ಧೂಳು ಮುಕ್ತ ರಸ್ತೆಗೆ ಕರೋಲ್‌ಬಾಗ್ ಮಾದರಿ: ದೆಹಲಿಯಲ್ಲಿ ಹೊಸ ಸ್ವಚ್ಛತಾ ಪ್ರಯೋಗ

ನವದೆಹಲಿ: ರಸ್ತೆಗಳ ಮೇಲೆ ಸಂಗ್ರಹವಾಗುವ ಧೂಳು, ಕಸ ಮತ್ತು ನಿರ್ಮಾಣ ತ್ಯಾಜ್ಯವನ್ನು ನಿಯಮಿತವಾಗಿ ತೆರವುಗೊಳಿಸುವ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ (MCD) ಕರೋಲ್‌ಬಾಗ್ ವಲಯದಲ್ಲಿ ಹೊಸ ಮಾದರಿಯ ಸ್ವಚ್ಛತಾ ವ್ಯವಸ್ಥೆಯನ್ನು ರೂಪಿಸಿದೆ. ಸಾಮಾನ್ಯವಾಗಿ ರಸ್ತೆ ಗುಡಿಸುವುದಕ್ಕೆ ಸೀಮಿತವಾಗುವ ಸ್ವಚ್ಛತಾ ಕಾರ್ಯವನ್ನು ರಸ್ತೆಯ ಬದಿಗಳು, ಮಧ್ಯದ ವಿಭಜಕಗಳು, ಚರಂಡಿ ಬದಿಗಳು ಹಾಗೂ ಹಲವು ದಿನಗಳಿಂದ ಸಂಗ್ರಹವಾಗಿರುವ ‘ಲೆಗಸಿ ಡಸ್ಟ್‌’ ತೆರವುಗೊಳಿಸುವ ಸಮಗ್ರ ಕಾರ್ಯಾಚರಣೆಯಾಗಿ ರೂಪಿಸಲಾಗಿದೆ. ಈ ಕ್ರಮವು ರಸ್ತೆ ಧೂಳಿನಿಂದ ಉಂಟಾಗುವ PM10 ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧೂಳು

ಕರೋಲ್‌ಬಾಗ್ ವಲಯದ ಈ ‘Dust Free Roads’ ಅಭಿಯಾನದಲ್ಲಿ ಯಾಂತ್ರಿಕ ರಸ್ತೆ ಗುಡಿಸುವ ಯಂತ್ರಗಳು, ನೀರು ಸಿಂಪಡಿಸುವ ವಾಹನಗಳು ಹಾಗೂ ಜೆಟ್ಟಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಹಲವು ದಿನಗಳಿಂದ ಜಮೆಯಾಗಿರುವ ಧೂಳು ಮತ್ತು ಕಸವನ್ನು ಮೊದಲು ಸಂಗ್ರಹಿಸಿ ತೆರವುಗೊಳಿಸಲಾಗುತ್ತದೆ. ನಂತರ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ನೀರಿನಿಂದ ತೊಳೆಯುವ ಮೂಲಕ ಉಳಿದಿರುವ ಧೂಳನ್ನೂ ಕಡಿಮೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಇದರಿಂದ ಕೇವಲ ರಸ್ತೆಯ ಸ್ವಚ್ಛತೆ ಮಾತ್ರವಲ್ಲದೆ, ವಾಹನಗಳ ಸಂಚಾರದಿಂದ ಧೂಳು ಮತ್ತೆ ಗಾಳಿಗೆ ಸೇರುವ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬುದು MCDಯ ಉದ್ದೇಶವಾಗಿದೆ.

ಕರೋಲ್‌ಬಾಗ್ ವಲಯದಲ್ಲಿ ನಡೆದ ಅಭಿಯಾನದಲ್ಲಿ ಪ್ರಮುಖ ರಸ್ತೆಗಳನ್ನೂ ಒಳಗೊಂಡಂತೆ ದೊಡ್ಡ ಪ್ರಮಾಣದ ರಸ್ತೆ ಪ್ರದೇಶವನ್ನು ಹಂತ ಹಂತವಾಗಿ ಸ್ವಚ್ಛಗೊಳಿಸಲಾಗಿದೆ. ಮೇ ತಿಂಗಳಲ್ಲಿ ಆರಂಭವಾದ 15 ದಿನಗಳ ಅಭಿಯಾನದ ವೇಳೆ ಸುಮಾರು 15.2 ಕಿಲೋಮೀಟರ್ ರಸ್ತೆಗಳನ್ನು ಸ್ವಚ್ಛಗೊಳಿಸಿ, 20.8 ಮೆಟ್ರಿಕ್ ಟನ್‌ಗಳಷ್ಟು ಧೂಳು ಹಾಗೂ 9.2 ಮೆಟ್ರಿಕ್ ಟನ್‌ಗಳಷ್ಟು ಕಸವನ್ನು ತೆರವುಗೊಳಿಸಲಾಗಿತ್ತು ಎಂದು MCD ಅಧಿಕಾರಿಗಳು ತಿಳಿಸಿದ್ದರು.

ಈ ಪ್ರಯತ್ನವನ್ನು ಒಂದು ಬಾರಿ ನಡೆಸಿ ನಿಲ್ಲಿಸುವ ಬದಲು ನಿರಂತರ ಮೇಲ್ವಿಚಾರಣೆ ಮತ್ತು ಅಂಕಿ-ಅಂಶಗಳ ಆಧಾರದ ಮೇಲೆ ಮುಂದುವರಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಕರೋಲ್‌ಬಾಗ್ ವಲಯದ ಅಧಿಕಾರಿಗಳ ಪ್ರಗತಿ ವರದಿಗಳ ಪ್ರಕಾರ, ಅಭಿಯಾನದ ವಿವಿಧ ಹಂತಗಳಲ್ಲಿ ರಸ್ತೆ ಸ್ವಚ್ಛತೆ, ಲೆಗಸಿ ಧೂಳು ತೆರವು ಹಾಗೂ ರಸ್ತೆ ಮಧ್ಯದ ವಿಭಜಕಗಳಿಂದ ಕಸ ಮತ್ತು ನಿರ್ಮಾಣ ತ್ಯಾಜ್ಯ ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಧೂಳು

ಇದನ್ನೂ ಓದಿ : ರಾಜಸ್ಥಾನ | ನೋಖಾದಲ್ಲಿ ಸಿಪಿಐ(ಎಂ)ಗೆ ಭರ್ಜರಿ ಗೆಲುವು: ಪರ್ಯಾಯ ರಾಜಕೀಯಕ್ಕೆ ಜಾಗ!

ಈ ಮಾದರಿಯ ಮತ್ತೊಂದು ವಿಶೇಷತೆ ಎಂದರೆ, ಕೇವಲ ರಸ್ತೆಯ ಮೇಲಿನ ಕಸವನ್ನು ತೆಗೆದುಹಾಕುವುದಕ್ಕೆ ಬದಲಾಗಿ ಧೂಳು ಹೇಗೆ ಸಂಗ್ರಹವಾಗುತ್ತದೆ, ಅದು ಮತ್ತೆ ರಸ್ತೆಗೆ ಹೇಗೆ ಬರುತ್ತದೆ ಮತ್ತು ಅದನ್ನು ನಿರಂತರವಾಗಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು. ರಸ್ತೆ ಬದಿಗಳು, ಸೆಂಟ್ರಲ್‌ ವರ್ಜ್‌ಗಳು, ಸೈಡ್‌ ಚಾನೆಲ್‌ಗಳು ಮತ್ತು ಹಸಿರು ಪ್ರದೇಶಗಳಲ್ಲಿ ಸಂಗ್ರಹವಾಗಿರುವ ಧೂಳು ಹಾಗೂ ತ್ಯಾಜ್ಯವನ್ನು ಒಟ್ಟಾಗಿ ತೆರವುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕರೋಲ್‌ಬಾಗ್ ವಲಯದ ಈ ಪ್ರಯೋಗಕ್ಕೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ವಲಯದ ಉಪ ಆಯುಕ್ತರು ತಿಳಿಸಿದ್ದಾರೆ. ರಸ್ತೆ ಧೂಳು PM10 ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ, ಧೂಳು ನಿಯಂತ್ರಣವನ್ನು ನಗರ ಸ್ವಚ್ಛತಾ ವ್ಯವಸ್ಥೆಯ ಭಾಗವಾಗಿಯೇ ಪರಿಗಣಿಸುವ ಅಗತ್ಯವನ್ನು ಈ ಮಾದರಿ ಮುಂದಿಟ್ಟಿದೆ.

ದೆಹಲಿಯ ಇತರ ವಲಯಗಳಲ್ಲಿಯೂ MCD ಧೂಳು ನಿಯಂತ್ರಣ ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸುತ್ತಿದೆ. ಯಾಂತ್ರಿಕ ರಸ್ತೆ ಗುಡಿಸುವಿಕೆ, ನೀರು ಸಿಂಪಡಣೆ, ಜೆಟ್ಟಿಂಗ್ ಯಂತ್ರಗಳ ಬಳಕೆ ಮತ್ತು ಹೆಚ್ಚಿನ ಸಂಖ್ಯೆಯ ಸ್ವಚ್ಛತಾ ಸಿಬ್ಬಂದಿಯ ನಿಯೋಜನೆ ಮೂಲಕ ರಸ್ತೆಗಳ ಧೂಳು ಮತ್ತು ತ್ಯಾಜ್ಯವನ್ನು ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ. ಧೂಳು

ಇದನ್ನೂ ನೋಡಿ : “ಆಪರೇಷನ್‌ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *