ಕಾರ್ಮಿಕರ ಬೇಡಿಕೆಗಳ ಕುರಿತು ಸೆ.15ರಂದು ಸಿಎಂ ಜೊತೆ ಮಾತುಕತೆ
ಬೆಂಗಳೂರು, ಸೆ.9: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಸೆ.8ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸೆ.15ರಂದು ಕಾರ್ಮಿಕ ಸಂಘಟನೆಗಳೊಂದಿಗೆ ಬೇಡಿಕೆಗಳ ಕುರಿತು ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು ಎಂದು ಸಿಐಟಿಯು ಹೇಳಿದೆ. ಸಿಐಟಿಯು
ಕಾರ್ಮಿಕರ ಪ್ರಮುಖ ಬೇಡಿಕೆಗಳಲ್ಲಿ ಪರಿಷ್ಕೃತ ಕನಿಷ್ಠ ವೇತನ ಜಾರಿ, ಕಾರ್ಮಿಕರ ಖಾಯಂಕರಣ, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಮುಖವಾಗಿವೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಬಗ್ಗೆಯೂ ಸಿಐಟಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ತರುವ ಅಂಶಗಳನ್ನು ಮರುಪರಿಶೀಲಿಸಿ, ಪರ್ಯಾಯ ನೀತಿಗಳನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ. ವಿಶೇಷವಾಗಿ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಅಧಿಸೂಚನೆ ಹಾಗೂ ಸಮಿತಿಗಳ ರಚನೆಯ ಬಗ್ಗೆ ಸಂಘಟನೆ ಪ್ರಶ್ನೆಗಳನ್ನು ಎತ್ತಿದೆ. ಸಿಐಟಿಯು
ಇದನ್ನೂ ಓದಿ : ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ ₹5 ಲಕ್ಷ ಬಾಂಡ್ ನೋಟಿಸ್; ಬಳಿಕ ಹಿಂಪಡೆದ ಪೊಲೀಸರು
ಕರ್ನಾಟಕದಲ್ಲಿ ಬೀಡಿ, ಪ್ಲಾಂಟೇಶನ್, ಕೈಮಗ್ಗ, ಗಾರ್ಮೆಂಟ್ಸ್, ಎಪಿಎಂಸಿ, ಲೋಡಿಂಗ್ ಸೇರಿದಂತೆ ಹಲವು ಕ್ಷೇತ್ರಗಳ ಕಾರ್ಮಿಕರಿಗೆ ಕನಿಷ್ಠ ವೇತನದ ವ್ಯಾಪ್ತಿ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರಾಜ್ಯದಲ್ಲಿರುವ ಸುಮಾರು 1.77 ಕೋಟಿ ಕಾರ್ಮಿಕರಿಗೆ ಕನಿಷ್ಠ ವೇತನದ ಹಕ್ಕು ಖಾತ್ರಿಪಡಿಸಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಅಂಗನವಾಡಿ, ಅಕ್ಷರ ದಾಸೋಹ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರಬೇಕು. ಅಸಂಘಟಿತ ಕಾರ್ಮಿಕರಿಗೆ ಪರಿಣಾಮಕಾರಿ ಸಾಮಾಜಿಕ ಭದ್ರತಾ ಕಾನೂನು ಜಾರಿಗೊಳಿಸಿ, ಕಲ್ಯಾಣ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಸಿಐಟಿಯು ಆಗ್ರಹಿಸಿದೆ.
ಇದರ ಜೊತೆಗೆ ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನೂ ಸಂಘಟನೆ ಮುಂದಿಟ್ಟಿದೆ.
ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸೆ.15ರಂದು ಮುಖ್ಯಮಂತ್ರಿಗಳೊಂದಿಗೆ ನಡೆಯಲಿರುವ ಮಾತುಕತೆಯಲ್ಲಿ ಈ ಬೇಡಿಕೆಗಳ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸಿಐಟಿಯು ಒತ್ತಾಯಿಸಿದೆ.
ಹಿರಿಯ ಕಾರ್ಮಿಕ ನಾಯಕ ವಿಜೆಕೆ ನಾಯರ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು, ಸಚಿವ ಸಂತೋಷ್ಲಾಡ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್, ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಸೇರಿದಂತೆ ರಾಜ್ಯ ಪದಾಧಿಕಾರಿಗಳು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಿಐಟಿಯು
ಇದನ್ನೂ ನೋಡಿ : CITU ನಿಂದ ಕಾರ್ಮಿಕರ ವಿಧಾನಸೌದ ಚಲೋ | ಸೆಪ್ಟೆಂಬರ್ 08, 2026
