ಜನಗಣತಿ ನಿಯಮಗಳಿಗೆ (Census Rules) ಕೇಂದ್ರ ಗೃಹ ಸಚಿವಾಲಯವು ಅಧಿಸೂಚಿಸಿರುವ ತಿದ್ದುಪಡಿಗಳನ್ನು ತಕ್ಷಣವೇ ಹಿಂಪಡೆಯಬೇಕು. ಜನಗಣತಿ ವಿಧಿ-ವಿಧಾನದ ಕುರಿತು ಸರ್ವಪಕ್ಷ ಸಮಾಲೋಚನೆಯನ್ನು ಕೂಡಲೇ ನಡೆಸಬೇಕು. ಮೋದಿ – ಅಮಿತ್ ಶಾ – ಮೋಹನ್ ಭಾಗವತ್ ಕೈಗಳಲ್ಲಿ ಜನಗಣತಿಯು ಮುಂದಿನ ‘ಎಸ್ಐಆರ್’ (SIR) ಆಗಿಬಿಡಬಾರದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಹೇಳಿದ್ದಾರೆ. ಮೋದಿ
ಕೇಂದ್ರ ಗೃಹ ಸಚಿವಾಲಯವು ಜನಗಣತಿ ನಿಯಮಗಳಿಗೆ ತಂದಿರುವ ತಿದ್ದುಪಡಿಗಳು ಮೊದಲ ನೋಟಕ್ಕೆ ಕಾಣುವಷ್ಟು ನಿರುಪದ್ರವಕಾರಿಯಾಗಿಲ್ಲ ಎಂದು ಅವರು ಈ ಬಗ್ಗೆ ತಮ್ಮ ಫೇಸ್ಬುಕ್ ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಹೊಸದಾಗಿ ಅಧಿಸೂಚಿಸಲಾದ ಈ ತಿದ್ದುಪಡಿಗಳು, ಖಾಸಗಿ ಶಾಲಾ ಶಿಕ್ಷಕರು, “ಸಂಸ್ಥೆಗಳು, ಸೊಸೈಟಿಗಳು ಮತ್ತು ಟ್ರಸ್ಟ್ಗಳ” ಸದಸ್ಯರು ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು “ಸೂಕ್ತ” ಎಂದು ಪರಿಗಣಿಸುವ ಯಾವುದೇ ವ್ಯಕ್ತಿಗೆ ಜನಗಣತಿಗಾರರ ನಡೆಸುವವರ (ಎನ್ಯುಮರೇಟರ್ಗಳ) ಪಾತ್ರವನ್ನು ವಹಿಸಿಕೊಳ್ಳಲು ಅವಕಾಶ ನೀಡುತ್ತವೆ. ಇದು ಭಾರತೀಯ ನಾಗರಿಕರ ಖಾಸಗಿ ಮಾಹಿತಿಯನ್ನು ಪಡೆಯಲು ಸಂಘ ಪರಿವಾರಕ್ಕೆ ‘ಹಿಂಬಾಗಿಲಿನಿಂದ’ ಪ್ರವೇಶ ಕಲ್ಪಿಸಿಕೊಡುವ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಎಸ್ಐಆರ್ ವಿರುದ್ಧದ ಹೋರಾಟಕ್ಕೆ ರೈತ–ದಲಿತ ಸಂಘಟನೆಗಳ ಬೆಂಬಲ; ಅ. 23ರಂದು ರಾಜ್ಯಾದ್ಯಂತ ಪ್ರತಿಭಟನೆ
“ಆಗಸ್ಟ್ 24 ರಂದು, ನಾನು ಸಿಪಿಐ(ಎಂ) ಪರವಾಗಿ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಿಗೆ, ಎರಡನೇ ಹಂತದ ಜನಗಣತಿಗಾಗಿ ಸಿದ್ಧಪಡಿಸಲಾದ ಪ್ರಶ್ನಾವಳಿಯಲ್ಲಿ ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳ ವಿವರಗಳು, ಹಾಗೂ ಪೋಷಕರ ಧರ್ಮ ಮತ್ತು ಜನ್ಮಸ್ಥಳದಂತಹ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಾರದು ಎಂದು ಆಗ್ರಹಿಸಿ ಮನವಿಯೊಂದನ್ನು ಸಲ್ಲಿಸಿದ್ದೆ. ಅಲ್ಲದೆ, ಜನಗಣತಿ ದತ್ತಾಂಶವನ್ನು ಇತರ ದತ್ತಾಂಶ ಸಂಗ್ರಹಗಳೊಂದಿಗೆ (ಡೇಟಾಬೇಸ್ಗಳೊಂದಿಗೆ) ಜೋಡಿಸುವುದನ್ನು ತಡೆಯಲು ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಆ ಮನವಿಯಲ್ಲಿ ಕೋರಲಾಗಿತ್ತು” ಎಂದು ಮುಂದುವರೆದು ಬೇಬಿಯವರು ತಮ್ಮ ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಜನಗಣತಿಯ ಉದ್ದೇಶಕ್ಕೆ ಅಗತ್ಯವಿಲ್ಲದ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲು ಸಂಘ ಪರಿವಾರದ ಕಾರ್ಯಕರ್ತರನ್ನು ನಿಯೋಜಿಸುವುದು, ಜನಗಣತಿ ಪ್ರಕ್ರಿಯೆಯನ್ನು ಪೌರತ್ವ ನಿರ್ಧಾರ ಮತ್ತು ಮತದಾರರ ಪಟ್ಟಿಯಿಂದ ಜನರನ್ನು ಹೊರಗಿಡುವ ಒಂದು ಅಸ್ತ್ರವನ್ನಾಗಿ ಪರಿವರ್ತಿಸುತ್ತದೆ. ಎಸ್ಐಆರ್ ಪ್ರಕ್ರಿಯೆಯ ವಿರುದ್ಧ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಮೋದಿ ಸರ್ಕಾರವು ಈ ಕ್ರಮವನ್ನು ಮುಂದುವರಿಸುತ್ತಿರುವುದು, ಸಾರ್ವಜನಿಕ ಭಾವನೆಗಳು ಮತ್ತು ಸಾಂವಿಧಾನಿಕ ವಿಧಿ-ನಿಯಮಗಳ ಬಗ್ಗೆ ಅದಕ್ಕಿರುವ ಸಂಪೂರ್ಣ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು, “ಇದಕ್ಕೆ ಅವಕಾಶ ನೀಡಬಾರದು. ಅಧಿಸೂಚಿಸಲಾದ ಈ ತಿದ್ದುಪಡಿಗಳನ್ನು ಹಿಂಪಡೆಯಬೇಕು ಮತ್ತು ಜನಗಣತಿ ವಿಧಿ-ವಿಧಾನದ ಕುರಿತು ಒಂದು ಸರ್ವಪಕ್ಷ ಸಮಾಲೋಚನೆ ನಡೆಸಬೇಕು. ಮೋದಿ-ಅಮಿತ್ ಶಾ-ಮೋಹನ್ ಭಾಗವತ್ ಕೈಗಳಲ್ಲಿ ಜನಗಣತಿಯು ಮುಂದಿನ ಎಸ್ಐಆರ್ ಆಗಿಬಿಡಬಾರದು” ಎಂದು ಅವರು ಹೇಳಿದ್ದಾರೆ.ಮೋದಿ
ಇದನ್ನೂ ನೋಡಿ : ಹವಾಮಾನ ಬಿಕ್ಕಟ್ಟು ಎಂದರೆ ಮನಸ್ಸಿನ ಬಿಕ್ಕಟ್ಟೂ ಹೌದು! Janashakthi Media
