ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮೆರವಣಿಗೆ ಆರಂಭಿಸುವ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ (ಅಕ್ಟೋಬರ್ 10) ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಕನಿಷ್ಠ 50 ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎಸ್‌ಐಆರ್
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಫ್ರೀಡಂ ಪಾರ್ಕ್‌ನಿಂದ ಕೆಲವೇ ನೂರು ಮೀಟರ್‌ಗಳ ದೂರದಲ್ಲಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಮೆರವಣಿಗೆ ನಡೆಸಲು ಅವರು ನಿರ್ಧರಿಸಿದ್ದರು. ಆದರೆ, ಮೆರವಣಿಗೆ ಆರಂಭಿಸುವುದಕ್ಕೂ ಮುನ್ನವೇ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಪ್ರತಿಭಟನಾ ಸ್ಥಳದ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ತಾವು ಬ್ಯಾರಿಕೇಡ್‌ಗಳನ್ನು ದಾಟಿರಲಿಲ್ಲ ಅಥವಾ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯತ್ತ ಸಾಗಿರಲಿಲ್ಲ. ಅಷ್ಟರಲ್ಲೇ ಪೊಲೀಸರು ಬಂದು ವಶಕ್ಕೆ ಪಡೆದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
1.07 ಕೋಟಿ ಮತದಾರರ ಹೆಸರುಗಳ ಅಳಿಸುವಿಕೆ ರದ್ದುಪಡಿಸಲು ಆಗ್ರಹ
ಕರ್ನಾಟಕದ ಕರಡು ಮತದಾರರ ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಮತ್ತು ಮೃತಪಟ್ಟಿರುವುದಾಗಿ ಗುರುತಿಸಲಾದ ಸುಮಾರು 1.07 ಕೋಟಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಮತದಾರರ ಹಕ್ಕುಗಳನ್ನು ರಕ್ಷಿಸಬೇಕಾದ ಚುನಾವಣಾ ಆಯೋಗವೇ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಕ್ರಮ ಕೈಗೊಳ್ಳುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಎಸ್‌ಐಆರ್
ಇದನ್ನೂ ಓದಿ : SIR ಹೋರಾಟಕ್ಕೆ ತಡೆ: ದೆಹಲಿಯಲ್ಲಿ ವ್ಯಾಪಕಗೊಂಡ ಆಕ್ರೋಶ
ಬಂಧನವನ್ನು ಖಂಡಿಸಿದ ಜನಪರ ಸಂಘಟನೆಗಳು
ವಿದ್ಯಾರ್ಥಿಗಳ ಬಂಧನವನ್ನು ಎಐಎಸ್‌ಎ ಕರ್ನಾಟಕ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಖಂಡಿಸಿವೆ. ಎಸ್‌ಎಫ್‌ಐ (SFI), ಎಐಎಸ್‌ಎ (AISA), ಎಐಡಿಎಸ್‌ಒ (AIDSO), ಎಐಎಸ್‌ಎಫ್ (AISF) ಸೇರಿದಂತೆ ಜನಪರ ಸಂಘಟನೆಗಳು ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಹತ್ತಿಕ್ಕುವ ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಪ್ರತಿಭಟನೆಯನ್ನು ತಡೆಯಲು ನೂರಾರು ಪೊಲೀಸರನ್ನು ನಿಯೋಜಿಸಿ, ರಸ್ತೆಗಳ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಬಂಧನಕ್ಕೊಳಗಾದವರನ್ನು ಬೇರೆ ಬೇರೆ ಪೊಲೀಸ್ ವಾಹನಗಳಲ್ಲಿ ಕರೆದೊಯ್ಯಲಾಗಿದೆ. ಅವರನ್ನು ಯಾವ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಎಐಎಸ್‌ಎ ವಿದ್ಯಾರ್ಥಿಗಳು ಹೇಳಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಪೊಲೀಸ್ ಠಾಣೆಯಲ್ಲೇ ಮತ್ತೊಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕ್ರಮಕ್ಕೂ ವಿದ್ಯಾರ್ಥಿಗಳ ಪ್ರಶ್ನೆ
ರಾಷ್ಟ್ರಮಟ್ಟದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷದ ನೇತೃತ್ವದ ಕರ್ನಾಟಕ ಸರ್ಕಾರ, ರಾಜ್ಯದಲ್ಲಿ ಪ್ರತಿಭಟನಾಕಾರರ ಧ್ವನಿಯನ್ನು ಹತ್ತಿಕ್ಕುತ್ತಿರುವುದು ಏಕೆ ಎಂದು ಎಐಎಸ್‌ಎ ಪ್ರಶ್ನಿಸಿದೆ. ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟಿಸುವ ಹಕ್ಕನ್ನು ಸಮರ್ಥಿಸುವ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಅದೇ ಹಕ್ಕನ್ನು ನಿರ್ಬಂಧಿಸುವುದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಸಂಘಟನೆ ಪ್ರಶ್ನಿಸಿದೆ. ಎಸ್‌ಐಆರ್
ಇದನ್ನೂ ನೋಡಿ : ಎಸ್‌ಐಆರ್ ವಿರುದ್ಧದ ಹೋರಾಟಕ್ಕೆ ತಡೆ ಏಕೆ? | ಬಿಜೆಪಿಯ ಅಸಲಿ ಉದ್ದೇಶವೇನು? Janashakthi Media
