– ಗುರುರಾಜ ದೇಸಾಯಿ
ಅಯ್ಯಯ್ಯೋ… ಈ ಬಿಸಿಲು ಅಂದ್ರೆ ಬಿಸಿಲಪ್ಪಾ! ನೇರವಾಗಿ ಸೂರ್ಯ ನಮ್ಮ ಊರಿಗೇ ‘ಕಿಚನ್ ಓಪನ್’ ಮಾಡಿಕೊಂಡು, “ಇವತ್ತಿನ ಸ್ಪೆಷಲ್ — ಮಾನವ ಫ್ರೈ!” ಅಂತ ಮೆನು ಹಾಕಿದಂತಾಗಿದೆ. ಇಂಥ ಹೊತ್ತಲ್ಲಿ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೊಡ್ಡ ಜ್ಞಾನ ಪ್ರದರ್ಶಿಸಿದ್ದಾರೆ. ಅದು ಏನಪ್ಪಾ ಅಂದ್ರೆ… “ನಿಮ್ಮ ಜೇಬಲ್ಲಿ 51 ಡಿಗ್ರಿ ಸೆಲ್ಸಿಯಸ್ ಇದ್ದರೂ ನಿಮಗೆ ಏನೂ ಆಗಲ್ಲ!” ಅಂತ. ಅದನ್ನು ಕೇಳಿದ ಜನರಿಗೆ ಮೊದಲು ಬೆವರು ಬಂತು, ಆಮೇಲೆ ನಗು ಬಂತು! ಸೂರ್ಯ
ನಮ್ಮೂರಿನ ಕೆಂಚಪ್ಪ ಸುಮ್ನೆ ಕೂತ್ಕೊಂಡೇ ಏನೋ ಸಿನಿಮಾ ಕ್ಲೈಮ್ಯಾಕ್ಸ್ ತರ ಎದ್ದು ನಕ್ಕು, ತಮ್ಮ ಜೇಬಿನಿಂದ ಈರುಳ್ಳಿ ತೆಗೆದು ತೋರಿಸಿದ್ರಪ್ಪಾ! “ನೋಡಪ್ಪಾ, ನಂಗೂ ಗೊತ್ತು ಈ ಟಾಪ್ ಸೀಕ್ರೆಟ್!” ಜನ ದಂಗಾಗೇ ಬಿಟ್ರು. ಎಲ್ಲರೂ ಫ್ಯಾನ್ ಆಫ್ ಮಾಡಿ ಈರುಳ್ಳಿ ಹುಡುಕೋಕೆ ಶುರು ಮಾಡೋದಾ! ಸೂರ್ಯ
“ನಾನು ನೋಡಕ್ಕೆ ಯಂಗ್ ಬಾಯ್ ತರ ಕಾಣ್ಬೋದು… ಆದ್ರೆ ಆತ್ಮ ಹಳೆಯ ಸ್ಟಾಕ್!” ಅಂತ ಸಚಿವರು ಭಾಷಣ ಶುರು ಮಾಡಿದ್ರು. “ಇವತ್ತಿನ ಮಕ್ಕಳು ಜೇಬಲ್ಲಿ ಮೊಬೈಲ್ ಇಡ್ತಾರೆ… ನಾನು ಈರುಳ್ಳಿ ಇಡ್ತೀನಿ!” ಅಂದಾಗ, ಪಕ್ಕದಲ್ಲಿದ್ದ ಹುಡುಗರು ತಮ್ಮ ಮೊಬೈಲ್‌ಗಳನ್ನು ನೋಡ್ಕೊಂಡು, ‘ನಾವೇನು ತಪ್ಪು ಮಾಡ್ದಿವಾ?’ ಅಂತ ಕಳವಳಪಟ್ಟುಕೊಂಡು ಇದ್ದರು! ಸೂರ್ಯ
ಇದನ್ನೂ ಓದಿ: ನವ-ಫ್ಯಾಸಿಸಂನ ಉತ್ಕರ್ಷ ಮತ್ತು ಶಿಕ್ಷಣದ ನಾಶ
ಇನ್ನೂ ನಮ್ಮ ಟೆಕ್ನಿಕಲ್ ಎಕ್ಸಪರ್ಟ್ ಸೀನಾ ಏನೇನೋ ತಲೆ ಓಡಿಸುತ್ತಾ ಇದ್ದ… “ಅಯ್ಯಾ, ಇದನ್ನ ಕೇಳಿದ್ರೆ ನಮ್ಮೂರಲ್ಲಿ ಹೊಸ ಸ್ಟಾರ್ಟ್‌ಅಪ್ ಶುರು ಆಗೋದು ಗ್ಯಾರಂಟಿ “Onion Tech Pvt Ltd!” ಜೇಬಿಗೆ ಸರಿಹೊಂದುತ್ತಾ ಈರುಳ್ಳಿ, ಬ್ಲೂಟೂತ್ ಸಪೋರ್ಟ್ ಜೊತೆ, ‘ಕೂಲ್ ಮೋಡ್’, ‘ಸ್ವೇಟ್ ಕಂಟ್ರೋಲ್’ ಅಂತೆ ಫೀಚರ್ಸ್ ಬರೋದು ದೂರ ಇಲ್ಲ! ಬಾಯಿಗೆ ಬಂದ ಲಡ್ಡು ಬಿದ್ದಂತೆ ಜಾಹೀರಾತು ನೆನಪಿಸಿಕೊಂಡು ನಕ್ಕುಬಿಟ್ಟ!
ಸೋಷಿಯಲ್ ಮೀಡಿಯಾ ಎಕ್ಸಪರ್ಟ್ ಶಾಂತಕ್ಕ, “ನಾನೇನು ಕಮ್ಮಿ?” ಅಂತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕೇ ಬಿಟ್ರು “ಇಗಾ ನಮ್ಮೂರಲ್ಲಿ ಹೊಸ ಟ್ರೆಂಡ್ ಶುರು… ಮೊದಲು: ‘ನೆಟ್ ಇದೆನಾ?’… ಇಗಾ: ‘ಈರುಳ್ಳಿ ಇದೆನಾ?’” ಬಸ್ ಸ್ಟ್ಯಾಂಡ್‌ನಲ್ಲಿ, ಮೆಟ್ರೋದಲ್ಲಿ, ಆಫೀಸಿನಲ್ಲಿ ಜೇಬಲ್ಲಿ ಈರುಳ್ಳಿ ಇಟ್ಟವರು ‘ವಿ.ಐ.ಪಿ’! ಯಾರಾದ್ರೂ ಹತ್ತಿರ ಬಂದ್ರೆ, “ಸ್ವಲ್ಪ ಶೇರ್ ಮಾಡ್ತೀರಾ ಸಾರ್?” ಅಂತ ಕೇಳೋ ಮಟ್ಟಿಗೆ ಸೀನ್ ಹೋಗಿದೆ! ಅಂತಾ ಪೋಸ್ಟ್ ಹಾಕಿದ್ರು, ಅದು ಸಿಕ್ಕಾಪಟ್ಟೆ ವೈರಲ್ ಆಗಿಹೋಯ್ತು!
ಇದನ್ನ ಕೇಳಿಸಿಕೊಂಡ ನಮ್ಮ ಇಟಗಿ ಡಾಕ್ಟರ್ “ತಾಪಮಾನಕ್ಕೂ ಈರುಳ್ಳಿಗೂ ಸಂಬಂಧವೇ ಇಲ್ಲ” ಅಂತ ಪ್ರೆಸ್ ಮೀಟ್ ಮಾಡೇ ಬಿಟ್ರು. ಅದು ದೊಡ್ಡ ಸುದ್ದಿಯಾಯ್ತು. ಆದ್ರೆ ನಮ್ಮ ಜನ ಏನ್ ಮಾಡ್ತಾರೆ ಗೊತ್ತಲ್ಲವಾ? ಡಾಕ್ಟರ್ ಮಾತು ಒಂದು ಕಿವಿಯಿಂದ ಕೇಳಿ, ಇನ್ನೊಂದು ಕಿವಿಯಿಂದ ಹೊರ ಹಾಕಿ… ಜೇಬಿಗೆ ಇನ್ನೊಂದು ಈರುಳ್ಳಿ ಹಾಕ್ಕೊಂಡು ಓಡ್ತಾರೆ!
ಪಾರ್ಕ್‌ನಲ್ಲಿ ವಾಕ್ ಮಾಡ್ತಾ ಇದ್ದ ಜನ ಮಾತಾಡ್ಕೋತಾ ಇದ್ರು… “ಇನ್ನೊಂದು ತಿಂಗಳು ಹೋದ್ರೆ ಏನಾಗತ್ತೆ ಗೊತ್ತಾ? ಮಾಲ್‌ಗಳಲ್ಲಿ.. ಶಾಪ್‌ಗಳಲ್ಲಿ.. ‘ಈ ಈರುಳ್ಳಿಗೆ ಎಷ್ಟು ದಿನ ಕೂಲಿಂಗ್ ಗ್ಯಾರಂಟಿ?’ ಅಂತ ಕೇಳ್ತಾರೆ!” ಅಂತಾ ಈರುಳ್ಳಿ ಕಥೆ ಹೇಳ್ತಾ ನಕ್ಕಿದ್ದೇ ನಕ್ಕಿದ್ದು…
ಕೊನೆಗೆ ನಮ್ಮ ಕೆಂಚಪ್ಪ ತನ್ನದೇ ಸ್ಟೈಲ್‌ನಲ್ಲಿ ಒಂದು ತತ್ವ ಹೊರಡಿಸಿದ
“ಎಸಿ ಇದ್ದವನು ಶ್ರೀಮಂತ… ಈರುಳ್ಳಿ ಇದ್ದವನು ವಿಜ್ಞಾನಿ!”
ಇದನ್ನೂ ನೋಡಿ: ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ರದ್ದತಿಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ Janashakthi Media
