HPCL ನಿಂದ ವಜಾ: ನಾಲ್ವರು ಮಹಿಳಾ ಕಾರ್ಮಿಕರ ಧರಣಿಗೆ 75 ದಿನ

Please follow and like us:
ಉದ್ಯೋಗಕ್ಕೆ ಮರುನೇಮಕಕ್ಕೆ ಕಾರ್ಮಿಕ ಇಲಾಖೆ, ಜಿಲ್ಲಾಧಿಕಾರಿ ಸೂಚನೆಗೂ ಬೆಲೆ ನೀಡದ ಕಂಪೆನಿ ಅಧಿಕಾರಿಗಳು; ನ.20ರಂದು ವಿಚಾರಣೆ, ನ್ಯಾಯ ಸಿಗದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (HPCL) ಸುರತ್ಕಲ್ ಬಾಳದಲ್ಲಿರುವ ಎಲ್‌ಪಿಜಿ ಬಾಟ್ಲಿಂಗ್ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 75 ದಿನಗಳನ್ನು ಪೂರೈಸಿದೆ. HPCL

ಬಾಗಲಕೋಟೆ ಜಿಲ್ಲೆಯ ಹುನಗುಂದದ ಶರಣವ್ವ ಭಜಂತ್ರಿ, ಸೂರವ್ವ ಕೊಲ್ಲದ್, ಪಾರವ್ವ ಗಾಣಿಗೇರ ಮತ್ತು ಸುವರ್ಣ ಪಾಟೀಲ ಅವರು ಉದ್ಯೋಗದಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಘಟಕದ ಎದುರು ಧರಣಿ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ದುಡಿದ ಮಹಿಳಾ ಕಾರ್ಮಿಕರನ್ನು ಯಾವುದೇ ನ್ಯಾಯಸಮ್ಮತ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಮತ್ತು ಸಿಐಟಿಯು ದಕ್ಷಿಣ ಕನ್ನಡ ಆರೋಪಿಸಿವೆ.

ಕಾರ್ಮಿಕ ಇಲಾಖೆ ಸೂಚನೆಗೂ ಸ್ಪಂದಿಸದ ಕಂಪೆನಿ

ವಜಾಗೊಂಡ ಮಹಿಳಾ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ನೇಮಿಸುವಂತೆ ಕೇಂದ್ರ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು (ಎಎಲ್‌ಸಿ) ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೂ ಕಂಪೆನಿಯ ಹಿರಿಯ ಅಧಿಕಾರಿಗಳು ಈ ಸೂಚನೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ನವೆಂಬರ್ 20ರಂದು ವಿಚಾರಣೆಗೆ ಹಾಜರಾಗುವಂತೆ ಎಚ್‌ಪಿಸಿಎಲ್‌ನ ಹಿರಿಯ ಅಧಿಕಾರಿಗೆ ಸಹಾಯಕ ಕಾರ್ಮಿಕ ಆಯುಕ್ತರು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ : ಮಕ್ಕಳ ದಿನಾಚರಣೆ | ಒಂದು ದೇಶ, ಎರಡು ಬಾಲ್ಯಗಳು: ಕೆಲವರಿಗೆ ಸಂಭ್ರಮ, ಹಲವರಿಗೆ ಸಂಕಷ್ಟ

ನ್ಯಾಯ ಸಿಗದಿದ್ದರೆ ಹೋರಾಟ ತೀವ್ರ

ನವೆಂಬರ್ 20ರಂದು ನಡೆಯಲಿರುವ ವಿಚಾರಣೆಯಲ್ಲಿ ಮಹಿಳಾ ಕಾರ್ಮಿಕರಿಗೆ ನ್ಯಾಯ ದೊರೆಯಬೇಕು ಮತ್ತು ಅವರನ್ನು ಮರಳಿ ಕೆಲಸಕ್ಕೆ ನೇಮಿಸುವ ಕುರಿತು ಕಂಪೆನಿ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಅಂದು ಸಮಸ್ಯೆ ಇತ್ಯರ್ಥವಾಗದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಉದ್ಯೋಗ ಕಳೆದುಕೊಂಡಿರುವ ನಾಲ್ವರು ಮಹಿಳಾ ಕಾರ್ಮಿಕರು ಕಳೆದ 75 ದಿನಗಳಿಂದ ತಮ್ಮ ಬದುಕು ಮತ್ತು ಉದ್ಯೋಗದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಹಿಳಾ ಕಾರ್ಮಿಕರ ಹೋರಾಟಕ್ಕೆ ಸಾರ್ವಜನಿಕರು, ಕಾರ್ಮಿಕ ಸಂಘಟನೆಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಬೆಂಬಲ ನೀಡಬೇಕು ಎಂದು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಹಾಗೂ ಸಿಐಟಿಯು ದಕ್ಷಿಣ ಕನ್ನಡ ಮನವಿ ಮಾಡಿವೆ.

ಇದನ್ನೂ ನೋಡಿ : HPCL ಸುರತ್ಕಲ್ |15 ವರ್ಷ ದುಡಿದ ತಾಯಂದಿರ ಕಣ್ಣೀರಿಗೆ ಬೆಲೆಯಿಲ್ಲವೇ? Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *