ಮಗನ ಜೀವ ಉಳಿಸಲು ತನ್ನ ಪ್ರಾಣವನ್ನೇ ನೀಡಿದ ತಂದೆ

ಮಂಡ್ಯ: “ನಾನು ಸತ್ತರೂ ನನ್ನ ಮಗ ಬದುಕಬೇಕು ಎಂದು”  ಮಗನನ್ನು ಉಳಿಸಿ ತಂದೆ ಪ್ರಾಣಕೊಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.  ಪಾಂಡವಪುರ ತಾಲೂಕು ನ್ಯಾಮನಹಳ್ಳಿ ಸಮೀಪ ಲಾರಿ ಡಿಕ್ಕಿ ಹೊಡೆಯುವುದನ್ನು ಗಮನಿಸಿ ಆಟೋದಲ್ಲಿದ್ದ ತಂದೆ, ತನ್ನ ಮಗನನ್ನು ಕೆಳಗೆ ತಳ್ಳಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ತಾಲೂಕಿನ ಮುದಗಂದೂರು ಗ್ರಾಮದ ಶ್ರೀನಿವಾಸ್(43) ಮೃತ. ಇವರ ಮಗ ವಿಶ್ವಾಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣದ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶ್ರೀನಿವಾಸ್ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತರಕಾರಿ ತರಲೆಂದು ತಂದೆ ಮತ್ತು ಮಗ ತಮ್ಮ ಆಫೆ ಆಟೋದಲ್ಲಿ ಮೈಸೂರಿಗೆ ತೆರಳಿದ್ದರು. ಕೆಲಸ ಮುಗಿಸಿ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆ ನ್ಯಾಮನಹಳ್ಳಿಯ ಸಮೀಪ ಲಾರಿಯೊಂದು ಅಡ್ಡಾದಿಡ್ಡಿಯಾಗಿ ಬಂದಿದೆ. ಇದನ್ನು ಗಮನಿಸಿದ ಶ್ರೀನಿವಾಸ್, ವಿಶ್ವಾಸ್‌ನನ್ನು ಆಟೋದಿಂದ ಕೆಳಗೆ ತಳ್ಳಿದ್ದಾರೆ. ಕ್ಷಣಾರ್ಧದಲ್ಲಿಯೇ ಆಟೋ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಅಪಘಾತದಲ್ಲಿ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇತ್ತ ಚಿಕಿತ್ಸೆ ಪಡೆಯುತ್ತಿರುವ ವಿಶ್ವಾಸ್‌ಗೆ ತಂದೆ ಮೃತಪಟ್ಟಿರುವ ಮಾಹಿತಿ ನೀಡಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *