ಅನುಷ್ಕಾ, ನಳಿನಿ ಬಂಧನದ ಕುರಿತು ಸಮಗ್ರ ತನಿಖೆಗೆ ಒತ್ತಾಯ; ಪ್ರಾಥಮಿಕ ಸತ್ಯಶೋಧನಾ ವರದಿ ಬಿಡುಗಡೆ
ಚಿತ್ರದುರ್ಗ: 22 ವರ್ಷದ ನರಸಿಂಹಯ್ಯ (ನಿಹಾರಿಕ) ಅವರನ್ನು ಅಪಹರಿಸಿ ಬಲವಂತವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎಂಬ ಆರೋಪಗಳ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ (MGSP) ಆಗ್ರಹಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊಗಳು ಹಾಗೂ ಲಭ್ಯ ಮಾಹಿತಿಯನ್ನು ಪರಿಶೀಲಿಸಿರುವ ಚಳುವಳಿ, ಅಕ್ಟೋಬರ್ 17ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತನ್ನ ಪ್ರಾಥಮಿಕ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ನರಸಿಂಹಯ್ಯ
ನರಸಿಂಹಯ್ಯ (ನಿಹಾರಿಕ) ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಅನುಷ್ಕಾ ಮತ್ತು ನಳಿನಿ ಎಂಬ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆದರೆ, ನರಸಿಂಹಯ್ಯ ಸ್ವಯಂಪ್ರೇರಣೆಯಿಂದ ತಮ್ಮ ಬಳಿಗೆ ಬಂದಿದ್ದರು ಮತ್ತು ಶಸ್ತ್ರಚಿಕಿತ್ಸೆಗೆ ಯಾರೂ ಬಲವಂತಪಡಿಸಿರಲಿಲ್ಲ ಎಂದು ಅನುಷ್ಕಾ ಮತ್ತು ನಳಿನಿ ಸತ್ಯಶೋಧನಾ ತಂಡಕ್ಕೆ ತಿಳಿಸಿದ್ದಾರೆ. ಹೀಗಾಗಿ, ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ನರಸಿಂಹಯ್ಯ ಅವರ ಲಿಂಗತ್ವದ ಕುರಿತು ಪರಿಶೀಲನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ MGSP ರಾಜ್ಯ ಸಹಾಧ್ಯಕ್ಷೆ ಐನಾ ಶೇಕ್, ನರಸಿಂಹಯ್ಯ (ನಿಹಾರಿಕ) ಅವರು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬುದರ ಕುರಿತು ಸತ್ಯಶೋಧನಾ ತಂಡಕ್ಕೆ ಮಾಹಿತಿ ಲಭ್ಯವಾಗಿದೆ ಎಂದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊಗಳನ್ನು ಗಮನಿಸಿದ ಬಳಿಕ ಸತ್ಯಶೋಧನೆ ಆರಂಭಿಸಲಾಯಿತು. ನರಸಿಂಹಯ್ಯ, ಅವರ ಪೋಷಕರು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಚಂದ್ರಮ್ಮ ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿ ಪ್ರಾಥಮಿಕ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣದ ಮರುತನಿಖೆ ನಡೆಸುವಾಗ ಪೊಲೀಸರು ಎಲ್ಲ ಸಂಬಂಧಿತ ವಿಡಿಯೊಗಳನ್ನು ಪರಿಶೀಲಿಸಿ, ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ನರಸಿಂಹಯ್ಯ
ಇದನ್ನೂ ಓದಿ : MRPL ಸ್ಫೋಟಕ್ಕೆ ಮತ್ತೊಂದು ಬಲಿ: ರಾಜೇಶ್ ಡಿ ಸಿಲ್ವ ಸಾವು; ₹1.20 ಕೋಟಿ ಪರಿಹಾರಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ
ಅಪಹರಣದ ಆರೋಪದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ
ನರಸಿಂಹಯ್ಯ ಅವರ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅನುಷ್ಕಾ ಮತ್ತು ನಳಿನಿ ಬಂಧನಕ್ಕೊಳಗಾಗಿದ್ದಾರೆ. ಚಿತ್ರದುರ್ಗದ ಕಾರಾಗೃಹದಲ್ಲಿ ಇಬ್ಬರನ್ನು ಭೇಟಿ ಮಾಡಿದ ಸತ್ಯಶೋಧನಾ ತಂಡಕ್ಕೆ, ನರಸಿಂಹಯ್ಯ ತಮ್ಮ ಇಚ್ಛೆಯಂತೆ ಅವರೊಂದಿಗೆ ಬಂದಿದ್ದರು ಮತ್ತು ಶಸ್ತ್ರಚಿಕಿತ್ಸೆಗೆ ಬಲವಂತಪಡಿಸಿರಲಿಲ್ಲ ಎಂಬ ಹೇಳಿಕೆ ಲಭಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ನರಸಿಂಹಯ್ಯ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಸ್ವಯಂಪ್ರೇರಣೆಯಿಂದ ಒಪ್ಪಿಗೆ ನೀಡುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಲಾದ ವಿಡಿಯೊಗಳು, ಸಾಲದ ವ್ಯವಹಾರಕ್ಕೆ ಸಂಬಂಧಿಸಿದ ವಿಡಿಯೊ ಹಾಗೂ ಬಾಂಡ್ ಪೇಪರ್ ಕುರಿತು ತಂಡ ಮಾಹಿತಿ ಸಂಗ್ರಹಿಸಿದೆ. ಲಭ್ಯವಿದ್ದ ವಿಡಿಯೊಗಳನ್ನೂ ವೀಕ್ಷಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕುಟುಂಬದವರ ಒತ್ತಡದ ಹಿನ್ನೆಲೆಯಲ್ಲಿ ನರಸಿಂಹಯ್ಯ ಅವರನ್ನು ಅಪಹರಿಸಿ ಬಲವಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎಂಬ ದೂರು ನೀಡಲಾಗಿದೆಯೇ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆ ಮತ್ತು ಪರಿಶೀಲನೆ ಅಗತ್ಯವಿದೆ. ಸದ್ಯ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಆರೋಪಗಳ ಕುರಿತು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸತ್ಯಶೋಧನಾ ತಂಡ ಸ್ಪಷ್ಟಪಡಿಸಿದೆ.
ಸಮಗ್ರ ತನಿಖೆಗೆ ಜನಪರ ಸಂಘಟನೆಗಳ ಒತ್ತಾಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಸದಸ್ಯ ಶಫಿವುಲ್ಲಾ, ಪೊಲೀಸರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಅನುಷ್ಕಾ ಮತ್ತು ನಳಿನಿ ಅವರನ್ನು ಬಂಧಿಸಿರುವ ಕ್ರಮದ ಕುರಿತು ಪ್ರಶ್ನಿಸಿದ ಅವರು, ಪ್ರಕರಣದ ಎಲ್ಲ ಸಾಕ್ಷ್ಯಗಳು ಮತ್ತು ವಿಡಿಯೊಗಳನ್ನು ಪರಿಶೀಲಿಸಬೇಕು ಎಂದರು. ಇದು ಪ್ರಾಥಮಿಕ ವರದಿಯಾಗಿದ್ದು, ಸತ್ಯಶೋಧನಾ ಪ್ರಕ್ರಿಯೆ ಮುಂದುವರಿಯಲಿದೆ. ಕೆಲವು ದಿನಗಳಲ್ಲಿ ಪೂರ್ಣ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಸತ್ಯಶೋಧನಾ ತಂಡವು ಪರಶುರಾಮಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನರಸಿಂಹಯ್ಯ ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಲು ಪ್ರಯತ್ನಿಸಿತ್ತು. ಅಲ್ಲದೆ, ಚಿತ್ರದುರ್ಗದ ಕಾರಾಗೃಹದಲ್ಲಿ ಅನುಷ್ಕಾ ಮತ್ತು ನಳಿನಿ ಅವರನ್ನು ಭೇಟಿ ಮಾಡಿ, ಚಂದ್ರಮ್ಮ ಹಾಗೂ ಸ್ಥಳೀಯ ನಿವಾಸಿಗಳಿಂದಲೂ ಮಾಹಿತಿ ಸಂಗ್ರಹಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರಭಾವತಿ, ಕರ್ನಾಟಕ ರಾಜ್ಯ ರೈತ ಸಂಘಟನೆಯ ಉಪ ಕಾರ್ಯದರ್ಶಿ ಸುರೇಶ್ ಬಾಬು ಹಾಗೂ ಸ್ಲಂ ಜನರ ಸಂಘಟನೆಯ ಸಂಚಾಲಕ ಮಂಜಣ್ಣ ಉಪಸ್ಥಿತರಿದ್ದರು. ನರಸಿಂಹಯ್ಯ
ಇದನ್ನೂ ನೋಡಿ :ಅಂಕಿತಾ ಭಂಡಾರಿ ಪ್ರಕರಣದ ‘VIP’ ಯಾರು? | ದುಷ್ಯಂತ್ ಗೌತಮ್ ನೇಮಕಕ್ಕೆ ವಿರೋಧವೇಕೆ? | ಗುರುರಾಜ ದೇಸಾಯಿ
