ಹಾಸನ: ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ನಗರದ ಸಾರ್ವಜನಿಕ ಗ್ರಂಥಾಲಯದ ಹಿಂಭಾಗದಲ್ಲಿರುವ ಮಿಯಾವಾಕಿ ಪುಟ್ಟಡವಿ ಹಾಗೂ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪರಿಸರ ಶ್ರಮದಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಬಿ. ವೆಂಕಟೇಗೌಡ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಬದ್ಧತೆ ಬೆಳೆಸುವ ಉದ್ದೇಶದಿಂದ ಪ್ರತಿಷ್ಠಾನವು ವಿವಿಧ ಕಾಲೇಜುಗಳ ಆವರಣದಲ್ಲಿ ಮಿಯಾವಾಕಿ ಪುಟ್ಟಡವಿ ಹಾಗೂ ಹಸಿರು ತೋಟಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು. ಹಸಿರು ತಾಣಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಅವುಗಳನ್ನು ನಿರಂತರವಾಗಿ ಪೋಷಿಸಿ ಸಂರಕ್ಷಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಕಾಲೇಜು ಆಡಳಿತ ಮಂಡಳಿಗಳು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಹಾಗೂ ‘ಹಸಿರುಸಿರಿ’ ಸಂಚಾಲಕ ಪುರುಷೋತ್ತಮ್ ಮಾತನಾಡಿ, ಮರಗಿಡಗಳು ಮಾನವಕುಲದ ಜೀವರಕ್ಷಕಗಳಾಗಿದ್ದು, ಹಸಿರಿನಿಂದ ಕೂಡಿದ ಆರೋಗ್ಯಕರ ವಾತಾವರಣವು ಉತ್ತಮ ಬದುಕಿಗೆ ಅಗತ್ಯವಾಗಿದೆ ಎಂದು ಹೇಳಿದರು. ಮನೆ ಹಾಗೂ ಮಕ್ಕಳನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತೇವೆಯೋ ಅದೇ ರೀತಿಯಲ್ಲಿ ಗಿಡ-ಮರಗಳ ಆವರಣವನ್ನೂ ಸ್ವಚ್ಛವಾಗಿ ಕಾಪಾಡಬೇಕು. ನೆಟ್ಟ ಸಸಿಗಳನ್ನು ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದರೆ, ಅವು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹೆಚ್ಚಿನ ಪ್ರತಿಫಲ ನೀಡಲಿವೆ ಎಂದರು.
ಇದನ್ನೂ ಓದಿ : ನೈಸ್ ಹೋರಾಟ ಹತ್ತಿಕ್ಕುವ ಯತ್ನ? -ಹೋರಾಟಗಾರರನ್ನು ವಶಕ್ಕೆ ಪಡೆದ ಡಿಕೆಶಿ ಸರ್ಕಾರ
ಮಿಯಾವಾಕಿ ಕಾಡು ಮತ್ತು ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ವಿದ್ಯಾರ್ಥಿಗಳ ಪಡೆಯನ್ನು ರಚಿಸಿ, ನಿರಂತರ ಜಾಗೃತಿ ಮೂಡಿಸಬೇಕು ಎಂದು ಪುರುಷೋತ್ತಮ್ ಕರೆ ನೀಡಿದರು. ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ನಿರಂತರ ಚಟುವಟಿಕೆಯಾಗಬೇಕು ಎಂದು ಅವರು ಹೇಳಿದರು.
ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಕಾಲೇಜು ಆವರಣವು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ತಾಣವಾಗಿದೆ. ಆವರಣದಲ್ಲಿರುವ ಮರಗಿಡಗಳನ್ನು ಜತನದಿಂದ ಸಂರಕ್ಷಿಸಲಾಗುವುದು ಎಂದು ತಿಳಿಸಿದರು.
ಕಾಲೇಜಿನ ‘ಇಕೋ ಕ್ಲಬ್’ ಮೂಲಕ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರಿಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಕ್ರಿಯ ಪರಿಸರ ಪ್ರಜ್ಞೆ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕೃಷ್ಣ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ರೂಪ, ಹಸಿರುಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಜಾಂಬಿಕ, ಲೋಕೇಶ್, ವೇಣುಗೋಪಾಲ್, ಚಿನ್ನೇನಹಳ್ಳಿ ಸ್ವಾಮಿ, ಅಹಮದ್ ಹಗರೆ ಹಾಗೂ ಅಭಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಪರಿಸರ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್? ಮತದಾನದ ಹಕ್ಕಿಗೇ ಕತ್ತರಿ! | Janashakthi Media
