ನೀಲೋತ್ಪಲ್ ಬಸು
ಸಂವಿಧಾನದ ಸ್ಥಾಪನೆಯ ನಂತರವೂ ಭಾರತೀಯ ಜನರು 1975ರ ಕುಖ್ಯಾತ ತುರ್ತುಪರಿಸ್ಥಿತಿ ಅವಧಿ ಸೇರಿದಂತೆ ಪ್ರಜಾಪ್ರಭುತ್ವ ರಕ್ಷಣೆಗಾಗಿ ಅವಿರತ ಹೋರಾಟ ನಡೆಸುತ್ತಾ ಬಂದಿದ್ದಾರೆ. ಬಹುಶಃ ಆ ಹೋರಾಟದ ಅತ್ಯಂತ ಭಯಾನಕ ಮುಖ ನಮ್ಮ ಪೌರತ್ವದ ಬಾಹ್ಯರೇಖೆಗಳನ್ನೇ ಮರುರೂಪಿಸುವ ಪ್ರಯತ್ನ ನಡೆಸುತ್ತಿರುವ ನವ-ಫ್ಯಾಸಿಸ್ಟ್ ಆಳ್ವಿಕೆಯ ನೆರಳಿನಡಿ ಮುಂದುವರಿದಿದೆ. ಅದರ ಅಡಿಯಲ್ಲಿ ನಡೆದ ಎಸ್ಐಆರ್ ಮಹಾ ದುರಂತಕ್ಕೆ ಕಾರಣವಾಗಿದ್ದು 13 ಕೋಟಿಗೂ ಹೆಚ್ಚು ಜನರು ಮತದಾನದ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ಹಿಂದಿನ ವಿಧಾನಗಳು, ತಪ್ಪು ಕೃತ್ಯಗಳು ಮತ್ತು ಕಾನೂನಿನ ನಗ್ನ ಉಲ್ಲಂಘನೆಗಳು, ಸಾಂವಿಧಾನಿಕ ಸಬಲೀಕರಣವನ್ನು ಅಪಹರಿಸುವ ಪಿತೂರಿ ಎಲ್ಲವೂ ಈಗ ಬಯಲಿಗೆ ಬಂದಿವೆ. ಆದರೆ ಕೇವಲ ಒಂದು ಪಲ್ಲಟ ಸಾಕಾಗುವುದಿಲ್ಲ. ನಿಜ, ಹೂವುಗಳನ್ನು ಕೀಳಲಾಗಿದೆ ಎನ್ನುವಲ್ಲಿ ಅನುಮಾನವಿಲ್ಲ, ಆದರೆ ವಸಂತದ ಆಗಮನವನ್ನು ಖಾತ್ರಿಪಡಿಸಬೇಕಾಗಿದೆ. ವಸಂತಕಾಲ
* ಕನ್ನಡಕ್ಕೆ: ವಿಶ್ವ
ಪಾಬ್ಲೋ ನೆರುದಾ ಅವರ ಅಮರ ಸಾಲುಗಳು ಹೀಗಿವೆ:`ನೀನು ಎಲ್ಲ ಹೂವುಗಳನ್ನು ಕೊಯ್ಯಬಹುದು.ಆದರೆ ವಸಂತ ಬರುವುದನ್ನು ತಡೆಯಲು ನಿನಗೆ ಸಾಧ್ಯವಿಲ್ಲ’.
ಇವು ಮಾನವಕುಲ ಮತ್ತು ನಾಗರಿಕತೆಗೆ ತಕ್ಕುದಾದ ಗುರಿಸಾಧನೆಗೆ ಜನರ ಸಾಮೂಹಿಕ ವಿಜಯ ಅನಿವಾರ್ಯವೆಂಬ ಪರಮ ಘೋಷಣೆಯ ಮಾತುಗಳು. ಚುನಾವಣಾ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಆರಂಭವಾದ ಹೋರಾಟವು ಸಮಕಾಲೀನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಡೆದ ಅತ್ಯಂತ ದೊಡ್ಡ ಹೋರಾಟವಾಗಿ ಬೆಳೆದು ಬಂದಿದೆ.
ಭಾರತದ ಚುನಾವಣಾ ಆಯೋಗ ಕಳೆದ ವರ್ಷ ಆರಂಭಿಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮೂಲಕ ಸಾಮೂಹಿಕವಾಗಿ ಮತದಾನದ ಹಕ್ಕನ್ನು ಕಸಿಯುವುದರಿಂದ ಸಂತ್ರಸ್ತರಾದ ಪ್ರಜೆಗಳ ಮತದಾನದ ಹಕ್ಕನ್ನು ಮರುಸ್ಥಾಪಿಸುವ ಈ ಹೋರಾಟ ಒಂದು ಆಕಸ್ಮಿಕವಲ್ಲ. ಅನುಮಾನಿತ ಪೌರರನ್ನು ನ್ಯಾಯಸಮ್ಮತ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಮಾಣದ ಅಗಾಧತೆಯೇ ಪ್ರಜಾಪ್ರಭುತ್ವದ ಕುರಿತ ಜನರ ಕಾಳಜಿಯಲ್ಲಿ ಒಂದು ಸುವರ್ಣ ಅಧ್ಯಾಯವನ್ನು ಸೇರಿಸಿದೆಯೆನ್ನುವುದರಲ್ಲಿ ಅನುಮಾನವೇ ಇಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿನ ಹೋರಾಟದ ಇತಿಹಾಸವು ನಮ್ಮ ಸ್ವಾತಂತ್ರ್ಯಕ್ಕಿಂತಲೂ ಮತ್ತು ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧದ ಹೋರಾಟದ ಕತೆಗಿಂತಲೂ ಮುನ್ನವೇ ಆರಂಭವಾಗಿರುವಂತದ್ದು.
ಸಂವಿಧಾನದ ಸ್ಥಾಪನೆಯ ನಂತರವೂ ಭಾರತೀಯ ಜನರು 1975ರ ಕುಖ್ಯಾತ ತುರ್ತುಪರಿಸ್ಥಿತಿ ಅವಧಿ ಸೇರಿದಂತೆ ಪ್ರಜಾಪ್ರಭುತ್ವ ರಕ್ಷಣೆಗಾಗಿ ಅವಿರತ ಹೋರಾಟ ನಡೆಸುತ್ತಾ ಬಂದಿದ್ದಾರೆ. ಬಹುಶಃ ಆ ಹೋರಾಟದ ಅತ್ಯಂತ ಭಯಾನಕ ಮುಖ ನಮ್ಮ ಪೌರತ್ವದ ಬಾಹ್ಯರೇಖೆಗಳನ್ನೇ ಮರುರೂಪಿಸುವ ಪ್ರಯತ್ನ ನಡೆಸುತ್ತಿರುವ ನವ-ಫ್ಯಾಸಿಸ್ಟ್ ಆಳ್ವಿಕೆಯ ನೆರಳಿನಡಿ ಮುಂದುವರಿದಿದೆ. ಹಿಂದುತ್ವ ಧೋರಣೆಗೆ ಅನುಗುಣವಾಗಿ ಪೌರತ್ವವನ್ನು ಮರುವ್ಯಾಖ್ಯಾನಿಸುವ ಮತ್ತು ನಮ್ಮ ಬಹುರಾಷ್ಟ್ರೀಯ, ಬಹು-ಧರ್ಮೀಯ, ಬಹು-ಸಾಂಸ್ಕೃತಿಕ ಪ್ರಜಾಪ್ರಭುತ್ವವನ್ನು ಒಂದು ಮತೀಯ ಅಸ್ಮಿತೆಗೆ ಕಟ್ಟಿ ಹಾಕಿದ ಪೌರತ್ವದೊಳಕ್ಕೆ ತುರುಕುವ ಪ್ರಯತ್ನ ಇದಾಗಿದೆ.
ಇದು ನಮ್ಮ ಜನತಾಂತ್ರಿಕ, ಜಾತ್ಯತೀತ, ಒಕ್ಕೂಟ, ಗಣರಾಜ್ಯದ ತಳಹದಿಯನ್ನೇ ಟೊಳ್ಳಾಗಿಸುವ ಒಂದು ಪ್ರಯತ್ನ ಎನ್ನುವುದು ಸುಸ್ಪಷ್ಟ. ಹಿಂದುತ್ವಕ್ಕೆ ತಳುಕು ಹಾಕುವುದರಿಂದ `ವೈವಿಧ್ಯತೆಯಲ್ಲಿ ಏಕತೆ’ಯ ಸುಂದರ ದೃಶ್ಯವು ಬಹುಸಂಖ್ಯಾಕ ಬಿಗಿಬಂಧದ ರುದ್ರಭೂಮಿಯಾಗಿ ಪರಿವರ್ತನೆಗೊಳ್ಳುತ್ತದೆ. ಆಧುನಿಕ ಪ್ರವೃತ್ತಿಯ ಮತ್ತು ಆಧುನಿಕತೆಯತ್ತ ಮುಖ ಮಾಡಿರುವ ಪ್ರಜಾಪ್ರಭುತ್ವವನ್ನು ಕಟ್ಟುವ ಆಶೋತ್ತರ ಹೊಂದಿದ ಜನತೆಯಾಗಿ ನಮ್ಮ ಪ್ರಜಾಸತ್ತಾತ್ಮಕ ಅನುಭವ ಕೂಡ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗಿತ್ತು. ಹಾಗಾಗಿ ನಮ್ಮ ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಣೆ ನಮ್ಮ ಚುನಾವಣಾ ವ್ಯವಸ್ಥೆಗೆ ಮಾರ್ಗದರ್ಶನ ನೀಡಿದೆ.
ಆದರೆ ಈ ಸಲ, ಒಂದು ದೊಡ್ಡ ರೂಪಾಂತರ ತರುವುದೇ ಎಸ್ಐಆರ್ ನ ಉದ್ದೇಶವಾಗಿದೆ. ದೊಡ್ಡ ಪ್ರಮಾಣದ ಒಳನುಸುಳಿಕೆ ನಡೆಯುತ್ತಿದೆ ಎಂಬ ಗುಮ್ಮವನ್ನು ಒಳಗೊಳ್ಳಲು ಮತ್ತು `ಪೌರರಲ್ಲದವರನ್ನು’ ತೊಡೆದುಹಾಕುವ ಗುರಿಸಾಧನೆಗೆ ಹೊರಡಲು ಅದು ಪ್ರಯತ್ನಿಸಿದೆ. ಇದು ಮಹಾ ದುರಂತಕ್ಕೆ ಕಾರಣವಾಗಿದ್ದು 13 ಕೋಟಿಗೂ ಹೆಚ್ಚು ಜನರು ಮತದಾನ ಮಾಡುವ ತಮ್ಮ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರಿಗೆ ಮತದಾನಕ್ಕೆ ಅವಕಾಶ ನೀಡದಿರುವುದು ಈ ಅಪಾಯ ನಿಜವೆಂಬುದನ್ನು ಸಾಬೀತು ಮಾಡಿದೆ.
ಇದನ್ನೂ ಓದಿ :ದೆಹಲಿ–ಎನ್ಸಿಆರ್ನಲ್ಲಿ ಚಳಿಯ ಮುನ್ಸೂಚನೆ; ಕಳಪೆ ಮಟ್ಟಕ್ಕೆ ಕುಸಿಯುವ ಹಂತದಲ್ಲಿ ವಾಯು ಗುಣಮಟ್ಟ

ದೊಡ್ಡ ಪ್ರಮಾಣದ ಒಳನುಸುಳಿಕೆ ನಡೆಯುತ್ತಿದೆ ಎಂಬ ಗುಮ್ಮವನ್ನು ಒಳಗೊಳ್ಳಲು ಮತ್ತು `ಪೌರರಲ್ಲದವರನ್ನು’ ತೊಡೆದುಹಾಕುವ ಗುರಿಸಾಧನೆಗೆ ಹೊರಡಲು ಎಸ್ಐಆರ್ ಪ್ರಯತ್ನಿಸಿದೆ. ಇದು ಮಹಾ ದುರಂತಕ್ಕೆ ಕಾರಣವಾಗಿದ್ದು 13 ಕೋಟಿಗೂ ಹೆಚ್ಚು ಜನರು ಮತದಾನ ಮಾಡುವ ತಮ್ಮ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೆಲ್ಲದರ ಹಿಂದಿನ ವಿಧಾನ, ತಪ್ಪು ಕೃತ್ಯಗಳು ಮತ್ತು ಕಾನೂನಿನ ನಗ್ನ ಉಲ್ಲಂಘನೆಗಳನ್ನು ಹಲವು ಬಾರಿ ವಿವರಿಸಲಾಗಿದೆ. ಸಾಂವಿಧಾನಿಕ ಸಬಲೀಕರಣವನ್ನು ಅಪಹರಿಸುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ರ ಪಿತೂರಿಯನ್ನೂ ಬಹಿರಂಗಪಡಿಸಲಾಗಿದೆ. ಈ ದಿಕ್ಚುತಿಗಳನ್ನು ಗುರುತಿಸಿದ ನಂತರ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದು ಪ್ರಬಲ ಪ್ರತಿರೋಧವೂ ದಾಖಲಾಗಿದೆ. ಇದು ಮತದಾನದ ಹಕ್ಕನ್ನು ರಕ್ಷಿಸುವ ಪ್ರಶ್ನೆ ಮಾತ್ರವೇ ಅಲ್ಲ, ಭಾರತದಲ್ಲಿ ಬಹು-ಪಕ್ಷ ಪ್ರಜಾಪ್ರಭುತ್ವದ ಸಾರವೂ ಆಗಿದೆ. ಜ್ಞಾನೇಶ್ ಕುಮಾರ್ ವಿಧಾನಗಳು ಎಷ್ಟು ಒರಟಾಗಿವೆಯೆಂದರೆ ಅವರು ಅಧಿಕಾರವನ್ನು ಚಲಾಯಿಸಿರುವ ರೀತಿಯು ಏಕಪಕ್ಷೀಯತೆ, ಕಾನೂನುರಾಹಿತ್ಯತೆಯನ್ನು ಸ್ಪಷ್ಟವಾಗಿ ಎತ್ತಿತೋರಿಸುತ್ತವೆ ಮತ್ತು ರಾಜಕೀಯ ರಿಮೋಟ್ ಕಂಟ್ರೋಲ್ ಇರುವುದನ್ನು ಸೂಚಿಸುತ್ತದೆ.
ಭಾರತೀಯ ಪ್ರಭುತ್ವದ ಶಕ್ತಿಯನ್ನು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರುದ್ಧ ಜ್ಞಾನೇಶ್ ಕುಮಾರ್ರ ಕ್ಷಿಪ್ರಕ್ರಾಂತಿಗೆ ಅನುಕೂಲವಾಗುವಂತೆ ರೂಪಿಸಲು ಪ್ರಯತ್ನಿಸಲಾಯಿತು. ಹೊಲಸು ಬೆಳವಣಿಗೆಗಳನ್ನು ಮುಚ್ಚಿಹಾಕುವ ಮುಖ್ಯವಾಹಿನಿ ಮಾಧ್ಯಮಗಳ ಪ್ರಯತ್ನವು ಕೊನೆಗೂ ಠುಸ್ಸಾಗಿದೆ. ಎಸ್ಐಆರ್ ನ ಕಳೆದ ಒಂದುವರೆ ವರ್ಷದ ಪ್ರಕ್ರಿಯೆಯ ವೇಳೆ ಪ್ರತಿ ದಿನವೂ ಭಾರತೀಯ ಪ್ರಜಾಪ್ರಭುತ್ವ ಮತ್ತು ಜನರ ಮತದಾನದ ಹಕ್ಕುಗಳ ವಿರುದ್ಧದ ಪಿತೂರಿಗಳು ಬಹಿರಂಗಕ್ಕೆ ಬರುತ್ತಲೇ ಇವೆ.
ನಮ್ಮ ಸಮಾಜದ ಅತ್ಯಂತ ಮಹತ್ವದ ವಲಯಗಳೆಲ್ಲವೂ ಈ ಸಮರದಲ್ಲಿ ಭಾಗವಹಿಸುತ್ತಿವೆ ಎನ್ನುವುದು ಗಮನಿಸಬೇಕಾದ ಮುಖ್ಯ ಸಂಗತಿಯಾಗಿದೆ. ಈಗ ಸಾಮಾನ್ಯವಾಗಿ ಜೆನ್ಜೀ ಎಂದು ಕರೆಯಲಾಗುವ ಯುವಜನರು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ತೀರಾ ಈಚೆಗಷ್ಟೆ ಈ ವಿಭಾಗವು ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ಬಲಪ್ರದರ್ಶನ ಮಾಡಿತ್ತು. ಕಾನೂನು ವೃತ್ತಿಯ ಸಮುದಾಯದವರು ಸಂವಿಧಾನದ ಮತ್ತು ಪ್ರಜಾಪ್ರಭುತ್ವ ಹಾಗೂ ಮೂಲಭೂತ ಹಕ್ಕುಗಳನ್ನು ಖಚಿತಪಡಿಸುವ ಅದರ ಅಂಶಗಳ ರಕ್ಷಣೆಗಾಗಿ ಜೀವನ್ಮರಣ ಹೋರಾಟ ನಡೆಸಿದ್ದಾರೆ.
ಕಾರ್ಪೊರೇಟ್ ಕುಳಗಳು ವಸ್ತುಶಃ ಕಬ್ಜಾ ಮಾಡಿಕೊಂಡಿರುವ ಇಡೀ ಮುಖ್ಯವಾಹಿನಿ ಮಾಧ್ಯಮವು ಬಿಜೆಪಿ-ಆರೆಸ್ಸೆಸ್ನ ರಾಜಕೀಯ ನಾಯಕತ್ವದ ಬಂಟತನ ಮಾಡುವಲ್ಲಿ ತೊಡಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯುಟ್ಯೂಬ್ ಮೂಲಕ ಕಾರ್ಯನಿರ್ವಹಿಸುವ ಸ್ವತಂತ್ರ ಮಾಧ್ಯಮಗಳು ಸತ್ಯವನ್ನು ಬಯಲುಗೊಳಿಸುವಲ್ಲಿ ಅಸಾಧಾರಣ ಪ್ರದರ್ಶನವನ್ನು ನೀಡಿವೆ.
ಪ್ರಜಾಪ್ರಭುತ್ವಕ್ಕಾಗಿನ ನಮ್ಮ ಹೋರಾಟದಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಂಡಿವೆ. ಯುವಜನರು ಮೆಮೆ, ಕಾರ್ಟೂನ್, ಸಂಗೀತ, ವ್ಯಂಗ್ಯ ಸ್ಕಿಟ್ ಮತ್ತಿತರ ತಮ್ಮ ಪೀಳಿಗೆಗೆ ವಿಶಿಷ್ಟವಾದ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಸುತ್ತಿದ್ದು ಸರಕಾರದ ಕಥನಗಳಿಗೆ ಸವಾಲು ಹಾಕುತ್ತಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ನ ಅದ್ಭುತ ತನಿಖಾ ಪತ್ರಿಕೋದ್ಯಮವು ಜ್ಞಾನೇಶ್ ಕುಮಾರ್ ಮತ್ತು ಸರಕಾರದ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಿದೆ. ಮತ್ತು ಸರಕಾರ ಕಟಕಟೆಯಲ್ಲಿ ನಿಂತಿದೆ.

ನಮ್ಮ ಸಮಾಜದ ಅತ್ಯಂತ ಮಹತ್ವದ ವಲಯಗಳೆಲ್ಲವೂ ಈ ಸಮರದಲ್ಲಿ ಭಾಗವಹಿಸುತ್ತಿವೆ . ಜೆನ್ಜೀ ಎಂದು ಕರೆಯಲಾಗುವ ಯುವಜನರು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕಾಗಿನ ನಮ್ಮ ಹೋರಾಟದಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಂಡಿವೆ. ಯುವಜನರು ತಮ್ಮ ಪೀಳಿಗೆಗೆ ವಿಶಿಷ್ಟವಾದ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಸುತ್ತಿದ್ದು ಸರಕಾರದ ಕಥನಗಳಿಗೆ ಸವಾಲು ಹಾಕುತ್ತಿದ್ದಾರೆ. ಗಾಳಿಯ ದಿಕ್ಕು ಬದಲಾಗಿದೆ, ಪ್ರತಿಭಟನಾ ಕ್ರಿಯೆಗಳನ್ನು ಹುಸಿ ನಿರೂಪಣೆಗಳ ಮೂಲಕ ನಿಲ್ಲಿಸುವುದು ಬಿಡಿ, ಅವಕ್ಕೆ ಸವಾಲು ಹಾಕಲೂ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ, ಗಾಳಿಯ ದಿಕ್ಕು ಬದಲಾಗಿದೆ, ಪ್ರತಿಭಟನಾ ಕ್ರಿಯೆಗಳನ್ನು ಹುಸಿ ನಿರೂಪಣೆಗಳ ಮೂಲಕ ನಿಲ್ಲಿಸುವುದು ಬಿಡಿ, ಅವಕ್ಕೆ ಸವಾಲು ಹಾಕಲೂ ಸಾಧ್ಯವಾಗುತ್ತಿಲ್ಲ. ಜಂತರ್ ಮಂತರ್ನಲ್ಲಿ ಅಕ್ಟೋಬರ್ 10ರಿಂದ ಸಾಮೂಹಿಕ ಕಾರ್ಯಾಚರಣೆಯ ಭಾರಿ ಸಿದ್ಧತೆಗಳ ಮೇಲೆ ಕೇಂದ್ರ ಸರಕಾರ ಬರ್ಬರ ದೌರ್ಜನ್ಯವನ್ನು ಹರಿಯಬಿಟ್ಟಿತು. ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ಅದು ಗೂಂಡಾಗಳಂತೆ ಬಳಸಿತು. ಸಾದಾ ಉಡುಪಿನಲ್ಲಿದ್ದ ಆರೆಸ್ಸೆಸ್ ಮತ್ತು ಅದಕ್ಕೆ ಸಂಯೋಜಿತವಾದ ಸಂಘಟನೆಗಳ ಅಪಾರ ಸಂಖ್ಯೆಯ ಸದಸ್ಯರು ಪ್ರತಿಭಟನೆಕಾರರ ಸದ್ದಡಗಿಸಲು ಭದ್ರತಾ ಪಡೆಗಳೊಂದಿಗೆ ಸೇರಿ ಕೆಲಸ ಮಾಡಿದ್ದು ಬಹುಶಃ ಇದೇ ಮೊದಲ ಸಲ ಇರಬೇಕು. ಮಹಿಳಾ ಪ್ರತಿಭಟನೆಕಾರರು ಮತ್ತು ಪತ್ರಕರ್ತರ ಜತೆ ವಿಕ್ಷಿಪ್ತವಾಗಿ ವರ್ತಿಸಿದ್ದು ಕೂಡ ಸರಕಾರದ ಪ್ರತಿಕ್ರಿಯೆಯ ಖಂಡನೀಯ ಅಂಶಗಳಲ್ಲಿ ಒಂದಾಗಿದೆ.
ಮೆಟ್ರೋ ಸೇವೆಗಳು ಮತ್ತು ದೂರ ಪ್ರಯಾಣದ ರೈಲುಗಳನ್ನು ರದ್ದುಪಡಿಸಿದ್ದು, ಗಡಿ ತಪಾಸಣೆ, ಸಂಭಾವ್ಯ ಪ್ರತಿಭಟನೆಕಾರರು ಹೋಗದಂತೆ ಮನವೊಲಿಸಲು ದೂರದ ಪ್ರದೇಶಗಳಿಗೂ ಪೊಲೀಸರು ಹೋಗಿದ್ದು -ಇವೇ ಮೊದಲಾದವು ಆಳುವ ಕೂಟಕ್ಕೆ ಶಾಂತಿಯುತ ಪ್ರತಿಭಟನೆಗಳಲ್ಲಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಭೆ ಸೇರುವ ಹಕ್ಕನ್ನು ಖಾತ್ರಿಪಡಿಸಿರುವ ಸಂವಿಧಾನದ 19ನೇ ವಿಧಿಯಲ್ಲಿ ನಂಬಿಕೆಯಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸಾಬೀತು ಪಡಿಸುತ್ತದೆ.
ಆದರೆ ಅಂತಿಮವಾಗಿ, ಒಗ್ಗಟ್ಟಿನ ಇಂಡಿಯಾ(ಐಎನ್ಡಿಐಎ) ವೇದಿಕೆಯ ಸುಪ್ರೀಂ ಕೋರ್ಟಿನತ್ತ ಮೆರವಣಿಗೆಗೆ ಜನಸಾಗರವೇ ನೆರೆದಿದ್ದರಿಂದ ಈ ಎಲ್ಲ ಕರಾಳ ಕ್ರಮಗಳು ಠುಸ್ಸೆಂದವು. ಜ್ಞಾನೇಶ್ ಕುಮಾರ್ರನ್ನು ವಜಾ ಮಾಡಬೇಕು ಮತ್ತು ಎಸ್ಐಆರ್ಅನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸುವ ಒಂದು ಹೊಸ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಇದನ್ನು ಸಂಘಟಿಸಲಾಗಿತ್ತು. ಇದೇ ಮೊದಲ ಸಲ ವಿವಿಧ ಪಡೆಗಳ ಸುಮಾರು 40,000 ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ ಅದು ಜನಸಾಗರವನ್ನು ಎದುರಿಸುವ ಧೈರ್ಯ ಮಾಡಲಿಲ್ಲ. ಬಹುಶಃ ಗೋಡೆ ಮೇಲಿನ ಬರೆಹದ ಆರಂಭಿಕ ಸುಳಿವು ಕಂಡಿತ್ತೆಂದು ಕಾಣುತ್ತದೆ. ಈ ನಡುವೆ, ಎಸ್ಐಆರ್ನಲ್ಲಿನ ದೋಷಗಳು ತುಂಬಾ ಎದ್ದುಕಂಡಿರುವ ಪಶ್ಚಿಮ ಬಂಗಾಳದಲ್ಲಿ ಮುಂಚಿನ ಹಂತಗಳಲ್ಲಿ ಬಿಟ್ಟು ಹೋಗಿರುವ ಮತದಾರರನ್ನು ಸೇರಿಸಲು ವಿಶೇಷ ಅಭಿಯಾನವನ್ನು ಆರಂಭಿಸಲಾಗಿದೆ. ಆದರೂ ಸರಕಾರ ಸಂಪೂರ್ಣವಾಗಿ ಶರಣಾಗಲು ಸಿದ್ಧವಿಲ್ಲ ಮತ್ತು ಜಂತರ್ ಮಂತರ್ ಅನ್ನು ಪ್ರತಿಭಟನೆಯ ತಾಣವಾಗಿ ಬಳಸಿಕೊಳ್ಳಲು ಅವಕಾಶವನ್ನು ನಿರಾಕರಿಸುತ್ತಿದೆ.
ಆದರೆ ಕೇವಲ ಒಂದು ಪಲ್ಲಟ ಸಾಕಾಗುವುದಿಲ್ಲ. ಎಸ್ಐಆರ್ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಹಾಗೂ ದುರುದ್ದೇಶದ ಕ್ರಮಗಳಿಂದ ಆಗಿರುವ ಪರಿಣಾಮವನ್ನು ವಾಪಸ್ ಪಡೆಯಬೇಕು. ಇಡೀ ಕಸರತ್ತನ್ನು ಆರಂಬಿಸಿದವರಿಂದ ಪ್ರಜಾಪ್ರಭುತ್ವವನ್ನು ಉಳಿಸುವ ಸಮರವನ್ನು ಮುಂದೊಯ್ಯುವಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ. “ಪತ್ತೆ ಮಾಡು, ತೆಗೆದುಹಾಕು, ಗಡಿಪಾರು ಮಾಡು” (ಡಿಟೆಕ್ಟ್, ಡಿಲೀಟ್, ಡಿಪೋರ್ಟ್) ಧಾವಂತದ ಕಾರಣಕರ್ತರನ್ನು ಬಂಧಿಸಬೇಕು. ನಿಜ, ಹೂವುಗಳನ್ನು ಕೀಳಲಾಗಿದೆ ಎನ್ನುವಲ್ಲಿ ಅನುಮಾನವಿಲ್ಲ, ಆದರೆ ವಸಂತದ ಆಗಮನವನ್ನು ಖಾತ್ರಿಪಡಿಸಬೇಕಾಗಿದೆ.

“ನೀವು ನಿಮ್ಮ ಭಯದ ಬಂಧಿ”
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ
ಇದನ್ನೂ ನೋಡಿ : 19 ವರ್ಷ ದುಡಿದರೂ ಖಾಯಂ ಇಲ್ಲ! ನ್ಯಾಯ ಕೇಳಿದ ವಿಶೇಷಚೇತನರ ಮೇಲೆ ಪೊಲೀಸರ ದಬ್ಬಾಳಿಕೆ? Janashakthi Media
