ಗುರುರಾಜ ದೇಸಾಯಿ
ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಬಿಜೆಪಿ ರಾಜ್ಯಾದ್ಯಂತ ಒಟ್ಟಾರೆ ಮುನ್ನಡೆ ಸಾಧಿಸಿದೆ. ಆದರೆ ಪ್ರಮುಖ ನಗರಗಳು ಹಾಗೂ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗಮನಾರ್ಹ ಗೆಲುವು ದಾಖಲಿಸಿರುವುದರ ಜೊತೆಗೆ, ಆಮ್ ಆದ್ಮಿ ಪಕ್ಷ ಮತ್ತು ಸಿಪಿಐ(ಎಂ) ಕೂಡ ತಮ್ಮ ಪ್ರಭಾವವನ್ನು ವಿಸ್ತರಿಸಿವೆ. ವಿಶೇಷವಾಗಿ ಬಿಕಾನೇರ್ ಜಿಲ್ಲೆಯ ನೋಖಾ ನಗರಸಭೆಯಲ್ಲಿ ಸಿಪಿಐ(ಎಂ) 45 ವಾರ್ಡ್ಗಳ ಪೈಕಿ 29 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 13 ಸ್ಥಾನಗಳನ್ನು ಗೆದ್ದರೆ, ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಇಲ್ಲಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.
ನೋಖಾದ ಫಲಿತಾಂಶ ರಾಜಸ್ಥಾನದ ಸ್ಥಳೀಯ ರಾಜಕಾರಣದಲ್ಲಿ ವಿಶೇಷ ಗಮನ ಸೆಳೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಾಂಪ್ರದಾಯಿಕ ರಾಜಕೀಯ ಸ್ಪರ್ಧೆಯ ನಡುವೆ ಸಿಪಿಐ(ಎಂ) ಸ್ಪಷ್ಟ ಬಹುಮತ ಪಡೆಯುವ ಮೂಲಕ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದೆ. ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆಸಿದ ನಿರಂತರ ಹೋರಾಟಗಳು ಹಾಗೂ ಗ್ರಾಮೀಣ–ನಗರ ಪ್ರದೇಶಗಳಲ್ಲಿನ ಪಕ್ಷದ ಸಂಘಟನಾ ನೆಲೆ ಈ ಗೆಲುವಿಗೆ ಪ್ರಮುಖ ಕಾರಣವಾಗಿವೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗುತ್ತಿವೆ.
ಇದೇ ವೇಳೆ ಬಾರನ್ ನಗರಸಭೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 60 ವಾರ್ಡ್ಗಳ ಪೈಕಿ ಎಎಪಿ 31 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್ 18 ಸ್ಥಾನಗಳಿಗೆ ತೃಪ್ತಿಪಟ್ಟರೆ, ಬಿಜೆಪಿ 9 ಸ್ಥಾನಗಳನ್ನು ಗೆದ್ದಿದೆ. ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ಸೀಮಿತ ಚುನಾವಣಾ ಅಸ್ತಿತ್ವ ಹೊಂದಿರುವ ಎಎಪಿಗೆ ಬಾರನ್ ಫಲಿತಾಂಶ ಸ್ಥಳೀಯ ರಾಜಕಾರಣದಲ್ಲಿ ಮಹತ್ವದ ಮುನ್ನಡೆ ನೀಡಿದೆ.
ಭರತ್ಪುರದಲ್ಲಿ ಪಕ್ಷೇತರರು ಮತ್ತು ಇತರ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಒಟ್ಟು 65 ವಾರ್ಡ್ಗಳ ಪೈಕಿ 38 ಸ್ಥಾನಗಳು ಪಕ್ಷೇತರರು ಮತ್ತು ಇತರ ಅಭ್ಯರ್ಥಿಗಳ ಪಾಲಾಗಿವೆ. ಬಿಜೆಪಿ 20 ಹಾಗೂ ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಪಡೆದಿದೆ. ಇದು ದೊಡ್ಡ ಪಕ್ಷಗಳ ಹೊರತಾಗಿಯೂ ಸ್ಥಳೀಯ ಅಭ್ಯರ್ಥಿಗಳ ಪ್ರಭಾವವನ್ನು ತೋರಿಸಿದೆ.
ರಾಜ್ಯದ ಒಟ್ಟಾರೆ ಫಲಿತಾಂಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಲಭ್ಯವಿರುವ ರಾಜ್ಯಮಟ್ಟದ ಫಲಿತಾಂಶದ ಪ್ರಕಾರ, 9886 ವಾರ್ಡ್ಗಳ ಫಲಿತಾಂಶ ಪ್ರಕಟವಾಗಿದ್ದ ಹಂತದಲ್ಲಿ ಬಿಜೆಪಿ 4022, ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 3493 ಸ್ಥಾನಗಳನ್ನು, ಸಿಪಿಐ(ಎಂ) 38 ಸ್ಥಾನಗಳನ್ನು, ಎಎಪಿ 37 ಸ್ಥಾನಗಳನ್ನು ಪಡೆದಿದ್ದರೆ, ಪಕ್ಷೇತರರು ಹಾಗೂ ಇತರರು 2296 ಸ್ಥಾನಗಳನ್ನು ಗೆದ್ದಿದ್ದರು. ರಾಜ್ಯದ 309 ನಗರ ಸ್ಥಳೀಯ ಸಂಸ್ಥೆಗಳ 10,244 ವಾರ್ಡ್ಗಳಿಗೆ ಚುನಾವಣೆ ನಡೆದಿತ್ತು.

ಇದನ್ನೂ ಓದಿ : ಆರು ವರ್ಷಗಳ ಜೈಲು: ಉಮರ್ ಖಾಲಿದ್ ಪ್ರಕರಣ ಎತ್ತುವ ಪ್ರಶ್ನೆಗಳು
ನೋಖಾದಲ್ಲಿ ಸಿಪಿಐ(ಎಂ) ಬೆಳವಣಿಗೆಯ ಹಿಂದಿನ ಕಾರಣಗಳೇನು?
2021ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯೊಂದಿಗೆ ಹೋಲಿಸಿದರೆ ಈ ಬೆಳವಣಿಗೆ ಗಮನಾರ್ಹ. ಆಗ ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಪಿಐ(ಎಂ)ಗೆ ಸೀಮಿತ ಪ್ರಾತಿನಿಧ್ಯವಿತ್ತು. ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈಗ 38ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ನೋಖಾ ನಗರಸಭೆಯಲ್ಲಿ 29 ಸ್ಥಾನಗಳನ್ನು ಗೆಲ್ಲುವ ಮಟ್ಟಕ್ಕೆ ಪಕ್ಷದ ಪ್ರಭಾವ ಹೆಚ್ಚಿರುವುದು, ಆ ಪ್ರದೇಶದಲ್ಲಿ ಸಿಪಿಐ(ಎಂ) ತನ್ನ ಸಂಘಟನಾ ನೆಲೆಯನ್ನು ವಿಸ್ತರಿಸಿಕೊಂಡಿರುವುದನ್ನು ಸೂಚಿಸುತ್ತದೆ.
ನೋಖಾದಲ್ಲಿ ಎಡಪಕ್ಷದ ರಾಜಕೀಯ ನೆಲೆ ಹೊಸದಲ್ಲ. ಬಿಕಾನೇರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎಡಪಕ್ಷಗಳು ದೀರ್ಘಕಾಲದಿಂದ ಸಂಘಟನೆ ಮತ್ತು ಹೋರಾಟ ನಡೆಸುತ್ತಿವೆ. ನಗರಸಭೆ ಚುನಾವಣೆ ಕೇವಲ ನಗರಾಭಿವೃದ್ಧಿ ಅಥವಾ ವಾರ್ಡ್ಮಟ್ಟದ ಚುನಾವಣೆಯಾದರೂ, ಅಭ್ಯರ್ಥಿಗಳ ವೈಯಕ್ತಿಕ ಸಂಪರ್ಕ, ಸ್ಥಳೀಯ ಸಂಘಟನೆ ಮತ್ತು ಜನರೊಂದಿಗೆ ನಿರಂತರ ಸಂಪರ್ಕ ಇಂತಹ ಚುನಾವಣೆಗಳಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಸಿಪಿಐ(ಎಂ)ನ ಸ್ವಂತ ಸಂಘಟನಾ ಶಕ್ತಿಯೂ ಈ ಫಲಿತಾಂಶದಲ್ಲಿ ಕೆಲಸ ಮಾಡಿರುವ ಸಾಧ್ಯತೆಯಿದೆ. ಸ್ಥಳೀಯ ಚುನಾವಣೆಯಲ್ಲಿ ಅಭ್ಯರ್ಥಿಯ ಜನಸಂಪರ್ಕ, ವಾರ್ಡ್ನ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮತ್ತು ಸಂಘಟನೆಯ ವಿಶ್ವಾಸಾರ್ಹತೆ ಹೆಚ್ಚು ಪರಿಣಾಮ ಬೀರಿದೆ.
ಈ ಚುನಾವಣೆಯಲ್ಲಿ ಸಿಪಿಐ(ಎಂ) ಕೇವಲ ಕೆಲವು ಆಯ್ದ ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ ಪಕ್ಷವಾಗಿರಲಿಲ್ಲ. ನೋಖಾದ 45 ವಾರ್ಡ್ಗಳಲ್ಲೂ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಇದು ಪಕ್ಷವು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನಗರಸಭೆಯ ವಿವಿಧ ವಾರ್ಡ್ಗಳಲ್ಲಿ ಸಂಘಟನಾ ಜಾಲವನ್ನು ವಿಸ್ತರಿಸಲು ಪ್ರಯತ್ನಿಸಿರುವುದನ್ನು ತೋರಿಸುತ್ತದೆ.
ನೋಖಾದಲ್ಲಿ ರೈತ ಮತ್ತು ಗ್ರಾಮೀಣ ಆರ್ಥಿಕತೆಯ ಪ್ರಶ್ನೆಗಳು ಕೂಡ ರಾಜಕೀಯವಾಗಿ ಪ್ರಮುಖವಾಗಿವೆ. ಕೃಷಿ ಉತ್ಪನ್ನಗಳಿಗೆ ಬೆಲೆ, ನೀರಾವರಿ, ವಿದ್ಯುತ್, ಕೃಷಿ ವೆಚ್ಚ, ಉದ್ಯೋಗ ಹಾಗೂ ಸಣ್ಣ ವ್ಯಾಪಾರಿಗಳ ಸಮಸ್ಯೆಗಳು ಈ ಪ್ರದೇಶದ ಮತದಾರರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ಇಂತಹ ಪ್ರಶ್ನೆಗಳನ್ನು ನಿರಂತರವಾಗಿ ರಾಜಕೀಯ ಚರ್ಚೆಯ ಭಾಗವಾಗಿಸಿಕೊಂಡಿರುವ ಸಿಪಿಐ(ಎಂ) ಪಕ್ಷಕ್ಕೆ ಸ್ಥಳೀಯ ಚುನಾವಣೆಯಲ್ಲಿ ಲಾಭ ಸಿಕ್ಕಂತಾಗಿದೆ.

ಬಿಜೆಪಿ–ಕಾಂಗ್ರೆಸ್ ಆಚೆಗೆ ಪರ್ಯಾಯ ರಾಜಕೀಯಕ್ಕೆ ಜಾಗ!
2021ರಿಂದ 2026ರವರೆಗಿನ ಬದಲಾವಣೆ ಇಲ್ಲಿ ವಿಶೇಷವಾಗಿ ಗಮನಾರ್ಹವಾಗಿದೆ. ಐದು ವರ್ಷಗಳ ಅವಧಿಯಲ್ಲಿ ನೋಖಾದಲ್ಲಿ ಸಿಪಿಐ(ಎಂ) ತನ್ನ ಪ್ರಾತಿನಿಧ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿರುವುದು ಕೇವಲ ಒಂದು ಚುನಾವಣಾ ಫಲಿತಾಂಶವಾಗಿ ನೋಡಲಾಗದು. ನೋಖಾದಲ್ಲಿ ಎಡಪಕ್ಷದ ರಾಜಕೀಯ ನೆಲೆ ವಿಸ್ತರಿಸುತ್ತಿರುವ ಸೂಚನೆಯಾಗಿಯೂ ಈ ಬೆಳವಣಿಗೆಯನ್ನು ಪರಿಗಣಿಸಬಹುದು. ಆದರೆ ಈ ಚುನಾವಣಾ ಗೆಲುವು ಮುಂದಿನ ದಿನಗಳಲ್ಲಿ ದೀರ್ಘಕಾಲಿಕ ರಾಜಕೀಯ ವಿಸ್ತರಣೆಯಾಗಿ ರೂಪುಗೊಳ್ಳುತ್ತದೆಯೇ ಎಂಬುದನ್ನು ಮುಂದಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷ ಪಡೆಯುವ ಮತಪ್ರಮಾಣವೇ ಹೆಚ್ಚು ಸ್ಪಷ್ಟಪಡಿಸಲಿದೆ.
ರಾಜಸ್ಥಾನದ ಈ ಬಾರಿಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಒಟ್ಟಾರೆ ಚಿತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ವಾಸ್ತವ. ಆದರೆ ಇದೇ ಫಲಿತಾಂಶದೊಳಗೆ ನೋಖಾದಂತಹ ಸ್ಥಳೀಯ ರಾಜಕೀಯ ಕೇಂದ್ರಗಳು ಬಿಜೆಪಿ–ಕಾಂಗ್ರೆಸ್ ದ್ವಿಪಕ್ಷೀಯ ರಾಜಕಾರಣದಾಚೆಗೂ ಪರ್ಯಾಯ ರಾಜಕೀಯಕ್ಕೆ ಜಾಗವಿದೆ ಎಂಬ ಸಂದೇಶ ನೀಡಿವೆ. ರೈತರು, ಕಾರ್ಮಿಕರು ಹಾಗೂ ಸ್ಥಳೀಯ ಜನರ ಬದುಕಿನ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಿರಂತರವಾಗಿ ಸಂಘಟನಾ ಕೆಲಸ ಮತ್ತು ಹೋರಾಟ ನಡೆಸುವ ಪಕ್ಷಗಳು ಚುನಾವಣಾ ರಾಜಕೀಯದಲ್ಲೂ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳಬಹುದು ಎಂಬುದನ್ನು ನೋಖಾ ಫಲಿತಾಂಶ ಮತ್ತೆ ಮುನ್ನೆಲೆಗೆ ತಂದಿದೆ.
ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ, ರಾಜಸ್ಥಾನದ ನಗರ ಮತದಾರರಲ್ಲಿ ಬಿಜೆಪಿ ಪರವಾದ ಒಲವು ರಾಜ್ಯಮಟ್ಟದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಅದೇ ವೇಳೆ ಅಜ್ಮೇರ್, ಝಾಲಾವರ್, ಪಾಲಿ, ಬಿಕಾನೇರ್ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ತನ್ನ ನೆಲೆಯನ್ನು ಉಳಿಸಿಕೊಂಡಿದೆ. ಇದರ ನಡುವೆ ನೋಖಾದಲ್ಲಿ ಸಿಪಿಐ(ಎಂ) ಹಾಗೂ ಬಾರನ್ನಲ್ಲಿ ಎಎಪಿ ಸಾಧಿಸಿರುವ ಗೆಲುವುಗಳು, ಬಿಜೆಪಿ–ಕಾಂಗ್ರೆಸ್ ನಡುವಿನ ಸಾಂಪ್ರದಾಯಿಕ ದ್ವಿಪಕ್ಷೀಯ ಸ್ಪರ್ಧೆಯಾಚೆಗೂ ಸ್ಥಳೀಯ ಜನರ ವಿಶ್ವಾಸ ಗಳಿಸುವ ಪರ್ಯಾಯ ರಾಜಕೀಯ ಶಕ್ತಿಗಳಿಗೆ ಅವಕಾಶವಿದೆ ಎಂಬುದನ್ನು ತೋರಿಸಿವೆ.
ರಾಜಸ್ಥಾನದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಈ ಸ್ಥಳೀಯ ಸಂಸ್ಥೆಗಳ ಫಲಿತಾಂಶಗಳು ಬಿಜೆಪಿ ಸಂಘಟನಾ ಬಲವನ್ನು ತೋರಿಸುವುದರ ಜೊತೆಗೆ ಕಾಂಗ್ರೆಸ್ಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿವೆ. ಅದೇ ಸಮಯದಲ್ಲಿ ನೋಖಾದಲ್ಲಿ ಸಿಪಿಐ(ಎಂ) ಹಾಗೂ ಬಾರನ್ನಲ್ಲಿ ಎಎಪಿ ಸಾಧಿಸಿರುವ ಗೆಲುವುಗಳು ಸ್ಥಳೀಯ ಸಮಸ್ಯೆಗಳು ಮತ್ತು ಸಂಘಟಿತ ರಾಜಕಾರಣದ ಆಧಾರದ ಮೇಲೆ ಪರ್ಯಾಯ ಪಕ್ಷಗಳು ತಮ್ಮ ನೆಲೆ ವಿಸ್ತರಿಸಿಕೊಳ್ಳುವ ಸಾಧ್ಯತೆಯನ್ನು ಮುನ್ನೆಲೆಗೆ ತಂದಿವೆ.
ಇದನ್ನೂ ನೋಡಿ :ಜಿಡಿಪಿ ಬೆಳವಣಿಗೆ ಎಂದರೆ ಅಸಮಾನತೆ, ನಿರುದ್ಯೋಗದ ಬೆಳವಣಿಗೆಯೇ? Janashakthi Media
