ಚಿಕ್ಕಬಳ್ಳಾಪುರ: ಮಾದಕ ವಸ್ತುಗಳ ವ್ಯಸನ ಹಾಗೂ ನಿರುದ್ಯೋಗ ಯುವಜನರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸವಾಲುಗಳಾಗಿದ್ದು, ಈ ಕುರಿತು ಯುವಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿಚಾರ ಸಂಕಿರಣದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಡಿವೈಎಫ್ಐ 13ನೇ ರಾಜ್ಯ ಸಮ್ಮೇಳನದ ಅಂಗವಾಗಿ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ‘ಮಾದಕ ವಸ್ತುಗಳ ವ್ಯಸನ–ನಿರುದ್ಯೋಗ, ಯುವಜನರ ಮುಂದಿರುವ ಸವಾಲುಗಳು’ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಕೆ. ರವಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾದಕ ವಸ್ತುಗಳ ವ್ಯಸನದ ಕುರಿತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ ವಿಷಯ ಮಂಡಿಸಿದರು. ಶಿಕ್ಷಣ ಮತ್ತು ಉದ್ಯೋಗದ ಬಿಕ್ಕಟ್ಟಿನ ಕುರಿತು ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್ ಮಾತನಾಡಿದರು.
ಇದನ್ನೂ ಓದಿ : ಕೆಪಿಎಸ್ಸಿ ನೇಮಕಾತಿ ಅಕ್ರಮ ತನಿಖೆಗೆ ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜನೇಯರೆಡ್ಡಿ ಯುವಜನರು ಮಾದಕ ವ್ಯಸನದಿಂದ ದೂರ ಉಳಿಯುವಂತೆ ಪ್ರತಿಜ್ಞೆ ಬೋಧಿಸಿದರು. ರೈತ ಸಂಘಟನೆ ಮುಖಂಡ ಭಕ್ತರಹಳ್ಳಿ ಬೈರೇಗೌಡ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ನಗರಸಭೆಯ ಮಾಜಿ ಸದಸ್ಯೆ ಅಣ್ಣೆಮ್ಮ ಹಾಗೂ ಕೆಪಿಆರ್ಎಸ್ ಮುಖಂಡ ಎನ್.ಎನ್. ಶ್ರೀರಾಮ್ ಮಾತನಾಡಿದರು.
ಡಿವೈಎಫ್ಐ ಮಾಜಿ ಜಿಲ್ಲಾ ಮುಖಂಡ ಎಂ.ಪಿ. ಮುನಿವೆಂಕಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಜನಪರ ವೈದ್ಯ ಅನಿಲ್ ಕುಮಾರ್ ಎ. ವಹಿಸಿದ್ದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಡಿವೈಎಫ್ಐ ರಾಜ್ಯ ಸಮ್ಮೇಳನದ ಅಂಗವಾಗಿ ಕಲಾವಿದ ಜನಗಾನ ವೆಂಕಟರಾಮ್ ರಚಿಸಿ, ರಾಗ ಸಂಯೋಜಿಸಿರುವ ಯುವ ಜಾಗೃತಿ ಗೀತೆಗಳನ್ನು ಬಿಡುಗಡೆ ಮಾಡಲಾಯಿತು. ಬಳಿಕ ಜನಗಾನ ವೆಂಕಟರಾಮ್ ಮತ್ತು ತಂಡದವರು ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಿದರು.
ವೇದಿಕೆಯಲ್ಲಿ ಸುಧಾ ವೆಂಕಟೇಶ್, ವಕೀಲ ಕೆ.ಎಂ. ಮುನೇಗೌಡ, ಹಿತ್ತಲಹಳ್ಳಿ ರಮೇಶ್, ವಕೀಲ ಆರ್. ಮಟಮಪ್ಪ, ರಾಜಾಕಾಂತ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಹರೀಶ್, ರಾಜ್ಯ ಸಮಿತಿ ಸದಸ್ಯ ಇರ್ಫಾನ್ ಚೇಳೂರು, ಎ.ಎ.ಪಿ. ಮುನಿವೆಂಕಟಪ್ಪ, ಹಳ್ಳಿಮಕ್ಕಳ ಸಂಘದ ಉಪಾಧ್ಯಕ್ಷ ವೆಂಕಟರವಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯುವಜನರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ : ‘ನಾವು ಕಳ್ಳರಲ್ಲ… ಈ ದೇಶದ ನಾಗರಿಕರು; ನಮ್ಮ ಮತದ ಹಕ್ಕು ಕಸಿಯಲು ಬಿಡಲ್ಲ’ Janashakthi Media
