ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರ ಸುಮಾರು 90 ರೂ. ಆಗಿರುವುದು ಕೇಂದ್ರ ಸರ್ಕಾರವು ಜನರ ಮೇಲೆ ನಡೆಸುತ್ತಿರುವ ಐತಿಹಾಸಿಕ ಶೋಷಣೆ ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಟ್ವೀಟ್ ಮಾಡಿರುವ ಅವರು, ‘ಸಂಸ್ಕರಣಗೊಂಡ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ರೂ. ಆಗುತ್ತದೆ. ಎಲ್ಲ ತೆರಿಗೆಗಳು, ಪೆಟ್ರೋಲ್ ಪಂಪ್ ಕಮಿಷನ್ 60 ರೂ. ಆಗುತ್ತದೆ. ನನ್ನ ದೃಷ್ಟಿಯಲ್ಲಿ ಪೆಟ್ರೋಲ್ ಅನ್ನು ಗರಿಷ್ಠ ಪ್ರತಿ ಲೀಟರ್ಗೆ 40 ರೂ. ನಂತೆ ಮಾರಾಟ ಮಾಡಬೇಕು’ ಎಂದು ಉಲ್ಲೇಖಿಸಿದ್ದಾರೆ.
ಸೋಮವಾರದ ವರೆಗೆ ಸತತ ಆರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಸೋಮವಾರ ಪೆಟ್ರೋಲ್ ಬೆಲೆಯು ದೆಹಲಿಯಲ್ಲಿ ಪ್ರತಿ ಲೀಟರ್ಗೆ 83.71 ರೂ. ಆಗಿತ್ತು. ಡೀಸೆಲ್ ಬೆಲೆಯು 73.87 ರೂ. ಆಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗ 2018ರ ಸೆಪ್ಟೆಂಬರ್ ನಂತರದ ಗರಿಷ್ಠ ಮಟ್ಟದಲ್ಲಿ ಇದೆ.