ಬೆಂಗಳೂರು: ಹಣೆಯ ಮೇಲಿನ ಸಣ್ಣ ಗಡ್ಡೆಯ ಪರೀಕ್ಷೆಗೆ ತೆರಳಿದ್ದ 28 ವರ್ಷದ ಯುವಕನಿಗೆ ಬೇರೊಬ್ಬ ರೋಗಿಯ ವೈದ್ಯಕೀಯ ವರದಿಯನ್ನು ನೀಡಿದ ಪ್ರಕರಣದಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಹರಿಶಿತಾ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಆ್ಯಂಡ್ ಸ್ಕ್ಯಾನಿಂಗ್ ಸೆಂಟರ್‌ಗೆ ಗ್ರಾಹಕ ಆಯೋಗ ₹55 ಸಾವಿರ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ತಪ್ಪು
ರತ್ನ ಕುಮಾರ್ ಜಿ. ಕಡಲೆ ಎಂಬವರು ವೈದ್ಯರ ಸಲಹೆಯಂತೆ 2024ರ ಮಾರ್ಚ್ 2ರಂದು ಹಣೆಯ ಮೇಲಿದ್ದ ಗಡ್ಡೆಗೆ ಎಫ್‌ಎನ್‌ಎಸಿ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ತೆರಳಿದ್ದರು. ವೈದ್ಯರು ಆ ಗಡ್ಡೆ ಲಿಪೋಮಾ ಅಥವಾ ಸೆಬೇಷಿಯಸ್ ಸಿಸ್ಟ್ ಆಗಿರಬಹುದು ಎಂದು ಶಂಕಿಸಿದ್ದರು.
ಆದರೆ ಎರಡು ದಿನಗಳ ಬಳಿಕ ಪ್ರಯೋಗಾಲಯ ನೀಡಿದ ವರದಿಯಲ್ಲಿ ಅವರಿಗೆ ‘ನೊಡ್ಯುಲರ್ ಗಾಯಿಟರ್ ವಿತ್ ಕೊಲಾಯ್ಡ್ ಡಿಜೆನರೇಷನ್’ ಮತ್ತು ‘ಹಾಶಿಮೋಟೋ ಥೈರಾಯ್ಡಿಟಿಸ್’ ಇರುವುದಾಗಿ ಉಲ್ಲೇಖಿಸಲಾಗಿತ್ತು. ವರದಿಯಲ್ಲಿನ ಕೆಲವು ವಿವರಗಳನ್ನು ಕೈಬರಹದಲ್ಲಿ ಬದಲಿಸಿರುವುದನ್ನು ಗಮನಿಸಿದ ಕಡಲೆ ಅವರಿಗೆ ಅನುಮಾನ ಮೂಡಿದ್ದು, ಮತ್ತೊಂದು ವೈದ್ಯಕೀಯ ಅಭಿಪ್ರಾಯ ಪಡೆದರು.
ನಂತರ ಮಾರ್ಚ್ 11ರಂದು ಮಾಡಿಸಿದ ಹಿಸ್ಟೋಪಥಾಲಜಿ ಪರೀಕ್ಷೆಯಲ್ಲಿ ಹಣೆಯ ಮೇಲಿನ ಗಡ್ಡೆ ಲಿಪೋಮಾ ಎಂಬುದು ದೃಢಪಟ್ಟಿತು. ಇದು ಆರಂಭದಲ್ಲಿ ವೈದ್ಯರು ವ್ಯಕ್ತಪಡಿಸಿದ್ದ ಶಂಕೆಗೆ ಹೊಂದಿಕೆಯಾಗಿತ್ತು.
ಪ್ರಯೋಗಾಲಯದ ವರದಿ ಕಂಡು ವೈದ್ಯರೂ ಅಚ್ಚರಿಗೊಂಡಿದ್ದರು ಎಂದು ಕಡಲೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತಪ್ಪು ವರದಿಯಿಂದ ಆತಂಕಕ್ಕೊಳಗಾದ ಅವರು ತಮ್ಮ ಆರೋಗ್ಯದ ಬಗ್ಗೆ ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಸ್ಕ್ಯಾನ್‌ಗಳು ಹಾಗೂ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದರು. ಇದರಿಂದ ಮಾನಸಿಕ ಒತ್ತಡ, ಮುಜುಗರ ಮತ್ತು ಕೆಲಸಕ್ಕೆ ತೊಂದರೆಯಾಯಿತು ಎಂದು ಅವರು ಗ್ರಾಹಕ ಆಯೋಗಕ್ಕೆ ತಿಳಿಸಿದ್ದರು.
ಇದನ್ನೂ ಓದಿ : ಮೂರು ದಶಕಗಳಿಂದ ಸಂಕಷ್ಟದಲ್ಲಿರುವ ನೈಸ್ ಭೂ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರಗಳು ಪರಿಹರಿಸಿಲ್ಲ: ಡಾ. ಕೆ. ಪ್ರಕಾಶ್
2024ರ ಮಾರ್ಚ್ 27ರಂದು ಪ್ರಯೋಗಾಲಯಕ್ಕೆ ಕಾನೂನು ನೋಟಿಸ್ ನೀಡಿದ್ದ ಅವರು ₹5 ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅದೇ ವರ್ಷದ ಜೂನ್ 26ರಂದು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಆದರೆ ಪ್ರಯೋಗಾಲಯವು ನಿರ್ಲಕ್ಷ್ಯದ ಆರೋಪವನ್ನು ನಿರಾಕರಿಸಿತು. ಅದೇ ದಿನ ಇದೇ ರೀತಿಯ ಹೆಸರಿನ ಮಹಿಳೆಯೊಬ್ಬರು ಪರೀಕ್ಷೆ ಮಾಡಿಸಿಕೊಂಡಿದ್ದರು. ಸ್ವಾಗತ ಸಿಬ್ಬಂದಿ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಡಲೆ ಆತುರದಲ್ಲಿ ಬೇರೊಬ್ಬರ ವರದಿಯನ್ನು ತೆಗೆದುಕೊಂಡಿರಬಹುದು ಎಂದು ಪ್ರಯೋಗಾಲಯ ವಾದಿಸಿತು. ಅಲ್ಲದೆ, ವರದಿಯನ್ನು ಕಡಲೆ ಅವರೇ ಬದಲಿಸಿ ಹಣ ಪಡೆಯಲು ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನೂ ಮಾಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರು ನಗರ–2 ಗ್ರಾಹಕ ಆಯೋಗದ ಅಧ್ಯಕ್ಷೆ ವಿ. ಅನುರಾಧಾ ಹಾಗೂ ಸದಸ್ಯರಾದ ಎಚ್. ಜನಾರ್ದನ್ ಮತ್ತು ಶರಾವತಿ ಎಸ್.ಎಂ. ಅವರು ಪ್ರಯೋಗಾಲಯದ ವಾದವನ್ನು ಒಪ್ಪಲಿಲ್ಲ.
ಪ್ರಯೋಗಾಲಯವೇ ತಪ್ಪು ಸಂಭವಿಸಿರುವುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುವುದನ್ನು ತೋರಿಸುವ ವಾಟ್ಸ್‌ಆ್ಯಪ್ ಸಂದೇಶಗಳನ್ನು ಆಯೋಗ ಗಮನಿಸಿತು. ಜತೆಗೆ, ಕಡಲೆ ಅವರಿಗೆ ನೀಡಲಾಗಿದ್ದ ಮೂಲ ವೈದ್ಯರ ಚೀಟಿಯಲ್ಲಿ ಥೈರಾಯ್ಡ್ ಪರೀಕ್ಷೆ ನಡೆಸುವಂತೆ ಸೂಚನೆಯೇ ಇರಲಿಲ್ಲ. ಹಣೆಯ ಮೇಲಿನ ಗಡ್ಡೆ ಲಿಪೋಮಾ ಅಥವಾ ಮತ್ತಾವುದೇ ಸ್ಥಳೀಯ ಸಮಸ್ಯೆಯೇ ಎಂಬುದನ್ನು ಪತ್ತೆಹಚ್ಚಲು ಎಫ್‌ಎನ್‌ಎಸಿ ಪರೀಕ್ಷೆ ನಡೆಸುವಂತೆ ಮಾತ್ರ ಸೂಚಿಸಲಾಗಿತ್ತು.
ಹೀಗಾಗಿ ಪ್ರಯೋಗಾಲಯವು ತಪ್ಪು ವರದಿ ನೀಡಿರುವುದಷ್ಟೇ ಅಲ್ಲದೆ, ವೈದ್ಯರು ಸೂಚಿಸಿದ್ದ ಪರೀಕ್ಷೆಯನ್ನು ನಡೆಸದೆ ಸಂಪೂರ್ಣವಾಗಿ ಬೇರೆ ಕಾಯಿಲೆಗೆ ಸಂಬಂಧಿಸಿದ ವರದಿಯನ್ನು ನೀಡಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.
ತಪ್ಪು ವರದಿಯಿಂದ ಉಂಟಾದ ಮಾನಸಿಕ ನೋವು ಮತ್ತು ಅನಾನುಕೂಲಕ್ಕಾಗಿ ₹50 ಸಾವಿರ ಪರಿಹಾರ ಹಾಗೂ ಪ್ರಕರಣದ ಕಾನೂನು ವೆಚ್ಚವಾಗಿ ₹5 ಸಾವಿರ ಸೇರಿದಂತೆ ಒಟ್ಟು ₹55 ಸಾವಿರವನ್ನು ಕಡಲೆ ಅವರಿಗೆ 45 ದಿನಗಳೊಳಗೆ ಪಾವತಿಸುವಂತೆ ಆಯೋಗ ಪ್ರಯೋಗಾಲಯಕ್ಕೆ ಆದೇಶಿಸಿದೆ.
ಇದನ್ನೂ ನೋಡಿ:ನೇಪಾಳದ ಭೂಸುನಾಮಿ: ಬಗೆದಷ್ಟೂ ಕೆಸರು! ಪರಿಸರವಾದಿ ನಾಗೇಶ ಹೆಗಡೆಯವರ ಲೇಖನ ಆಧಾರಿತ ವಿಡಿಯೋ Janashakthi Media
