ನವೆಂಬರ್ 5ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ; ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದ ಹೋರಾಟದಲ್ಲಿ ಕರ್ನಾಟಕದ ಪ್ರತಿನಿಧಿಗಳು ಭಾಗಿ
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿನ ಲೋಪದೋಷಗಳು ಮತ್ತು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುತ್ತಿರುವುದನ್ನು ಖಂಡಿಸಿ, ‘ಮತ ಉಳಿಸಿ–ದೇಶ ಉಳಿಸಿ’ ಘೋಷವಾಕ್ಯದಡಿ ರಾಜ್ಯಾದ್ಯಂತ ಸಂಘಟಿತ ಹೋರಾಟ ನಡೆಸಲು ಕರ್ನಾಟಕದ ಇಂಡಿಯಾ ಮೈತ್ರಿಕೂಟದ ಪಕ್ಷಗಳು ತೀರ್ಮಾನಿಸಿವೆ. ಎಸ್ಐಆರ್
ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಶನ್, ಸಮಾಜವಾದಿ ಪಕ್ಷ ಮತ್ತು ಫಾರ್ವರ್ಡ್ ಬ್ಲಾಕ್ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಎಸ್ಐಆರ್ ಪ್ರಕ್ರಿಯೆ, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾನದ ಹಕ್ಕಿನ ರಕ್ಷಣೆ ಕುರಿತು ಚರ್ಚಿಸಲಾಯಿತು.
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಶಕ್ತಿ ಎಂದು ಹೇಳಿದ ಬಿ.ಕೆ. ಹರಿಪ್ರಸಾದ್, ಎಸ್ಐಆರ್ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಆರೋಪಿಸಿದರು. ದೇಶಾದ್ಯಂತ ಸುಮಾರು 13 ಕೋಟಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗಿದೆ ಎಂದು ಅವರು ದೂರಿದರು. ಈ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕೇ ಹೊರತು ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯಪಟ್ಟರು. ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಕ್ರಮವು ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಎಸ್ಐಆರ್
ಇದನ್ನೂ ಓದಿ : ಸಂಡೆ ಬಜಾರ್ ಹೋರಾಟಕ್ಕೆ CITU ಜಯ; 95 ವ್ಯಾಪಾರಿಗಳಿಗೆ ನಗರಪಾಲಿಕೆ ಅನುಮತಿ
ರಾಜ್ಯಮಟ್ಟದ ಸಮನ್ವಯ ಸಮಿತಿ ರಚನೆ
ಎಸ್ಐಆರ್ ವಿರುದ್ಧದ ಹೋರಾಟವನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ಹಳ್ಳಿಹಳ್ಳಿಗೂ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇಂಡಿಯಾ ಕೂಟದ ಎಲ್ಲ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ರಾಜ್ಯಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೋರಾಟವನ್ನು ಸಂಘಟಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ. ಪ್ರಕಾಶ್ ತಿಳಿಸಿದರು.
ಮತದಾನದ ಹಕ್ಕಿನ ರಕ್ಷಣೆಯ ಹೋರಾಟದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು; ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಈ ಸಭೆಯ ಪ್ರಮುಖ ಒತ್ತಾಯವಾಗಿತ್ತು ಎಂದು ಪ್ರಕಾಶ್ ತಿಳಿಸಿದರು.
ನವೆಂಬರ್ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪ್ರತಿಭಟನೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಳಿಕ ನವೆಂಬರ್ 5ರಂದು ಬೆಂಗಳೂರಿನಲ್ಲಿ ಎಸ್ಐಆರ್ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರಿನ ಸಮಾವೇಶದ ನಂತರ ಹೋರಾಟವನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸಲು ಮೈತ್ರಿಕೂಟ ನಿರ್ಧರಿಸಿದೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ಈ ಹೋರಾಟವನ್ನು ಜನಾಂದೋಲನವಾಗಿ ರೂಪಿಸುವ ಉದ್ದೇಶವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ’ ರೊಜಾರಿಯೋ, ಫಾರ್ವರ್ಡ್ ಬ್ಲಾಕ್ನ ಜಿ. ಆರ್. ಶಿವಶಂಕರ್ ಮತ್ತು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ ಯಾದವ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು
ಕರ್ನಾಟಕದಲ್ಲಿ ಎಸ್ಐಆರ್ ವಿರುದ್ಧ ಹೋರಾಟವನ್ನು ಸಂಘಟಿಸುವುದು, ವಿವಿಧ ಪಕ್ಷಗಳ ನಡುವೆ ಸಮನ್ವಯ ಸಾಧಿಸುವುದು ಮತ್ತು ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ನೋಡಿ : ಗುತ್ತಿಗೆ ಕಾರ್ಮಿಕರ ಶೋಷಣೆ: ಎಜೆನ್ಸಿ ಮಾಫೀಯಾಗೆ ಬಲಿಯಾಗುತ್ತಿರುವ ಕಾರ್ಮಿಕರ ಬದುಕು! Janashakthi Media
