ನ್ಯಾಯಾಲಯ, ನ್ಯಾಯಮಂಡಳಿಗಳಲ್ಲಿ ಹಾಜರಾಗುವುದಕ್ಕೂ ನಿರ್ಬಂಧ; ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕ್ರಮದ ಎಚ್ಚರಿಕೆ
ಬೆಂಗಳೂರು: ವಕೀಲರಾಗಿ ನೋಂದಾಯಿಸಿಕೊಂಡ ಎರಡು ವರ್ಷಗಳೊಳಗೆ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗದವರು ತಕ್ಷಣದಿಂದಲೇ ವಕೀಲ ವೃತ್ತಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ಸೂಚಿಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರೆಗೆ ನ್ಯಾಯಾಲಯ, ನ್ಯಾಯಮಂಡಳಿ ಹಾಗೂ ಇತರ ಕಾನೂನು ಪ್ರಾಧಿಕಾರಗಳ ಮುಂದೆ ವಕೀಲರಾಗಿ ಹಾಜರಾಗುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ನವೆಂಬರ್ 13ರಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಆರ್. ರಾಜಣ್ಣ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅಕ್ಟೋಬರ್ 17ರಂದು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ವಕೀಲ ವೃತ್ತಿ ಮುಂದುವರಿಸುತ್ತಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲು ವ್ಯವಸ್ಥೆ ರೂಪಿಸುವಂತೆ ಪರಿಷತ್ಗೆ ನಿರ್ದೇಶನ ನೀಡಿದ್ದರು. ಹೈಕೋರ್ಟ್ ಆದೇಶದ ಅನುಸರಣೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.
2010ರ ಜೂನ್ 12 ಅಥವಾ ಅದಕ್ಕೂ ಮೊದಲು ಕಾನೂನು ಪದವಿ ಪೂರ್ಣಗೊಳಿಸಿ ವಕೀಲರಾಗಿ ನೋಂದಾಯಿಸಿಕೊಂಡವರಿಗೆ ಎಐಬಿಇ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ, 2009-10ನೇ ಶೈಕ್ಷಣಿಕ ವರ್ಷದ ನಂತರ ಕಾನೂನು ಪದವಿ ಪೂರ್ಣಗೊಳಿಸಿ ವಕೀಲರಾಗಿ ನೋಂದಾಯಿಸಿಕೊಂಡವರು ನೋಂದಣಿ ದಿನಾಂಕದಿಂದ ಎರಡು ವರ್ಷಗಳೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ನಿಗದಿತ ಅವಧಿಯಲ್ಲಿ ಪರೀಕ್ಷೆ ಪಾಸಾಗದವರು ಉತ್ತೀರ್ಣರಾಗುವವರೆಗೆ ವಕೀಲ ವೃತ್ತಿ ನಡೆಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಅಂತಹವರು ವಕಾಲತ್ತು ಸಲ್ಲಿಸುವಂತಿಲ್ಲ ಅಥವಾ ತಮ್ಮನ್ನು ವೃತ್ತಿಪರ ವಕೀಲರು ಎಂದು ಪರಿಚಯಿಸಿಕೊಳ್ಳುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಉಲ್ಲಂಘಿಸಿದರೆ ಕ್ರಿಮಿನಲ್ ಕ್ರಮ
ಪರಿಷತ್ತಿನ ನಿರ್ದೇಶನಗಳನ್ನು ಉಲ್ಲಂಘಿಸಿ ವಕೀಲ ವೃತ್ತಿ ಮುಂದುವರಿಸಿದರೆ ವಕೀಲರ ಕಾಯಿದೆ-1961ರ ಸೆಕ್ಷನ್ 45 ಹಾಗೂ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 318, 319 ಮತ್ತು 61ರ ಅಡಿಯಲ್ಲಿ ಕ್ರಿಮಿನಲ್ ಕ್ರಮ ಜರುಗಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. ಪರಿಷತ್ತಿನ ಶಿಸ್ತು ಕ್ರಮಗಳ ಜೊತೆಗೆ ಯಾವುದೇ ವ್ಯಕ್ತಿ ಸ್ವತಂತ್ರವಾಗಿಯೂ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಬಹುದು ಎಂದು ಸುತ್ತೋಲೆ ತಿಳಿಸಿದೆ.
ಇದನ್ನೂ ಓದಿ : HPCL ನಿಂದ ವಜಾ: ನಾಲ್ವರು ಮಹಿಳಾ ಕಾರ್ಮಿಕರ ಧರಣಿಗೆ 75 ದಿನ
30 ದಿನಗಳಲ್ಲಿ ಅನರ್ಹ ವಕೀಲರ ಪಟ್ಟಿ ಸಲ್ಲಿಸಲು ಸೂಚನೆ
ರಾಜ್ಯದ ಎಲ್ಲ ವಕೀಲರ ಸಂಘಗಳು ಹೊಸ ಸದಸ್ಯರ ಸೇರ್ಪಡೆ ಮತ್ತು ಹಾಲಿ ಸದಸ್ಯತ್ವ ನವೀಕರಣದ ಸಂದರ್ಭದಲ್ಲಿ ಎಐಬಿಇ ಉತ್ತೀರ್ಣ ಪ್ರಮಾಣಪತ್ರ ಹಾಗೂ ವೃತ್ತಿ ಪ್ರಮಾಣಪತ್ರವನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಕೀಲರ ಪಟ್ಟಿಯನ್ನು 30 ದಿನಗಳೊಳಗೆ ರಾಜ್ಯ ವಕೀಲರ ಪರಿಷತ್ತಿಗೆ ಸಲ್ಲಿಸಬೇಕು. ಸುತ್ತೋಲೆಯನ್ನು ಎಲ್ಲ ವಕೀಲರ ಸಂಘಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶಿಸಲಾಗಿದೆ.
ಎಐಬಿಇ ಪರೀಕ್ಷೆಯಲ್ಲಿ ನಂತರ ಉತ್ತೀರ್ಣರಾದ ವಕೀಲರು ತಮ್ಮ ವೃತ್ತಿ ನಡೆಸುವ ಹಕ್ಕನ್ನು ಮರುಸ್ಥಾಪಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ನವೆಂಬರ್ 30ರಂದು ಕರ್ನಾಟಕ ಹೈಕೋರ್ಟ್ಗೆ ಅನುಪಾಲನಾ ವರದಿ ಸಲ್ಲಿಸುವುದಾಗಿ ರಾಜ್ಯ ವಕೀಲರ ಪರಿಷತ್ ತಿಳಿಸಿದೆ.
ಹೈಕೋರ್ಟ್ ನಿರ್ದೇಶನಕ್ಕೆ ಹಿನ್ನೆಲೆ
2011ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ವ್ಯಕ್ತಿಯೊಬ್ಬರು ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಸುಮಾರು ಒಂದು ದಶಕ ವಕೀಲ ವೃತ್ತಿ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಈ ನಿರ್ದೇಶನಗಳನ್ನು ನೀಡಿತ್ತು. ನಂತರ 2021ರಲ್ಲಿ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ವಕೀಲರ ನೋಂದಣಿ ದಿನಾಂಕ, ಎರಡು ವರ್ಷಗಳ ಗಡುವು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ವ್ಯವಸ್ಥೆ ರೂಪಿಸಬೇಕು. ಅರ್ಹತೆ ಇಲ್ಲದವರು ವೃತ್ತಿ ಮುಂದುವರಿಸುವುದನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಸೂಚಿಸಿದ್ದರು. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸಂಬಂಧಪಟ್ಟ ವಕೀಲರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಇದನ್ನೂ ನೋಡಿ : ದತ್ತು/ಮೆಂಟರ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮಾರಾಟ ಮಾಡಲು ಮುಂದಾದ ಡಿ.ಕೆ.ಶಿವಕುಮಾರ್ ಸರ್ಕಾರ..Janashakthi Media
