ಉದ್ಯಾನ ಭೂಮಿ ಬಳಕೆಗೆ ಶೇ.5ರ ಮಿತಿ: ಮಸೂದೆ ಮರುಪರಿಶೀಲನೆಗೆ ಮುಂದಾದ ಡಿ.ಕೆ. ಶಿವಕುಮಾರ್

ಬೆಂಗಳೂರು: ಉದ್ಯಾನವನಗಳ ಭೂಮಿಯ ಶೇ.5ರಷ್ಟು ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಕರ್ನಾಟಕ ಸರ್ಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಮಸೂದೆ–2026ಕ್ಕೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಮಸೂದೆಯನ್ನು ಮರುಪರಿಶೀಲಿಸುವ ಸಾಧ್ಯತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಉದ್ಯಾನ

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಉದ್ಯಾನ ಭೂಮಿಯ ಶೇ.5ರಷ್ಟು ಭಾಗವನ್ನು ಇತರ ಉದ್ದೇಶಗಳಿಗೆ ಬಳಸುವ ಪ್ರಸ್ತಾವನೆ ಏಕೆ ತರಲಾಯಿತು, ಹಿಂದಿನ ಸರ್ಕಾರಗಳು ಉದ್ಯಾನ ಭೂಮಿಯನ್ನು ಹೇಗೆ ಬಳಸಿಕೊಂಡಿವೆ ಹಾಗೂ ಯಾವ ಭೂಮಿ ಯಾರಿಗೆ ಹಂಚಿಕೆಯಾಗಿದೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು. ಈ ಕುರಿತು ಕಡತಗಳನ್ನು ತರಿಸಿಕೊಂಡು ವಿಧಾನಸಭೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸಬಹುದು ಎಂದು ತಿಳಿಸಿದರು.

ಲಾಲ್‌ಬಾಗ್‌ ಭೂಮಿಯ ಬಳಕೆಯೂ ಪರಿಶೀಲನೆ

ಮೆಟ್ರೊ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಲಾಲ್‌ಬಾಗ್‌ನ ಭೂಮಿ ನೀಡಿರುವ ವಿಚಾರವನ್ನೂ ಪರಿಶೀಲಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದರು. ಬೆಂಗಳೂರಿನಲ್ಲಿರುವ ಉದ್ಯಾನ ಭೂಮಿಯ ಬಳಕೆಗೆ ಸಂಬಂಧಿಸಿದಂತೆ ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂಬ ಸೂಚನೆಯನ್ನು ಅವರು ನೀಡಿದರು. ಉದ್ಯಾನ

ಇದನ್ನೂ ಓದಿ : ನ್ಯೂಯಾರ್ಕಿನಲ್ಲಿ ಆರೆಸ್ಸೆಸ್ – ವಿರೋಧಿ ಪ್ರದರ್ಶನ, ಭಾಗವತ್ ಕಥನವನ್ನು ಬದಲಾಯಿಸಬೇಕಾಯಿತು

ವಿರೋಧ ಪಕ್ಷದ ಸಲಹೆಗೂ ಅವಕಾಶ

ಮಸೂದೆಯ ಕುರಿತು ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರಿಂದ ಬರುವ ಸಲಹೆಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಿದೆ ಎಂದು ಶಿವಕುಮಾರ್ ಹೇಳಿದರು. ಉದ್ಯಾನ ಭೂಮಿಯ ವಿಚಾರದಲ್ಲಿ ಯಾರೂ ಆತಂಕಪಡಬೇಕಿಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾದಾಗ ವಿರೋಧ ಪಕ್ಷಗಳು ಚರ್ಚೆಯಲ್ಲಿ ಭಾಗವಹಿಸದೆ ಧರಣಿಯಲ್ಲಿ ತೊಡಗಿದ್ದವು ಎಂದು ಅವರು ಟೀಕಿಸಿದರು. ತಾವು ಯಾವುದೇ ವಿಚಾರದಲ್ಲಿ ಹಠ ಹಿಡಿದಿಲ್ಲ; ಚರ್ಚೆಗೆ ಮತ್ತು ವಿರೋಧ ಪಕ್ಷಗಳ ಸಲಹೆಗಳನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ಹೇಳಿದರು.

ಬೆಂಗಳೂರಿನಲ್ಲಿ ನಾಲ್ಕು ಹೊಸ ಲಾಲ್‌ಬಾಗ್‌

ಬೆಂಗಳೂರಿನಲ್ಲಿ ನಾಲ್ಕು ಹೊಸ ಲಾಲ್‌ಬಾಗ್‌ ಮಾದರಿಯ ಉದ್ಯಾನಗಳನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಇದೇ ವೇಳೆ, ತಮ್ಮ ಸರ್ಕಾರ ಉದ್ಯಾನವನಗಳ ಸಂರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಎಷ್ಟು ಹೊಸ ಉದ್ಯಾನಗಳನ್ನು ನಿರ್ಮಿಸಿತು ಎಂದು ಪ್ರಶ್ನಿಸಿದರು.

ಮಳೆಗಾಲದ ಅಧಿವೇಶನವು ಇತ್ತೀಚೆಗೆ ಏಕಾಏಕಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯುವ ಚಿಂತನೆಯೂ ಸರ್ಕಾರದಲ್ಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಉದ್ಯಾನ ಭೂಮಿ ಬಳಕೆಗೆ ಸಂಬಂಧಿಸಿದ ಮಸೂದೆ ಮತ್ತೊಮ್ಮೆ ಚರ್ಚೆಗೆ ಬರುವ ಸಾಧ್ಯತೆ ಇದೆ. ಉದ್ಯಾನ

ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *