₹1.30 ಲಕ್ಷ ಅಡ್ವಾನ್ಸ್‌; ಬಾಡಿಗೆ ಮನೆ ಖಾಲಿ ಮಾಡಿದವನಿಗೆ ಸಿಕ್ಕಿದ್ದು ಕೇವಲ ₹19 ಸಾವಿರ!

ಬೆಂಗಳೂರು: ಬಾಡಿಗೆ ಮನೆ ಖಾಲಿ ಮಾಡುವಾಗ ಅಡ್ವಾನ್ಸ್ ಹಣ ವಾಪಸ್ ಪಡೆಯುವುದು ಕೆಲವೊಮ್ಮೆ ಬಾಡಿಗೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಬೆಂಗಳೂರಿನಲ್ಲಿ ನಡೆದಿರುವ ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಬಾಡಿಗೆದಾರನೊಬ್ಬ ನೀಡಿದ್ದ ₹1.30 ಲಕ್ಷ ಅಡ್ವಾನ್ಸ್‌ನಲ್ಲಿ ಮನೆ ಮಾಲೀಕ ಬರೋಬ್ಬರಿ ₹1.11 ಲಕ್ಷವನ್ನು ವಿವಿಧ ಶುಲ್ಕಗಳ ಹೆಸರಿನಲ್ಲಿ ಕಡಿತಗೊಳಿಸಿದ್ದು, ಕೊನೆಗೆ ಕೇವಲ ₹19 ಸಾವಿರವನ್ನು ಮಾತ್ರ ಹಿಂದಿರುಗಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಿಡದಿ ಸಮೀಪದ 3 ಬೆಡ್‌ರೂಂ ಮನೆಯಲ್ಲಿ ಕುಟುಂಬದೊಂದಿಗೆ ಸುಮಾರು ಎರಡು ವರ್ಷ ವಾಸವಿದ್ದ ಬಾಡಿಗೆದಾರ ಈ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮನೆ ಖಾಲಿ ಮಾಡುವ ಮೂರು ತಿಂಗಳ ಮುನ್ನವೇ ಮಾಲೀಕರಿಗೆ ಮಾಹಿತಿ ನೀಡಲಾಗಿತ್ತು. ನಿಗದಿತ ಅವಧಿಯ ಬಳಿಕ ಮನೆ ಖಾಲಿ ಮಾಡಿದ ಸಂದರ್ಭದಲ್ಲಿ, ತಾನು ನೀಡಿದ್ದ ₹1.30 ಲಕ್ಷ ಅಡ್ವಾನ್ಸ್‌ ಹಣವನ್ನು ವಾಪಸ್ ನೀಡುವಂತೆ ಮಾಲೀಕರಿಗೆ ಮನವಿ ಮಾಡಿದ್ದರು.

ಆದರೆ ಅಡ್ವಾನ್ಸ್‌ನಿಂದ ಹಲವು ಬಗೆಯ ವೆಚ್ಚಗಳನ್ನು ಕಡಿತಗೊಳಿಸಲಾಗಿದೆ ಎಂದು ಮಾಲೀಕರು ತಿಳಿಸಿದ್ದು, ಬಾಡಿಗೆದಾರನಿಗೆ ಮರಳಿಸಿದ್ದು ಕೇವಲ ₹19 ಸಾವಿರ. ಪೈಂಟಿಂಗ್ ವೆಚ್ಚ, ಮನೆ ನಿರ್ವಹಣೆ, ಫ್ಲೋರ್ ಕ್ಲೀನಿಂಗ್ ಹಾಗೂ ಮನೆಯ ಕೆಲವು ವಸ್ತುಗಳನ್ನು ಬದಲಾಯಿಸುವ ವೆಚ್ಚ ಸೇರಿದಂತೆ ಹಲವು ಕಾರಣಗಳನ್ನು ನೀಡಿ ₹1.11 ಲಕ್ಷ ಕಡಿತ ಮಾಡಲಾಗಿದೆ ಎಂದು ಬಾಡಿಗೆದಾರ ತಿಳಿಸಿದ್ದಾರೆ.

ಇದನ್ನೂ ಓದಿ :ಟ್ಯಾಕ್ಸಿ ಮೀಟರ್ ಕಡ್ಡಾಯಕ್ಕೆ ತಡೆ ಕೋರಿದ ಟ್ರಾವೆಲ್‌ ಆಪರೇಟರ್‌ಗಳು: ನಿಯಮಗಳ ಸ್ಪಷ್ಟತೆಗೆ ಆಗ್ರಹ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಡಿಗೆದಾರ, ಪೈಂಟಿಂಗ್ ಮತ್ತು ಇತರ ವೆಚ್ಚಗಳಿದ್ದರೂ ಇಷ್ಟೊಂದು ದೊಡ್ಡ ಮೊತ್ತವನ್ನು ಕಡಿತಗೊಳಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕೊನೆಯ ತಿಂಗಳ ₹16 ಸಾವಿರ ಬಾಡಿಗೆಯನ್ನೂ ಒಳಗೊಂಡಂತೆ ಸುಮಾರು ₹40 ಸಾವಿರದಷ್ಟು ಮೊತ್ತವನ್ನು ಕಡಿತಗೊಳಿಸಿ, ಉಳಿದ ಅಡ್ವಾನ್ಸ್ ಹಣವನ್ನು ನೀಡುವಂತೆ ಮನವಿ ಮಾಡಿದ್ದರೂ ಮಾಲೀಕರು ಒಪ್ಪಲಿಲ್ಲ ಎನ್ನಲಾಗಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ, ಬಾಡಿಗೆ ಕರಾರು ಪತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿರ್ವಹಣೆ ಅಥವಾ ಪೈಂಟಿಂಗ್ ವೆಚ್ಚವನ್ನು ಬಾಡಿಗೆದಾರನೇ ಭರಿಸಬೇಕು ಎಂಬ ಸ್ಪಷ್ಟ ಉಲ್ಲೇಖವಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ, ಮಾಲೀಕರು ಮಾಡಿದ ಕಡಿತ ಕಾನೂನುಬದ್ಧವೇ ಅಥವಾ ಒಪ್ಪಂದದ ನಿಯಮಗಳಿಗೆ ಅನುಗುಣವೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.

ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮನೆ ಬಾಡಿಗೆ ಪಡೆಯುವಾಗ ದೊಡ್ಡ ಮೊತ್ತದ ಭದ್ರತಾ ಠೇವಣಿ ಅಥವಾ ಅಡ್ವಾನ್ಸ್ ನೀಡುವುದು ಸಾಮಾನ್ಯ. ಆದರೆ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಯಾವ ವೆಚ್ಚಗಳನ್ನು ಮಾಲೀಕರು ಕಡಿತಗೊಳಿಸಬಹುದು, ಮನೆ ಸಾಮಾನ್ಯ ಬಳಕೆಯಿಂದ ಉಂಟಾಗುವ ಸವೆತಕ್ಕೆ ಯಾರು ಹೊಣೆ, ಪೈಂಟಿಂಗ್ ಮತ್ತು ನಿರ್ವಹಣೆಯ ಜವಾಬ್ದಾರಿ ಯಾರದ್ದು ಎಂಬುದನ್ನು ಬಾಡಿಗೆ ಒಪ್ಪಂದದಲ್ಲೇ ಸ್ಪಷ್ಟವಾಗಿ ನಮೂದಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಚರ್ಚೆಗೆ ತಂದಿದೆ.

ಇದನ್ನೂ ನೋಡಿ : ಜಿಡಿಪಿ ಬೆಳವಣಿಗೆ ಎಂದರೆ ಅಸಮಾನತೆ, ನಿರುದ್ಯೋಗದ ಬೆಳವಣಿಗೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *