ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ನೋಂದಣಿಯಾಗುವ ಹಾಗೂ ಈಗಾಗಲೇ ಸಂಚಾರದಲ್ಲಿರುವ ಟ್ಯಾಕ್ಸಿ ಮತ್ತು ಮೋಟಾರ್ ಕ್ಯಾಬ್‌ಗಳಿಗೆ ದರ ಮೀಟರ್ ಕಡ್ಡಾಯಗೊಳಿಸಿರುವ ಸಾರಿಗೆ ಇಲಾಖೆಯ ಆದೇಶಕ್ಕೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (KSTOA) ಆಕ್ಷೇಪ ವ್ಯಕ್ತಪಡಿಸಿದೆ. ಆಗಸ್ಟ್ 28ರಂದು ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಯಾವ ರೀತಿಯ ವಾಹನಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಂಘಟನೆ ಸಾರಿಗೆ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ. ಟ್ಯಾಕ್ಸಿ
ಸಾರಿಗೆ ಇಲಾಖೆಯ ಸುತ್ತೋಲೆಯಲ್ಲಿ ‘ಎಲ್ಲಾ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಮತ್ತು ಇತರ ಮೋಟಾರ್ ಕ್ಯಾಬ್’ಗಳಿಗೆ ಮೀಟರ್ ಕಡ್ಡಾಯ ಎಂಬ ಉಲ್ಲೇಖವಿರುವುದರಿಂದ ಗೊಂದಲ ಉಂಟಾಗಿದೆ ಎಂದು KSTOA ಹೇಳಿದೆ. ಸಾಮಾನ್ಯ ಸಿಟಿ ಟ್ಯಾಕ್ಸಿಗಳು, ಅಗ್ರಿಗೇಟರ್‌ಗಳ ಮೂಲಕ ಕಾರ್ಯನಿರ್ವಹಿಸುವ ವಾಹನಗಳು, ಐಷಾರಾಮಿ ಹಾಗೂ ಪ್ರವಾಸಿ ಟ್ಯಾಕ್ಸಿಗಳು ಮತ್ತು ಕಚೇರಿ ಅಥವಾ ನೋಂದಾಯಿತ ಗ್ಯಾರೇಜ್‌ಗಳಿಂದ ಮುಂಗಡ ಬುಕ್ಕಿಂಗ್ ಆಧಾರದಲ್ಲಿ ಕಾರ್ಯನಿರ್ವಹಿಸುವ ವಾಹನಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಬಾರದು ಎಂದು ಸಂಘಟನೆ ಒತ್ತಾಯಿಸಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರ ನಿಯಮ 108 ಮತ್ತು 129 ಅನ್ನು ಒಟ್ಟಿಗೆ ಓದಬೇಕು ಎಂಬುದು ಸಂಘಟನೆಯ ಪ್ರಮುಖ ವಾದವಾಗಿದೆ. ನಿಯಮ 129ರಲ್ಲಿ ಯಾಂತ್ರಿಕ ಅಥವಾ ಎಲೆಕ್ಟ್ರಾನಿಕ್ ದರ ಮೀಟರ್‌ಗಳ ತಾಂತ್ರಿಕ ಮಾನದಂಡ ಹಾಗೂ ಅನುಮೋದನೆಗೆ ಸಂಬಂಧಿಸಿದ ಅಂಶಗಳಿದ್ದರೆ, ನಿಯಮ 108ರ ಪ್ರಕಾರ ನಿರ್ದಿಷ್ಟ ಪ್ರದೇಶಗಳಲ್ಲಿ ಅಥವಾ ನಿರ್ದಿಷ್ಟ ವರ್ಗದ ಮೋಟಾರ್ ಕ್ಯಾಬ್‌ಗಳಿಗೆ ಮೀಟರ್ ಅಳವಡಿಸುವಂತೆ ರಾಜ್ಯ ಸಾರಿಗೆ ಪ್ರಾಧಿಕಾರವು ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗುತ್ತದೆ ಎಂದು KSTOA ತಿಳಿಸಿದೆ. ಟ್ಯಾಕ್ಸಿ
ಇದನ್ನೂ ಓದಿ : ಕರ್ನಾಟಕದಲ್ಲಿ 38,960 ಜಲಮೂಲಗಳ ಗಣತಿ ಪೂರ್ಣ; ನೀರು ಸಂರಕ್ಷಣೆಗೆ ಬಳಸಲು ಸರ್ಕಾರಕ್ಕೆ ಮಹತ್ವದ ಮಾಹಿತಿ
ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಪ್ರಯಾಣಿಕರನ್ನು ನೇರವಾಗಿ ಹತ್ತಿಸಿಕೊಂಡು, ದೂರ ಅಥವಾ ಸಮಯದ ಆಧಾರದ ಮೇಲೆ ದರ ವಿಧಿಸುವ ಸಿಟಿ ಟ್ಯಾಕ್ಸಿಗಳಿಗೆ ಮೀಟರ್ ನಿಯಮ ಅನ್ವಯಿಸುವ ಸಾಧ್ಯತೆಯಿದೆ. ಆದರೆ ನೋಂದಾಯಿತ ಕಚೇರಿ, ಅನುಮೋದಿತ ಗ್ಯಾರೇಜ್ ಅಥವಾ ಶೆಡ್‌ನಿಂದ ಕಾರ್ಯನಿರ್ವಹಿಸಿ, ಮುಂಗಡ ಬುಕ್ಕಿಂಗ್ ಅಥವಾ ಒಪ್ಪಂದದ ಆಧಾರದ ಮೇಲೆ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ ವಿಷಯದಲ್ಲಿ ನಿಯಮಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಸಂಘಟನೆ ವಾದಿಸಿದೆ. ಅಗ್ರಿಗೇಟರ್ ವಾಹನಗಳಿಗೆ 2016ರ ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ ನಿಯಮಗಳ ಅಡಿಯಲ್ಲಿ GPS/GPRS ಸೇರಿದಂತೆ ಪ್ರತ್ಯೇಕ ನಿಯಮಗಳಿರುವುದನ್ನೂ ಅದು ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಿಟಿ ಟ್ಯಾಕ್ಸಿ, ಸಾರ್ವಜನಿಕ ನಿಲ್ದಾಣದ ಟ್ಯಾಕ್ಸಿ, ಅಗ್ರಿಗೇಟರ್ ವಾಹನ, ಐಷಾರಾಮಿ ಹಾಗೂ ಪ್ರವಾಸಿ ಕ್ಯಾಬ್ ಮತ್ತು ಕಚೇರಿ ಆಧಾರಿತ ವಾಹನಗಳನ್ನು ಪ್ರತ್ಯೇಕ ವರ್ಗಗಳಾಗಿ ಗುರುತಿಸಬೇಕು ಎಂದು KSTOA ಆಗ್ರಹಿಸಿದೆ. ಯಾವ ಪ್ರದೇಶದಲ್ಲಿ, ಯಾವ ವರ್ಗದ ವಾಹನಗಳಿಗೆ ಮೀಟರ್ ಕಡ್ಡಾಯ ಎಂಬುದನ್ನು ಒಳಗೊಂಡಿರುವ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದೆ.
ಇದರ ಜೊತೆಗೆ ದರಗಳ ಮೇಲ್ವಿಚಾರಣೆಗೆ ಡಿಜಿಟಲ್ ವ್ಯವಸ್ಥೆ ರೂಪಿಸಬೇಕು ಹಾಗೂ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ನಿಯಮಗಳ ಅನುಷ್ಠಾನಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ಸಂಘಟನೆ ಸಲಹೆ ನೀಡಿದೆ.
ಈ ಹಿಂದೆ ರಾಜ್ಯ ಸಾರಿಗೆ ಇಲಾಖೆ ಅಗ್ರಿಗೇಟರ್‌ಗಳ ಮೂಲಕ ಸಂಚರಿಸುವ ಕ್ಯಾಬ್‌ಗಳೂ ಸೇರಿದಂತೆ ಟ್ಯಾಕ್ಸಿಗಳು ಸರ್ಕಾರ ನಿಗದಿಪಡಿಸಿರುವ ದರಕ್ಕೆ ಅನುಗುಣವಾಗಿ ದರ ವಸೂಲಿ ಮಾಡಬೇಕು ಎಂದು ಸೂಚಿಸಿತ್ತು. ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮೀಟರ್ ಕಡ್ಡಾಯದ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇದೀಗ ಮೀಟರ್ ಕಡ್ಡಾಯ ಮಾಡುವುದಕ್ಕಿಂತ ಮೊದಲು ಯಾವ ವಾಹನಗಳಿಗೆ ನಿಯಮ ಅನ್ವಯಿಸುತ್ತದೆ, ಮೀಟರ್ ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ವಿಭಿನ್ನ ಪರವಾನಗಿ ಹಾಗೂ ಸೇವಾ ಮಾದರಿಗಳಿಗೆ ಯಾವ ನಿಯಮ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
ಇದನ್ನೂ ನೋಡಿ : “ಆಪರೇಷನ್ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media
