ವಸಂತರಾಜ ಎನ್.ಕೆ
ಯೆಮೆನ್ ನ ‘ ‘ಹೂಥಿ’ ಮತ್ತು ಸೌದಿ ಅರೇಬಿಯ ನಡುವೆ ಹಲವು ವರ್ಷಗಳ ನಂತರ ಮತ್ತೆ ಭಾರೀ ಸಂಘರ್ಷ ನಡೆದಿದೆ. ಹೂಥಿ ಮೊದಲ ಬಾರಿ ಆಯಕಟ್ಟಿನ ಬಂದರು ಮೋಕಾ ಅಲ್ಲದೆ ಯೆಮೆನ್ ನ ಕೆಂಪು ಸಮುದ್ರದ ಇಡೀ ಕರಾವಳಿಯ ಮೇಲೆ ತನ್ನ ಹಿಡಿತ ಸಾಧಿಸುವ ಮೂಲಕ ಮೇಲುಗೈ ಪಡೆದಿದೆ. ಆ ಮೂಲಕ ಕೆಂಪು ಸಮುದ್ರದ ‘ಬಾಬ್ ಅಲ್-ಮಂಡೆಬ್’ ಜಲಸಂಧಿಯ ಮೇಲೆ ಪೂರ್ಣ ಹಿಡಿತ ಸಾಧಿಸಿದೆ. ಸೌದಿ ಅರೇಬಿಯದ ಮಿಲಿಟರಿ ನೆಲೆ ಮತ್ತು ತೈಲ ಸ್ಥಾವರಗಳ ಮೇಲೆ ದಾಳಿ ಮಾಡಿ ಭಾರೀ ಮೇಲುಗೈ ಸಾಧಿಸಿದೆ. ಯೆಮೆನ್ ನ ಕೆಲವು ಭಾಗಳಲ್ಲಿ ಹಿಡಿತವಿದ್ದ ಸೌದಿ ಅರೇಬಿಯ ಬೆಂಬಲಿತ ಜಾಗತಿಕ ಮಾನ್ಯತೆ ಪಡೆದ ಯೆಮೆನ್ ಸರಕಾರದ ಪಡೆಗಳ ಮೇಲೆ ತೀವ್ರ ದಾಳಿ ನಡೆಸಿ ಇಡೀ ಯೆಮೆನ್ ನ ಮೇಲೆ ಹಿಡಿತ ಸಾಧಿಸುವ ಹಾದಿಯಲ್ಲಿದೆ. ಹೂಥಿಯ ಜತೆ ಸಂಘರ್ಷದಲ್ಲಿ ಮಧ್ಯಪ್ರವೇಶ ಮಾಡಲು ಟ್ರಂಪ್ ನಿರಾಕರಿಸಿದ್ದು, ಸೌದಿ ಅರೇಬಿಯ ಮೊದಲ ಬಾರಿ ತನ್ನ ಅಸ್ತಿತ್ವಕ್ಕೆ ತೀವ್ರ ರಾಜಕೀಯ ಮಿಲಿಟರಿ ಸವಾಲು ಎದುರಿಸುತ್ತಿದೆ. ಶಾಂತಿಯೂ ಅಲ್ಲದ , ಯುದ್ಧವೂ ಅಲ್ಲದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿರುವ ಪಶ್ಚಿಮ ಏಶ್ಯಾದಲ್ಲಿ ಇದೊಂದು ಮಹತ್ವದ ತಿರುವು. ಹೊರ್ಮುಝ ಜತೆಗೆ ‘ಬಾಬ್ ಅಲ್-ಮಂಡೆಬ್’ ಜಲಸಂಧಿಯಲ್ಲೂ ಅಂತರರಾಷ್ಟ್ರೀಯ ಸರಕು ಸಾಗಾಣಿಕೆ ಸ್ಥಗಿತತೆಯ ಬೆದರಿಕೆ ಜಾಗತಿಕ ಆರ್ಥಿಕ ಸ್ಥಿತಿಯಲ್ಲಿ ಸಹ ಮಹತ್ವದ ತಿರುವು.
ಕಳೆದ ಒಂದು ವಾರದಲ್ಲಿ ಪಶ್ಚಿಮ ಏಶ್ಯಾದಲ್ಲಿ ಅಷ್ಟೇನೂ ಅನಿರೀಕ್ಷಿವಲ್ಲದ ಯು.ಎಸ್-ಇರಾನ್ ದಾಳಿ-ಪ್ರತಿದಾಳಿಗಳು ತೀವ್ರವಾದದ್ದು ಅಲ್ಲದೆ, ನಿಜವಾಗಿಯೂ ಅನಿರೀಕ್ಷಿತವಾದ ಒಂದು ಬೆಳವಣಿಗೆಯಾಯಿತು. ಯೆಮೆನ್ ನ ‘ಅನ್ಸಾರ್ ಅಲ್ಲಾ’ (‘ಪಾಶ್ಚಿಮಾತ್ಯ ಮಾಧ್ಯಮಗಳು ‘ಹೂಥಿ’ ಎಂದು ಕರೆಯುವ ‘ದೇವರ ಬೆಂಬಲಿಗರು’) ಮತ್ತು ಸೌದಿ ಅರೇಬಿಯ ನಡುವೆ ಹಲವು ವರ್ಷಗಳ ನಂತರ ಮತ್ತೆ ಭಾರೀ ಸಂಘರ್ಷ ನಡೆಯಿತು. ಇದಕ್ಕೆ ಕಾರಣವಾದದ್ದು ಕೆಲವು ಹೂಥಿ ನಾಯಕರು ಇರಾನ್ ಭೇಟಿಯ ನಂತರ ವಿಮಾನದಲ್ಲಿ ಹಿಂದಿರುಗುತ್ತಿರುವಾಗ, ಸೌದಿ ವಿಮಾನಪಡೆ ಯೆಮೆನ್ ರಾಜಧಾನಿ ಸಾನಾದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದು. ಎರಡು ದೇಶಗಳ ನಡುವೆ ಕದನವಿರಾಮವಿದ್ದರೂ, ಯೆಮೆನ್ ವಿರುದ್ಧ ಸೌದಿ ಅರೇಬಿಯ ವಾಯು ಮತ್ತು ಸಾಗರ ದಿಗ್ಬಂಧನವನ್ನು ಮುಂದುವರೆಸಿತ್ತು. ಇದಕ್ಕೆ ಉತ್ತರವಾಗಿ ‘ಅನ್ಸಾರ್ ಅಲ್ಲಾ’ ಸೌದಿ ಅರೇಬಿಯಾದ ಮಿಲಿಟರಿ ನೆಲೆಗಳ ಮತ್ತು ತೈಲ ಸ್ಥಾವರಗಳ ಮೇಲೆ ದಾಳಿ ನಡೆಸಿತು. ಸೌದಿ ಅರೇಬಿಯ 2-3 ದಿನಗಳಲ್ಲಿ ‘ಹೂಥಿ’ ನಿಯಂತ್ರಿತ ಪ್ರದೇಶಗಳ (ಮ್ಯಾಪ್ 1 ನೋಡಿ) ಮೇಲೆ 250ಕ್ಕೂ ಹೆಚ್ಚು ಬಾಂಬ್ ದಾಳಿಗಳನ್ನು ಮಾಡಿತು. ಕೆಂಪು ಸಮುದ್ರದ ‘ಬಾಬ್ ಅಲ್-ಮಂಡೆಬ್’ ಜಲಸಂಧಿಯಲ್ಲಿ ಸೌದಿ ಅರೇಬಿಯ, ಇಸ್ರೇಲ್ ಮತ್ತು ಸಹಚರರ ತೈಲ ಮತ್ತಿತರ ಸಾಗಾಣಿಕೆ ಹಡಗುಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧವನ್ನು ಉಲ್ಲಂಘಿಸುವ ಹಡಗುಗಳ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದೆ. ಹೀಗೆ ಹೊರ್ಮುಝ್ ಮತ್ತು ‘ಬಾಬ್ ಅಲ್-ಮಂಡೆಬ್’ ಜಲಸಂಧಿಯಲ್ಲಿ ತೈಲ ಮತ್ತಿತರ ಸಾಗಾಣಿಕೆಗೆ ತೊಡಕು ಉಂಟಾಗಿದೆ. ತೈಲ ಬೆಲೆ ಬ್ಯಾರೆಲ್ ಗೆ 100 ಡಾಲರು ಮೇಲೆ ಹೋಗುತ್ತಿದೆ. ಎರಡೂ ಜಲಸಂಧಿಗಳಲ್ಲೂ ಸೇರಿ ಜಾಗತಿಕ ತೈಲ ಮತ್ತಿತರ ಸಾಗಾಣಿಕೆಯ 40% ಕ್ಕೂ ಹೆಚ್ಚು ಭಾಗ ಅಪಾಯಕ್ಕೆ ಸಿಲುಕಿದ್ದು, ಇದು ಪಶ್ಚಿಮ ಏಶ್ಯಾ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಹೂಥಿ ಕೈಯಲ್ಲಿ ‘ಬಾಬ್ ಅಲ್-ಮಂಡೆಬ್’ ಜಲಸಂಧಿ
ರಾಜಧಾನಿ ಸಾನಾ ಸೇರಿದಂತೆ ಪಶ್ಚಿಮ ಯೆಮೆನ್ ಗುಡ್ಡಗಾಡುಗಳ ಸುತ್ತದ ಪ್ರದೇಶದಲ್ಲಿ ‘ಹೂಥಿ’ ಗೆರಿಲ್ಲಾ ಪಡೆಗಳು ನಿಯಂತ್ರಣ ಹೊಂದಿದ್ದವು. ಉಳಿದ ಪ್ರದೇಶದಲ್ಲಿ ಸೌದಿ ಬೆಂಬಲಿತ ಪಡೆಗಳು ನಿಯಂತ್ರಣ ಹೊಂದಿದ್ದು ಆಡಳಿತ ನಡೆಸುತ್ತಿವೆ. ಈ ಸರಕಾರದ ನಾಯಕತ್ವದ ಬಹುಭಾಗ ಸೌದಿ ರಾಜಧಾನಿ ರಿಯಾದ್ ನಲ್ಲಿದ್ದರೂ, ಇದಕ್ಕೆ ಯೆಮೆನ್ ಸರಕಾರವಾಗಿ ಅಂತರರಾಷ್ಟ್ರೀಯ ಮಾನ್ಯತೆಯಿದೆ. ದಕ್ಷಿಣ ಭಾಗದಲ್ಲಿ ಅದರಲ್ಲೂ ಕೆಂಪು ಸಮುದ್ರದ ‘ಬಾಬ್ ಅಲ್-ಮಂಡೆಬ್’ ಜಲಸಂಧಿಯ ಸುತ್ತದ ಹಾಗೂ ಮಹತ್ವದ ಬಂದರುಗಳಾದ ಏಡೆನ್ ಸೇರಿದಂತೆ ದಕ್ಷಿಣದ ಕರಾವಳಿ ಪ್ರದೇಶವು ‘ದಕ್ಷಿಣ ಸಂಕ್ರಮಣ ಮಂಡಳಿ’ (ಸದರ್ನ್ ಟ್ರಾನ್ಸಿಶನ್ ಕೌನ್ಲಿಲ್) ನಿಯಂತ್ರಣದಲ್ಲಿತ್ತು. ಇದಕ್ಕೆ ಯು.ಎ.ಇ ರಾಜಕೀಯ/ಮಿಲಿಟರಿ ಬೆಂಬಲವಿದ್ದು, ಅದಕ್ಕೂ ಯೆಮೆನ್ ನ ‘ಅಧಿಕೃತ’ ಸರಕಾರದ ಪಡೆಗಳಿಗೂ ಸಂಘರ್ಷ ನಡೆಯುತ್ತಿತ್ತು. ಅಲ್ಲಿ ಸೌದಿ ಮತ್ತು ಯು.ಎ.ಇ ಪ್ರಾಕ್ಸಿ ಯುದ್ಧದಲ್ಲಿ ತೊಡಗಿದ್ದು ಸೌದಿ ಒತ್ತಡದ ಮೇಲೆ ಹಿಂದೆ ಸರಿದಿತ್ತು.

ಸೌದಿ ಬಾಂಬ್ ದಾಳಿಗಳಿಗೆ ಪ್ರತಿಯಾಗಿ ‘ಹೂಥಿ’ ಗೆರಿಲ್ಲಾಗಳು ಸೌದಿ ಬೆಂಬಲಿತ ಯೆಮೆನ್ ಪ್ರದೇಶಗಳ ಮೇಲೆ ದಾಳಿ ಮಾಡಿದರು. ಮಿಂಚಿನ ವೇಗದ ದಾಳಿಯಲ್ಲಿ ‘ಅಧಿಕೃತ’ ಯೆಮೆನ್ ಪಡೆಗಳನ್ನು ಹೊರಗಟ್ಟಿ, ಆಯಕಟ್ಟಿನ ಮೊಕಾ ಬಂದರು, ‘ಬಾಬ್ ಅಲ್-ಮಂಡೆಬ್’ ಜಲಸಂಧಿಯ ಸುತ್ತಲಿನ ದ್ವೀಪಗಳು, ಕೆಂಪು ಸಮುದ್ರದ ಇಡೀ ಕರಾವಳಿಯನ್ನು ವಶ ಪಡಿಸಿಕೊಂಡರು. ‘ಅಧಿಕೃತ’ ಯೆಮೆನ್ ಪಡೆಗಳು ಹಲವು ಕಡೆ ಯು.ಎಸ್ ಟ್ಯಾಂಕುಗಳು, ಸಶಸ್ತ್ರ ವಾಹನಗಳು, ಮದ್ದುಗುಂಡುಗಳು, ಇತರ ಉಪಕರಣಗಳನ್ನು ಬಿಟ್ಟು ಓಡಿ ಹೋಗಿವೆ. ‘ಸೌದಿ ಅರೇಬಿಯದ ಹಲವು ಯು.ಎಸ್ ಪೂರೈಕೆಯ ಎಫ್-15 ಮುಂತಾದ ಫೈಟರ್ ವಿಮಾನಗಳನ್ನು ಉರುಳಿಸಿವೆ. ಹೂಥಿ’ ಗೆರಿಲ್ಲಾ ಪಡೆಗಳು ಅಧಿಕೃತ ಪಡೆಗಳನ್ನು ಬೆಂಬತ್ತಿವೆ. ಸೌದಿ ಸರಕಾರ ಎಷ್ಟು ಗಾಬರಿಗೊಂಡಿದೆ ಅಂದರೆ, ಅದರ ಮುಖ್ಯಸ್ಥ ರಾಜಕುಮಾರ ಅಧ್ಯಕ್ಷ ಟ್ರಂಪ್ ಗೆ ಮೊದಲ ದಿನವೇ ಎರಡು ಬಾರಿ ಫೋನ್ ಮಾಡಿದರು. ಅಧ್ಯಕ್ಷ ಟ್ರಂಪ್ ಯೆಮೆನ್ ನಲ್ಲಿ ಮಿಲಿಟರಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದರು ಎಂದು ವರದಿಯಾಗಿದೆ. ಅದರ ಯುರೋ ಕೂಟ ಮತ್ತು ಅರಬ್ ಸಹಚರರು ಸಹ ಮಿಲಿಟರಿ ಬೆಂಬಲಕ್ಕೆ ಉತ್ಸಾಹ ತೋರಿಸಿಲ್ಲ. ಇತ್ತೀಚೆಗೆ ಜಂಟಿ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ ತುರ್ಕಿ ಮತ್ತು ಪಾಕಿಸ್ತಾನ ಸಹ, ಒಪ್ಪಂದ ‘ರಕ್ಷಣಾತ್ಮಕ’, ‘ಆಕ್ರಾಮಕ’ ಅಲ್ಲವೆಂದು ನೆರವಿಗೆ ಬರಲಾಗದ್ದಕ್ಕೆ ನೆಪ ಹೇಳುತ್ತಿವೆಯೆಂದು ವರದಿಯಾಗಿದೆ.
ಇದನ್ನೂ ಓದಿ : ಮೋದಿ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳನ್ನೂ ಬಳಕೆ? | ವಿದ್ಯಾರ್ಥಿ, ಶಿಕ್ಷಕರಿಗೆ ಕಾರ್ಯಕ್ರಮದ ಸೂಚನೆ
ಸೌದಿ ಅಸ್ತಿತ್ವಕ್ಕೆ ಸವಾಲು ಹಾಕಿರುವ ಹೂಥಿ ಯಾರು?
ಸೌದಿ ನೆಲೆಗಳು ಈ ವರ್ಷದ ಇರಾನ್ ವಿರುದ್ಧದ ಯು.ಎಸ್ ಯುದ್ಧದಲ್ಲಿ ಗರಿಷ್ಟ ಇರಾನಿ ಕ್ಷಿಪಣಿ ದಾಳಿ ಎದುರಿಸಿತ್ತು. ಹಾಗಾಗಿ ಆಗಲೇ ಸೌದಿ ಬಳಿ ಇರುವ ಕ್ಷಿಪಣಿ-ನಿರೋಧಕ ಕ್ಷಿಪಣಿಗಳ ಬಹುಪಾಲು ಖರ್ಚಾಗಿತ್ತು. ಈಗಿನ ಹೂಥಿ ಕ್ಷಿಪಣಿ ದಾಳಿ ಹೀಗೆ ಮುಂದುವರೆದರೆ ಕ್ಷಿಪಣಿ-ನಿರೋಧಕ ಕ್ಷಿಪಣಿಗಳ ಕೊರತೆಯಿಂದಲೇ ಸೌದಿ ಸೋಲಬಹುದು. ಈಗಿನ ಪರಿಸ್ಥಿತಿ ಮುಂದುವರೆದರೆ ಇಡೀ ಯೆಮೆನ್ ನ್ನು ಹೂಥಿ’ ಗೆರಿಲ್ಲಾ ಪಡೆಗಳು ಕೆಲವೇ ದಿನಗಳಲ್ಲಿ ವಶಪಡಿಸಿಕೊಳ್ಳಬಹುದು. ಅವರು ಸೌದಿ ಬೆಂಬಲಿತ ಮತ್ತು ಸೌದಿ ಪಡೆಗಳನ್ನು ಹಿಮ್ಮೆಟ್ಟಿಸುತ್ತಾ ಸೌದಿ ಅರೇಬಿಯದ ದಕ್ಷಿಣದ ಭಾಗಗಳನ್ನೂ ಆಕ್ರಮಿಸಿಕೊಳ್ಳಬಹುದು ಎಂಬ ಪರಿಸ್ಥಿತಿಯಿದೆ. ಸೌದಿ ಅರೇಬಿಯದ ರಾಜಪ್ರಭುತ್ವಕ್ಕೆ ಭಾರೀ ಜನಬೆಂಬಲವಿಲ್ಲ. ಅದರ ಯು.ಎಸ್-ಸಾಮ್ರಾಜ್ಯಶಾಹಿ ಪರ ಧೋರಣೆಗಳಿಗೆ ವ್ಯಾಪಕ ವಿರೋಧವಿದೆ. ದೇಶದ ಭದ್ರತೆಯನ್ನು ಯು.ಎಸ್ ಗೆ ಗುತ್ತಿಗೆ ಕೊಟ್ಟಿರುವುದರಿಂದ ಸೌದಿ ದಾಳಿಗೆ ಒಳಗಾಗಬೇಕಿದೆ ಎಂಬ ಭಾವನೆಯೂ ಇದೆ. ಹಾಗಾಗಿ ಹೂಥಿ ಪಡೆಗಳು ಸೌದಿ ಅರೇಬಿಯದ ಪಡೆಗಳನ್ನು ಸೋಲಿಸುತ್ತ ಹೋದರೆ ಆಂತರಿಕ ದಂಗೆಯಾಗಿ ಅಲ್ಲಿ ರಾಜಪ್ರಭುತ್ವಕ್ಕೆ ಅಪಾಯ ಬರಬಹುದು ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ.
ಯೆಮೆನ್ ಪರಿಸ್ಥಿತಿ ಬಗ್ಗೆ ಮಾತಾಡುವಾಗ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು. ಪಾಶ್ಚಿಮಾತ್ರ ಮಾಧ್ಯಮಗಳು ಹೇಳುವಂತೆ ‘ಹೂಥಿ’ ಇರಾನ್ ಹುಟ್ಟಿ ಹಾಕಿದ ಪ್ರಾಕ್ಸಿ ಗೆರಿಲ್ಲಾ ಗುಂಪು ಅಲ್ಲ. ಇದು 1990ರಲ್ಲಿ ಹುಟ್ಟಿಕೊಂಡ ಒಂದು ರಾಜಕೀಯ ಚಳುವಳಿ. ಅದರ ನಿಜವಾದ ಹೆಸರು ‘ಅನ್ಸಾರ್ ಅಲ್ಲಾ’ (ದೇವರ ಬೆಂಬಲಿಗರು) ಅಂತ. ಹೂಥಿ ಅದರ ಸ್ಥಾಪಕನ ಹೆಸರು. ಯೆಮೆನ್ ನ ಪಶ್ಚಿಮ ಭಾಗದಲ್ಲಿ ಪರ್ವತ ಪ್ರದೇಶಗಳ ಸುತ್ತಮುತ್ತ ಸಾವಿರ ವರ್ಷಕ್ಕಿಂತ ಹೆಚ್ಚಿನ ಕಾಲ ಝಾಯ್ದಿ ಇಸ್ಲಾಮಿಕ್ ಪಂಥ ಪ್ರಬಲವಾಗಿದೆ. ಇದು ಶಿಯಾ ಪಂಥದ ಒಂದು ಕವಲು. ಸೌದಿ ಮತ್ತು ಸೌದಿ ಬೆಂಬಲಿತ ಶಕ್ತಿಗಳು ವಹಾಬಿ ಸುನ್ನಿ ಪಂಥವನ್ನು ಇಡೀ ಯೆಮೆನ್ ಮೇಲೆ ಹೇರಲು ಮಾಡಿದ ಪ್ರಯತ್ನದ ವಿರುದ್ಧ ‘ಹುಸೆನ್ ಬದ್ರುದ್ದೀನ್ ಅಲ್-ಹೂಥಿ ಎಂಬುವನ ನಾಯಕತ್ವದಲ್ಲಿ ಆರಂಭವಾದ ಚಳುವಳಿ. ಇದು ಸ್ಪಷ್ಟ ಯು.ಎಸ್-ವಿರೋಧಿ ಇಸ್ರೇಲ್-ವಿರೋಧಿ ರಾಜಕೀಯ ಧೋರಣೆಗಳನ್ನು ಹೊಂದಿದ್ದು ಗಂಭೀರ ರಾಜಕೀಯ ಆಯಾಮವನ್ನೂ ಹೊಂದಿತ್ತು. ಇದರ ಸ್ಥಾಪಕ ಹಿಂದೆ ಯೆಮೆನ್ ಸಂಸದನಾಗಿದ್ದು ಹಿಂದಿನ ಯೆಮೆನಿಯನ್ನು ಮೂರು ದಶಕಗಳೀಗೂ ಹೆಚ್ಚು ಕಾಲ ಆಳಿದ ಸಲೆಹ್ ಸರ್ವಾಧಿಕಾರದ ವಿರುದ್ಧವೂ ಸ್ಪಷ್ಟ ರಾಜಕೀಯ ಧೋರಣೆ ಹೊಂದಿತ್ತು. ಪಾಶ್ಚಿಮಾತ್ಯ ಮಾಧ್ಯಮಗಳು ಅದರ ಧಾರ್ಮಿಕ ಆಯಾಮ, ಅದರ ಪ್ರಭಾವಿ ನಾಯಕ ಮತ್ತು ವ್ಯಕ್ತಿಯನ್ನು ವೈಭವೀಕರಿಸಿ, ಅದರ ಸಾಮ್ರಾಜ್ಯಶಾಹಿ-ವಿರೋಧಿ ಝಿಯೊನಿಸ್-ವಿರೋಧಿ ರಾಜಕೀಯವನ್ನು ಮರೆಮಾಚಲು ‘ಹೂಥಿ’ ಎಂದು ನಾಮಕರಣ ಮಾಡಿದೆ. ಇರಾನ್ ಅದಕ್ಕೆ ಬೆಂಬಲ ನೀಡಿತು ಎಂಬುದು ನಿಜ. ಆದರೆ ಹೂಥಿ ಇರಾನಿನ ಪ್ರಾಕ್ಸಿ ಅಲ್ಲ.

ಹಿಂದಿನ ಸೌದಿ ದಾಳಿ, ಯೆಮೆನ್ ನ ಮಾನವೀಯ ಸಂಕಟ
2011ರಲ್ಲಿ ಆರಂಭವಾದ ‘ಅರಬ್ ವಸಂತ’ದಲ್ಲಿ ಅರಬ್ ದೇಶಗಳಲ್ಲಿ ಆರಂಭವಾದ ರಾಜಕೀಯ ಅಲ್ಲೋಲ ಕಲ್ಲೋಲ ಸೌದಿ ಅರೆಬಿಯ ಬೆಂಬಲಿತ ಸರ್ವಾಧಿಕಾರವನ್ನು ಸಹ ಅಲುಗಾಡಿಸಿತು. ಪರಿಣಾಮವಾಗಿ ಸೌದಿಯ ಪ್ರಾಕ್ಸಿ ಆಗಲೂ ನಿರಾಕರಿಸಿದ ಹೂಥಿ ಇಡೀ ಯೆಮೆನ್ ನ ಸರಕಾರ ನಡೆಸುವ ಹತ್ತಿರಕ್ಕೆ ಬಂತು. ಆಗ 2015ರಲ್ಲಿ ಸೌದಿ ಅರೇಬಿಯ ಯು.ಎಸ್, ಯು.ಕೆ ಮತ್ತು ಸ್ತಳೀಯ ಅರಬ್ ಆಳರಸರ ಏಳು ದೇಶಗಳ ಕೂಟ ಮಿಲಿಟರಿ ದಾಳಿ ನಡೆಸಿತು. 8 ವರ್ಷಗಳ ದಾಳಿಯ ನಂತರವೂ ಹೂಥಿ ಯ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಯೆಮೆನ್ ಜನಸಂಖ್ಯೆಯ ಮುಕ್ಕಾಲು ಭಾಗ ವಾಸವಾಗಿದ್ದಾರೆ. ಅವರ ವಶದಲ್ಲಿದ್ದ ಅದರ ಪಶ್ಚಿಮದ ಮೂಲ ಪ್ರದೇಶ ಬಿಟ್ಟು ಉಳಿದ ಪ್ರದೇಶಗಳಲ್ಲಿ ಮಾತ್ರ ಸೌದಿ ಬೆಂಬಲಿತ ಸರಕಾರದ ನಿಯಂತ್ರಣವಿದೆ. ಅಲ್ಲೂ ಸೌದಿ ಮತ್ತು ಯು.ಎ.ಇ ಬೆಂಬಲಿತ ಬಣಗಳು ಆಗಾಗ ಕಾದುತ್ತಿವೆ. ಯೆಮೆನ್ ಮೇಲೆ 8 ವರ್ಷಗಳ ಸತತ ಸೌದಿ ದಾಳಿ ಮತ್ತ ಆಂತರಿಕ ಸಂಘರ್ಷ ಹಾಗೂ ಅದು ಕೆಡವಿದ ಕೃಷಿ ಇತ್ಯಾದಿ ಆರ್ಥಿಕ ಚಟುವಟಿಕೆಗಳಿಂದಾಗಿ 2021ರವರೆಗಿನ ಅವಧಿಯಲ್ಲಿ 3.77 ಲಕ್ಷ ಜನ ಸತ್ತರು. ಇದರಲ್ಲಿ 40% ಮಾತ್ರ ನೇರ ದಾಳಿಗ ಸಿಲುಕಿ ಸತ್ತವರು. ಉಳಿದ 60% ಜನ ಆಹಾರದ ಅಭಾವ ಮತ್ತು ರೋಗರುಜಿನಗಳಿಂದ ಸತ್ತರು. ಈಗಲೂ 1.7 ಕೋಟಿ ಜನ (ಜನಸಂಖ್ಯೆಯ ಸುಮಾರು 40%) ಆಹಾರದ ಅಭಾವದಿಂದ ನರಳುತಿದ್ದಾರೆ. 10 ಲಕ್ಷ ಜನ ಕಾಲರಾದಿಂದ ಪೀಡಿತರಾಗಿದ್ದಾರೆ.
ಸೌದಿ ನಾಯಕತ್ವದ ಕೂಟ 8 ವರ್ಷಗಳ ಬರ್ಬರ ದಾಳಿಯಿಂದ ಯೆಮೆನ್ ಜನತೆ ಇಂತಹ ಸಂಕಷ್ಟದ ಪರಿಸ್ಥಿತಿ ಜಾಗತಿಕ ಗಮನ ಸೆಳೆದಿರಲಿಲ್ಲ. ಆದರೆ ಅಕ್ಟೋಬರ್ 2023ರಲ್ಲಿ ಇಸ್ರೇಲ್ ಗಾಜಾದ ನರಮೇಧ ಶುರು ಮಾಡಿದಾಗ ಹೂಥಿಯ ಪ್ರತಿಕ್ರಿಯೆ ಜಾಗತಿಕ ಗಮನ ಸೆಳೆಯಿತು. ಹೂಥಿಯ ಪಡೆಗಳು ಇಸ್ರೇಲ್ ಮತ್ತು ಅದರ (ಯು.ಎಸ್, ಸೇರಿದಂತೆ) ಸಹಚರರ ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಮೇಲೆ ದಾಳಿ ಮಾಡಿದ್ದು, ಒಂದು ಹಡಗನ್ನು ವಶಪಡಿಸಿಕೊಂಡದ್ದು ಜಾಗತಿಕ ಸುದ್ದಿಯಾಯಿತು. ಇಸ್ರೇಲ್ ನ ಸೇನಾ ನೆಲೆಗಳ ಮೇಲೂ ಹೂಥಿಗಳು ದಾಳಿ ಮಾಡಿದರು. ಇದರಿಂದಾಗಿ ಇಸ್ರೇಲ್ ಮತ್ತು ಅದರ ಸಹಚರರ ಸಾಗಾಣಿಕೆ ಹಡಗುಗಳು ಆಫ್ರಿಕಾ ಸುತ್ತಿ ಬಳಸಿ ಹೋಗಬೇಕಾಯಿತು. ಆಗ ಯು.ಎಸ್ ಯೆಮೆನ್ ಮೇಲೆ ಭಾರೀ ವಿಮಾನ ದಾಳಿ ನಡೆಸಿತು. ಆದರೆ ಹೂಥಿ ತಮ್ಮ ಪ್ರತಿಕ್ರಿಯೆ ಮುಂದುವರೆಸಿದಾಗ ಯು.ಎಸ್ ಹಿಂದೆ ಸರಿಯಬೇಕಾಯಿತು. ಗಾಜಾದಲ್ಲಿ ಯುದ್ಧವಿರಾಮದ ನಂತರ ಹೂಥಿ ಸಹ ತನ್ನ ಪ್ರತಿಕ್ರಿಯೆ ನಿಲ್ಲಿಸಿತು.

ಯೆಮೆನ್ ನ ಸಂಕೀರ್ಣ ರಾಜಕೀಯ ಚರಿತ್ರೆ
ಅದರ ನಂತರ ಕಳೆದ ವಾರ ಸೌದಿ-ಯೆಮೆನ್ ಸಂಘರ್ಷ ಮತ್ತೆ ಆರಂಭವಾಗಿದೆ. ಯೆಮೆನ್ ಬಹಳ ಸಂಕೀರ್ಣವಾದ ರಾಜಕೀಯ ಚರಿತ್ರೆ ಹೊಂದಿದೆ. ಹಿಂದೆ ರೋಮ್ ಗೆ ಅಗರಬತ್ತಿ ಮತ್ತು ಕಾಫಿಯನ್ನು ಜಾಗತಿಕ ಸರಕು ಮಾಡಿದ್ದ ಯೆಮೆನ್. ಅರೇಬಿಯದ ನಾಗರಿಕತೆ, ಸಂಸ್ಕೃತಿ ಗಳ ತೊಟ್ಟಿಲು ಯೆಮೆನ್ ಎಂದು ಹೇಳಲಾಗುತ್ತದೆ. ಅರೇಬಿಯದಲ್ಲಿ ಕೃಷಿಯೋಗ್ಯ ಜಮೀನು ಮತ್ತು ನೀರು ಇರುವುದು ಇಲ್ಲಿ ಮಾತ್ರ. ಯೆಮೆನ್ ನ ಏಡನ್ ಬಂದರು ಪಶ್ಚಿಮ-ಪೂರ್ವಕ್ಕೆ ಸೇತುವೆಯಾದ ಪ್ರಮುಖ ಬಂದರು. ಹಾಗಾಗಿಯೇ ಚರಿತ್ರೆಯಲ್ಲಿ ದೊಡ್ಡ ಸಾಮ್ರಾಜ್ಯಗಳು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿವೆ. 20ನೇ ಶತಮಾನದಲ್ಲಿ ಬ್ರಿಟಿಶ್ ಮತ್ತು ಒಟ್ಟೊಮಾನ ಸಾಮ್ರಾಜ್ಯಶಾಹಿಗಳು ಯೆಮೆನ್ ನ್ನು ಉತ್ತರ ಮತ್ತು ದಕ್ಷಿಣ ಯೆಮೆನ್ (ಆದರೆ ಮ್ಯಾಪ್ 2 ನೋಡಿದರೆ ಪಶ್ಚಿಮ ಮತ್ತೂ ಪೂರ್ವದ ಥರ ಕಾಣುತ್ತದೆ) ಆಗಿ ಹಂಚಿಕೊಂಡು ಇಂದಿನ ಆಂತರಿಕ ಸಂಘರ್ಷದ ಬೀಜ ಬಿತ್ತಿದರು. ರಾಜಪ್ರಭುತ್ವಗಳು ಪ್ರಧಾನವಾಗಿದ್ದ ಅರಬ್ ದೇಶಗಳಲ್ಲಿ 1950-60ರ ದಶಕದಲ್ಲೇ, ಸೋಶಲಿಸ್ಟ್ ಮತ್ತು ಈಜಿಪ್ಟ್ ಬಿಟ್ಟರೆ ನಾಸೆರ್ ವಾದಿ ರಿಪಬ್ಲಿಕನ್ ಕ್ರಾಂತಿ/ಸರಕಾರ ಕಂಡ ದೇಶ ಯೆಮೆನ್. 1990ರ ದಶಕದಲ್ಲಿ ಮಾತ್ರ ಏಕೀಕೃತ ಯೆಮೆನ್ ಆಗಿದ್ದು ಬಿಟ್ಟರೆ, ಸೌದಿ ಮತ್ತಿತರ ರಾಜಪ್ರಭುತ್ವಗಳು, ಒಟ್ಟೊಮನ್ ನಿಂದ ಯು.ಎಸ್ ವರೆಗಿನ ಸಾಮ್ರಾಜ್ಯಶಾಹಿಗಳು ಯೆಮೆನ್ ತನ್ನ ಭವಿಷ್ಯ ರೂಪಿಸಲು ಬಿಟ್ಟದ್ದಿಲ್ಲ. ಅದಕ್ಕೆ ಕಾರಣ ಕೆಂಪು ಸಮುದ್ರದ ‘ಬಾಬ್ ಅಲ್-ಮಂಡೆಬ್’ ಜಲಸಂಧಿ ಯೆಮೆನ್ ನ ಕೂಗಳತೆಯಲ್ಲಿರುವುದು. ಈ ಬಾರಿ ಯೆಮೆನ್ ಅದನ್ನೇ ಬಳಸಿ ಸೌದಿ ಮತ್ತಿತರ ರಾಜಪ್ರಭುತ್ವಗಳ ಮತ್ತು ಸಾಮ್ರಾಜ್ಯಶಾಹಿಗಳಿಗೆ ಸವಾಲು ಎಸೆದಿದೆ.
ಇರಾನ್-ಯು.ಎಸ್ ಯುದ್ಧದಲ್ಲಿ ಹೊಸ ತಿರುವು
ಈ ನಡುವೆ ಇರಾನ್ ಮತ್ತು ಯು.ಎಸ್ ಸಹ ದಾಳಿ-ಪ್ರತಿದಾಳಿಗಳ ಸರಣಿ ಆರಂಭವಾಗಿದೆ. ಯು.ಎಸ್ ಇರಾನಿ ತೈಲ ಸಾಗಾಣಿಕೆ ಹಡಗುಗಳ ಮೇಲೆ ದಾಳಿಗೆ ಪ್ರತಿಯಾಗಿ ಇರಾನ್, ಯು.ಎಸ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ. ಜೋರ್ಡಾನ್ ನಲ್ಲಿನ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಹಲವು ಫೈಟರ್ ವಿಮಾನಗಳನ್ನು ನಾಶ ಮಾಡಿದೆ. ಬಳಸಲು ಸಾಧ್ಯವಾಗದಷ್ಟು ವ್ಯಾಪಕ ಮೂಲ ಸೌಕರ್ಯದ ನಾಶ ಕಂಡಿರುವ ಬಹ್ರೇನ್, ಕಟಾರ್, ಕುವೈಟ್ ನ ನೆಲೆಗಳಲ್ಲಿದ್ದ ವಿಮಾನ ಮತ್ತಿತರ ಉಪಕರಣಗಳನ್ನು ಜೋರ್ಡಾನ್ ಗೆ ಇತ್ತೀಚೆಗೆ ಯು.ಎಸ್ ಸಾಗಿಸಿತ್ತು. ಶಾಂಘಾಯ್ ಸಂಘಟನೆ ಮತ್ತು ಬ್ರಿಕ್ಸ್ ಶೃಂಗಸಭೆಯಲ್ಲಿ ಪರೋಕ್ಷವಾದರೂ ಯು.ಎಸ್ ದಾಳಿಯ ಮತ್ತು ನೀತಿಗಳ ಖಂಡನೆಯಾಗಿದ್ದು ಇರಾನಿಗೆ ರಾಜಕೀಯ ಬಲ ತುಂಬಿದೆ. ಈ ನಡುವೆ ಒಮನ್ ಜತೆ ಹೊರ್ಮುಝ್ ಜಲಸಂಧಿಯಲ್ಲಿ ಹಡಗು ಸಾಗಾಣಿಕೆ ನಿಯಂತ್ರಣದ ವಿಧಿ-ವಿಧಾನಗಳನ್ನು ಇರಾನ್ ಅಂತಿಮಗೊಳಿಸಿದೆ. ಶಾಂತಿ ಮಾತುಕತೆ ಆರಂಭಿಸಲು ಇರಾನ್ ಹಾಕಿದ್ದ ಶರತ್ತುಗಳನ್ನು ಯು.ಎಸ್ ಮೊದಲು ಪೂರೈಸಬೇಕು. ಹೋರ್ಮುಝ್ ನಲ್ಲಿ ಇರಾನಿನ ಮೇಲೆ ದಿಗ್ಬಂಧನ ಮುಂದುವರೆಸಿದರೆ ತಮ್ಮ ಭಧ್ರತಾ ಧೋರಣೆಯನ್ನು ಬದಲಿಸುವುದಾಗಿ ಸಹ ಇರಾನ್ ಬೆದರಿಕೆ ಹಾಕಿದೆ. ಇಷ್ಟರವರೆಗೆ ದಾಳಿಯ ಪ್ರಮಾಣದಷ್ಟೇ ಪ್ರತಿದಾಳಿಯ ‘ರಕ್ಷಣಾತ್ಮಕ’ ಧೋರಣೆಯ ಬದಲು, ಅಗತ್ಯವೆನಿಸಿದಾಗ ಮೊದಲ ದಾಳಿ ನಡೆಸುವ ಮತ್ತು ಪ್ರಮಾಣದ ಮಿತಿ ತೆಗೆದು ಹಾಕುವ ‘ಆಕ್ರಾಮಕ’ ಧೋರಣೆ ಅಂಗೀಕರಿಸುವುದಾಗಿಯೂ ಹೇಳಿದೆ.
ಸೌದಿ ಅರೇಬಿಯಕ್ಕೆ ಅವಮಾನಕಾರಿ ಹಿನ್ನಡೆ, ಎರಡೂ ಜಲಸಂಧಿಯಲ್ಲಿ ಸಾಗಾಣಿಕೆಗೆ ನಿರ್ಬಂಧ ಜಾಗತಿಕ ಮತ್ತು ಯು.ಎಸ್ ಆರ್ಥಿಕಕ್ಕೆ ತೀವ್ರ ಹೊಡೆತ ನೀಡಲಿದೆ. ನವೆಂಬರ್ ಮಧ್ಯಂತರ ಚುನಾವಣೆಗಳ ಮೊದಲು ತಾತ್ಕಾಲಿಕವಾಗಿಯಾದರೂ, ಅಣು ಒಪ್ಪಂದದಲ್ಲೋ ಹೊರ್ಮುಝ್ ಜಲಸಂಧಿ ತೆರೆಯುವಲ್ಲೋ, ‘ನಾನು ಗೆದ್ದೆ’ ಅಂತ ನಾಟಕವಾಡುವ ಅವಕಾಶಕ್ಕೆ ಟ್ರಂಪ್ ಇನ್ನೂ ಪ್ರಯತ್ನಿಸುತ್ತಿದ್ದಾರೆ. ಆದರೆ ಅಂತಹ ಅವಕಾಶವನ್ನು ಇರಾನ್ ಕೊಡುತ್ತಿಲ್ಲ. ಮಾತ್ರವಲ್ಲ, ಜಾಗತಿಕ ತೈಲ/ಆರ್ಥಿಕ ಸಂಕಟವನ್ನು ಹದಗೆಡಿಸಿ, ಟ್ರಂಪ್ ನವೆಂಬರ್ ಮಧ್ಯಂತರ ಚುನಾವಣೆಗಳ ಸೋಲುವಂತೆ ಮಾಡುವುದು ಇರಾನ್ ವ್ಯೂಹವಿದ್ದಂತೆ ಕಾಣುತ್ತಿದೆ. ಟ್ರಂಪ್ ಜನಪ್ರಿಯತೆಯ ಅಂಕ 35-40% ಕ್ಕೆ ಇಳಿದಿದ್ದು, ಇನ್ನಷ್ಟು ಇಳಿಮುಖವಾಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಮಿಲಿಟರಿ ಸಂಘರ್ಷವನ್ನು ತೀವ್ರಗೊಳಿಸುವಲ್ಲೂ ಟ್ರಂಪ್ ಅವರಿಗೆ ಭಾರೀ ಸವಾಲುಗಳಿವೆ.
*********************
ಇದನ್ನೂ ನೋಡಿ : ಹೈ.ಕ. ವಿಲೀನ ದಿನ | ಜಗತ್ತಿಗೆ ಭತ್ತ, ತೊಗರಿ, ಚಿನ್ನ ಕೊಟ್ಟ ಪ್ರದೇಶಕ್ಕೆ ಸಿಕ್ಕಿದ್ದು ಕಹಿಯೇ? Janashakthi Media
