ಕರಾವಳಿಯ ಅಭಿವೃದ್ಧಿಗೆ ಜನಪರ ನೀತಿ ಜಾರಿಗೆ ಆಗ್ರಹ; 21 ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಮಂಗಳೂರು: ಕರಾವಳಿ ಕರ್ನಾಟಕದ ಅಭಿವೃದ್ಧಿ ನೀತಿಯನ್ನು ಜನರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಬೇಕು ಹಾಗೂ ಕಾರ್ಪೊರೇಟ್ ಪರವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ನೀತಿಗಳಿಗೆ ಬದಲಾಗಿ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಸಿಪಿಎಂ ಶುಕ್ರವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಿಪಿಎಂ ಸಮಿತಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಳಿಕ ಸಚಿವ ಸಂಪುಟ ಸಭೆಗೆ ಆಗ್ರಹ ಪತ್ರ ಸಲ್ಲಿಸಲು ಪ್ರಜಾಸೌಧದತ್ತ ಹೊರಟ ಮೆರವಣಿಗೆಯನ್ನು ಬೆಂದೂರ್‌ವೆಲ್ ವೃತ್ತದ ಬಳಿ ಪೊಲೀಸರು ತಡೆದು, ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಮಂಗಳೂರಿನಲ್ಲಿ
ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಸಭೆಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲು ಸಿಪಿಎಂ ನಾಯಕರು ಮತ್ತು ಕಾರ್ಯಕರ್ತರು ಬೆಳಗ್ಗೆಯೇ ಪ್ರತಿಭಟನೆಗೆ ಸಜ್ಜಾಗಿದ್ದರು. ಮೊದಲು ಧರಣಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 21 ಬೇಡಿಕೆಗಳನ್ನು ಮುಂದಿಟ್ಟ ಸಿಪಿಎಂ, ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ವಸತಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿತು. ಮಂಗಳೂರಿನಲ್ಲಿ
ಇದನ್ನೂ ಓದಿ : ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗೆ ಈಶ್ವರ ಖಂಡ್ರೆ ಸಕಾರಾತ್ಮಕ ಸ್ಪಂದನೆ
ಧರಣಿಯನ್ನುದ್ದೇಶಿಸಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳುವ ನೀತಿಗಳು ಜನಸಾಮಾನ್ಯರ ಬದುಕು, ಉದ್ಯೋಗ ಮತ್ತು ಮೂಲಭೂತ ಅಗತ್ಯಗಳಿಗೆ ಪೂರಕವಾಗಿರಬೇಕು ಎಂಬ ಬೇಡಿಕೆಯನ್ನು ಪ್ರತಿಭಟನೆಯಲ್ಲಿ ಮುಂದಿಡಲಾಯಿತು.
ಧರಣಿಯ ಬಳಿಕ ಸಿಪಿಎಂ ನಾಯಕರು ಮತ್ತು ಕಾರ್ಯಕರ್ತರು ಸಚಿವ ಸಂಪುಟ ಸಭೆ ನಡೆಯುವ ಪ್ರಜಾಸೌಧದತ್ತ ಮೆರವಣಿಗೆ ಆರಂಭಿಸಿದರು. ಆದರೆ ಬೆಂದೂರ್‌ವೆಲ್ ವೃತ್ತದ ಸಮೀಪ ಪೊಲೀಸರು ಮೆರವಣಿಗೆಯನ್ನು ತಡೆದರು. ಈ ವೇಳೆ ಪೊಲೀಸರು ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು. ಪೊಲೀಸ್ ವಾಹನದಲ್ಲಿಯೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕರಾವಳಿ ಕರ್ನಾಟಕದ ಅಭಿವೃದ್ಧಿ ನೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು, ಜನರಿಗೆ ಅಗತ್ಯವಿರುವ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ವಸತಿ ಸೌಲಭ್ಯಗಳನ್ನು ಬಲಪಡಿಸಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಒತ್ತಾಯವಾಗಿತ್ತು. ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಸರ್ಕಾರದ ಗಮನಕ್ಕೆ 21 ಬೇಡಿಕೆಗಳನ್ನು ತರುವ ಉದ್ದೇಶದಿಂದ ಸಿಪಿಎಂ ಮೆರವಣಿಗೆ ನಡೆಸಿತ್ತು.
ಇದನ್ನೂ ನೋಡಿ : “20 ವರ್ಷದಿಂದ ಓಟ್ ಹಾಕೀನಿ… ಈಗ ನೋಟೀಸ್ ಯಾಕೆ?” | SIR ಸಂತ್ರಸ್ತರ ಸಂಕಟಗಳು Janashakthi Media
