ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ ಆರೋಪ | ಸಚಿವ ರುದ್ರಪ್ಪ ಲಮಾಣಿಗೆ ₹3 ಕೋಟಿ ದಂಡ

ಹಾವೇರಿ: ಕಲ್ಲು ಕ್ವಾರಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಕ್ಕರೆ–ಜವಳಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ₹3 ಕೋಟಿ ದಂಡ ವಿಧಿಸಿದೆ.

ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸಮೀಪ ಸಚಿವ ರುದ್ರಪ್ಪ ಲಮಾಣಿ ಅವರ ಹೆಸರಿನಲ್ಲಿ ಕಲ್ಲು ಕ್ವಾರಿ ಇದೆ. ಈ ಕ್ವಾರಿಯಲ್ಲಿ ಪರವಾನಗಿಯಲ್ಲಿ ನಿಗದಿಪಡಿಸಿರುವ ವ್ಯಾಪ್ತಿಯನ್ನು ಮೀರಿ ಕಲ್ಲು ಗಣಿಗಾರಿಕೆ ನಡೆಸಿರುವುದು ಹಾಗೂ ಕ್ವಾರಿ ಸುತ್ತಮುತ್ತಲಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಿರುವ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

ಕ್ವಾರಿ ಪ್ರದೇಶಗಳಲ್ಲಿ ಪರವಾನಗಿ ಷರತ್ತುಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್ (KSRSAC) ಮೂಲಕ ಡ್ರೋನ್ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯ ಬಳಿಕ ಹಲವು ಕ್ವಾರಿಗಳಲ್ಲಿ ನಿಗದಿತ ವ್ಯಾಪ್ತಿಯನ್ನು ಮೀರಿ ಗಣಿಗಾರಿಕೆ ಸೇರಿದಂತೆ ಪರವಾನಗಿ ನಿಯಮಗಳ ಉಲ್ಲಂಘನೆ ಪತ್ತೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಆಧಾರದ ಮೇಲೆ ಹಾವೇರಿ ಜಿಲ್ಲೆಯ 60ಕ್ಕೂ ಹೆಚ್ಚು ಕ್ವಾರಿ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಅವರ ಪಟ್ಟಿಯಲ್ಲಿ ಲಮಾಣಿ ಅವರ ಕ್ವಾರಿಯೂ ಸೇರಿದೆ.

ಇದನ್ನೂ ಓದಿ : ಸಿನಿಮಾ ಟಿಕೆಟ್‌ಗೆ ಮತ್ತೊಂದು ಹೊರೆ | ಶೇ.2ರ ಸೆಸ್‌ ಮರುಪರಿಶೀಲನೆಗೆ ಮನವಿ

₹3 ಕೋಟಿ ದಂಡವನ್ನು ಪಾವತಿಸುವಂತೆ ಸಚಿವರಿಗೆ ಇಲಾಖೆ ನೋಟಿಸ್ ನೀಡಿದ್ದು, ಮೊತ್ತವನ್ನು ಪಾವತಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ದಂಡವನ್ನು ಮೂರು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಕ್ರಮದ ಕುರಿತು ಹಾವೇರಿ ಜಿಲ್ಲಾ ಕ್ರಷರ್ಸ್‌ ಮತ್ತು ಕ್ವಾರಿ ಓನರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಬೆಳವಡಿ ಪ್ರತಿಕ್ರಿಯಿಸಿದ್ದಾರೆ. ಕ್ವಾರಿ ಮಾಲೀಕರಿಗೆ ವಿಧಿಸಿರುವ ದಂಡದ ಕ್ರಮವನ್ನು ಅವರು ಪ್ರಶ್ನಿಸಿದ್ದು, ನಿಗದಿತ ವ್ಯಾಪ್ತಿಯನ್ನು ಮೀರಿ ಗಣಿಗಾರಿಕೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲೀಕರ ಪರವಾಗಿ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ದಂಡ ವಿಧಿಸಿರುವುದನ್ನು ವಿರೋಧಿಸಿ ಕ್ವಾರಿಗಳನ್ನು ಬಂದ್ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ, ಸಚಿವ ರುದ್ರಪ್ಪ ಲಮಾಣಿ ಅವರು ಈ ಕುರಿತು ಇದುವರೆಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ನೋಡಿ : “20 ವರ್ಷದಿಂದ ಓಟ್‌ ಹಾಕೀನಿ… ಈಗ ನೋಟೀಸ್‌ ಯಾಕೆ?” | SIR ಸಂತ್ರಸ್ತರ ಸಂಕಟಗಳು Janashakthi Media

Donate Janashakthi Media

Leave a Reply

Your email address will not be published. Required fields are marked *