ಮಂಗಳೂರು ಬೀದಿ ವ್ಯಾಪಾರಿಗಳ ಹೋರಾಟ ರಾಜ್ಯಕ್ಕೆ ದಾರಿದೀಪ: ಪ್ರತಾಪ ಸಿಂಹ

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದಾಳಿ ಹಾಗೂ ದಬ್ಬಾಳಿಕೆ ಕಾನೂನುಬಾಹಿರವಾಗಿದ್ದು, ಶ್ರೀಮಂತರ ಅತಿಕ್ರಮಣವನ್ನು ನಿಯಂತ್ರಿಸಲು ವಿಫಲವಾಗಿರುವ ಸರ್ಕಾರ ಬಡವರ ಬದುಕಿನ ಮೇಲೆ ಸವಾರಿ ಮಾಡುತ್ತಿದೆ ಎಂದು ವಕೀಲರು ಹಾಗೂ ಸಿಐಟಿಯು ರಾಜ್ಯ ಉಪಾಧ್ಯಕ್ಷ ಪ್ರತಾಪ ಸಿಂಹ ಆರೋಪಿಸಿದರು. ಮಂಗಳೂರು

ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ನಡೆದ ಬೀದಿಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕು ಮತ್ತು ಪಾದಚಾರಿಗಳ ನಡೆದಾಡುವ ಹಕ್ಕು ಎರಡೂ ಸಂವಿಧಾನದಿಂದ ರಕ್ಷಿಸಲ್ಪಟ್ಟಿವೆ. ಒಂದು ಹಕ್ಕನ್ನು ರಕ್ಷಿಸುವ ನೆಪದಲ್ಲಿ ಮತ್ತೊಂದು ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಎರಡೂ ಹಕ್ಕುಗಳಿಗೆ ಸಮತೋಲನ ಕಲ್ಪಿಸುವುದು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಎಂದು ಅವರು ಹೇಳಿದರು.

ಮಂಗಳೂರಿನ ಬೀದಿಬದಿ ವ್ಯಾಪಾರಿಗಳ ಹೋರಾಟ ರಾಜ್ಯದ ಇತರ ಭಾಗಗಳಲ್ಲಿರುವ ವ್ಯಾಪಾರಿಗಳಿಗೆ ದಾರಿದೀಪವಾಗಿದೆ. ಮಂಗಳೂರಿನ ಪ್ರಕರಣವೊಂದರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಸರ್ಕಾರಕ್ಕೆ ಸರಿಯಾದ ಚಾಟಿ ಬೀಸಿರುವುದು ವ್ಯಾಪಾರಿಗಳಲ್ಲಿ ಆಶಾಭಾವನೆ ಮೂಡಿಸಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಬೀದಿಬದಿ ವ್ಯಾಪಾರಿಗಳಲ್ಲಿ ಕಾನೂನಿನ ಮೇಲಿನ ವಿಶ್ವಾಸವನ್ನು ಈ ಬೆಳವಣಿಗೆ ಹೆಚ್ಚಿಸಿದೆ ಎಂದು ಪ್ರತಾಪ ಸಿಂಹ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಬಿಸಿಲು, ಚಳಿ, ಮಳೆ ಎನ್ನದೆ ದುಡಿಯುವ ಶ್ರಮಜೀವಿಗಳೇ ಬೀದಿಬದಿ ವ್ಯಾಪಾರಿಗಳು. ಅವರ ಬದುಕಿನ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಮಂಗಳೂರು 

ಇದನ್ನೂ ಓದಿ : ಪ್ರಜಾಪ್ರಭುತ್ವ ಮತ್ತು ದೇಶ ಉಳಿಯಬೇಕಾದರೆ ಎಡಪಂಥೀಯ ಚಿಂತನೆ ಅನಿವಾರ್ಯ

ಸಿಐಟಿಯು ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಯೋಗೀಶ್ ಜಪ್ಪಿನಮೊಗರು, ಬಿ.ಕೆ. ಇಮ್ತಿಯಾಜ್ ಹಾಗೂ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಮುಜಾಫರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.

ಸಮಾವೇಶದಲ್ಲಿ ಬೀದಿಬದಿ ವ್ಯಾಪಾರಿಗಳ ಹಲವು ಬೇಡಿಕೆಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಬೀದಿಬದಿ ವ್ಯಾಪಾರಿಗಳ ಜೀವನ ಸಂರಕ್ಷಣೆ ಕಾಯ್ದೆ–2014 ಅನ್ನು ಸಮಗ್ರವಾಗಿ ಜಾರಿಗೊಳಿಸಿ, ಕಾನೂನುಬಾಹಿರ ಕಾರ್ಯಾಚರಣೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.

ಮಂಗಳೂರು ನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸಿ, ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು. ಅರ್ಹ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರದ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಪ್ರಧಾನಮಂತ್ರಿಗಳ ಆತ್ಮನಿರ್ಭರ ಸ್ವನಿಧಿ ಯೋಜನೆಯಡಿ ನೀಡಲಾಗುವ ಸಾಲದ ಮಿತಿಯನ್ನು ಹೆಚ್ಚಿಸಬೇಕು. ₹50 ಸಾವಿರ ಸಾಲವನ್ನು ಮರುಪಾವತಿ ಮಾಡಿದ ವ್ಯಾಪಾರಿಗಳಿಗೆ ₹1 ಲಕ್ಷ ಸಾಲವನ್ನು ಬ್ಯಾಂಕುಗಳೇ ಮಂಜೂರು ಮಾಡುವ ಅಧಿಕಾರ ನೀಡಬೇಕು ಎಂದು ಸಮಾವೇಶ ಆಗ್ರಹಿಸಿತು.

ಸಂಡೆ ಬಜಾರ್‌ನಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಹಾಗೂ ಅಲ್ಲಿನ ವ್ಯಾಪಾರಿಗಳ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು. ಜಿಲ್ಲೆಯ ವಿವಿಧೆಡೆ ನಡೆಯುವ ವಾರದ ಸಂತೆ ಮತ್ತು ಬಜಾರ್‌ಗಳಲ್ಲಿ ವ್ಯಾಪಾರ ಮಾಡುವವರ ಹಿತರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಯಿತು.

ಬೀದಿಬದಿ ವ್ಯಾಪಾರಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ವ್ಯಾಪಾರಿಗಳಿಗೆ ₹10 ಲಕ್ಷದ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಬೇಕು. ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಬಿಪಿಎಲ್‌ ಕಾರ್ಡ್ ವಿತರಿಸಬೇಕು. ನಿವೇಶನ ರಹಿತ ವ್ಯಾಪಾರಿಗಳಿಗೆ ಮನೆ ಹಾಗೂ ನಿವೇಶನ ಒದಗಿಸಬೇಕು ಎಂಬ ಬೇಡಿಕೆಗಳನ್ನೂ ಸಮಾವೇಶ ಮುಂದಿಟ್ಟಿತು.

ಈ ನಡುವೆ, ಮುಂದಿನ ಭಾನುವಾರದಿಂದ ಸಂಡೆ ಬಜಾರ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಿದ್ದರೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಎಚ್ಚರಿಸಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿ ಸಂಡೆ ಬಜಾರ್ ವ್ಯಾಪಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ವ್ಯಾಪಾರಿಗಳು ಹೋರಾಟ ನಡೆಸುತ್ತಿದ್ದರೂ ಮಂಗಳೂರು ನಗರಪಾಲಿಕೆ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಹಸನ್ ಕುದ್ರೋಳಿ, ಅಬ್ದುಲ್ ಕಾದರ್, ಹಂಝ ಮೊಹಮ್ಮದ್, ಲತೀಫ್, ಎಂ.ಎನ್. ಶಿವಪ್ಪ, ಚಂದ್ರಶೇಖರ ರಾವ್, ಸಿಕಂದರ್, ಕಾಜ ಮೊಯ್ದಿನ್, ಸ್ಟಾನಿ ಡಿಸೋಜಾ, ಗೀತಾ ಬಾಯಿ, ಸಿದ್ದಮ್ಮ, ಶಾಂತಮ್ಮ, ಶಾಲಿನಿ, ಎಂ.ಎಸ್. ಮೊಯಿದಿನ್, ರಾಘವೇಂದ್ರ ಪುತ್ತೂರು, ಪ್ರಸಾದ್ ಪುತ್ತೂರು, ಕಲಾ, ರಾಜೀವಿ ಕದ್ರಿ, ಹರೀಶ್ ಬೈಕಂಪಾಡಿ, ಭಾಸ್ಕರ್ ಸುರತ್ಕಲ್, ಗುಡ್ಡಪ್ಪ, ಮುತ್ತುರಾಜ್, ಅಶ್ರಫ್, ಸುಂದರ ಪೂಜಾರಿ ಕುತ್ತಾರ್, ಜಯಶಾಂತಿ ಕೋಟೆಕಾರ್, ಚಂದ್ರವತಿ ಬೀರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂತೋಷ್ ಆರ್.ಎಸ್. ಸ್ವಾಗತಿಸಿದರು. ವಿಜಯ್ ಜೈನ್ ವಂದಿಸಿದರು. ಸಂತೆ ವ್ಯಾಪಾರಿಗಳ ಸಂಘದ ಪ್ರಮುಖರಾದ ಸಿದ್ದಿಕ್ ಹಾಗೂ ಸಿರಾಜ್ ಕೈಕಂಬ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ನೋಡಿ : ರಾತ್ರಿ ವೇಳೆ ಬೀದಿಬದಿ ವ್ಯಾಪಾರಿಗಳ ಗಾಡಿ ವಶ: ‘ಬಡವರ ಮೇಲೇಕೆ ಈ ದರ್ಪ?’ Janashakthi Media

Donate Janashakthi Media

Leave a Reply

Your email address will not be published. Required fields are marked *