ಮಹಾರಾಷ್ಟ್ರದ ಶೇ.85ರಷ್ಟು ತಾಲ್ಲೂಕುಗಳು ಬರಪೀಡಿತ ಘೋಷಣೆ; ರೈತರಿಗೆ ದೀಪಾವಳಿಗೂ ಮುನ್ನ ₹5,000 ನೆರವು

305 ತಾಲ್ಲೂಕುಗಳಿಗೆ ಬರ ಪರಿಹಾರ ಸೌಲಭ್ಯ ವಿಸ್ತರಣೆ | ಸಾಲ ವಸೂಲಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಎಚ್ಚರಿಕೆ
ಮುಂಬೈ: ಮಹಾರಾಷ್ಟ್ರದಲ್ಲಿ ಮಳೆ ಕೊರತೆಯಿಂದ ಕೃಷಿ ಸಂಕಷ್ಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯದ ಶೇ.85ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರಪೀಡಿತ ಪ್ರದೇಶಗಳ ಪಟ್ಟಿಗೆ ಹೊಸದಾಗಿ 40 ತಾಲ್ಲೂಕುಗಳನ್ನು ಸೇರ್ಪಡೆಗೊಳಿಸುವ ಮೂಲಕ ಒಟ್ಟು 358 ತಾಲ್ಲೂಕುಗಳ ಪೈಕಿ 305 ತಾಲ್ಲೂಕುಗಳಿಗೆ ಬರ ಪರಿಹಾರ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ದೀಪಾವಳಿಗೂ ಮುನ್ನ ತಲಾ ₹5,000 ಆರಂಭಿಕ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಘೋಷಿಸಿದ್ದಾರೆ. ಮಹಾರಾಷ್ಟ್ರದ

ಮುಂಬೈನಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಫಡ್ನವೀಸ್, ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಕೇಂದ್ರದ ನೆರವಿಗಾಗಿ ಕಾಯದೆ, ರೈತರಿಗೆ ತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರವೇ ಮುಂಗಡವಾಗಿ ₹5,000 ನೀಡಲಿದೆ ಎಂದು ತಿಳಿಸಿದ್ದಾರೆ. ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ಕಳೆದ ತಿಂಗಳು ರಾಜ್ಯದ 265 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ರೈತರಿಂದ ಬಂದ ದೂರುಗಳು ಮತ್ತು ಪರಿಸ್ಥಿತಿಯ ಮೌಲ್ಯಮಾಪನದ ಬಳಿಕ ಹೆಚ್ಚುವರಿಯಾಗಿ 40 ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಈ ಮೂಲಕ ಬರಪೀಡಿತ ಪ್ರದೇಶಗಳಿಗೆ ರಾಜ್ಯದ 12 ಪ್ರಮುಖ ಬರ ಪರಿಹಾರ ಸೌಲಭ್ಯಗಳು ಅನ್ವಯವಾಗಲಿವೆ. ಮಹಾರಾಷ್ಟ್ರದ

ಇದನ್ನೂ ಓದಿ : ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ; ವಾರದೊಳಗೆ ಕೇಂದ್ರಕ್ಕೆ ಅಂತಿಮ ವರದಿ

ಸಾಲ ವಸೂಲಿಗೆ ಒತ್ತಡ ಹೇರದಂತೆ ಸೂಚನೆ

ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ವಸೂಲಿಯ ವಿಚಾರದಲ್ಲೂ ಸರ್ಕಾರ ಕ್ರಮ ಕೈಗೊಂಡಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸಹಕಾರ ಸಂಘಗಳು ರೈತರಿಗೆ ಕಿರುಕುಳ ನೀಡುವುದು, ಬಲವಂತವಾಗಿ ಸಾಲ ವಸೂಲಿ ಮಾಡುವುದು ಅಥವಾ ಮರುಪಾವತಿಗೆ ಅನಗತ್ಯ ಒತ್ತಡ ಹೇರುವುದನ್ನು ಸಹಿಸುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಖಾಸಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೂ ಇದೇ ರೀತಿಯ ಸೂಚನೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ.

ಇದಲ್ಲದೆ, ಸಾಲ ಪರಿಹಾರದ ಹಣ ಪಡೆಯಲು ಅರ್ಹರಾಗಿರುವ ಹೆಚ್ಚುವರಿ 3.5 ಲಕ್ಷ ರೈತರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ರೈತರ ಮಕ್ಕಳ ಶಿಕ್ಷಣ ಶುಲ್ಕ ವಿನಾಯಿತಿಗೆ ಸಂಬಂಧಿಸಿದಂತೆ 1992ರ ನಿರ್ಣಯದಲ್ಲಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದ್ದು, ಬರಪೀಡಿತ ಪ್ರದೇಶಗಳ ರೈತರ ಮಕ್ಕಳಿಗೆ ಶುಲ್ಕ ವಿನಾಯಿತಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಬಾಕಿ ವಿದ್ಯುತ್ ಬಿಲ್‌ಗಳ ಪಾವತಿಗಾಗಿ ರೈತರ ಮೇಲೆ ಬಲವಂತದ ಒತ್ತಡ ಹೇರುವುದಕ್ಕೂ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯದ ನೀತಿಯಡಿ 7.5 ಅಶ್ವಶಕ್ತಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯಲಿದೆ.

ಮರಾಠವಾಡದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು

ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕೆಲವು ವೀಕ್ಷಣಾ ಬಾವಿಗಳಲ್ಲಿ ನೀರಿನ ಮಟ್ಟ ಮೂರು ಮೀಟರ್‌ಗಿಂತ ಕೆಳಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲೇ ನೀರಿನ ಟ್ಯಾಂಕರ್‌ಗಳನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಟ್ಯಾಂಕರ್‌ಗಳ ಚಲನವಲನವನ್ನು ಜಿಪಿಎಸ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.

ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಸುಮಾರು 16 ಸಾವಿರ ಅಕ್ರಮ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ನೀರಿನ ಅನಧಿಕೃತ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರದೇಶವಾರು ಲಭ್ಯವಿರುವ ಮೇವು ಸಂಗ್ರಹವು 90 ದಿನಗಳಿಂದ ಏಳು ತಿಂಗಳವರೆಗೆ ಸಾಕಾಗಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ. ನೀರಾವರಿ ಸೌಲಭ್ಯ ಮತ್ತು ಅಣೆಕಟ್ಟುಗಳ ನೀರು ಲಭ್ಯವಿರುವ ಪ್ರದೇಶಗಳಲ್ಲಿ ರಬಿ ಜೋಳ ಹಾಗೂ ಮೇವು ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಲಾಗಿದೆ. ರೈತರು ಬೆಳೆದ ಮೇವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ನವೆಂಬರ್ ಅಂತ್ಯದ ವೇಳೆಗೆ ಬರ ಘೋಷಣೆ ಮಾಡಿ ಡಿಸೆಂಬರ್‌ನಲ್ಲಿ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಅಕ್ಟೋಬರ್‌ನಲ್ಲೇ ಬರ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ನೋಡಿ: SIR ಅಕ್ರಮ: ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಕೊಳೋದ್ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *