ಕಾಂಗ್ರೆಸ್ ನಾಯಕ, ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ನಿಂತು ಮಾತನಾಡಿದ ಸ್ಥಳವನ್ನು ಹೋಮ-ಹವನಗಳ ಆಚರಣೆಯ ಮೂಲಕ ಶುದ್ಧಿ ಮಾಡಿದರು ಎಂಬುದನ್ನು ಖಂಡಿಸಿರುವ ಬರಹ ಇದು
ಎನ್. ಚಿನ್ನಸ್ವಾಮಿ ಸೋಸಲೆ
ಭಾರತದ ಸ್ವಘೋಷಿತ ‘ಸ್ಪೃಶ್ಯ’ ಮನಸುಗಳು ಪಾರಂಪರಿಕವಾಗಿ ಅಸ್ಪೃಶ್ಯತೆಯನ್ನು ಆಚರಿಸುತ್ತಾ, ಮಾನಸಿಕವಾಗಿ ತಮ್ಮ ಮನಸ್ಸಿನ ಸೀಮಿತೆಯನ್ನು ಕಳೆದುಕೊಂಡೇ ಬದುಕುತ್ತಿವೆ. ಇದಕ್ಕೆ ಸ್ವಾತಂತ್ರ್ಯಪೂರ್ವದ ಅಸ್ಮಿತೆ ಒಂದು ರೂಪವಾದರೆ, ಭಾರತ ಸ್ವಾತಂತ್ರ್ಯ ಪಡೆದ ನಂತರ ಹಾಗೂ ಸಂವಿಧಾನ ಜಾರಿಗೆ ಬಂದು ಈ ನೆಲದ ಮೂಲನಿವಾಸಿಗಳಿಗೆ ಮೂಲಭೂತ ಹಕ್ಕುಗಳು ಸಂವಿಧಾನಾತ್ಮಕವಾಗಿ ಸಿಕ್ಕಿದ ಹಿನ್ನೆಲೆಯಿಂದ ಉದ್ಭವಿಸಿದ ಅಸ್ಪೃಶ್ಯತೆಯ ಅಜ್ಞಾನದ ಪಾರಂಪರಿಕ ಅಸ್ಮಿತೆ ಮತ್ತೊಂದು ವಿಚಿತ್ರ ರೂಪವಾಗಿದೆ. ಪದವೀಧರರ
ಭಾರತದಲ್ಲಿ ಅನೇಕ ಪ್ರಸಿದ್ಧ ಮಾನವ ನಿರ್ಮಿತ ಹಾಗೂ ಪ್ರಕೃತಿ ನಿರ್ಮಿತ ತಾಣಗಳು ವಿಶ್ವವಿಖ್ಯಾತಿಯನ್ನು ಪಡೆದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇವೆಲ್ಲಕ್ಕಿಂತಲೂ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಬೇಕಾದ ಭಾರತದ ಸ್ಪೃಶ್ಯರ ಅಜ್ಞಾನದ ಕೊಡುಗೆ ‘ಅಸ್ಪೃಶ್ಯತೆ ಆಚರಣೆ’ ಎಂಬುದು ಎಂದು ಹೇಳಿದರೆ ತಪ್ಪಾಗದು.
ಕನ್ನಡ ನಾಡಿನ ಬಹುಜನರ ನಾಯಕ, ಧೀಮಂತ ರಾಜಕಾರಣಿ, ಕರ್ನಾಟಕ ರಾಜ್ಯದ ಹಾಗೂ ಭಾರತ ಸರ್ಕಾರದ ದಕ್ಷ ಮಂತ್ರಿಯಾಗಿದ್ದ ಹಾಗೂ ಇಂದು 150 ವರ್ಷಗಳ ಇತಿಹಾಸವನ್ನು ಹೊಂದಿರುವ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಈ ಸ್ವಘೋಷಿತ ಸ್ಪೃಶ್ಯರು ಕರೆದಿರುವ ಹೊಲೆಯ ಸಮುದಾಯಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕಾಗಿ, ಅವರು ನಿಂತು ಮಾತನಾಡಿದ ಜಾಗವನ್ನು ಇವರು ಶಾಶ್ವತವಾಗಿ ತಮ್ಮ ಅಜ್ಞಾನದಿಂದ ತಮ್ಮ ಮೈ ಹಾಗೂ ಮನಸ್ಸಿನಲ್ಲಿ ಮೆತ್ತಿಕೊಂಡಿರುವ ‘ಗಂಜಲ’ದಿಂದ ಶುದ್ಧಿ ಮಾಡಲು ಮುಂದಾಗಿರುವುದು ದುರಂತವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಆಗಸ್ಟ್ 8, 2026ರಂದು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.
ಇವರು ಮಾತನಾಡಿ ವೇದಿಕೆಯಿಂದ ಬಂದ ನಂತರ ಭಾರತದ ಸ್ಪೃಶ್ಯ ಮನಸ್ಸುಗಳು, ‘ಈ ನೆಲದಲ್ಲಿ ನಾವು ಸೃಷ್ಟಿಸಿರುವ ಶಾಶ್ವತವಾದ ಅಸ್ಪೃಶ್ಯರು’ ಎಂಬ ಕಾರಣಕ್ಕಾಗಿ ತಮ್ಮ ಅಜ್ಞಾನದ ಸ್ಪೃಶ್ಯತೆಯನ್ನು ಮೆರೆದರು. ತಮ್ಮ ಪಿತ್ರಾರ್ಜಿತವಾಗಿ ಪಡೆದಿರುವ ಆಸ್ತಿ ಎಂಬ ಕಾರಣಕ್ಕಾಗಿ ಆ ಸ್ಥಳವನ್ನು ಹೋಮ ಮಾಡುವುದರ ಮೂಲಕ ಶುದ್ಧೀಕರಣ ಮಾಡಿದರು.
ಇಂತಹ ಮನಸ್ಸುಗಳಿಗೆ, ಅವರೇ ಹೇಳುವಂತೆ, ಶತಶತಮಾನಗಳಿಂದಲೂ ಕಿಂಚಿತ್ತಾದರೂ ಭಾರತವೇ ತಿಳಿದಿಲ್ಲ. ಇವರಿಗೆ ತಿಳಿದಿರುವುದು ತಮ್ಮ ಸ್ಪೃಶ್ಯತೆಯ ಅಜ್ಞಾನದ ಮೇಲರಿಮೆ ಮಾತ್ರ. ಇಂತಹ ಅಜ್ಞಾನದ ಸ್ವಘೋಷಿತ ಮೇಲರಿಮೆಗಳೇ ಭಾರತವನ್ನು ಪ್ರಪಂಚದ ಮಟ್ಟದಲ್ಲಿ ಇನ್ನೂ ಅಜ್ಞಾನದ ಕೊಂಪೆಯಲ್ಲಿ ಮುಳುಗಿಸಿರುವುದು.
ನಾಲಿಗೆಗೆ ಮುಳ್ಳು ಇಲ್ಲ ಎಂಬ ಕಾರಣಕ್ಕಾಗಿ ನಾಲಿಗೆಯನ್ನು ತಮ್ಮ ಅಜ್ಞಾನಕ್ಕೆ ಹೇಗೆ ಬೇಕೋ ಹಾಗೆ ಹೊರಡಿಸುತ್ತಾ ಪುಂಖಾನುಪುಂಖವಾಗಿ ಮಾತನಾಡುವುದು ಇವರ ಚಾಳಿ. ಇಂತಹ ಮನಸ್ಸುಗಳಿಗೆ ಶಾಶ್ವತವಾದ ಧಿಕ್ಕಾರ ಇದ್ದೇ ಇರುತ್ತದೆ.
ಭಾರತ ಪ್ರಪಂಚಕ್ಕೆ ಮಾದರಿಯಾಗುವ ರೀತಿಯಲ್ಲಿ ಜನರ ಬದುಕಿನ ಸಾಮರಸ್ಯ ಬೆಸೆಯುವ ಸಮಸಂಸ್ಕೃತಿ ಸಿದ್ಧಾಂತವನ್ನು ಪ್ರತಿಪಾದಿಸುವ ಧರ್ಮ ಹಾಗೂ ಸಂಸ್ಕೃತಿಯನ್ನು ಬೆಸೆದುಕೊಂಡ ರಾಷ್ಟ್ರ. ಇದಕ್ಕೆ ಮೌರ್ಯ ಸಾಮ್ರಾಟ ಅಶೋಕ ಚಕ್ರವರ್ತಿಯ ಕಾಲದ ಆಳ್ವಿಕೆಯ ಚರಿತ್ರೆಯೇ ಸಾಕ್ಷಿಯಾಗಿದೆ. ಈ ಹಿನ್ನೆಲೆಯ ಬೌದ್ಧ ಹಾಗೂ ಜೈನ ಧರ್ಮಗಳನ್ನು ತನ್ನ ಒಡಲಿನಲ್ಲಿ ಉದಯಿಸಿಕೊಂಡ ದೇಶ ಎಂದು ತನಗೆ ತಾನೇ ಹೇಳಿಕೊಳ್ಳುತ್ತದೆ.
ಆದರೆ ಈ ಸಮಸಂಸ್ಕೃತಿ ಪ್ರತಿಪಾದನೆ ಮಾಡಿದ ಭಾರತ ದೇಶದ ನೆಲದ ಸ್ಥಳೀಯ ಧರ್ಮವನ್ನು ಮಧ್ಯಪ್ರಾಚ್ಯದಿಂದ ಬದುಕನ್ನು ಅರಸುತ್ತ ಭಾರತದ ನೆಲಕ್ಕೆ ಬಂದ ವಿದೇಶಿ ಧರ್ಮದವರು ಕುತಂತ್ರದಿಂದ ನಾಶ ಮಾಡಿದ್ದಕ್ಕೆ ಚರಿತ್ರೆಯಲ್ಲಿ ದಾಖಲೆಗಳಿವೆ.
ದೇವರು ಕೇಂದ್ರಿತ ಧರ್ಮದ ಹೆಸರಿನಲ್ಲಿ ಸೃಷ್ಟಿಸಿದ ಜಾತಿ ವ್ಯವಸ್ಥೆ ಭಾರತವನ್ನು ಪ್ರಾಚೀನ ಕಾಲದಿಂದಲೂ ಶಾಶ್ವತವಾಗಿ ಇರುವಂತೆ ಮಾಡಿತು. ಈ ಅಸ್ಪೃಶ್ಯತೆ ಸೃಷ್ಟಿಗೊಂಡ ಸಂದರ್ಭದಲ್ಲಿ ಭಾರತದ ಎರಡನೇ ಹಂತದ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಅಧ್ಯಯನ ಆರಂಭಗೊಂಡಿತು.
ಮೊದಲನೇ ಮಜಲು ಬುದ್ಧ ಸ್ಥಾಪಿಸಿದ, ಜನರನ್ನು ಸಮ ಹಾಗೂ ಶ್ರಮ ಸಿದ್ಧಾಂತದ ಮೂಲಕ ಬದುಕಲು ಪ್ರೇರೇಪಣೆ ನೀಡಿದ ವಾಸ್ತವ ನೆಲೆಗಟ್ಟಿನ ಬೌದ್ಧ ಧರ್ಮದ ಸಮಸಂಸ್ಕೃತಿಯ ಮಜಲು. ಎರಡನೆಯದು ಭಾರತ ಮೇಲೆ ದಾಳಿ ಮಾಡಿದವರು ತಮ್ಮ ಅಧರ್ಮವನ್ನು ಧರ್ಮವಾಗಿಸಲು ಸೃಷ್ಟಿ ಮಾಡಿದ ಪುರಾಣದ ಧರ್ಮವನ್ನು ಮೆರೆಯಲು ಮುಂದಾದ ಕಾಲಘಟ್ಟ.
ಇದನ್ನೂ ಓದಿ : ಎರಡು ವರ್ಷಗಳಿಂದ ನಿಂತ ರಸ್ತೆ ಕಾಮಗಾರಿ: ಮಂಗಳೂರಿನಲ್ಲಿ ವಿದ್ಯಾರ್ಥಿಗಳು, ವಾಹನ ಸವಾರರಿಗೆ ಅಪಾಯ

ಈ ಕಾಲಘಟ್ಟದಲ್ಲಿಯೇ ಭಾರತದಲ್ಲಿ ಮಾನವ ವಿರೋಧಿ ಅಸ್ಪೃಶ್ಯತಾ ಆಚರಣೆ ದೇವರ ಕೇಂದ್ರಿತ ಧರ್ಮ ಹಾಗೂ ಸಮಾಜದ ಹಿನ್ನೆಲೆಯಿಂದ ಜಾರಿಗೆ ಬಂದದ್ದು.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿರುವ ಅಸ್ಪೃಶ್ಯತೆ ಆಚರಣೆಯಿಂದ ಪ್ರಾಕೃತಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಭಾರತ ಕಳೆದುಕೊಂಡದ್ದು ಅಪಾರ; ಪಡೆದುಕೊಂಡದ್ದು ಮಾತ್ರ ಅಲ್ಪ.
ಏಕೆಂದರೆ, ಭಾರತ ಶತಶತಮಾನಗಳಿಂದಲೂ ಕೇವಲ ಸ್ವಪ್ರತಿಷ್ಠೆಯ ‘ಪದವೀಧರರಿಂದ’ ಏಕಮುಖವಾಗಿ ಮೆರೆದಷ್ಟು, ಬಹುಜನರ ಹಿತವನ್ನು ಬಯಸಿದ ‘ಪ್ರಜ್ಞಾವಂತರಿಂದ’ ಬಹುಮುಖವಾಗಿ ಮೆರೆಯಲಿಲ್ಲ. ಇದಕ್ಕೆ ವಸ್ತುನಿಷ್ಠ ಕಾರಣ ಹುಡುಕುವುದೇ ಭಾರತದ ಜನಚರಿತ್ರೆಯ ಜೀವಾಳ.
ನನ್ನಪ್ಪ ನಂಜುಂಡಯ್ಯ, ನನ್ನವ್ವ ಮಲ್ಲಾಜಮ್ಮ. ಇವರು ‘ಪದವೀಧರರಲ್ಲ’, ಆದರೆ ‘ಪ್ರಜ್ಞಾವಂತರು’. ತಮ್ಮ ಜೀವನ ಹಾಗೂ ಬದುಕಿನ ಉದ್ದಕ್ಕೂ ‘ಜಾತಕಗಳನ್ನು ಓದಿದವರಲ್ಲ-ಜಾತಕಗಳನ್ನು ಬರೆಸಿದವರಲ್ಲ. ಭವಿಷ್ಯ, ಪುನರ್ಜನ್ಮ, ಸ್ವರ್ಗ, ನರಕಗಳ ಹಿಂದೆ ಕೇವಲ ಪದವಿ ಪಡೆದವರ ಶಿಕ್ಷಣದ ಗ್ರಹಿಕೆಯಂತೆ ಹೋದವರಲ್ಲ. ಏಕೆಂದರೆ, ಇವರು ಪ್ರಜ್ಞಾವಂತ ಪಾರಂಪರಿಕ ಶಿಕ್ಷಣವಂತರು.
ಜೀವನ ಹಾಗೂ ಜೀವನ ತನ್ನ ಜೀವಿತದ ಅವಧಿಯಲ್ಲಿ ಕಲಿಸುವ ಬದುಕಿನ ಪಾಠವನ್ನು ಯಾವುದೇ ಪದವಿಗಳನ್ನು ಪಡೆಯದೆ ಅಪಾರವಾಗಿ ಗ್ರಹಿಸಿದವರು. ಆ ಪ್ರಜ್ಞೆಯಿಂದಲೇ ಬದುಕಿ, ಬದುಕನ್ನು ತಮ್ಮ ಮುಂದಿನ ಪೀಳಿಗೆಗೂ ಬಳುವಳಿಯ ರೀತಿಯಲ್ಲಿ ಕಲಿಸಿದವರು.
ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ತನ್ನ ಮಕ್ಕಳು, ಅಂದು ತಾವು ಹಾಗೂ ತಮ್ಮ ಪೂರ್ವಿಕರು ಈ ನೆಲದಲ್ಲಿ ಅಮಾನವೀಯ ಕಟ್ಟುಪಾಡುಗಳ ಬಲೆಯಲ್ಲಿ ಬದುಕಿ ಬೆಂದ—ಈ ಬೆಂದ ಬದುಕಿನಲ್ಲಿಯೂ ತಮ್ಮ ಮಿತಿಯಲ್ಲಿಯೇ ಜೀವಿಸಿ, ಜೀವನವನ್ನು ಗೆದ್ದ ಬದುಕನ್ನು ಅಕ್ಷರ ರೂಪದಲ್ಲಿ ಬರೆದು ಭಾರತದ ನಿಜ ಚರಿತ್ರೆಯನ್ನು ರಚನೆ ಮಾಡುವ ಪ್ರೇರಣೆಗೆ ಮೂಲಕಾರಣರಾದವರು ಇವರು.
ಇವರ ಬದುಕಿನ ಸಾರವೇ ಇಂದು ಜನಚರಿತ್ರೆಯ ಜೀವಾಳ. ಇವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿಗಳನ್ನು ಪಡೆದ ಪದವೀಧರರಲ್ಲ. ಬದಲಿಗೆ ಪದವಿಗೆ ಪ್ರೇರಣೆಯಾದ ಪ್ರಜ್ಞಾವಂತರು.
ಬರೆಯುವವರಿಗಿಂತಲೂ ಬರೆಯಲು ಪ್ರೇರಣೆಯಾದವರೇ ಈ ನೆಲದ ಮಹಾನ್ ವಿದ್ಯಾವಂತರು. ಅಂದರೆ, ನಿಜ ನೆಲಮೂಲ ಧರ್ಮ ಹಾಗೂ ಸಂಸ್ಕೃತಿಯ ಪ್ರಜ್ಞಾವಂತರು ಎಂದರ್ಥ.
ಈ ಮಾತಿಗೆ ಸ್ಪಷ್ಟ ನಿದರ್ಶನ ಭರತಖಂಡದ ಸಾಂಸ್ಕೃತಿಕ ಸಾಕ್ಷಿಪ್ರಜ್ಞೆ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು. ದೇಶ-ವಿದೇಶಗಳಲ್ಲಿ ಗಳಿಸಿದ ಪದವಿ ಹಾಗೂ ತನ್ನ ತಾಯಿ ನೆಲದಲ್ಲಿಯೇ ಅಸ್ಪೃಶ್ಯತೆಯ ಕಳಂಕದಿಂದ ಅನುಭವಿಸಿದ ಪ್ರಜ್ಞಾವಂತ ಪದವಿಯೇ ಶ್ರೇಷ್ಠವಾದದ್ದು.
ಭಾರತವನ್ನು ಬದಲಾಯಿಸಿದ ಮಹಾನುಭಾವರಾಗಿ ಅಂಬೇಡ್ಕರ್ ಅವರು ರೂಪಿತಗೊಳ್ಳಲು, ಅಂಬೇಡ್ಕರ್ ಅವರಿಗೆ ದೇಶ-ವಿದೇಶದ ವಿಶ್ವವಿದ್ಯಾಲಯಗಳ ಪದವಿಗಿಂತಲೂ ಭಾರತ ದೇಶದಲ್ಲಿನ ಬದುಕಿನ ಅನುಭವಜನ್ಯ ಪ್ರಜ್ಞಾವಂತ ಪದವಿಯೇ ಮಹತ್ವದ್ದಾಗಿತ್ತು.
ಕೆಲವರು ಪದವಿ ಮೇಲೆ ಪದವಿ ಪಡೆದು, ತಾಂತ್ರಿಕವಾಗಿ ನಾವು ಬಹು ದೊಡ್ಡ ‘ಶಿಕ್ಷಣವಂತರು’ ಎಂದು ಬೀಗುತ್ತಿರುತ್ತಾರೆ. ಆದರೆ ಅವರಿಗೆ ಜೀವನಾನುಭವದಿಂದ ಪಡೆದ ‘ಪ್ರಜ್ಞಾವಂತ’ ಶಿಕ್ಷಣದ ಪರಿಜ್ಞಾನವೇ ಇರುವುದಿಲ್ಲ.
ಮನುಷ್ಯನ ಬದುಕಿಗೆ ‘ಪ್ರಜ್ಞಾವಂತ’ ಶಿಕ್ಷಣವೇ ಬಹುಮುಖ್ಯವಾದದ್ದೇ ಹೊರತು ‘ಪದವಿ’ ಶಿಕ್ಷಣ ಮುಖ್ಯವಲ್ಲ ಎಂಬುದನ್ನು ಅರಿಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಭಾರತ ಕೇವಲ ತಾಂತ್ರಿಕವಾಗಿ ಪದವಿಗಳ ಮೇಲೆ ಪದವಿಯನ್ನು ಪಡೆದವರ ‘ಪದವೀಧರರ’ ದೇಶವಾಗುತ್ತಿದೆಯೇ ಹೊರತು, ಬೌದ್ಧಿಕವಾಗಿ ಈ ನೆಲದಲ್ಲಿ ಗಟ್ಟಿತನದಿಂದ ಬದುಕುವ ‘ಪ್ರಜ್ಞಾವಂತ’ ಹಿನ್ನೆಲೆಯಿಂದ ಬದುಕಿನ ಅರಿವಿನ ವಾಸ್ತವದ ಶಿಕ್ಷಣ ಪಡೆಯುವವರ ದೇಶವಾಗುತ್ತಿಲ್ಲ.
ಈ ಅಜ್ಞಾನ ಪರಂಪರೆಯ ಪದ್ಧತಿಗೆ ಭಾರತದ ಸುದೀರ್ಘ ಚರಿತ್ರೆಯಲ್ಲಿ ವಿಶಾಲವಾದ ಮಾಹಿತಿ ಇದೆ. ದೇಶ ಶತಶತಮಾನಗಳಿಂದ ಕೇವಲ ಪದವೀಧರರಾಗಿದ್ದವರ ಹಿಡಿತದಲ್ಲಿ ರಾಜಪ್ರಭುತ್ವವನ್ನು ಹಿಡಿದಿಟ್ಟುಕೊಂಡಿದ್ದುದೇ ಇದಕ್ಕೆ ಪ್ರಮುಖ ಕಾರಣ.
ಅಂದು ನಮ್ಮ ದೇಶ ಭಾರತ ಬುದ್ಧ-ಬಸವರನ್ನು ಧಿಕ್ಕರಿಸಿ ಧಾರ್ಮಿಕ ಅಂಧಕಾರ ಹಾಗೂ ಈ ಅಂಧಕಾರವನ್ನು ತಮ್ಮ ಸ್ವಾರ್ಥದ ಉಜ್ವಲ ಬದುಕಿಗಾಗಿ ಸೃಷ್ಟಿಮಾಡಿಕೊಂಡಿದ್ದವರು ಅವೈಜ್ಞಾನಿಕವಾಗಿ ಸೃಷ್ಟಿ ಮಾಡಿದ ಪುರಾಣದ ಬಿಡಿಸಲಾಗದ ಇಕ್ಕಳದಲ್ಲಿ ಸಿಲುಕಿ, ತಾವು ಕೆಟ್ಟು ಇತರರನ್ನು ಶಾಶ್ವತವಾಗಿ ಕೆಡಿಸಿದರು.
ಇಂದಿನ ಪ್ರಜಾಪ್ರಭುತ್ವ ಭಾರತದ ಕಾಲಘಟ್ಟದಲ್ಲಿ ಧರ್ಮದ ಹಿಡಿತದಿಂದ ಹೊರಬರಲಾಗದಿದ್ದರೂ ಸಹ ಒಂದಷ್ಟು ಹೊರಬಂದಿದ್ದೇವೆ ಎಂಬ ಅಪ್ರಜ್ಞೆಯಿಂದಲೇ, ಶತಶತಮಾನಗಳಿಂದ ಧರ್ಮದವರ ಬಿಗಿ ಹಿಡಿತದಲ್ಲಿ ಮೌನವಾಗಿದ್ದ ‘ಜಾತಿ’ಯ ನಾನತ್ವದ ಅಮಲಿನ ಬಿಡಿಸಲಾಗದ ಇಕ್ಕಳದಲ್ಲಿ ಸಿಲುಕಿ, ಇದೇ ನನ್ನ ಪ್ರಖಾಂಡ ಪ್ರಪಂಚವೆಂದು ಅರ್ಥೈಸಿಕೊಂಡು ಶಾಶ್ವತವಾಗಿ ತಮ್ಮನ್ನು ತಾವೇ ಕೆಡಿಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಜಾತಿಯನ್ನು ನಿರಾಕರಿಸಿ ನಿಜಧರ್ಮ ಪ್ರತಿಪಾದನೆ ಮಾಡಿದ ಭಾರತ ದೇಶದ ‘ನಿಜಪದವಿ ಹಾಗೂ ಪ್ರಜ್ಞಾವಂತ’ ಪದವೀಧರರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸಹ ತಮ್ಮ ಅನುಕೂಲ ಸಾಧಕ ಪದವಿಗಳಿಗೆ ಬೇಕಾದಂತೆ ಅಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಇಂದಿನ ಸಂದರ್ಭದಲ್ಲಿ ವಾಸ್ತವ ದುರಂತ.
ಶತಶತಮಾನಗಳಿಂದ ದೇವರು ಹಾಗೂ ದೇವರ ಹೆಸರಲ್ಲಿ ಮಾಡುವ ಅಮಾನವೀಯ ಮೌಢ್ಯಾಚರಣೆ, ಜಾತಿ ಹಾಗೂ ಅಸ್ಪೃಶ್ಯತೆ ಆಚರಣೆಗಳು ಮನೆಯಲ್ಲಿ ಅಲ್ಲದಿದ್ದರೂ ಮನದಲ್ಲಿ ಇದು ‘ತಪ್ಪು’ ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಸಹ, ಅದನ್ನೇ ಬಂಡವಾಳವನ್ನಾಗಿಸಿಕೊಂಡು ಅಜ್ಞಾನ-ಅಂಧಕಾರದಲ್ಲಿಯೇ ಮೆರೆದ ಕಾರಣಕ್ಕಾಗಿ ದೇಶ ಸಾಂಸ್ಕೃತಿಕವಾಗಿ ಸೋತಿತು.
ಇದು ಸತ್ಯ. ಈ ಸತ್ಯ ಎಷ್ಟು ನಿಜವೋ, ಅಷ್ಟೇ ನಿಜ ಇಂದು ಪ್ರಜಾಪ್ರಭುತ್ವ ಭಾರತದಲ್ಲಿ ಹೆಚ್ಚು ಹೆಚ್ಚು ಜಾತಿಯ ಅಹಂಗಳು ಕಂಗೊಳಿಸುತ್ತಿರುವುದು.
ಸೇವಿಸುವ ಆಹಾರ, ವಾಸಿಸುವ ಸ್ಥಳ, ಮಾಡುವ ವೃತ್ತಿ, ಪೂಜಿಸುವ ದೇವರು—ಇದ್ಯಾವುದರ ಆಧಾರದಿಂದಲೂ ಮನುಷ್ಯನನ್ನು ‘ನಾನು ಶ್ರೇಷ್ಠ-ನೀನು ಕನಿಷ್ಠ’ ಎಂದು ಪರಿಗಣಿಸಬಾರದೆಂದು ಪ್ರಜಾಪ್ರಭುತ್ವ ಭಾರತದ ಜನಪರ ಆಳ್ವಿಕೆಯ ಆಧಾರಸ್ತಂಭವಾಗಿರುವ, ಪ್ರಪಂಚಕ್ಕೆ ಮಾದರಿಯಾದ ನಮ್ಮ ಲಿಖಿತ ಸಂವಿಧಾನ ಕಾನೂನು ಮೂಲಕ ರೂಪಿಸಿದರೂ ಇದನ್ನು ಒಪ್ಪುತ್ತಿಲ್ಲ.
ಎರಡುವರೆ ಸಾವಿರ ವರ್ಷಗಳ ಅಜ್ಞಾನ ಭಾರತದಲ್ಲಿ ಇದ್ದ ಈ ಜನ, ಪ್ರಜ್ಞಾವಂತ ಲಿಖಿತ ಸಂವಿಧಾನವನ್ನು ಧಿಕ್ಕರಿಸಿ, ತನ್ನ ಪಾರಂಪರಿಕ ಪದವಿ ರೂಪದ ಅಲಿಖಿತ ಸಂವಿಧಾನದ ಕಣ್ಣು, ಕಿವಿ, ಮೂಗು ಇಲ್ಲದಿದ್ದರೂ ಇದೇ ಎಂದು ಅಪ್ರಜ್ಞಾಪೂರ್ವಕವಾಗಿ ವಾದ ಮಾಡುವ ಸಂವಿಧಾನವನ್ನೇ ಬಯಸಿ ಬದುಕುತ್ತಿರುವ ದೇಶ ಭಾರತ.
ಇಂತಹ ಅಜ್ಞಾನದ ಪದವಿ ಪಡೆದವರ ಭಾರತ ಹೇಗೆ ತಾನೇ ಬೌದ್ಧಿಕವಾಗಿ ಮುಂದುವರೆಯಲು ಸಾಧ್ಯ? ಭೌತಿಕವಾಗಿ ಏನೆಲ್ಲ ಮುಂದುವರಿಯಬಹುದು. ಆದರೆ ಬೌದ್ಧಿಕವಾಗಿ ಮುಂದುವರೆಯಲು ಇರುವ ಏಕೈಕ ಮಾರ್ಗವೆಂದರೆ ಅದು ಸಂವಿಧಾನದ ಬೌದ್ಧಿಕ ಮಾರ್ಗ.
ಇದನ್ನು ಒಪ್ಪದೆ ತಮ್ಮಲ್ಲಿ ಮನೆ ಮಾಡಿರುವ ಅಜ್ಞಾನ, ಅಂಧಕಾರ ಹಾಗೂ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಾಧ್ಯವೇ ಇಲ್ಲ.
ಜಾತಿಯ ಅಮಲು—‘ನಾನು ಶ್ರೇಷ್ಠ. ನಮ್ಮ ಜಾತಿಯ ಶತಶತಮಾನಗಳ ಇಂದಿನ ಸಾಂಸ್ಕೃತಿಕ ನಾಯಕ ಶ್ರೇಷ್ಠ. ನಮ್ಮ ಜಾತಿಯ ಈ ಮಹಾನ್ ನಾಯಕನೇ ಈ ದೇಶದ ಧರ್ಮಗ್ರಂಥ ಬರೆದದ್ದು. ಭಾರತದ ಧರ್ಮದ ಸೃಷ್ಟಿಕರ್ತನೇ ನನ್ನ ಜಾತಿಯವನು. ದೇವರನ್ನು ಸೃಷ್ಟಿ ಮಾಡಿದವನು ನಮ್ಮ ಜಾತಿಯವನು. ದೇವರಿಗೆ ದೀಪವನ್ನು ಮಾಡಿಕೊಟ್ಟವನು ನನ್ನ ಜಾತಿಯವನು. ದೇವರಿಗೆ ಹೂವನ್ನು ತಂದುಕೊಟ್ಟವನು ನನ್ನ ಜಾತಿಯವನು. ದೇವರಿಗೆ ಮಡಿಕೆ ಮಾಡಿಕೊಟ್ಟವನು ನನ್ನ ಜಾತಿಯವನು’ ಎಂದು ದೇವರನ್ನೇ ಪ್ರತಿನಿಧಿಸುವ ಹಿನ್ನೆಲೆಯಿಂದಲೇ ಭಾರತದಲ್ಲಿ ಜಾತಿ ವ್ಯವಸ್ಥೆ—ಧರ್ಮಸಾರುವ ಮನುಷ್ಯ ಬದುಕಿನ ಸಮ ಹಾಗೂ ಶ್ರಮಸಂಸ್ಕೃತಿಗಿಂತಲೂ, ಮನುಷ್ಯ ತನ್ನಂತೆ ಇರುವ ಇನ್ನೊಬ್ಬ ಮನುಷ್ಯನನ್ನೇ ಅಸ್ಪೃಶ್ಯತೆಯ ಹಿನ್ನೆಲೆಯಿಂದ ಭೇದ-ಭಾವ ಮಾಡುವ ಜಾತಿ ವ್ಯವಸ್ಥೆಯೇ ಶ್ರೇಷ್ಠವಾದದ್ದು ಎಂಬ ಅಹಂನ ಸ್ವಪ್ರತಿಷ್ಠೆಯ ಹಿಡಿತದಲ್ಲಿ ಸಿಲುಕಿ ಶಾಶ್ವತವಾಗಿ ಕೆಡುತ್ತಿದೆ.

ಇಂತಹ ಅಜ್ಞಾನದ ಪದವಿ ಪಡೆಯುತ್ತಿರುವ ಜಾತಿವಂತರಿಗೆ ಈ ನೆಲದ ಪ್ರಜ್ಞಾವಂತರು ಹೇಳಿದ
‘ಆಸೆಯೇ ದುಃಖಕ್ಕೆ ಮೂಲ’,
‘ದಯವೇ ಧರ್ಮದ ಮೂಲವಯ್ಯ’,
‘ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ, ಅಟ್ಟು ಉಣ್ಣದ ವಸ್ತುಗಳಿಲ್ಲ’,
‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಏನಾದರೂ ಬಲ್ಲಿರಾ’,
‘ಮಾನವ ಜನ್ಮ ದೊಡ್ಡದು, ಇದನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರ’,
‘ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’
ಎಂಬ ನಿಜ ಬದುಕಿನ ಸಾರದಲ್ಲಿ ಬದುಕಿದ ಮಹಾನ್ ಚೇತನರ ಮಾತುಗಳು ಗೌಣವಾಗುತ್ತಿವೆ.
ಅವರು ಸಮಸಂಸ್ಕೃತಿ ಪ್ರತಿಪಾದನೆಗಾಗಿ ಪ್ರತಿಪಾದನೆ ಮಾಡಿದ ‘ಏನಾದರೂ ಆಗು-ಮೊದಲು ನೀನು ಮಾನವನಾಗು’ ಎಂಬ ತತ್ವ ಸಿದ್ಧಾಂತದ ಪಾಲನೆಯಲ್ಲಿ ಸಂಪೂರ್ಣವಾಗಿ ಸೋಲುತ್ತಿದ್ದೇವೆ.
ಶತಶತಮಾನಗಳಿಂದಲೂ ಭಾರತದ ನೆಲದಲ್ಲಿ ‘ನಾವೆಲ್ಲ ಒಂದು’ ಎಂಬ ಮನೋಭಾವನೆಯು ಜಾತಿ ಹಾಗೂ ಜಾತಿಯ ಶ್ರೇಷ್ಠತೆ ಮತ್ತು ಕನಿಷ್ಠತೆಯ ಮನೋಭಾವನೆಯಿಂದ ಸೋತಿತು.
ಅಂದರೆ, ಜನಾಂಗೀಯವಾಗಿ ಸಮಾನ ದೃಷ್ಟಿಯಿಂದ ನೋಡುವ ಧರ್ಮ ಸೋತು, ತಮ್ಮ ಪ್ರಜ್ಞೆಯ ಮೂಲಕ ಈ ನೆಲಸಂಸ್ಕೃತಿಯ ನಿಜವಾದ ಧರ್ಮ ಪ್ರತಿಪಾದನೆ ಮಾಡಿದ ಈ ನೆಲದ ವಾರಸುದಾರರನ್ನು ಇಂದಿನ ಪದವೀಧರರು ತಮ್ಮ ಅಪ್ರಜ್ಞಾವಂತಿಕೆಯಿಂದ ‘ಜಾತಿ’ಯ ನಾಯಕರಾಗಿ ಸೃಷ್ಟಿಸಿಕೊಂಡು ಅಜ್ಞಾನದ ಪರಮಾವಧಿಯಲ್ಲಿ ಕಂಗೊಳಿಸುತ್ತಿದ್ದಾರೆ.
ಪ್ರಜ್ಞಾವಂತರಾದರೂ ಸಹ ಇಂದಿನ ಸಂದರ್ಭದಲ್ಲಿ ಅಂತಹ ಪ್ರಜ್ಞಾವಂತರು ಕೇವಲ ಜಾತಿಯ ನಾಯಕರಾಗಿ ಮಾಡಿಕೊಂಡವರ ಬೀದಿ ರಂಪಾಟದಲ್ಲಿ ಸಿಲುಕಿ ‘ಅಜ್ಞಾನದಿಂದ ಜೀವಂತವಾಗಿದ್ದಾರೆ-ಬೌದ್ಧಿಕವಾಗಿ ಸರ್ವನಾಶವಾಗುತ್ತಿದ್ದಾರೆ’.
ಶತಶತಮಾನಗಳಿಂದಲೂ ಭಾರತದಲ್ಲಿ ಶಿಕ್ಷಣವನ್ನು ಕೇವಲ ತಮ್ಮ ಸ್ವತ್ತಾಗಿಸಿಕೊಂಡು, ತಾವೇ-ತಮಗಾಗಿ ನಿರ್ಮಿಸಿಕೊಂಡಿದ್ದ ಗುರುಕುಲದಿಂದ ಶಿಕ್ಷಣ ಪಡೆದು ಈ ದೇಶದ ಬಹುದೊಡ್ಡ ಪದವೀಧರರು ಎಂದು ಹೇಳಿಕೊಂಡದ್ದು ಒಂದು ವರ್ಗ.
ಹೀಗೆ ಪದವಿ ಪಡೆದವರು ತಮಗೆ ಮಾತ್ರ ಅರ್ಥವಾಗುವ ಸ್ವಪ್ರತಿಷ್ಠೆಯ ಪದವಿಗಳನ್ನು ಪಡೆದು ನಾವು ಬಹುದೊಡ್ಡ ಶಿಕ್ಷಣವಂತರು ಎಂದು ಹೇಳಿಕೊಂಡು ಭಾರತದ ದೇಶವನ್ನು ಅಪ್ರಜ್ಞಾವಂತ ದೇಶವನ್ನಾಗಿಸಿದರು.
ಅದು ಅಂದಿನ ಕಥೆ.
ಇಂದು—ಪ್ರಜಾಪ್ರಭುತ್ವ ಭಾರತದಲ್ಲಿ ಜಾತಿಗಳು ಹೆಚ್ಚು ಮಾತನಾಡಲು ಆರಂಭಗೊಂಡ ಸಂದರ್ಭ—ಜಾತಿಯ ಅಂಧಕಾರ ಹಾಗೂ ಅಹಂನಲ್ಲಿ ಪದವಿಗಳನ್ನು ಪಡೆದು ನಾವು ಶಿಕ್ಷಣವಂತರು ಎಂದು ಹೇಳಿಕೊಂಡು, ಯಾವುದೇ ಅರ್ಥದಲ್ಲಿಯೂ ಪ್ರಜ್ಞಾವಂತರಾಗದೆ ಬದುಕಿದ್ದು, ಸತ್ತವರ ಹಾಗೆ ತಮ್ಮ ತಮ್ಮ ಜಾತಿಯ ಶ್ರೇಷ್ಠತೆಯ ಹೆಸರಿನಲ್ಲಿ ಪೌರುಷದಿಂದ ಬದುಕುತ್ತಿದ್ದಾರೆ.
ಇಂದು ಪದವಿ ಮೇಲೆ ಪದವಿಯನ್ನು ಪಡೆಯುತ್ತಿರುವವರಿಗೆ ಬದುಕಿನ ಪ್ರಜ್ಞೆಯ ಪದವಿಯ ಅರಿವೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಪ್ರಜ್ಞಾವಂತರಿಗಿಂತಲೂ ಪದವೀಧರರಿಂದಲೇ ದೇಶದ ಸಂವಿಧಾನ ಹಾಗೂ ಸಂವಿಧಾನ ರಚನಾಕಾರರ ಮೇಲೆ ಆಗುತ್ತಿರುವ ಅಬೌದ್ಧಿಕ ದಾಳಿ. ಇದಕ್ಕೆ ಸ್ಪಷ್ಟ ನಿದರ್ಶನ.
ಭಾರತ ದೇಶ ಶತಶತಮಾನಗಳಿಂದ ಪಂಡಿತರಿಂದ ಪಂಡಿತರನ್ನು ಏಕಮುಖವಾಗಿ ಸೃಷ್ಟಿ ಮಾಡಿದ ದೇಶವೇ ಆಗಿದೆ.
ಈ ಹಿನ್ನೆಲೆಯಿಂದಲೇ ಸಾಮಾಜಿಕ ಹಾಗೂ ಧಾರ್ಮಿಕವಾಗಿ ತಮ್ಮ ಸ್ವಪ್ರತಿಷ್ಠೆಗಾಗಿ ಸೃಷ್ಟಿ ಮಾಡಿದ್ದ ಪಾಮರರ ‘ಸಮ ಹಾಗೂ ಶ್ರಮ’ ಸಿದ್ಧಾಂತದ ಪ್ರಜ್ಞಾವಂತರನ್ನು ಪದವಿ (ಶಿಕ್ಷಣ) ವಂತರನ್ನಾಗಿ ಮಾಡಲೇ ಇಲ್ಲ.
ಈ ಅರ್ಥದಲ್ಲಿ ನಾನು ಹೇಳುತ್ತಿರುವುದು—ಭಾರತ ‘ಪದವಿ ಮೇಲೆ ಪದವಿ ಪಡೆದು, ಆ ಮೂಲಕ ತಮಗೆ ತಾವೇ ಕರೆದುಕೊಂಡಿರುವ ಶಿಕ್ಷಣವಂತರ ದೇಶವೇ ಹೊರತು, ಸಮ ಹಾಗೂ ಶ್ರಮಸಂಸ್ಕೃತಿ ಸಿದ್ಧಾಂತದ ಮೇಲೆ ರಾಷ್ಟ್ರವನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಲು ಮುಂದಾಗಬೇಕಾದ ಪ್ರಜ್ಞಾವಂತರ ದೇಶವಲ್ಲ’ ಎಂದು.
ಇದು ಚಾರಿತ್ರಿಕವಾಗಿ ಸತ್ಯ.
ಇಂತಹ ನೆಲಮೂಲ ಸಂಸ್ಕೃತಿಯ ಪ್ರಜ್ಞಾವಂತರು ತಮ್ಮ ಬದುಕಿನ ಪ್ರಜ್ಞಾವಂತಿಕೆಯ ಜೊತೆ, ಕೇವಲ ಸ್ವಾರ್ಥಕ್ಕಾಗಿ ತಾಂತ್ರಿಕ ಹಿನ್ನೆಲೆಗೆ ಪದವಿಯನ್ನು ಪಡೆದು ತಮಗೆ ತಾವೇ ಪಂಡಿತರಾದ ರೀತಿಯಲ್ಲದೆ, ಭಾರತದ ಜನರ ಬದುಕಿನ ಅರಿವಿನ ಪದವಿಗಳನ್ನು ಪಡೆಯುವಷ್ಟು ಶಿಕ್ಷಣವಂತರಾಗಿದ್ದರೆ, ಭಾರತದ ಚರಿತ್ರೆ ಈ ಪ್ರಪಂಚದ ಭೂಪಟದಲ್ಲಿ ಉಜ್ವಲವಾಗುತ್ತಿತ್ತು.
ಏಕೆಂದರೆ ಭಾರತ ಶತಶತಮಾನಗಳಿಂದಲೂ ಅತ್ಯಂತ ಹೆಚ್ಚು ಮಾನವ ಸಂಪತ್ತನ್ನು ಹೊಂದಿರುವ ರಾಷ್ಟ್ರ. ಆದರೆ ದುರಂತವೆಂದರೆ, ಸುದೀರ್ಘ ಕಾಲದಿಂದಲೂ ಧಾರ್ಮಿಕ ಹಾಗೂ ಸಾಮಾಜಿಕ ಸಂಕೋಲೆಯಲ್ಲಿ ಸಿಲುಕಿ ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ ಮಾನವರು ಶಿಕ್ಷಣವನ್ನು ಪಡೆದ ರಾಷ್ಟ್ರವಾಗಿ ರೂಪಿತಗೊಂಡದ್ದು ದುರಂತ.
ಮೌಢ್ಯ-ಅಂಧಕಾರ-ಅಮಾನವೀಯ ಪದ್ಧತಿಗಳ ಆಚರಣೆಯ ಸ್ಥಾನಮಾನಗಳಲ್ಲಿ ಪ್ರಪಂಚದಲ್ಲಿ ಮೊದಲ ಅಥವಾ ಎರಡನೇ ಸ್ಥಾನದಲ್ಲಿರುವುದು ದುರಂತವೇ ಆಗಿದೆ.
ಇಂದಿನ ಸಂದರ್ಭದಲ್ಲಿ ಭಾರತಕ್ಕೆ ಬೇಕಿರುವುದು ಕೇವಲ ಪದವಿಗಳ ಪ್ರಜೆಗಳಲ್ಲ—ಬದಲಿಗೆ ಪ್ರಜ್ಞಾವಂತ ಪ್ರಜೆಗಳು. ಶತಶತಮಾನಗಳಿಂದಲೂ ಭಾರತ ಹಾಗೂ ಭಾರತೀಯತೆ ಉಳಿದಿರುವುದೇ ಇಂತಹ ಪ್ರಜ್ಞಾವಂತ ಪ್ರಜೆಗಳಿಂದಲೇ. ಇದಕ್ಕೆ ಬುದ್ಧ-ಬಸವ-ಅಲ್ಲಮ-ಕನಕ-ಅಂಬೇಡ್ಕರ್ ಅವರೇ ಸಾಕ್ಷಿ. ಇದಿಷ್ಟೇ ಭಾರತದ ಜನಕೇಂದ್ರಿತ ಚರಿತ್ರೆಯ ಜೀವಾಳ.
ಇದನ್ನೂನೋಡಿ : RSS ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಬದಲು ‘ವಂದೇ ಮಾತರಂ’ ಹಾಡಿ! ಪ್ರಿಯಾಂಕ್ ಖರ್ಗೆ ಸವಾಲು Janashakthi Media
