ಹವಾಮಾನ ಬಿಕ್ಕಟ್ಟು ಎಂದರೆ ಮನಸ್ಸಿನ ಬಿಕ್ಕಟ್ಟೂ ಕೂಡ

ಶ್ರುತಿ ಶರ್ಮಾ
ಕೃಪೆ: ಡೌನ್‌ ಟು ಅರ್ಥ್‌,  10 ಅಕ್ಟೋಬರ್ 2026
ಇತ್ತೀಚೆಗೆ ನನ್ನ ಮನಸ್ಸಿನಲ್ಲಿ ಒಂದು ಚಿತ್ರಣ ಮೂಡಿದೆ. ಅದು ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯವನ್ನು ಒಂದೇ ಕೇಂದ್ರವನ್ನು ಹೊಂದಿರುವ ಎರಡು ವೃತ್ತಗಳಾಗಿ ತೋರಿಸುತ್ತದೆ. ಭೂಮಿಯ ಮೇಲೆಲ್ಲಾ ಬದುಕಿನ ವಿವಿಧ ಹಂತಗಳಲ್ಲಿರುವ ಜನರಿದ್ದಾರೆ — ಗರ್ಭಾವಸ್ಥೆ, ಬಾಲ್ಯ, ಹದಿಹರೆಯ, ಪ್ರೌಢಾವಸ್ಥೆ ಮತ್ತು ನಂತರದ ಬದುಕು. ಅವರ ಸುತ್ತಲೂ ಅಪಾಯಗಳಿವೆ, ನಾವು ಅವನ್ನು ಒಂದು ಹವಾಮಾನ ಬದಲಾವಣೆಗೆ ಸಂಬಂಧಪಟ್ಟವುಗಳು ಎಂದು ಗುರುತಿಸುತ್ತೇವೆ:  ಏರುತ್ತಿರುವ ತಾಪಮಾನ, ವಾಯು ಮಾಲಿನ್ಯ, ನೆರೆ, ಬರ,, ಬಿರುಗಾಳಿ, ಕಾಡ್ಗಿಚ್ಚು, ಸಮುದ್ರ ಮಟ್ಟ ಏರಿಕೆ ಮತ್ತು ಲವಣಾಂಶ ಹೆಚ್ಚಳ. ಹವಾಮಾನ

ಮೊದಲ ನೋಟಕ್ಕೆ, ಇದು ಮತ್ತೊಂದು ಹವಾಮಾನ- ಆರೋಗ್ಯ ಚೌಕಟ್ಟಿನಂತೆ ಕಾಣುತ್ತದೆ. ಆದರೆ ನಾನು ಅದನ್ನು ಹೆಚ್ಚೆಚ್ಚು ನೋಡುತ್ತಿದ್ದಂತೆ, ಅದು  ಮಾನವ ಆಯಾಮ ಹೊಂದುವಂತೆ ಕಾಣುತ್ತದೆ.

ಏಕೆಂದರೆ ಹವಾಮಾನ ಬದಲಾವಣೆಯು ಕೇವಲ ಭೂಗ್ರಹಕ್ಕಷ್ಟೇ ಸಂಭವಿಸುವುದಿಲ್ಲ. ಅದು ಜನರ ಬದುಕಿನುದ್ದಕ್ಕೂ ಸಂಭವಿಸುತ್ತದೆ. ಮತ್ತು ಅದರ ಪ್ರಮುಖ ಪ್ರಭಾವಗಳಲ್ಲಿ ಒಂದು – ಇದು ಅತ್ಯಂತ ಕಡಿಮೆ ಗೋಚರವಾಗುವ ಸಂಗತಿ ಕೂಡ- ನಮ್ಮ ಮಾನಸಿಕ ಆರೋಗ್ಯದ ಮೇಲೆ ಬೀರುವ ಪ್ರಭಾವ.

ನಾನು ಈ ಪ್ರಶ್ನೆಯನ್ನು ಎರಡು ಕಡೆಗಳಿಂದ ನೋಡುತ್ತೇನೆ.

ನಾನು ಸುಸ್ಥಿರತೆಯ (sustainability) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕಿ. ನಾನು ಹವಾಮಾನ ಅಪಾಯ( climate risk), ಮರುಚೇತರಿಕೆ( resilience) ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಬೋಧಿಸುತ್ತೇನೆ; ನನ್ನ ವೃತ್ತಿಜೀವನದ ಬಹುಭಾಗವು ದತ್ತಾಂಶ, ನೀತಿ, ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಸ್ಪಂದನೆಗಳ ಮೂಲಕ ಹವಾಮಾನ ಬದಲಾವಣೆಯನ್ನು ನೋಡುವುದರಲ್ಲೇ ಕಳೆಯುತ್ತದೆ.

ಆದರೆ ನಾನು ಒಂದು ಮಗುವಿನ ಪೋಷಕಿ ಕೂಡ.

ಆ ಬಿಂಬವನ್ನು ನೋಡುವಾಗ, ನಾನು ಕೇವಲ ಒಂದು ಚೌಕಟ್ಟನ್ನಷ್ಟೇ  ನೋಡುವುದಿಲ್ಲ. ನನಗೆ ಒಂದು ಮಗು ಕಾಣುತ್ತದೆ. ಪ್ರೌಢಾವಸ್ಥೆಯನ್ನು ಊಹಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಒಂದು ಯುವ ವ್ಯಕ್ತಿ ಕಾಣುತ್ತದೆ. ಮತ್ತು ಪೋಷಕರ ಮನಸ್ಸಿನಲ್ಲಿ ಹೆಚ್ಚೆಚ್ಚಾಗಿ ಸದ್ದಿಲ್ಲದೆ ಕೂರುವ ಪ್ರಶ್ನೆಯೊಂದು ನನಗೆ ಕೇಳಿಸುತ್ತದೆ:

ನಮ್ಮ ಮಕ್ಕಳು ಯಾವ ರೀತಿಯ ಜಗತ್ತನ್ನು ಬಳುವಳಿಯಾಗಿ ಪಡೆಯಲಿದ್ದಾರೆ?

ಹವಾಮಾನ ಬಿಕ್ಕಟ್ಟನ್ನು ಸಾಮಾನ್ಯವಾಗಿ ಡಿಗ್ರಿ ಸೆಲ್ಸಿಯಸ್, ಹೊರಸೂಸಿಕೆ, ಆರ್ಥಿಕ ನಷ್ಟ, ಮೂಲಸೌಕರ್ಯಗಳಿಗೆ ಹಾನಿ ಮತ್ತು ಜೀವನೋಪಾಯಗಳ ನಷ್ಟಗಳ ಮೂಲಕ ಅಳೆಯಲಾಗುತ್ತದೆ. ಈ ಅಳತೆಗೋಲುಗಳು ಅತ್ಯಗತ್ಯ. ಆದರೆ ಅಳೆಯಲು ಕಷ್ಟಕರವಾದ ಮತ್ತೊಂದು ನಷ್ಟವಿದೆ: ಅದೆಂದರೆ  ‘ನಿಶ್ಚಿತತೆಯ ಸವೆತ’

ಮಗುವಿನ ಪಾಲಿಗೆ, ವಿಪರೀತ ಸೆಕೆ ಎಂದರೆ ನಿದ್ರೆಯಿಲ್ಲದ ರಾತ್ರಿಗಳು, ಶಾಲಾ ಶಿಕ್ಷಣಕ್ಕೆ ಅಡಚಣೆ ಅಥವಾ ಹೊರಗೆ ಆಟವಾಡಲು ಸಾಧ್ಯವಾಗದಿರುವುದು ಎಂದರ್ಥವಾಗಬಹುದು. ಹದಿಹರೆಯದವರಿಗೆ, ಹವಾಮಾನ ಬದಲಾವಣೆಯು ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಬಹುದು: ನಾನು ಯಾವ ರೀತಿಯ ಭವಿಷ್ಯದತ್ತ ಬೆಳೆಯುತ್ತಿದ್ದೇನೆ? ಯುವ ವಯಸ್ಕರಿಗೆ, ಇದು ವೃತ್ತಿಜೀವನ, ವಸತಿ, ವಲಸೆ, ಸಂಬಂಧಗಳು ಮತ್ತು ಮಕ್ಕಳನ್ನು ಪಡೆಯುವ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಹವಾಮಾನ

ಪೋಷಕರಿಗೆ, ಈ ಆತಂಕವು ಮತ್ತೊಂದು ಆಯಾಮವನ್ನು ಪಡೆಯುತ್ತದೆ. ನಾವಿಲ್ಲಿ ಕೇವಲ ನಮ್ಮ ಸ್ವಂತ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ; ಬದಲಿಗೆ, ಇನ್ನೊಬ್ಬರ ಭವಿಷ್ಯದ ಬಗ್ಗೆಯೂ ಚಿಂತಿಸುತ್ತಿದ್ದೇವೆ.

ವಯಸ್ಸಾದವರಿಗೆ, ಹವಾಮಾನ ಬದಲಾವಣೆಯು ಮತ್ತೊಂದು ರೀತಿಯ ಸಂಕಟವನ್ನು ತರಬಹುದು — ಪರಿಚಿತ ಋತುಗಳು, ಭೂದೃಶ್ಯಗಳು, ಜೀವನೋಪಾಯಗಳು, ಸಮುದಾಯಗಳು ಮತ್ತು ಜೀವನಶೈಲಿಗಳನ್ನು ಕಳೆದುಕೊಳ್ಳುವ ನೋವು.

ಹೀಗಾಗಿ, ಒಂದೇ ಹವಾಮಾನ ಬಿಕ್ಕಟ್ಟು ಬದುಕಿನ  ವಿವಿಧ ಹಂತಗಳಲ್ಲಿ ವಿಭಿನ್ನ ಮಾನಸಿಕ ಅನುಭವಗಳನ್ನು ಉಂಟುಮಾಡುತ್ತದೆ. ಮತ್ತು ಪೋಷಕರು ಇವೆಲ್ಲದರ ನಡುವೆಯೆಲ್ಲೋ ಇರುತ್ತಾರೆ.

ಇದನ್ನೂ ಓದಿ : 

ಪೋಷಕರು ಭವಿಷ್ಯವು ಸುರಕ್ಷಿತವಾಗಿದೆ ಎಂಬ ಭಾವನೆಯನ್ನು ಮೂಡಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ನಾವು ನಮ್ಮ ಮಕ್ಕಳಿಗೆ ಓದಲು, ಕನಸು ಕಾಣಲು, ವೃತ್ತಿಜೀವನವನ್ನು ರೂಪಿಸಿಕೊಳ್ಳಲು, ಪ್ರಯಾಣಿಸಲು, ಹೊಸದನ್ನು ಸೃಷ್ಟಿಸಲು ಮತ್ತು ನಾಳೆಯ ಬಗ್ಗೆ ಯೋಜನೆ ರೂಪಿಸಲು ಹೇಳುತ್ತೇವೆ. ಆದರೆ ಹವಾಮಾನ ಬದಲಾವಣೆಯು ನಾಳೆಯನ್ನು ತುಸು ಅನಿಶ್ಚಿತಗೊಳಿಸಿದೆ.

ಮತ್ತೊಂದು ಬಿಸಿ ಅಲೆ. ಮತ್ತೊಂದು ಪ್ರವಾಹ. ಮತ್ತೊಂದು ಚಂಡಮಾರುತ. ನೀರಿನ ಅಭಾವದ ಮತ್ತೊಂದು ಎಚ್ಚರಿಕೆ.

ಮತ್ತು ಪೋಷಕರ ಮನಸ್ಸಿನ ಮೂಲೆಯಲ್ಲಿ ಒಂದು ಪ್ರಶ್ನೆ ಮೂಡುತ್ತದೆ: “ಇದು ನನ್ನ ಮಗುವಿಗೆ ಸಾಮಾನ್ಯ ಸಂಗತಿಯಾಗಿಬಿಡುತ್ತದೆಯೇ?”

ಮಗು ಎಂದಿಗೂ “ಹವಾಮಾನ ಆತಂಕ” (climate anxiety) ಎಂಬ ಪದವನ್ನು ಬಳಸದಿರಬಹುದು. ಬದಲಿಗೆ, “ಏಕೆ ಇಷ್ಟು ಸೆಕೆಯಿದೆ?” ಅಥವಾ “ನಾವು ಏಕೆ ಹೊರಗೆ ಹೋಗಲು ಸಾಧ್ಯವಿಲ್ಲ?” ಎಂದು ಕೇಳಬಹುದು.

ಹದಿಹರೆಯದವರು “ಪರಿಸರ ಸಂಬಂಧಿ ದುಃಖ” (ecological grief) ವನ್ನು ವರ್ಣಿಸದಿರಬಹುದು. ಆದರೆ, ಹೆಚ್ಚು ಹೆಚ್ಚು ಅನಿಶ್ಚಿತವಾಗಿ ಕಾಣುವ ಭವಿಷ್ಯದ ಬಗ್ಗೆ ಕನಸು ಕಾಣುವುದರಲ್ಲಿ ಅರ್ಥವಿದೆಯೇ ಎಂದು ಅವರು ಯೋಚಿಸಬಹುದು.

ಮತ್ತು ಪೋಷಕರು ಎಂದಿಗೂ “ನನಗೆ ಹವಾಮಾನ ಬದಲಾವಣೆಯ ಬಗ್ಗೆ ಆತಂಕವಿದೆ” ಎಂದು ಹೇಳದಿರಬಹುದು.

ನಾವು ಕೇವಲ ನಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಾ ನಿದ್ದೆಯಿಲ್ಲದೆ ಕಳೆಯುತ್ತೇವೆ.

ಅದೂ ಕೂಡ ಹವಾಮಾನ ಆತಂಕವೇ ಆಗಿದೆ.

ಸಾಕ್ಷ್ಯಗಳು ಈ ಅನುಭವಗಳ ಹತ್ತಿರಕ್ಕೆ ಬರಲಾರಂಭಿಸಿವೆ. 44 ದೇಶಗಳ 388 ವಯಸ್ಕರನ್ನು ಒಳಗೊಂಡ ಬಹುರಾಷ್ಟ್ರೀಯ ಅಧ್ಯಯನವೊಂದು, ಶೇಕಡಾ 83.5 ರಷ್ಟು ಜನರು ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಒಂದು ತೀವ್ರ ಹವಾಮಾನ ಘಟನೆಯನ್ನು ಅನುಭವಿಸಿದ್ದಾರೆ ಎಂದು ಕಂಡುಕೊಂಡಿದೆ. ಇಂತಹ ತೀವ್ರ ಘಟನೆಗಳಿಗೆ ಒಳಗಾದವರು ಹೆಚ್ಚಿನ ಮಟ್ಟದ ಭಾಧಕಾತ್ಮಕ, ವರ್ತನೆಗೆ ಸಂಬಂಧಿಸಿದ ಮತ್ತು ವೈಯಕ್ತಿಕ ಪರಿಣಾಮ ಬೀರುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ದೈನಂದಿನ ಚಟುವಟಿಕೆಗಳಿಗೆ ಹವಾಮಾನದಿಂದ ಉಂಟಾಗುವ ಅಡಚಣೆಯು ಹವಾಮಾನ ಆತಂಕದ ಅತ್ಯಂತ ಪ್ರಬಲ ಮುನ್ಸೂಚಕವಾಗಿ ಹೊರಹೊಮ್ಮಿದೆ.

ಆ ಪದಗುಚ್ಛ — ‘ದೈನಂದಿನ ಚಟುವಟಿಕೆಗಳು’ — ಬಹಳ ಮುಖ್ಯವಾದುದು.

ಹವಾಮಾನ ಬದಲಾವಣೆಯು ಸಾಮಾನ್ಯ ಬದುಕನ್ನು ಅಡ್ಡಿಪಡಿಸಿದಾಗ ಅದು ಮಾನಸಿಕವಾಗಿ ಮಹತ್ವದ ವಿಷಯವಾಗುತ್ತದೆ.

ಸೆಕೆಯಿಂದಾಗಿ ನಿದ್ದೆಗೆ ಭಂಗ ಬಂದಾಗ. ಪ್ರವಾಹದಿಂದಾಗಿ ಶಿಕ್ಷಣಕ್ಕೆ ಅಡಚಣೆಯಾದಾಗ. ವಿಪತ್ತುಗಳು ಮನೆಗಳನ್ನು ನಾಶಪಡಿಸಿದಾಗ. ಜೀವನೋಪಾಯಗಳು ಅನಿಶ್ಚಿತವಾದಾಗ. ಸ್ಥಳಾಂತರವು ಜನರನ್ನು ಸಮುದಾಯಗಳಿಂದ ಬೇರ್ಪಡಿಸಿದಾಗ. ಸಾಮಾನ್ಯ ಬದುಕಿಗೆ  ಒಂದೊಮ್ಮೆ ಲಭ್ಯವಾಗಿದ್ದ ಮಾನಸಿಕ ಅವಕಾಶವನ್ನು ಅನಿಶ್ಚಿತತೆಯು ಆಕ್ರಮಿಸಿಕೊಳ್ಳಲು ಪ್ರಾರಂಭಿಸಿದಾಗ.

ಹವಾಮಾನ ಬದಲಾವಣೆಯು ಯಾವಾಗಲೂ ಒಂದೇ ನಾಟಕೀಯ ವಿಪತ್ತಾಗಿ ಬರುವುದಿಲ್ಲ. ಕೆಲವೊಮ್ಮೆ ಇದು ಅಡೆತಡೆಗಳ ಸರಣಿಯಾಗಿ ಬರುತ್ತದೆ. ನಿಧಾನವಾಗಿ, ಅನಿಶ್ಚಿತತೆಯು ದೈನಂದಿನ ಜೀವನದ ಭಾಗವಾಗುತ್ತದೆ.

ಆದರೆ ಮಾನಸಿಕ ಹೊರೆಯು ಸಮಾನವಾಗಿ ವಿಹಂಚಿ ಹೋಗುವುದಿಲ್ಲ.

ಆರ್ಥಿಕ ಭದ್ರತೆಯನ್ನು ಹೊಂದಿರುವ ಒಂದು ಕುಟುಂಬವು ಒಂದು ಪ್ರವಾಹಕ್ಕೆ ಪಕ್ಕಾಗುವ ಪ್ರದೇಶವನ್ನು ಬಿಡಲು ಸಾಧ್ಯವಾಗಬಹುದು. ಇನ್ನೊಂದು ಕುಟುಂಬಕ್ಕೆ ಎಲ್ಲಿಗೂ ಹೋಗಲಾಗದಿರಬಹುದು. ಒಂದು ಕುಟುಂಬಕ್ಕೆ ತಂಪುಗೊಳಿಸಿಕೊಳ್ಳಲು ಸಾಧ್ಯವಾಗಬಹುದು.. ಇನ್ನೊಂದು ಕುಟುಂಬವು ತನ್ನ ವಿದ್ಯುತ್ ಬಿಲ್ ಪಾವತಿಸಲು ಕಷ್ಟಪಡಬಹುದು. ಒಬ್ಬ ವಿದ್ಯಾರ್ಥಿಗೆ ಮಾನಸಿಕ ಬೆಂಬಲ ಲಭ್ಯವಿರಬಹುದು. ಇನ್ನೊಬ್ಬ ವಿದ್ಯಾರ್ಥಿಗೆ ಮೂಲಭೂತ ಆರೋಗ್ಯಪಾಲನೆ ಲಭ್ಯವಿಲ್ಲದಿರಬಹುದು.

ಅದಕ್ಕಾಗಿಯೇ ಹವಾಮಾನ ಮಾನಸಿಕ ಆರೋಗ್ಯವು ಹವಾಮಾನ ನ್ಯಾಯದ ಒಂದು ಪ್ರಶ್ನೆಯಾಗಿದೆ.

ಯಾರಿಗೆ ಮರುಚೇತರಿಕೆ ಪಡೆದುಕೊಳ್ಳಲು  ಸಂಪನ್ಮೂಲಗಳಿವೆ ಎಂದು ಕೇಳದೆ ನಾವು ಮರುಚೇತರಿಕೆಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ.

ದುರ್ಬಲ ಸಮುದಾಯಗಳಿಗೆ, ಒಂದು ಹವಾಮಾನ ಘಟನೆಯು ತಾತ್ಕಾಲಿಕ ಭಯಕ್ಕಿಂತಲೂ  ಹೆಚ್ಚಿನದಾಗಬಹುದು. ಇದು ಸ್ಥಳಾಂತರ, ಶಿಕ್ಷಣಕ್ಕೆ ಅಡಚಣೆ, ಆದಾಯ ನಷ್ಟ, ದುರ್ಬಲಗೊಂಡ ಸಾಮಾಜಿಕ ಜಾಲಗಳು ಮತ್ತು ದೀರ್ಘಕಾಲದ ಅನಿಶ್ಚಿತತೆಯಾಗಬಹುದು. ಇವು ಮಾನಸಿಕ ಆರೋಗ್ಯದಿಂದ ಪ್ರತ್ಯೇಕವಾಗಿಲ್ಲ; ಅವು ಅದನ್ನು ರೂಪಿಸುವ ಪರಿಸ್ಥಿತಿಗಳ ಭಾಗವಾಗಿದೆ.

ಪ್ರಾಧ್ಯಾಪಕಳಾಗಿ, ನಾನು ಹೆಚ್ಚೆಚ್ಚಾಗಿ ಕೇಳುವ ಇನ್ನೊಂದು ಪ್ರಶ್ನೆ ಇದೆ: ಮುಂದಿನ ಪೀಳಿಗೆಗೆ ನಾವು ಹವಾಮಾನ ಬದಲಾವಣೆಯನ್ನು ಹೇಗೆ ಕಲಿಸುತ್ತಿದ್ದೇವೆ?

ವಿದ್ಯಾರ್ಥಿಗಳಿಗೆ ಸತ್ಯವನ್ನು ಹೇಳುವ ಜವಾಬ್ದಾರಿ ನಮಗಿದೆ. ಹವಾಮಾನ ಬದಲಾವಣೆ ಗಂಭೀರವಾಗಿದೆ. ಅಪಾಯಗಳು ವಾಸ್ತವ. ಪರಿವರ್ತನೆ ಸುಲಭವಲ್ಲ.

ಆದರೆ ನಾವು ಹವಾಮಾನ ಬದಲಾವಣೆಯ ಬಗ್ಗೆ ಹೇಗೆ ಹೇಳುತ್ತೇವೆ ಎಂಬುದು ಮುಖ್ಯ.

ಪ್ರತಿಯೊಂದು ಹವಾಮಾನ ಸಂಭಾಷಣೆಯು ಅನಾಹುತದಲ್ಲಿ ಕೊನೆಗೊಂಡರೆ, ಒಬ್ಬ ಯುವ ವ್ಯಕ್ತಿಯ ಕರ್ತೃತ್ವದ ಭಾವಕ್ಕೆ ಏನಾಗುತ್ತದೆ? ವಿದ್ಯಾರ್ಥಿಗಳಿಗೆ ಕ್ರಿಯೆಯ ಮಾರ್ಗೋಪಾಯಗಳನ್ನು  ತೋರಿಸದೆ ಪದೇ ಪದೇ ಭಯಾನಕ ಭವಿಷ್ಯದ ಬಿಂಬಗಳನ್ನು ತೋರಿಸಿದರೆ, ನಾವು ತಿಳುವಳಿಕೆಯುಳ್ಳ ನಾಗರಿಕರನ್ನು ಸೃಷ್ಟಿಸುತ್ತೇವೆಯೇ – ಅಥವಾ ಹೌಹಾರಿದವರನ್ನು ಸೃಷ್ಟಿಸುತ್ತೇವೆಯೇ?

ನಾವು ವಿಜ್ಞಾನವನ್ನು ಮೃದುಗೊಳಿಸಬಾರದು. ಆದರೆ ಅಸಹಾಯಕತೆಯು ಹವಾಮಾನ ಶಿಕ್ಷಣದ ಅನುದ್ದೇಶಿತ ಫಲಿತಾಂಶವೂ ಆಗಬಾರದು.

ಯುವಜನರು ಹವಾಮಾನ ಅಪಾಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅವರು ಹೊಂದಾಣಿಕೆ, ನಾವೀನ್ಯತೆ, ಸಾಮೂಹಿಕ ಕ್ರಿಯೆ ಮತ್ತು ಮರುಚೇತರಿಕೆಯನ್ನು  ಸಹ ಅರ್ಥಮಾಡಿಕೊಳ್ಳಬೇಕಾಗಿದೆ.

ಭವಿಷ್ಯವು ಅನಿಶ್ಚಿತವಾಗಿದೆ ಎಂದು ಅವರು ತಿಳಿದುಕೊಳ್ಳಬೇಕಾಗಿದೆ.

ಆದರೆ ಅದು ಪೂರ್ವನಿರ್ಧರಿತವೇನಲ್ಲ ಎಂದೂ ಅವರು ತಿಳಿದುಕೊಳ್ಳಬೇಕಾಗಿದೆ.

ಇಲ್ಲಿಯೇ ಆಶಾಭಾವನೆ ಎಂಬುದು ಒಂದು  ಸಾಂತ್ವನ ನೀಡುವ ಪದಕ್ಕಿಂತಲೂ ಹೆಚ್ಚಿನದು ಆಗಿರುತ್ತದೆ.

ಆಶಾಭಾವನೆ  ಎಂದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ನಟಿಸುವುದಲ್ಲ. ಅದು ವಿಜ್ಞಾನವನ್ನು ನಿರಾಕರಿಸುತ್ತಿಲ್ಲ.

ಆಶಾಭಾವನೆ ಎಂದರೆ, ಫಲಿತಾಂಶವು ಅನಿಶ್ಚಿತವಾಗಿದ್ದರೂ ಸಹ ನಮ್ಮ ಆಯ್ಕೆಗಳು ಈಗಲೂ ಮುಖ್ಯ ಎಂಬ ನಂಬಿಕೆ.

ಅದು ನಾವು ನಿರ್ಮಿಸಬಹುದಾದ ಹವಾಮಾನ ಮರುಚೇತರಿಕೆಯ ಅತ್ಯಂತ  ಪ್ರಮುಖ ರೂಪಗಳಲ್ಲಿ ಒಂದಾಗಿರಬಹುದು.

ನಾವು ನಿರಂತರವಾಗಿ ಮತ್ತೆ ಚೇತರಿಸಿಕೊಳ್ಳಬಹುದಾದ ನಗರಗಳು, ಮೂಲಸೌಕರ್ಯ, ಕೃಷಿ ಮತ್ತು ಆರ್ಥಿಕತೆಗಳ ಬಗ್ಗೆ ಮಾತನಾಡುತ್ತೇವೆ. ನಾವು ಮಾತಾಡಬೇಕು. ಆದರೆ ಬಹುಶಃ ನಾವು ಮತ್ತೆ ಚೇತರಿಸಿಕೊಳ್ಳಬೇಕಾದ ಮನಸ್ಸುಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ.

ಹವಾಮಾನ-ಮರುಚೇತನದ ಶಾಲೆಯು ತಂಪಾಗಿಸುವ ವ್ಯವಸ್ಥೆಗಳು ಮತ್ತು ಹಸಿರು ಅವಕಾಶಗಳನ್ನು ಹೊಂದಿರುವ ಶಾಲೆ ಮಾತ್ರವಲ್ಲ. ಮಕ್ಕಳು ತಮ್ಮ ಭಯಗಳನ್ನು ಬದಿಗೊತ್ತದೆ, ಅವುಗಳ  ಬಗ್ಗೆ ಮಾತನಾಡಬಹುದಾದ ಸ್ಥಳವೂ ಆಗಿದೆ.

ಹವಾಮಾನ-ಮರುಚೇತನದ ವಿಶ್ವವಿದ್ಯಾಲಯವು ಅದರ ಇಂಗಾಲದ ಹೆಜ್ಜೆಗುರುತನ್ನು ಅಳೆಯುವಂತದ್ದು ಮಾತ್ರವಲ್ಲ,   ಅದು ಯುವಜನರು ತಮ್ಮ ಕರ್ತೃತ್ವದ ಭಾವವನ್ನು ಕಳೆದುಕೊಳ್ಳದೆ ಹವಾಮಾನ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಅವರನ್ನು ಸಿದ್ಧಪಡಿಸುವಂತದ್ದು.

ಮತ್ತು ಒಂದು ಹವಾಮಾನ-ಮರುಚೇತನದ ಕುಟುಂಬವು ಭವಿಷ್ಯದ ಬಗ್ಗೆ ಕಷ್ಟಕರವಾದ ಸಂಭಾಷಣೆಗಳಿಗೆ ಅವಕಾಶ ನೀಡುವ  ಒಂದು ಕುಟುಂಬವಾಗಿರಬಹುದು.

ಒಬ್ಬ ಪೋಷಕಳಾಗಿ, ಉತ್ತರಿಸಲು ನನಗೆ ಹೆಚ್ಚೆಚ್ಚು ಕಷ್ಟಕರವೆನಿಸುವ ಒಂದು ಪ್ರಶ್ನೆಯಿದೆ.

ನಮ್ಮ ಮಕ್ಕಳಿಗೆ ಉತ್ತಮವಾದ ಭೂಗ್ರಹವನ್ನು  ಬಿಟ್ಟುಹೋಗಬಯಸುತ್ತೇವೆ ಎಂದು ನಾವು ಹೇಳುವಾಗ, ಅದರ ನಿಖರವಾದ ಅರ್ಥವೇನು?

ಸಾಮಾನ್ಯವಾಗಿ ನಾವು ಸ್ವಚ್ಛ ಗಾಳಿ, ಸುರಕ್ಷಿತ ನೀರು, ಸ್ಥಿರವಾದ ಪರಿಸರ ವ್ಯವಸ್ಥೆಗಳು ಮತ್ತು ವಾಸಯೋಗ್ಯ ನಗರಗಳು ಎಂದುಕೊಳ್ಳುತ್ತೇವೆ. ಹಾಗೆಯೇ ಮಾಡಬೇಕು ಕೂಡ.

ಆದರೆ ಬಹುಶಃ ನಾವು ಅವರಿಗೆ ಇನ್ನೊಂದನ್ನೂ ಬಿಟ್ಟುಹೋಗಬೇಕಿದೆ: ನಾವು ಬಿಟ್ಟುಹೋಗುತ್ತಿರುವ ಜಗತ್ತಿನಲ್ಲಿ ಬದುಕಲು ಬೇಕಾದ ಮಾನಸಿಕ ಸಾಮರ್ಥ್ಯವನ್ನು ಬಿಟ್ಟುಹೋಗಬೇಕಿದೆ.

ಆಶಾಭಾವನೆಯ ಸಾಮರ್ಥ್ಯ. ಮರು ಚೇತರಿಕೆ. ಸಂಕಷ್ಟಗಳನ್ನು ಎದುರಿಸಲು ನೆರವಾಗುವ ಸಂಬಂಧಗಳು. ಅಪಾಯವನ್ನು ಅರ್ಥಮಾಡಿಕೊಳ್ಳುವ ಜ್ಞಾನ. ಮತ್ತು ಪರಿಹಾರಗಳಲ್ಲಿ ಭಾಗವಹಿಸುವ ಆತ್ಮವಿಶ್ವಾಸ.

ಏಕೆಂದರೆ ಹವಾಮಾನ ಬಿಕ್ಕಟ್ಟು ಕೇವಲ ಭೌತಿಕ ಜಗತ್ತನ್ನಷ್ಟೇ ಬದಲಾಯಿಸುತ್ತಿಲ್ಲ; ಅದು ಜನರು ಭವಿಷ್ಯದ ಬಗ್ಗೆ ತಮಗೇ ಹೇಳಿಕೊಳ್ಳುವ ಕತೆಗಳನ್ನೂ ಬದಲಾಯಿಸುತ್ತಿದೆ.

ಒಂದು ಇಡೀ ಪೀಳಿಗೆಗೆ ಅವರ ಭವಿಷ್ಯವು ಮುಗಿದೇ ಹೋಗಲಿದೆ ಎಂದು ನಾವು ಹೇಳಿದರೆ, ಆ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ಸಿಗುವ ಮೊದಲೇ ನಾವು ಅವರಿಂದ ಅಮೂಲ್ಯವಾದದ್ದೊಂದನ್ನು ಕಸಿದುಕೊಂಡಂತಾಗುತ್ತದೆ.

ಆದರೆ ನಾವು ಅವರಿಗೆ ಸತ್ಯವನ್ನು ಹೇಳಿದರೆ — ಅಂದರೆ ಅಪಾಯಗಳು ಗಂಭೀರವಾಗಿವೆ, ಇನ್ನೂ ಹೆಚ್ಚಿನ ಕೆಲಸವಾಗಬೇಕಿದೆ ಮತ್ತು ಅವರ ಆಯ್ಕೆಗಳು ಈಗಲೂ ಮಹತ್ವದ್ದಾಗಿವೆ ಎಂದು ತಿಳಿಸಿದರೆ — ನಾವು ಅವರಿಗೆ ಭರವಸೆಗಿಂತಲೂ ಹೆಚ್ಚು ಶಕ್ತಿಯುತವಾದದ್ದನ್ನು ನೀಡಿದಂತಾಗುತ್ತದೆ.

ನಾವು ಅವರಿಗೆ ‘ಕರ್ತೃತ್ವ ಶಕ್ತಿ’ಯನ್ನು (agency) ನೀಡುತ್ತೇವೆ.

ಒಬ್ಬ ಪೋಷಕಳಾಗಿ, ಅನಿಶ್ಚಿತತೆಯೇ ಇಲ್ಲದ ಒಂದು ಜಗತ್ತಿನ ಭರವಸೆಯನ್ನು ನನ್ನ ಮಕ್ಕಳಿಗೆ ನೀಡಲಾರೆ.

ಸುಸ್ಥಿರತೆಯ ವಿಷಯದ ಒಬ್ಬ ಪ್ರಾಧ್ಯಾಪಕಿಯಾಗಿ, ಹವಾಮಾನ ಬಿಕ್ಕಟ್ಟು ಗಂಭೀರವಾದುದಲ್ಲ ಎಂದು ನಟಿಸಲಾರೆ.

ಆದರೆ ಆ ಎರಡು ಸತ್ಯಗಳ ನಡುವಿನ ಯಾವುದೋ ಸಂಗತಿಯಲ್ಲಿ  ನಂಬಿಕೆ ಇಡಬಲ್ಲೆ.

ಹತಾಶೆಗೆ ಶರಣಾಗದೆ ನಾವು ವಿಜ್ಞಾನವನ್ನು ಎದುರಿಸಬಲ್ಲೆವು. ಭಯವು ಭವಿಷ್ಯವನ್ನು ನಿರ್ಧರಿಸಲು ಬಿಡದೆಯೇ ಆ ಭಯವನ್ನು ನಾವು ಒಪ್ಪಿಕೊಳ್ಳಬಲ್ಲೆವು. ನಾವು ಒಂದು ಉತ್ತಮವಾದದ್ದನ್ನು ಕಲ್ಪಿಸಿಕೊಳ್ಳುವ ನಮ್ಮ ಮಕ್ಕಳ ಸಾಮರ್ಥ್ಯವನ್ನು ಕಸಿದುಕೊಳ್ಳದೆಯೇ ಅವರಿಗೆ ಹವಾಮಾನ ಬದಲಾವಣೆಯ ವಾಸ್ತವತೆಯನ್ನು ಕಲಿಸಬಹುದು.

ಬಹುಶಃ ಸುಸ್ಥಿರತೆ ಎಂದರೆ ಕೇವಲ ನಾವು ಬಿಟ್ಟುಹೋಗುವ ಭೂಗ್ರಹಕ್ಕಷ್ಟೇ ಸಂಬಂಧಿಸಿದ್ದಲ್ಲ.

ಮುಂದಿನ ಪೀಳಿಗೆಯು ಅದನ್ನು ಯಾವ ಮನಸ್ಥಿತಿಯಲ್ಲಿ ಸ್ವೀಕರಿಸುತ್ತದೆ ಎಂಬುದಕ್ಕೆ  ಕೂಡ ಸಂಬಂಧಿಸಿದ್ದು.

ಹಾಗಾಗಿ, ನಾವು ಸಾಕಷ್ಟು ಬಾರಿ ಕೇಳಿಕೊಳ್ಳದ ಹವಾಮಾನಕ್ಕೆ ಸಂಬಂಧಿಸಿದ ಪ್ರಶ್ನೆಯು ಹೀಗಿರಬಹುದು: ನಮ್ಮ ಮಕ್ಕಳು ಈ ಭೂಗ್ರಹವನ್ನು ನಮ್ಮಿಂದ ಪಡೆದುಕೊಂಡಾಗ, ಅವರು ನಮ್ಮ ಭಯವನ್ನು ಪಡೆಯುತ್ತಾರೆಯೇ — ಅಥವಾ ಅದನ್ನು ಬದಲಾಯಿಸುವ ನಮ್ಮ ಧೈರ್ಯವನ್ನೇ?

ಶ್ರುತಿ ಶರ್ಮಾ ಅ ‘ಟೆರಿ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‘ನ (TERI School of Advanced Studies) ನಿರ್ವಹಣಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾಗಿದ್ದಾರೆ. ಅವರ ಕೆಲಸ ಮತ್ತು ಬೋಧನೆಯು ಸುಸ್ಥಿರತೆ, ಹವಾಮಾನ ಅಪಾಯ, ಇಎಸ್‌ಜಿ (ESG) ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದೆ.

ಇದನ್ನೂ ನೋಡಿ : SIR ಅಕ್ರಮ: ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಕೊಳೋದ್ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *