾನವೀಯ ಅನುಭವದ ಬಹುಸ್ವರ ಕಥೆಯಾಗಿ ಪರಿವರ್ತಿಸುವ ಈ ಪ್ರಕ್ರಿಯೆಯನ್ನು ರಂಗದ ಮೇಲೆ ಜೀವಂತಗೊಳಿಸುವಲ್ಲಿ ಕಲಾವಿದರು ತಮ್ಮ ಕಲಾವಂತಿಕೆಯನ್ನು ಮೀರಿ ಶ್ರಮಿಸಿದ್ದಾರೆ. ವಿಶೇಷವಾಗಿ, ಗಟ್ಟಿ ಸಂವಾದಿಯಾಗಿ ರಂಗದ ಮೇಲೆ ಮಹಿಳಾ ಧ್ವನಿಯನ್ನು ಸ್ಥಾಪಿಸಿದ ನಟಿಯರಾದ ರಾಧಾ ಹಾಗೂ ನಯನಾ ಮತ್ತವರ ದನಿಗೆ ನೆಲೆಯಾದ ತ್ರಿಮೂರ್ತಿಗಳ ಪಾತ್ರಗಳನ್ನು ಎದುರಾಗಿಸಿದ ಮಂಜು ಕಾಸರಗೋಡು, ಅವರ ಅಭಿನಯ ನಿಜಕ್ಕೂ ಅಭಿನಂದನಾರ್ಹ. ಭ್ರಮೆ

3. ರಂಗದ ತಾಂತ್ರಿಕ ಪರಿಕರಗಳ ಸಮರ್ಥ ಬಳಕೆ ಹಾಗೂ ಕಲಾವಿದರ ಗಟ್ಟಿ ಪ್ರದರ್ಶನ ತಾಂತ್ರಿಕವಾಗಿ ಹಾಗೂ ಅಭಿನಯದ ದೃಷ್ಟಿಯಿಂದ ಈ ನಾಟಕವು ಒಂದು ಪರಿಪೂರ್ಣ ಪ್ರಯೋಗವಾಗಿದೆ. ರಂಗ ವಿನ್ಯಾಸ, ಟೈಮಿಂಗ್, ವಸ್ತ್ರ ವಿನ್ಯಾಸ, ದೀಪಾಲಂಕಾರ ಮತ್ತು ಧ್ವನಿಯ ಬಳಕೆ ಅತ್ಯಂತ ಸಮರ್ಪಕವಾಗಿದೆ. ಎಲ್ಲಿಯೂ ಅನಗತ್ಯ ಆರ್ಭಟವಿಲ್ಲದೆ, ಕಥೆಯ ತೀವ್ರತೆಯನ್ನು ಹೆಚ್ಚಿಸುವಲ್ಲಿ ಬೆಳಕು-ನೆರಳಿನ ಆಟ ಅದ್ಭುತವಾಗಿ ಕೆಲಸ ಮಾಡಿದೆ. ಭ್ರಮೆ

ಹಾಡುಗಳು ಭಾವನಾತ್ಮಕ ಆಳವನ್ನು ಒದಗಿಸಿದರೆ, ನಾಟಕದ ‘ಮೌನದ ಕ್ಷಣಗಳು’ ಪಾತ್ರಗಳ ಒಳಗಿನ ದ್ವಂದ್ವವನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ಯಶಸ್ವಿಯಾಗಿವೆ. ಕಲಾವಿದರ ಅಭಿನಯ ಕೇವಲ ಪಾತ್ರಗಳ ಪೋಷಣೆಯಾಗಿ ಉಳಿದಿಲ್ಲ, ಅದೊಂದು ತಾತ್ವಿಕ ಮುಖಾಮುಖಿಯಾಗಿದೆ. ಇಲ್ಲಿನ ಸಂಭಾಷಣೆಗಳ ತೀವ್ರತೆ ಎಷ್ಟಿತ್ತೆಂದರೆ, ಕಲಾಭವನದಲ್ಲಿನ ತಿರುಗದ ಪಂಖಗಳು ಸೃಷ್ಠಿಸಿದ ಸೆಖೆಯ ಧಗೆ, ನೂತನಾವಾಗಿ ಕೂರಿಸಿದ ದುಬಾರಿ ಅತಿಕಳಪೆ ಕುರ್ಚಿಗಳ ಕಿರಿಕಿರಿಗಳಾವುವೂ ಪ್ರೇಕ್ಷಕರ ಗಮನವನ್ನು ಬೇರೆಡೆ ಸೆಳೆಯಲು ಸಾಧ್ಯವಾಗಲಿಲ್ಲ. ಭ್ರಮೆ

4. ನಾಟಕಕ್ಕಿದ್ದ ಮಿತಿಗಳು ಹಾಗೂ ಅದು ಜನರಿಗೆ ನೀಡಿದ ಸಂದೇಶ ಯಾವುದೇ ಶ್ರೇಷ್ಠ ಕೃತಿಗೂ ತನ್ನದೇ ಆದ ಮಿತಿಗಳಿರುತ್ತವೆ; ‘ರಾಮ, ಕೃಷ್ಣ, ಶಿವ’ ಅದಕ್ಕೆ ಹೊರತಲ್ಲ. ಗಟ್ಟಿಯಾದ ತಾತ್ವಿಕ ನೆಲೆ, ಸಂಭಾಷಣೆಗಳ ಶಕ್ತಿ, ಸ್ತ್ರೀವಾದಿ ನೆಲೆಗಳು ಈ ನಾಟಕದ ಬಲಗಳಾದರೆ, ಕೆಲವು ಮಿತಿಗಳೂ ಇವೆ: ಭ್ರಮೆ

1. ತಾತ್ವಿಕತೆಯ ಭಾರ: ನಾಟಕವು ಕೆಲವೊಮ್ಮೆ ಅತಿಯಾಗಿ ತಾತ್ವಿಕವಾಗುತ್ತದೆ. ಉದಾಹರಣೆಗೆ: ಕೃಷ್ಣ–ಸುಧಾಮ ಸಂಭಾಷಣೆ, ನಡುನಡುವೆ ಬರುವ ಲೋಹಿಯಾ ವಿವರಣೆ—ಇವು ದೀರ್ಘವಾದ ತಾತ್ವಿಕ ಚರ್ಚೆಗಳಾಗಿ ಭಾರವಾದಂತೆ ನೋಡುಗನಿಗೆ ಆಯಾಸವಾಗಿ ಗೋಚರಿಸುತ್ತದೆ; ನಾನದನ್ನು ಅಕ್ಕಪಕ್ಕ ಗಮನಿಸಿದೆ.

2. ಏಕಪಕ್ಷೀಯ ಟೀಕೆ: ನಾಟಕವು ರಾಮನ ಧರ್ಮ, ಕೃಷ್ಣನ ಲೀಲೆಗಳನ್ನು ತೀವ್ರವಾಗಿ ಪ್ರಶ್ನಿಸುತ್ತದೆ. ಆದರೆ ಅವರ ಸಕಾರಾತ್ಮಕ ಅಂಶಗಳು (ಆದರ್ಶ, ತ್ಯಾಗ, ಮಾರ್ಗದರ್ಶನ) ಕಡಿಮೆ ಚರ್ಚೆಯಾಗುತ್ತವೆ. ಭ್ರಮೆ

3. ಶಿವನ ಪಾತ್ರದ ಅಪೂರ್ಣತೆ: ರಾಮ ಮತ್ತು ಕೃಷ್ಣರ ವ್ಯಕ್ತಿತ್ವಗಳನ್ನು ಬಿಚ್ಚಿಟ್ಟಷ್ಟು ಆಳವಾಗಿ ಶಿವನ ವ್ಯಕ್ತಿತ್ವವನ್ನು ಅನಾವರಣಗೊಳಿಸುವಲ್ಲಿ ನಾಟಕ ತುಸು ಹಿಂದೇಟು ಹಾಕಿದಂತಿದೆ. ಇದು ಕಥಾನಕದಲ್ಲಿ ಕೊಂಚ ಅಸಮತೋಲನವನ್ನು ತಂದಿದೆ.

4. ತಾತ್ವಿಕ ಸಡಿಲತೆ: ಉದಾಹರಣೆಗೆ, ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಯಾರು ಶ್ರೇಷ್ಠರು ಎಂಬ ಗಹನ ತಾತ್ವಿಕ ವಿಚಾರವನ್ನು ಅತ್ಯಂತ ಸಡಿಲವಾಗಿ ತೋರಿಸುವ ಪ್ರಕ್ರಿಯೆ ನೋಡುಗನನ್ನು ನಿರಾಸೆಗೊಳಿಸುತ್ತದೆ. ಭ್ರಮೆ

ನೀಡಿದ ಸಂದೇಶ: ಈ ಮಿತಿಗಳ ನಡುವೆಯೂ, ನಾಟಕವು ಜನರಿಗೆ ನೀಡುವ ಸಂದೇಶ ಅತ್ಯಂತ ಪ್ರಬಲವಾಗಿದೆ. ಇದು ಸರಳ ಮನರಂಜನೆಯಲ್ಲ, ಇದು ಅಸೌಕರ್ಯವನ್ನು ಉಂಟುಮಾಡಿ, ನಮ್ಮ ನಂಬಿಕೆಗಳನ್ನು ಅಲುಗಾಡಿಸಿ ಯೋಚಿಸಲು ಒತ್ತಾಯಿಸುವ ಕೃತಿ. “ರಾಮನ ನಿಯಮಗಳು, ಕೃಷ್ಣನ ತಂತ್ರಗಳು, ಶಿವನ ವೈರಾಗ್ಯ — ಇವುಗಳಲ್ಲಿ ಯಾವುದು ಇಂದಿನ ಸಮಾಜಕ್ಕೆ ಸೂಕ್ತ?” ಎಂಬ ಚರ್ಚೆಯನ್ನು ಹುಟ್ಟುಹಾಕುತ್ತದೆ. ನಾಟಕವು ಯಾವುದೇ ಸಿದ್ಧ ಉತ್ತರಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುವುದಿಲ್ಲ. ಭ್ರಮೆ

ಬದಲಾಗಿ, “ನಾವು ಪೂಜಿಸುವ ದೇವರುಗಳು ನಮ್ಮೊಳಗಿನ ಗುಣಗಳ ಪ್ರತಿಬಿಂಬವೇ?” ಎಂಬ ಬಹುದೊಡ್ಡ ಪ್ರಶ್ನೆಯನ್ನು ಶಿಶುನಾಳ ಶರೀಫರ “ಕೇಳು ಜಾಣ ಶಿವ ಧ್ಯಾನವ ಮಾಡಣ್ಣ..” ಮಾಡು.. ಮಾಡು.. ಮಾಡುತ್ತಲೇ ಜೊತೆ ಜೊತೆಗೆ, “ನಿನ್ನೊಳಗೆ ನೀನು ತಿರುಗಿಯೂ ನೋಡಣ್ಣ” ಶಿವ ಅಲ್ಲಿದ್ದಾನೆ ಒಳಗೆ ಒಳಗೆ ಎಲ್ಲರೊಳಗೆ ಎಲ್ಲದರೊಳಗೆ..” ಎಂದು ಎದುರಿಡುತ್ತದೆ. ನಾಟಕ ಮುಗಿದು ಹೊರಬರುವ ಪ್ರೇಕ್ಷಕನು ದೇವರನ್ನಲ್ಲ, ಬದಲಿಗೆ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದರೆ, ಅದೇ ಈ ನಾಟಕದ ಅತಿದೊಡ್ಡ ಯಶಸ್ಸು. ಭ್ರಮೆ

ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್‌ಡಿಎಫ್ vs ಯುಡಿಎಫ್ ನೆಕ್‌ ಟು ನೆಕ್ ಫೈಟ್ – ಗೇಮ್‌ಚೇಂಜರ್ ಆಗುವ ಮತದಾರರು ಯಾರು?

Donate Janashakthi Media

Leave a Reply

Your email address will not be published. Required fields are marked *