ಮೇಫನಾದ್ ಸಹಾ : ಸಾರ್ವಜನಿಕ ಬದುಕಿನ ವಿಜ್ಞಾನಿ

ಮೂಲ : ಡಾ. ಸಬ್ಯಸಾಚಿ ಚಟರ್ಜಿ (ನಿವೃತ್ತ ವಿಜ್ಞಾನಿ, ಭಾರತೀಯ ಖಗೋಳಭೌತ ವಿಜ್ಞಾನ ಸಂಸ್ಥೆ, ಬೆಂಗಳೂರು)

ಅನುವಾದ : ಡಾ. ವಾಣಿ ಚಟರ್ಜಿ

ಪ್ರಸಿದ್ಧ ಖಗೋಳಭೌತ ವಿಜ್ಞಾನಿ ಮೇಫನಾದ್ ಸಹಾ ಅವರಿಗೆ,  ಅವರ ನಿಧನದ 70ನೇ ವರ್ಷದ  ಮತ್ತು  ಜನ್ಮದಿನದ (6 ಅಕ್ಟೋಬರ್) ಸಂದರ್ಭದಲ್ಲಿ ಇದು ಒಂದು ಗೌರವ ನಮನ. ಅವರ ಯೋಜನಾ ದೂರದೃಷ್ಟಿ, ನದೀ ಕಣಿವೆ ಯೋಜನೆಗಳು, ಎಡಪಂಥೀಯರ ಬೆಂಬಲದ ಲೋಕಸಭಾ ಜಯ ಮತ್ತು ಅಂಧಶ್ರದ್ಧೆಯ ವಿರುದ್ಧದ ಹೋರಾಟ – ಇವುಗಳಿಗಾಗಿ ಸಹಾ ಅವರನ್ನು ಇಂದಿಗೂ ನೆನಪಿಸಿಕೊಳ್ಳಬೇಕಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಬರೆದ ಲೇಖನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ರಾಷ್ಟ್ರೀಯ ಯೋಜನಾ ಸಮಿತಿಯ ಸ್ಥಾಪನೆಯಲ್ಲಿ ಅವರ ಪಾತ್ರದ ಬಗ್ಗೆ  ನಾನು ಹೇಳಿದ್ದೆ. (‘ಸುಭಾಷ್ ಚಂದ್ರ ಬೋಸ್ : ರಾಷ್ಟ್ರೀಯ ಯೋಜನೆ, ಕ್ರಿಯಾ ಯೋಜನೆ’, The Left views 23 ಜನವರಿ 2026). ಈ ಕಾರ್ಯಕ್ರಮದ ಪ್ರಮುಖ ಕಲ್ಪನೆ ಖಗೋಳಭೌತ ವಿಜ್ಞಾನಿ ಮೇಫನಾದ್ ಸಹಾರವರದು. ಆದರೆ,  ರಾಷ್ಟ್ರೀಯ ಯೋಜನೆಯ ಪ್ರಕ್ರಿಯೆಯಲ್ಲಿ ಈ ಇಬ್ಬರೂ ದೇಶಪ್ರೇಮಿಗಳ ಕೊಡುಗೆಯನ್ನು ಬಹುತೇಕ ಜನರು ಮರೆತು ಹೋಗಿದ್ದಾರೆ.  ನೆಹರೂ ಕಾಲದಲ್ಲಿ ಸ್ಥಾಪಿಸಲಾದ ಯೋಜನಾ ಆಯೋಗವನ್ನು 2014ರಲ್ಲಿ ಕಿತ್ತು ಹಾಕಲಾಯಿತು, . ಯೋಜನಾ ಆಯೋಗವನ್ನು ಮೊದಲಿನ ದಿನಗಳಲ್ಲಿ ರಾಷ್ಟ್ರೀಯ ಯೋಜನಾ ಸಮಿತಿ ಎಂದು ಕರೆಯಲಾಗುತ್ತಿತ್ತು.

ಸಹಾ ಅವರು ಹುಟ್ಟಿದ್ದು 6 ಅಕ್ಟೋಬರ್ 1893ರಲ್ಲಿ. ನದಿ ಕಣಿವೆ ಯೋಜನೆಗಳಿಗೆ ಒಂದು ಸಮಗ್ರ ಧೋರಣೆ ರೂಪಿಸುವಲ್ಲಿ  ಅವರದು ಮಾರ್ಗದರ್ಶಕ ಪಾತ್ರವಾಗಿತ್ತು. ಇದರ ಫಲವಾಗಿ ಸ್ವತಂತ್ರ ಭಾರತದ ಮೊಟ್ಟ ಮೊದಲ ಆಣೆಕಟ್ಟು ಆದ ದಾಮೋದರ್ ನದಿ ಕಣಿವೆ ಯೋಜನೆಯ  ಮೊದಲನೆಯ ಹಂತ ಜಾರ್ಖಂಡ್ ರಾಜ್ಯದ ತಲೈಯಾ ನಲ್ಲಿ 1953ರಲ್ಲಿ ಶುರುವಾಯಿತು.

ಉತ್ತರ ಬಂಗಾಳದ 1922ರ ಭೀಕರ ಪ್ರವಾಹದ ಬಾಧಿತ ಜನರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ ಸ್ಥಾಪಿಸಿದ ಸಮಿತಿಯಲ್ಲಿ ಸಹಾ ಪ್ರಮುಖ ಸದಸ್ಯರಾಗಿದ್ದರು. ಸಹಾರವರ ಪ್ರಾಚಾರ್ಯರಾದ ಪ್ರೊ. ಫ್ರಪುಲ್ ಚಂದ್ರ ರೇ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಅದೇ ಸಮಿತಿಯ ಮತ್ತೊಬ್ಬ ಸದಸ್ಯ ಯುವ ರಾಜಕೀಯ ಕಾರ್ಯಕರ್ತರಾಗಿದ್ದ (ಮತ್ತು ಕಾಲೇಜಿನಲ್ಲಿ ಮೂರು ವರ್ಷ ಕಿರಿಯರಾಗಿದ್ದ) ಸುಭಾಷ್ ಚಂದ್ರ ಬೋಸ್. ಇವರಿಬ್ಬರ ನಡುವಿನ ಈ ಪರಿಚಯವು ಗೆಳೆತನವಾಗಿ, ನಂತರ ಯೋಜನಾ ಸಮಿತಿ ಸ್ಥಾಪನೆಯ ದೇಶದ ಒಳಿತಿನ ಧ್ಯೇಯಕ್ಕಾಗಿ ಸಂಗಾತಿಗಳಾಗಿ ಬೆಳೆಯಿತು.

ಮೇಫನಾದ್ ಸಹಾ
ಮೇಫನಾದ್ ಸಹಾ

ಶಾಲಾದಿನಗಳಿಂದಲೇ ರಾಜಕೀಯ, ಸಾರ್ವಜನಿಕ ಜೀವನ

ಸಹಾರವರ ಸಾರ್ವಜನಿಕ ಜೀವನ ಶಾಲಾ ದಿನಗಳಲ್ಲೇ ಶುರುವಾಯಿತು. 1905 ಇಸವಿಯಲ್ಲಿ ಬ್ರಿಟಿಷರ ‘ವಿಭಜಿಸಿ ಆಳು’ ನೀತಿಯ ಭಾಗವಾಗಿ ಬಂಗಾಳ ಪ್ರಾಂತ್ಯ ಕೋಮು ಆಧಾರದಲ್ಲಿ ವಿಭಜಿಸಲ್ಪಟ್ಟಿತು. ಇದನ್ನು ಬಂಗಾಳದ ಜನ ಪ್ರತಿಭಟಿಸಿದರು. ಬಂಗಾಳದ ಗವರ್ನರ್ ಶಾಲೆಗೆ ಭೇಟಿ ಕೊಟ್ಟಾಗ ಪ್ರತಿಭಟಿಸುವ ವಿಧ್ಯಾರ್ಥಿಗಳಲ್ಲಿ ಸಹಾ ಅವರೂ ಒಬ್ಬರಾಗಿದ್ದರು. ಶಿಸ್ತಿನ ಕ್ರಮವಾಗಿ ಸರಕಾರಿ ಶಾಲೆಯಿಂದ ಸಹಾ ಅವರನ್ನು ಹೊರಹಾಕಲಾಯಿತು. ಸಹಾ ಖಾಸಗಿ ಶಾಲೆಯಲ್ಲಿ ಓದು ಮುಂದುವರೆಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು ಮತ್ತು ವಿದ್ಯಾರ್ಥಿ ವೇತನವನ್ನೂ ಪಡೆದರು. ಆನಂತರದ ದಿನಗಳಲ್ಲಿ, ಕೋಲ್ಕತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿದ್ದಾಗ ಸಹಾರವರಿಗೆ  ಬಂಗಾಳದ ಕ್ರಾಂತಿಕಾರಿಗಳ ಸಂಪರ್ಕವಿತ್ತು.

ಇಂತಹ ರಾಜಕೀಯ ಸಂಪರ್ಕ ಇರುವುದರಿಂದಲೇ ಸಹಾ ಅವರ ರಾಯಲ್ ಸೊಸೈಟಿ ಸದಸ್ಯತ್ವಕ್ಕೆ ಆಯ್ಕೆ ರಾಜಕೀಯ ತನಿಖೆ ಯಿಂದ ವಿಳಂಬವಾಯಿತು. ಸಹಾರವರು ಕಟ್ಟಾ ಕ್ರಾಂತಿಕಾರಿಯಾಗಿದ್ದು ಮತ್ತು ಬ್ರಿಟಿಷರ ವಿರುದ್ಧ ಅನೇಕ ಪ್ರಚಾರಗಳಲ್ಲಿ ಭಾಗಿಯಾಗಿದ್ದು, ಅವರು ಸದಸ್ಯರಾದರೆ ಅದರಿಂದ ರಾಯಲ್ ಸೊಸೈಟಿಗೆ ಯಾವುದೇ ತರಹದ ಮುಜುಗರ ಉಂಟಾಗಬಹುದೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ರಾಜಕೀಯ ತನಿಖೆಯ ಉದ್ದೇಶವಾಗಿತ್ತು.

ದೆಹಲಿಯ ಗೃಹ ವಿಭಾಗವು ಅನೇಕ ಕಾರಣಗಳಿಗಾಗಿ ಈ ನಿರ್ದಿಷ್ಟ ವ್ಯಕ್ತಿಯ ಪರವಾಗಿ ಶಿಫಾರಸು ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರೂ, ಸಹಾರವರು 1927ರಲ್ಲಿ FRS ಆಗಿ ಚುನಾಯಿತರಾದರು. ಇಂತಹ “ಮಾನಸಿಕ ನಕ್ಸಲರು” (ಇವತ್ತಿನ ಸರಕಾರಿ ಭಾಷೆಯಲ್ಲಿ ‘ದಿಮಾಗಿ ನಕ್ಸಲರು’), ಅಂತಹ ಉನ್ನತ ಶೈಕ್ಷಣಿಕ ಮಂಡಲಿಯ ಸದಸ್ಯರಾಗಲು ಸಾಧ್ಯವಿಲ್ಲವೆಂದು ಆಗಿನ ಆಡಳಿತ ಅಭಿಪ್ರಾಯ ಪಟ್ಟಿತ್ತು. ಆದರೆ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅನೇಕ ವಿಶ್ವವಿಖ್ಯಾತ ವಿಜ್ಞಾನಿಗಳು ಅವರ ಸಂಶೋಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಇ.ಒ ಲಾರೆನ್ಸ್ “ನನ್ನ ವಿದ್ಯಾರ್ಥಿದೆಸೆಯ ಪದವೀಧರ ಹಂತದಲ್ಲಿ ಸಹಾ ಅವರ ‘ಅಯಾನೀಕರಣ ಸಮೀಕರಣ’ವು ಕೊಟ್ಟ ಬೌದ್ಧಿಕ ರೊಮಾಂಚನ”ವನ್ನು ನೆನೆದರು. ಇನ್ನೊಬ್ಬ  ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ವಿಜೇತ ಆರ್ಥರ್ ಎಚ್. ಕಾಂಪ್ಟನ್ “ನಿಮ್ಮನ್ನು  ಈ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗೆ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವ ಗೌರವ ನನಗೆ ‌ಸಿಕ್ಕಿತು” ಎಂದು ಹೇಳಿದರು.

ಇದನ್ನೂ ಓದಿ : ದೆಹಲಿ–ಎನ್‌ಸಿಆರ್‌ನಲ್ಲಿ ಚಳಿಯ ಮುನ್ಸೂಚನೆ; ಕಳಪೆ ಮಟ್ಟಕ್ಕೆ ಕುಸಿಯುವ ಹಂತದಲ್ಲಿ ವಾಯು ಗುಣಮಟ್ಟ

ಮೇಘನಾದ್ ಸಹಾ ಹಾರ್ವರ್ಡ್ ವಿ.ವಿ ವೀಕ್ಷಣಾಲಯದ ವಿಜ್ಞಾನಿಗಳ ಜೊತೆಗೆ 1936
ಮೇಘನಾದ್ ಸಹಾ ಹಾರ್ವರ್ಡ್ ವಿ.ವಿ ವೀಕ್ಷಣಾಲಯದ ವಿಜ್ಞಾನಿಗಳ ಜೊತೆಗೆ 1936

ಅಭಿವೃದ್ಧಿಯಲ್ಲಿ ವಿಜ್ಞಾನದ ಪಾತ್ರಕ್ಕೆ ಒತ್ತು

“ನಕ್ಷತ್ರಗಳ ಉಷ್ಣ ಅಯನೀಕರಣ” ಸಹಾರವರ ಪ್ರಮುಖ ಸಂಶೋಧನೆಯಾಗಿತ್ತು. ಅವರ ಈ ಸಂಶೋಧನೆಯು ಆ ತಾಪಮಾನ ಮತ್ತು ಒತ್ತಡಗಳಲ್ಲಿ ಮೂಲವಸ್ತುಗಳ ಅಯಾನೀಕರಣ ಸ್ಥಿತಿಯನ್ನು ಖಚಿತಪಡಿಸಿಕೊಂಡು, ನಕ್ಷತ್ರಗಳ ಆಂತರಿಕ ಪರಮಾಣು ಸಂಯೋಜನೆಯನ್ನು  ಅರ್ಥ ಮಾಡಿಕೊಳ್ಳಲು ವಿಜ್ಞಾನಿಗಳಿಗೆ ಅತ್ಯಗತ್ಯ ಮತ್ತು ದೀರ್ಘನಿರೀಕ್ಷಿತ ಸುಳಿವನ್ನು ನೀಡಿತು. ಅಲಹಾಬಾದಿನ ವಿಶ್ವವಿದ್ಯಾಲಯದ ಭೌತಿಕ ಶಾಸ್ತ್ರ ವಿಭಾಗ ತೆರೆಯುವಾಗ, ತನ್ನ ಕರ್ತವ್ಯ ಈ ‘ದಂತ ಗೋಪುರ’ದಿಂದ ಹೊರಗೆ ಬರುವುದೆಂದು ಸಹಾ ಅರ್ಥಮಾಡಿಕೊಂಡರು. ಇವರ ಅಂತಾರಾಷ್ಟ್ರೀಯ ಖ್ಯಾತಿ ಮತ್ತು ಮೇಧಾ ಶಕ್ತಿ ಎಲ್ಲರನ್ನೂ ಸೆಳೆಯಿತು. ಈ ಪರಿಪಕ್ವ ಸ್ಥಿತಿಯನ್ನು ಬಳಸಿಕೊಂಡು United Provinces Academy of Science (ಈಗ National Academy of Science) ಮತ್ತು ನಂತರ National Science Institute (ಈಗ Indian National Science Academy) ಸ್ಥಾಪಿಸಲಾಯಿತು.

ವಿಜ್ಞಾನ ಮತ್ತು ಅಭಿವೃದ್ಧಿಗಳ ಬಗ್ಗೆ, ಸಹಾ ಅವರ ಚಿಂತನೆಗಳು ಜವಾಹರಲಾಲ್ ನೆಹರು ಚಿಂತನೆಗಳೊಂದಿಗೆ ಅನುರಣಿಸುತ್ತಿದ್ದವು. ಇಬ್ಬರೂ ಅಲಹಾಬಾದಿಗೆ ಸೇರಿದವರು. ಇಬ್ಬರ ನಡುವೆ ಸ್ನೇಹ ಬೆಳೆಯಿತು. 1931 ಇಸವಿಯಲ್ಲಿ UP ವಿಜ್ಞಾನ ಅಕಾಡೆಮಿ ಅಧ್ಯಕ್ಷ ಭಾಷಣದಲ್ಲಿ ಸಹಾ ಹೀಗೆ ಹೇಳಿದ್ದರು “ಈ ಪ್ರಪಂಚವು ಒಂದಕ್ಕೊಂದು ಹೆಣೆದುಕೊಂಡ ಒಂದು ದೊಡ್ಡ ಆರ್ಥಿಕ ಘಟಕವೆಂದು ಈಗಷ್ಟೇ ಜನರಿಗೆ ನಿಧಾನವಾಗಿ ಅರ್ಥವಾಗುತ್ತಿದೆ. ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಶೇರು ಕುಸಿತವಾದರೆ, ಅದರ ಪರಿಣಾಮವಾಗಿ ಮುಂಬೈನಲ್ಲಿ (1928, 1929 ರ ಮುಂಬೈನ ಗಿರಣಿ ಕಾಮಗಾರ್ ಯೂನಿಯನ್ ಮುಷ್ಕರ ನೆನಪಿಸಿಕೊಳ್ಳಿ) ಮುಷ್ಕರವಾಗುತ್ತದೆ. ಲಾಂಕಾಶೈರ್ ನಲ್ಲಿನ ನಿರುದ್ಯೋಗ, ಬಂಗಾಳದ ಸಣಬು ಬೆಲೆ ಕಡಿತಕ್ಕೆ ಕಾರಣವಾಗಿ, ಅದು ನಂತರ ಹಿಂದೂ – ಮುಸ್ಲಿಮರ ಗಲಭೆಗೆ ಕಾರಣವಾಗಬಹುದು.. ..ಆದರೆ, ಆರ್ಥಿಕ ಮತ್ತು ಇತರೇ ಅಧ್ಯಯನಗಳು ಹೇಳುವಂತೆ, ಈ ಭೂಮಿಯಲ್ಲಿ ಇಡೀ ಜಗತ್ತಿನ ಜನತೆಗೆ ಸಾಕಾಗುವಷ್ಟು ಸಂಪನ್ಮೂಲ ಇದೆ. ವ್ಯವಸ್ಥಿತ ಉತ್ಪಾದನೆ ಮತ್ತು ಜನರಲ್ಲಿ ಅದರ ಹಂಚಿಕೆಯು ನ್ಯಾಯವಾದ ಮತ್ತು ಸಮಾನ ರೀತಿಯಲ್ಲಿ ನಡೆದರೆ, ಹಸಿವು ಮುಂತಾದ ಯಾವುದೇ ಸಂಕಷ್ಟದಿಂದ ಯಾರೂ ಬಳಲಬೇಕಿಲ್ಲ. ಅಲ್ಲದೆ, ಬದುಕಿನಲ್ಲಿ ಇನ್ನೂ ಅನುಕೂಲಕರ ಜೀವನ ನಡೆಸಬಹುದು.”

ಈ ತರಹದ ಪದ್ಧತಿ ಸೋವಿಯತ್ ರಷ್ಯಾದಲ್ಲಿ ಇರುವುದನ್ನು ಸಹಾ ಗಮನಿಸಿದರು. “1917ರ ಕ್ರಾಂತಿಯ ನಂತರ, ಸೋವಿಯತ್ ಪದ್ಧತಿಯ ಬದುಕು ಮತ್ತು ಅದರ ಸರಕಾರ ಯಶಸ್ಸು ಕಾಣಬೇಕೆಂದರೆ, ವಿಜ್ಞಾನ ಪ್ರಧಾನ ಪಾತ್ರ ವಹಿಸಬೇಕು. ರಷ್ಯಾದ ಆರ್ಥಿಕ ಸ್ಥಿತಿ ಸುಮಾರು ನೂರು ವರ್ಷಗಳಷ್ಟು ಹಿಂದೆ ಇತ್ತು. ಈ ಪ್ರತಿಕೂಲ ಪ್ರಪಂಚದಲ್ಲಿ ತಮ್ಮ ಎಲ್ಲಾ ಆಶಯಗಳು ಯಶಸ್ಸು ಕಾಣಬೇಕೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ರಷ್ಯಾದ ಸಮಾಜದ ಪರಿವರ್ತನೆ ಆಗಬೇಕು. ಸಮಾಜವಾದಿ ಉದ್ಯಮ, ಸಾಮೂಹಿಕ ಮಾಲಿಕತ್ವ ಮತ್ತು ಭೂಮಿಯ ಸಾಮೂಹಿಕ ನಿರ್ವಹಣೆ  ಹಾಗೂ ಸಂಪೂರ್ಣ ವಿದ್ಯುದೀಕರಣದ ಮೂಲಕ ಈ ಪರಿವರ್ತನೆಯನ್ನು ಸಾಧಿಸಿ, ರಷ್ಯಾವನ್ನು ಒಂದು ಮಹಾನ್ ಶಕ್ತಿಯಾಗಿಸಬೇಕು ಎಂದು ಲೆನಿನ್ ಕಂಡುಕೊಂಡರು.”

ನಾಯಕರಾದ ನೆಹರೂ, ಬೋಸ್ ಮತ್ತು ಬುದ್ದಿಜೀವಿಗಳಾದ ಠಾಗೋರ್ ಈ ಧೋರಣೆಯ ಜತೆ ಸಹಮತ ಹೊಂದಿದ್ದರು. ಠಾಗೋರರು ಸೋವಿಯತ್ ಒಕ್ಕೂಟಕ್ಕ ಭೇಟಿ ನೀಡಿ ಅಲ್ಲಿನ ಪ್ರಗತಿಯನ್ನು ಕಣ್ಣಾರೆ ಕಂಡಿದ್ದರು.

ಮೇಘನಾದ್ ಸಹಾ ಸಂಸತ್ ಸದಸ್ಯರಾಗಿ ಚುನಾಯಿತರಾದಾಗ ಸನ್ಮಾನ
ಮೇಘನಾದ್ ಸಹಾ ಸಂಸತ್ ಸದಸ್ಯರಾಗಿ ಚುನಾಯಿತರಾದಾಗ ಸನ್ಮಾನ 1952

ಸಂಸತ್ ಸದಸ್ಯರಾಗಿ ಕೊಡುಗೆ

ಸ್ವಾತಂತ್ರ್ಯ ನಂತರದಲ್ಲಿ, ಕಾಂಗ್ರೆಸ್ ಪಕ್ಷದ ನಿಲುವು ಸಹಾರವರನ್ನು ಆಶ್ಚರ್ಯಗೊಳಿಸಿತು. ಕಾಂಗ್ರೆಸ್ ಪಕ್ಷದ ಬರೀ “ಚರಕ ಮತ್ತು ಎತ್ತಿನಗಾಡಿ”ಗೆ ವಾಪಸು ಹೋಗುವ, ವೈಭವೀಕರಣ ಮಾಡುವ ಧೋರಣೆ ಇಷ್ಟವಾಗಲಿಲ್ಲ. ಈ ಕಾರಣದಿಂದಲೇ ಅವರು 1952 ಇಸವಿಯಲ್ಲಿ ನಡೆದ ಮೊಟ್ಟಮೊದಲ ಚುನಾವಣೆಯಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಚುನಾವಣೆಯಲ್ಲಿ ದೊಡ್ಡ ಬಹುಮತದಿಂದ ವಾಯುವ್ಯ ಕಲ್ಕತ್ತಾ ಕ್ಷೇತ್ರದಲ್ಲಿ ಗೆದ್ದರು. ನಂತರ 8 ಜನವರಿ 1952 ರ ಸ್ವಾಧೀನತಾ ದಿನಪತ್ರಿಕೆಯಲ್ಲಿ ವರದಿಯಂತೆ ಬರಾನಗರದಲ್ಲಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸುವಂತೆ ಕರೆಕೊಟ್ಟರು. ಕಾಂಗ್ರೆಸ್ ಪಕ್ಷ ಬರೀ ಜಮಿಂದಾರು ಮತ್ತು ಧನಿಕ ವರ್ತಕರಿಂದ ಕೂಡಿದೆ ಎಂದರು. ಅವರು ಬೆಂಬಲಿಸಿದ ಅಭ್ಯರ್ಥಿ ಜ್ಯೋತಿ ಬಸು ಆಗಿದ್ದರು.

ಸಹಾರವರು ಲೋಕಸಭೆಯಲ್ಲಿ ತುಂಬಾ ಕಡಿಮೆ ಕಾಲ ಇದ್ದರು. 16 ಫೆಬ್ರವರಿ 1956 ಇಸವಿಯಲ್ಲಿ ನಿಧನರಾದರು. ಇಷ್ಟು ಕಡಿಮೆ ಸಮಯದಲ್ಲೇ 32 ಚರ್ಚೆಗಳಲ್ಲಿ ಪಾಲ್ಗೊಂಡು ಪ್ರಜೆಗಳ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಅವರು ಚರ್ಚಿಸಿದ ವಿಷಯಗಳು ಶಿಕ್ಷಣ, ನದೀ ಕಣಿವೆ ಯೋಜನೆ, ಪ್ರವಾಹ ನಿಯಂತ್ರಣ, ಯೋಜನೆಗಳು, ನಿರಾಶ್ರಿತರಿಗೆ ಪುನರ್ವಸತಿ, ಕೈಗಾರಿಕೆ ಮತ್ತು ಉದ್ಯೋಗ, ರಾಜ್ಯ ಮರುಸಂಫಟನೆ ಮುಂತಾದವು.

“ನಾನೊಬ್ಬ ನಿರಾಶ್ರಿತ ಮತ್ತು ನಿರಾಶ್ರಿತರ ಪ್ರತಿನಿಧಿ” ಎಂದು ಸಂಸತ್ತಿನಲ್ಲಿ ಹೇಳಿದ ಸಹಾ, ಸ್ವಾತಂತ್ರ್ಯದ ನಂತರ ದೇಶವಿಭಜನೆಯ ಕಾರಣದಿಂದ, ಬಾಂಗ್ಲಾದೇಶದ ಢಾಕಾ ಜಿಲ್ಲೆಯ ತನ್ನ ಪೂರ್ವಜರ ಮನೆಯನ್ನು ಬಿಟ್ಟು ಬರಬೇಕಾಯಿತು. ನಾನು ಸಹಾರವರ ಮನೆಗೆ 2000 ಮತ್ತು 2023 ಇಸವಿಗಳಲ್ಲಿ ಭೇಟಿ ನೀಡಿದ್ದೆ. ಅದರ ಬಗ್ಗೆ ಬೇರೊಂದು ಲೇಖನದಲ್ಲಿ ಹೇಳುವೆ.

ಸಹಾರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ತುಂಬಾನೇ ಬೆಂಬಲ ಸಿಕ್ಕಿತು. ಕೋಲ್ಕತಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅವರಿಗೆ ಬೆಂಬಲ ಕೊಟ್ಟರು. ಅವರ ಗೆಲುವಿಗೆ ತುಂಬು ಹೃದಯದ ಸ್ವಾಗತ ಸಿಕ್ಕಿತು. ಪ್ರಪಂಚದ ಅನೇಕ ಗಣ್ಯರು ಅವರನ್ನು ಹೊಗಳಿದರು. ಜೆ.ಬಿ.ಎಸ್ ಹಲ್ಡೇನ್ “ಭಾರತಕ್ಕೆ (ಮತ್ತು ಬ್ರಿಟನ್ ಗೆ ಕೂಡ) ವಿಜ್ಞಾನವನ್ನು ದೇಶದ ಸರಕಾರಕ್ಕೆ ತರಬಲ್ಲ ಸಹಾರಂಥ ವಿಜ್ಞಾನಿಗಳು ಬೇಕು” ಎಂದು ಉದ್ಗರಿಸಿದರು. ವಿಜ್ಞಾನಿಗಳ ಸಹ ಯೂನಿಯನ್ ಗಳಲ್ಲಿ ಸಂಘಟಿತರಾಗುವುದು ಇದಕ್ಕೆ ಅವಶ್ಯಕ ಎಂವುದು ಸಹಾ ಅವರ ನಂಬಿಕೆಯಾಗಿತ್ತು. ಅವರ ಹಲವು ಸಂಗಾತಿಗಳು, ಒಳಿತು ಬಯಸುವವರು, ಗೌರವದಿಂದ ಕಾಣುವ ಜನ, ವಿಮರ್ಶಕರು ಇಂತಹ ಮೇಧಾವಿ, ತನ್ನ ವಿಜ್ಞಾನದ ಬಗ್ಗೆ ಗಮನ ಕೊಡದೆ ಇಂತಹ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಮಾಡಿದ ಟೀಕೆಗಳನ್ನು ಲೆಕ್ಕಿಸದೆ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದರು. ಇವತ್ತಿನ ಭಾಷೆಯಲ್ಲಿ ಅವರು ‘ಅಂದೋಲನಜೀವಿ’ ಆಗುವುದನ್ನು ಟೀಕಿಸುತ್ತಿದ್ದರು.

ಕೊಲ್ಕತ್ತಾದಲ್ಲಿರುವ ಸಹಾ ಪರಮಾಣು ಭೌತಶಾಸ್ತ್ರ ಸಂಸ್ಥೆ
ಕೊಲ್ಕತ್ತಾದಲ್ಲಿರುವ ಸಹಾ ಪರಮಾಣು ಭೌತಶಾಸ್ತ್ರ ಸಂಸ್ಥೆ

ವಿಜ್ಞಾನಕರ್ಮಿಗಳ ಸಂಘಟನೆ

ವಿಶ್ವ ವಿಜ್ಞಾನಕರ್ಮಿಗಳ ಒಕ್ಕೂಟದಲ್ಲಿ ಸಹಾ ಹೀಗೆ ಹೇಳಿದ್ದರು “ಯೂನಿಯನ್ ಕಾರ್ಯ ಆರಂಭವಾಗಿದ್ದು ಫ್ಯಾಶನ್ ಗಾಗಲ್ಲ, ಹಸಿವು ಹಾಗೂ ಬಳಲಿಕೆಯಿಂದ…., ತಮ್ಮ ಸಂಶೋಧನಾ ಫಲಿತಾಂಶವನ್ನು ಯುದ್ದಕ್ಕೆ ಬಳಸುತ್ತಿರುವುದು ಮತ್ತು ಶಾಂತಿ ಸಮಯದಲ್ಲಿ ಹತಾಶೆ ಮತ್ತು ನಿಸ್ಸಹಾಯಕತೆ ಗಳಿಂದ ಬಳಲುತ್ತಿರುವುದನ್ನು ನೋಡುತ್ತಾ, ವಿಜ್ಞಾನಕರ್ಮಿಗಳು ಇನ್ನು ಸುಮ್ಮನಿರಲು ಸಾಧ್ಯವಿಲ್ಲ.”

ಶಾಂತಿಗಾಗಿ ಸತತವಾಗಿ ಶ್ರಮಿಸಿದ ಸಹಾ, 1950 ರಲ್ಲಿ ವಾರ್ಸಾದಲ್ಲಿ ನಡೆದ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಮತ್ತು 1954ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷ ಮಂಡಲಿಯ ಸದಸ್ಯರಾಗಿ ಕೆಲಸಮಾಡಿದರು.

ಶಾಂತಿಯನ್ನು ಹರಡಲು ಮತ್ತು ಸಾಮಾನ್ಯ ಜನರನ್ನು ವಿಜ್ಞಾನದ ಕಡೆ ಆಕರ್ಷಿಸಲು, ಸಹಾ ಮತ್ತು ಅವರ ಒಡನಾಡಿಗಳು ‘ವಿಜ್ಙಾನ ಮತ್ತು ಸಂಸ್ಕೃತಿ ‘ ಎನ್ನುವ ಪತ್ರಿಕೆ 1935ರಲ್ಲಿ ಶುರು ಮಾಡಿದರು. ಅದು ಅತೀ ಶೀಘ್ರದಲ್ಲಿ ಪ್ರಸಿದ್ಧವಾಗಿ ಒಂದು ಪ್ರಭಾವಶಾಲಿ ಅಭಿಪ್ರಾಯ ರೂಪಿಸುವ ವೇದಿಕೆ ಆಯಿತು. ಸಹಾ ಸ್ವತಃ ಆ ಪತ್ರಿಕೆಗೆ 132 ಲೇಖನಗಳನ್ನು ಮತ್ತು, 60 ಲೇಖನಗಳನ್ನು ಇತರ ಪತ್ರಿಕೆಗಳಿಗೆ ಬರೆದರು. ಅವರು ಬರೆದ 31 ಬಂಗಾಲೀ ಭಾಷೆಯ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅದರಲ್ಲಿ 3 ಲೇಖನಗಳು ಭಾರತಬರ್ಷ ಎಂಬ ಪತ್ರಿಕೆಯಲ್ಲಿ 1938-40 ಇಸವಿಗಳಲ್ಲಿ ಪ್ರಕಟವಾಗಿ, ಅನೇಕ ವಾಗ್ವಾದಕ್ಕೆ ಒಳಗಾದವು. ಪ್ರಾಚೀನ ವಿಜ್ಞಾನ ಮತ್ತು ತತ್ವಶಾಸ್ತ್ರ, ಈಗಿನ ಆಧುನಿಕ ವಿಜ್ಞಾನದ ಆವಿಷ್ಕಾರಗಳ ಸನ್ನಿವೇಶದಲ್ಲಿ ಪ್ರಸ್ತುತವೇ ಅಥವಾ ಅಪ್ರಸ್ತುತವೇ, ಎಂಬುದು ತೀವ್ರ ವಾಗ್ವಾದಕ್ಕೆ ಗುರಿಯಾಯಿತು. ಈ ವಾಗ್ವಾದಕ್ಕೆ ಸತ್ಯೇನ್ ಬೋಸ್ ಅವರು ಉತ್ತರ ಕೊಟ್ಟು, ಸನಾತನಿಗಳಿಗೆ, ಇಂತಹ ಕಠುವಾದ ಉತ್ತರವೇ ಬೇಕಾಗಿದೆ ಎಂದರು. ಬೋಸ್ ಅವರು (ಬೋಸ್ ಐನ್ಸ್ ಟೀನ್ ಸಂಖ್ಯಾಶಾಸ್ತ್ರ ಆವಿಷ್ಕಾರ ಮಾಡಿದವರು). B.Sc ಮತ್ತು M.Sc ನಲ್ಲಿ ಸಹಪಾಠಿಗಳು. ಕೋಲ್ಕತಾ ವಿಶ್ವವಿದ್ಯಾಲಯದಲ್ಲಿ ಸಹೋದ್ಯೋಗಿಗಳೂ ಆಗಿದ್ದರು.

ಅಂಧಶ್ರದ್ಧೆಗೆ ಸವಾಲು ಹಾಕುವುದನ್ನು ಸಹಾ ಜೀವನದುದ್ದಕ್ಕೂ ತನ್ನ ಮುಂದಿರುವ ಸವಾಲು ಮತ್ತು ಕರ್ತವ್ಯವೆಂದು ಭಾವಿಸಿದ್ದರು. ಈ ವಿಷಯವನ್ನು ಮತ್ತೆ ಮತ್ತೆ ವಿಶ್ಲೇಸುತ್ತಲೇ ಇದ್ದರು, ಮತ್ತು ಹೆಚ್ಚು ಸಂಘಟಿತ ರೀತಿಯಲ್ಲಿ ಭಾರತೀಯ ಕಾಲೆಂಡರುಗಳನ್ನು ಪರಿಶೀಲಿಸಿದರು.  ಚರಿತ್ರೆ ಹಾಗೂ ಪ್ರಾಚೀನ ಖಗೋಳಶಾಸ್ತ್ರದ ಬಗ್ಗೆ ಸಹಾರವರ ಜ್ಞಾನವು ಈ ವಿಷಯದಲ್ಲಿ ಹೊಸ ದೃಷ್ಟಿಕೋನವನ್ನು ರೂಪಿಸಿದೆ.  ಜೆ.ಬಿ.ಎಸ್ ಹಲ್ಡೇನ್ “ಅವರ ಈ ಪ್ರಯತ್ನ ದೇಶದ ಜನತೆಯನ್ನು ಅಂಧಶ್ರದ್ಧೆ ಎಂಬ ಬಂಧನದಿಂದ ಹೊರಬರಲು ಸಹಾಯ ಮಾಡಬಹುದು.” ಮತ್ತು “ಪ್ರಾಚೀನ ಭಾರತೀಯ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬಗ್ಗೆ ಹೊಸ ದೃಷ್ಟಿಕೋನವನ್ನು ತೆರೆದು, ಅನೇಕ ಹಳೆಯ ದಾಖಲೆಗಳ ನಿರ್ದಿಷ್ಟವಾದ ಕಾಲ ತಿಳಿಯಲು ಸಹಾಯ ಮಾಡಿದೆ.

ಚರಿತ್ರೆ, ಪುರಾತತ್ವಶಾಸ್ತ್ರದಲ್ಲೂ ಆಸಕ್ತಿ

ಸ್ವತಃ ಚರಿತ್ರೆಯಲ್ಲಿ ನಿಪುಣ ಇಲ್ಲದಿದ್ದರೂ, ಸಹಾ ಅವರಿಗೆ ಚರಿತ್ರೆಯಲ್ಲಿ ಅಪಾರ ಆಸಕ್ತಿ. ಸಿಂಧೂ ಕಣಿವೆಯ ನಾಗರಿಕತೆ ಮತ್ತು ಆ ಕಾಲದಲ್ಲಿನ ಲಿಪಿಯ ಬಗ್ಗೆ ಅವರಿಗೆ ಕುತೂಹಲವಿತ್ತು. ಈ ಮೊದಲು ಸಂಸ್ಕೃತ ಪ್ರಾಚಾರ್ಯರಾದ ಕ್ಷೇತ್ರೇಷ್ ಚಂದ್ರ ಚಟ್ಟೋಪಾಧ್ಯಾಯ ಅವರು ಇದನ್ನು  ದೃಢಪಡಿಸಿ, ಪ್ರತಿದಿನವೂ ಸಹಾ ತಮ್ಮ ಬಳಿ ಪ್ರಾಚೀನ ಭಾರತೀಯ ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರದ ಕುರಿತು ಚರ್ಚೆ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಅಲಹಾಬಾದ್ (ಇವತ್ತಿನ ಪ್ರಯಾಗರಾಜ್) ಗೆ 55 ಕಿಲೋಮೀಟರ್ ದೂರದಲ್ಲಿರುವ ಕೌಶಾಂಬಿ ಎಂಬ ಜಾಗಕ್ಕೆ ಹೋಗುವುದನ್ನು ಸಹಾರವರು ಸ್ವಂತ ಖರ್ಚಿನಲ್ಲಿ ಮಾಡಿದರು.  ಅಲ್ಲಿಗೆ ಹೋದ ಗುಂಪಿನಲ್ಲಿ ಖ್ಯಾತಿ ಪಂಡಿತರಾದ ದಾಮೋದರ ದರ್ಮಾನಂದ್ ಕೊಸಾಂಬಿ ಇದ್ದರು. ಹಾಗೂ ಇದಾದ ನಂತರವೇ ಅಲಹಾಬಾದ್ ವಿಶ್ವವಿದ್ಯಾಲಯ ಈ ಜಾಗದ ಉತ್ಖನನದಲ್ಲಿ ಆಸಕ್ತಿ ವಹಿಸಿತು.

ದಶಕಗಳ ನಂತರ, ಪ್ರಸಿದ್ಧ ಜೋಸೆಫ್ ನೀಧಾಮ್ ಹೇಳಿದಂತೆ, ಇವರಿಬ್ಬರೂ ಇರಾನ್, ಇರಾಖ್ ದಾರಿಯಲ್ಲಿ ದೊಡ್ಡ ಪಯಣ ಮಾಡಿ, ದಾರಿಯಲ್ಲಿ Mt. Elbrusನ ಹೂಗಿಡಗಳ ಉದ್ಯಾನವನ್ನೂ, ಪಾಳುಬಿದ್ದ Ctesiphon ಸ್ಥಿತಿಯನ್ನೂ ನೋಡಿದರು.

******************

ಇದನ್ನೂ ನೋಡಿ : 19 ವರ್ಷ ದುಡಿದರೂ ಖಾಯಂ ಇಲ್ಲ! ನ್ಯಾಯ ಕೇಳಿದ ವಿಶೇಷಚೇತನರ ಮೇಲೆ ಪೊಲೀಸರ ದಬ್ಬಾಳಿಕೆ? Janashakthi Media

 

Donate Janashakthi Media

Leave a Reply

Your email address will not be published. Required fields are marked *