ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಡಿವೈಎಫ್‌ಐ ಆಗ್ರಹ

ತೋರಣಗಲ್ಲು: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು 200 ಹಾಸಿಗೆಗಳ ವಿಶೇಷ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ವತಿಯಿಂದ ತಾಲೂಕು ವೈದ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ತೋರಣಗಲ್ಲು

ತೋರಣಗಲ್ಲು ಕೈಗಾರಿಕಾ ಪ್ರದೇಶವಾಗಿದ್ದು, ಹೋಬಳಿ ವ್ಯಾಪ್ತಿಯ 9 ಗ್ರಾಮ ಪಂಚಾಯಿತಿಗಳು, ಒಂದು ಪುರಸಭೆ ಹಾಗೂ 41 ಗ್ರಾಮಗಳಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯ ಮೇಲಿನ ಒತ್ತಡ ಹೆಚ್ಚಾಗಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಡಿವೈಎಫ್‌ಐ ಒತ್ತಾಯಿಸಿದೆ.

ಆಸ್ಪತ್ರೆಯಲ್ಲಿ 30ರಿಂದ 50 ಹಾಸಿಗೆಗಳ ಹೆಚ್ಚಳಕ್ಕೆ ಕ್ರಮ ಕೈಗೊಂಡಿರುವುದನ್ನು ಸ್ವಾಗತಿಸಿರುವ ಸಂಘಟನೆ, ಮುಂದಿನ ಹಂತದಲ್ಲಿ ಆಸ್ಪತ್ರೆಯನ್ನು 200 ಹಾಸಿಗೆಗಳಾಗಿ ಮೇಲ್ದರ್ಜೆಗೇರಿಸಿ, ವಿವಿಧ ವೈದ್ಯಕೀಯ ತಜ್ಞರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದೆ.

ಆಸ್ಪತ್ರೆಯಲ್ಲಿ 24 ಗಂಟೆಯೂ ವೈದ್ಯರು ಮತ್ತು ಸಿಬ್ಬಂದಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು. ರಕ್ತ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲು ಅಗತ್ಯ ಸಲಕರಣೆಗಳನ್ನು ಒದಗಿಸಬೇಕು. ಬಿಪಿ ಮತ್ತು ಸಕ್ಕರೆ ಪರೀಕ್ಷೆಯ ತಂತ್ರಜ್ಞರು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಸಮಯಕ್ಕೆ ಸರಿಯಾಗಿ ನಿಯೋಜಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೆಚ್ಚಿಸಿ 24 ಗಂಟೆಯೂ ನೀರು ಲಭ್ಯವಾಗುವಂತೆ ಮಾಡಬೇಕು. ಆಸ್ಪತ್ರೆ ಆವರಣದಲ್ಲಿ ಬೆಳಕಿನ ದೀಪಗಳನ್ನು ಅಳವಡಿಸಿ, ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿಯ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದಲ್ಲದೆ, ಶವಗಾರ ಕಟ್ಟಡ ನಿರ್ಮಿಸಬೇಕು, ಆಸ್ಪತ್ರೆಯ ಜಾಗವನ್ನು ಸರ್ವೆ ಮಾಡಿಸಿ ಆಸ್ಪತ್ರೆಯ ಹೆಸರಿಗೆ ದಾಖಲಿಸಬೇಕು, ಆಸ್ಪತ್ರೆ ಮತ್ತು ಆವರಣದಲ್ಲಿ ನಿರಂತರ ಸ್ವಚ್ಛತೆ ಕಾಪಾಡಬೇಕು ಹಾಗೂ ಒಳರೋಗಿಗಳು, ಗರ್ಭಿಣಿಯರು ಮತ್ತು ಅವರ ಸಹಾಯಕರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ : ನೈಸ್‌ ರಸ್ತೆ ಯೋಜನೆ ಸರ್ಕಾರ ವಶಕ್ಕೆ ಪಡೆಯಲಿ: ಕುಮಾರಸ್ವಾಮಿ ಆಗ್ರಹ

ತಾಳೂರು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನೂ ಡಿವೈಎಫ್‌ಐ ಮುಂದಿಟ್ಟಿದೆ.

ಈ ಹಿಂದೆ ಮಾರ್ಚ್‌ 2ರಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಮಾರ್ಚ್‌ 5ರಂದು ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ 15 ದಿನಗಳೊಳಗೆ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಮನವಿ ಸ್ವೀಕರಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಹರೀಶ್‌, ಜಿಲ್ಲಾ ಆರೋಗ್ಯಾಧಿಕಾರಿ ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ತಾಲೂಕು ಕಾರ್ಯದರ್ಶಿ ನಾಗಭೂಷಣ, ಅಧ್ಯಕ್ಷ ಶರೀಫ್, ಮುಖಂಡರಾದ ಲೋಕೇಶ್, ಅನಿಲ್, ಶಂಕ್ರಮ್ಮ, ಕಲಾಂದರ್ ಬಾಷಾ, ದೇವದಾಸಿ ವಿಮೋಚನಾ ಸಂಘಟನೆಯ ಎ. ಸ್ವಾಮಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಿ. ದೇವಣ್ಣ, ಸಿ.ಡಿ. ಹಾಲಸ್ವಾಮಿ, ಎನ್. ಅಂಬರೀಶ್, ಸಿದ್ದಪ್ಪ, ಹೆಚ್. ತಾಯಪ್ಪ, ಕೆ. ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಸ್ವಾತಂತ್ರ್ಯಕ್ಕೆ 79 ವರ್ಷ — ದುಡಿಯುವ ಜನರಿಗೆ ಸಿಕ್ಕಿತೇ ಸ್ವಾತಂತ್ರ್ಯ? Janashakthi Media

Donate Janashakthi Media

Leave a Reply

Your email address will not be published. Required fields are marked *