ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಬಿಜೆಪಿ ನೀಡಿದ್ದ ‘ಅಚ್ಛೇ ದಿನ್’ ಭರವಸೆ ಈಗ ಜನಸಾಮಾನ್ಯರ ಕುಟುಂಬದ ಬಜೆಟ್ ಮೇಲೆ ನಿರಂತರ ಹೊರೆ ತಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯ ಜನರ ಅಡುಗೆ ಮನೆಯ ಖರ್ಚು ಮತ್ತಷ್ಟು ಹೆಚ್ಚಾಗಿದೆ ಎಂದು ಖರ್ಗೆ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈರುಳ್ಳಿ ಬೆಲೆ ಶೇ 59ರಷ್ಟು ಏರಿಕೆಯಾಗಿದ್ದು, ಹಲವು ನಗರಗಳಲ್ಲಿ ಕೆ.ಜಿ.ಗೆ ₹50ರಿಂದ ₹60ರವರೆಗೆ ಮಾರಾಟವಾಗುತ್ತಿದೆ. ಸಕ್ಕರೆ ಬೆಲೆ ಕೆ.ಜಿ.ಗೆ ₹60–70ರಷ್ಟಿದ್ದು, ಕೆಲವು ಕಡೆ ₹72ಕ್ಕೆ ತಲುಪಿದೆ. ಸಾಸಿವೆ ಎಣ್ಣೆ ಲೀಟರ್‌ಗೆ ₹200ಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಆರೋಗ್ಯ ವ್ಯವಸ್ಥೆಯಲ್ಲಿ ಕ್ಯೂಬಾ ವಿಶ್ವಗುರು ಆದದ್ದು ಹೇಗೆ?: ಡಾ. ಅನಿಲ್ ಕುಮಾರ್ ಅವರ ಸಂದರ್ಶನ
ಆಹಾರ ಹಣದುಬ್ಬರ ಶೇ 5.52 ಹಾಗೂ ಸಗಟು ಹಣದುಬ್ಬರ ಶೇ 9.78ರಷ್ಟಿದೆ ಎಂದು ಉಲ್ಲೇಖಿಸಿರುವ ಖರ್ಗೆ, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ನಿರಂತರವಾಗಿ ಏರುತ್ತಿರುವ ಬೆಲೆಗಳ ನಡುವೆ ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಬೆಲೆ ಏರಿಕೆ ಕುರಿತು ಸರ್ಕಾರದ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಹಾಗೂ ಜನರು ಹಣದುಬ್ಬರದ ಬಗ್ಗೆ ಪ್ರಶ್ನೆಗಳನ್ನು ಮುಂದುವರಿಸಲಿದ್ದಾರೆ ಎಂದಿದ್ದಾರೆ.
‘ಬಿಜೆಪಿ ಸರ್ಕಾರಕ್ಕೆ 12 ವರ್ಷಗಳಾಗಿವೆ. ಕೆಲವೊಮ್ಮೆ ಬೇಳೆ, ಕೆಲವೊಮ್ಮೆ ತರಕಾರಿ, ಕೆಲವೊಮ್ಮೆ ಎಣ್ಣೆ, ಸಕ್ಕರೆ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಬಜೆಟ್‌ನ್ನು ಹಾಳು ಮಾಡುತ್ತಿದೆ’ ಎಂದು ಖರ್ಗೆ ಟೀಕಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದ್ದು, ಬೆಲೆ ಏರಿಕೆಯ ಪರಿಣಾಮವನ್ನು ಮತದಾರರು ನೆನಪಿಟ್ಟುಕೊಳ್ಳಲಿದ್ದಾರೆ ಎಂದು ಪಕ್ಷ ಎಚ್ಚರಿಸಿದೆ.
ಇದನ್ನೂ ನೋಡಿ :ಉಚಿತ ಯುಪಿಐಗೆ ಶುಲ್ಕ ಬೀಳುತ್ತಾ? ಕಾರ್ಪೊರೇಟ್ ಲಾಭದ ಸಾಧನವಾಯ್ತೆ ಯುಪಿಐ? Janashakthi Media
