ನವೆಂಬರ್ 28, 29ರಂದು ಮಂಗಳೂರಿನಲ್ಲಿ ಎರಡು ದಿನಗಳ ಸಾಂಸ್ಕೃತಿಕ ಸಮಾಗಮ; ನವೆಂಬರ್ 27ರಿಂದ ಪುಸ್ತಕ ಮೇಳ ಆರಂಭ
ಮಂಗಳೂರು: ಸಾಮಾಜಿಕ, ಸಾಹಿತ್ಯಿಕ ಮತ್ತು ಜನಪರ ವಿಚಾರಗಳ ಅಭಿವ್ಯಕ್ತಿಗೆ ವೇದಿಕೆಯಾಗಿರುವ ಜನನುಡಿ–2026 ಸಾಂಸ್ಕೃತಿಕ ಸಮಾಗಮವು ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿದೆ. ಕನ್ನಡದ ಹಿರಿಯ ಸಾಹಿತಿ, ವಿಮರ್ಶಕ ಹಾಗೂ ಚಿಂತಕ ಪ್ರೊ. ರಹಮತ್ ತರೀಕೆರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕೆಲವು ವರ್ಷಗಳಿಂದ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಜನನುಡಿ ಕಾರ್ಯಕ್ರಮವು ಈ ಬಾರಿ ಮತ್ತೆ ಆಯೋಜನೆಗೊಳ್ಳುತ್ತಿದೆ. ಎರಡು ದಿನಗಳ ಸಮಾಗಮದಲ್ಲಿ ನಾಡಿನ ಪ್ರಗತಿಪರ ಚಿಂತಕರು, ಸಾಹಿತಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಜನಪರ ಹೋರಾಟಗಾರರು ಭಾಗವಹಿಸಲಿದ್ದಾರೆ. ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಿಚಾರಗಳ ಕುರಿತು ಚರ್ಚೆ, ವಿಚಾರಮಂಥನ ಮತ್ತು ಕವಿಗೋಷ್ಠಿಗಳು ನಡೆಯಲಿವೆ.
ದೇಶ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳು, ಸಮಕಾಲೀನ ವಿದ್ಯಮಾನಗಳು ಹಾಗೂ ಸಮಾಜವನ್ನು ಕಾಡುತ್ತಿರುವ ಪ್ರಮುಖ ವಿಚಾರಗಳ ಕುರಿತು ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ವಿಭಿನ್ನ ವಿಚಾರಧಾರೆಗಳ ನಡುವೆ ಸಂವಾದ ಮತ್ತು ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಜನನುಡಿ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಇದನ್ನೂ ಓದಿ : ದೆಹಲಿಯಲ್ಲಿ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆ ಅಕ್ಟೋಬರ್ 20ರವರೆಗೆ ವಿಸ್ತರಿಸಲು ಪೊಲೀಸರ ಮನವಿ
ರಹಮತ್ ತರೀಕೆರೆ ಅವರ ವೈಚಾರಿಕ ಕೊಡುಗೆ
ಪ್ರೊ. ರಹಮತ್ ತರೀಕೆರೆ ಅವರು ಕನ್ನಡದ ಪ್ರಮುಖ ಲೇಖಕ, ವಿಮರ್ಶಕ ಮತ್ತು ಸಾಂಸ್ಕೃತಿಕ ಚಿಂತಕರಾಗಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ, ಬಹುತ್ವದ ಪರಂಪರೆ ಮತ್ತು ಜನಪದ ಬದುಕಿನ ವಿವಿಧ ಆಯಾಮಗಳ ಕುರಿತು ಅವರು ನಡೆಸಿರುವ ಸಂಶೋಧನೆಗಳು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಮಹತ್ವ ಪಡೆದಿವೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಗಳಿಸಿದರು. ಬಳಿಕ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಹಾಗೂ ಡೀನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಕರ್ನಾಟಕದ ಸೂಫಿ, ನಾಥ, ಶಾಕ್ತ ಮತ್ತು ಮೊಹರಂ ಸಂಸ್ಕೃತಿಗಳ ಕುರಿತು ಆಳವಾದ ಕ್ಷೇತ್ರಕಾರ್ಯ ಹಾಗೂ ಸಂಶೋಧನೆ ನಡೆಸಿರುವ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರತಿಸಂಸ್ಕೃತಿ, ಕರ್ನಾಟಕದ ಸೂಫಿಗಳು, ಅಂಡಮಾನ್ ಕನಸು, ಕರ್ನಾಟಕ ಶಾಕ್ತಪಂಥ ಮತ್ತು ಕತ್ತಿಯಂಚಿನ ದಾರಿ ಅವರ ಪ್ರಮುಖ ಕೃತಿಗಳಾಗಿವೆ.
ಅವರ ವಿಮರ್ಶಾ ಪ್ರಬಂಧಗಳ ಸಂಕಲನವಾದ ಕತ್ತಿಯಂಚಿನ ದಾರಿ ಕೃತಿಗೆ 2010ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಅವರು ಈ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. ಸಾಹಿತ್ಯಿಕ ಸಂಶೋಧನೆಯ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಅವರ ಚಿಂತನೆಗಳು ಕನ್ನಡದ ವೈಚಾರಿಕ ವಲಯದಲ್ಲಿ ಗಮನ ಸೆಳೆದಿವೆ.
ನವೆಂಬರ್ 27ರಿಂದ ಪುಸ್ತಕ ಮೇಳ
ಜನನುಡಿ–2026ರ ಅಂಗವಾಗಿ ನವೆಂಬರ್ 27ರ ಶುಕ್ರವಾರ ಸಂಜೆದಿಂದಲೇ ಪುಸ್ತಕ ಮೇಳ ಆರಂಭವಾಗಲಿದೆ. ಸಾಹಿತ್ಯಾಸಕ್ತರು, ಓದುಗರು ಮತ್ತು ಸಾರ್ವಜನಿಕರು ಪುಸ್ತಕ ಮೇಳದಲ್ಲಿ ಭಾಗವಹಿಸಬಹುದು. ನವೆಂಬರ್ 28 ಮತ್ತು 29ರಂದು ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ನೋಡಿ : SIR ಅಕ್ರಮ: ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಕೊಳೋದ್ಯಾಕೆ? Janashakthi Media
