ನವದೆಹಲಿ: ರಾಜ್ಯಸಭೆಯಲ್ಲಿ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ವಿಚಾರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ನಡುವೆ ತೀವ್ರ ವಾಗ್ವಾದ ನಡೆಯಿತು. ಯುಪಿಐ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾವ ತೆರಿಗೆ ಮಸೂದೆಯಲ್ಲಿ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
2026ರ ತೆರಿಗೆ ಮಸೂದೆಯ ಕುರಿತು ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಜಾನ್ ಬ್ರಿಟ್ಟಾಸ್, ಅಮೆರಿಕದ ಒತ್ತಡದಿಂದ ಭಾರತದಲ್ಲಿ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಬ್ರೆಜಿಲ್ನಲ್ಲಿಯೂ ಇದೇ ರೀತಿಯ ಒತ್ತಡ ಎದುರಾಗಿತ್ತು ಎಂದು ಅವರು ಪ್ರಸ್ತಾಪಿಸಿದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಯುಪಿಐ ಪಾವತಿ ವ್ಯವಸ್ಥೆ ಉಚಿತವಾಗಿಯೇ ಮುಂದುವರಿಯಲಿದೆ ಎಂದು ಹೇಳಿದರು. ಬ್ರಿಟ್ಟಾಸ್ ತಮ್ಮ ಉತ್ತರವನ್ನು ಆಲಿಸದೆ ಹೊರನಡೆದಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಯುಪಿಐ ಶುಲ್ಕದ ಕುರಿತು ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ ಸರ್ಕಾರದ ನಿಲುವನ್ನು ವಾಸ್ತವಾಂಶಗಳೊಂದಿಗೆ ವಿವರಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಕಮ್ಯುನಿಸ್ಟ್ ಪಕ್ಷಗಳ ವಿರುದ್ಧ ತೀವ್ರ ಟೀಕಾತ್ಮಕ ಹೇಳಿಕೆಗಳನ್ನು ನೀಡಿದರು. ಬ್ರಿಟ್ಟಾಸ್ ವಾದಗಳನ್ನು ಕೇಳದೆ ಹೊರನಡೆದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಅವರ ಈ ಹೇಳಿಕೆ ರಾಜ್ಯಸಭೆಯಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಯಿತು.
ಇದನ್ನೂ ಓದಿ : ಇಥನಾಲ್ ಹಾದಿಯಲ್ಲಿ ನೀರಿನ ಸಂಕಟ: ಇಂಧನ ಉಳಿಸೋದೇ ಅಥವಾ ಜಲ ಸಂಪತ್ತು ಕುಗ್ಗಿಸೋದೇ?
ಎರಡು ಮಸೂದೆಗಳಿಗೆ ರಾಜ್ಯಸಭೆ ಅಂಗೀಕಾರ
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ, 2026 ಹಾಗೂ ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ, 2026ಕ್ಕೆ ರಾಜ್ಯಸಭೆ ಅಂಗೀಕಾರ ನೀಡಿತು. ತೆರಿಗೆ ಮಸೂದೆಯನ್ನು ಲೋಕಸಭೆ ಈಗಾಗಲೇ ಅಂಗೀಕರಿಸಿತ್ತು. ರಾಜ್ಯಸಭೆಯಲ್ಲಿ ಸಂಕ್ಷಿಪ್ತ ಚರ್ಚೆಯ ಬಳಿಕ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆಯು 1891ರ ಹಳೆಯ ಕಾನೂನಿನ ಬದಲಿಗೆ ಆಧುನಿಕ ಕಾನೂನು ಚೌಕಟ್ಟನ್ನು ರೂಪಿಸಲಿದ್ದು, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. ಲೋಕಸಭೆ ಆಗಸ್ಟ್ 5ರಂದು ಈ ಮಸೂದೆಯನ್ನು ಅಂಗೀಕರಿಸಿತ್ತು.
ರಾಮಮಂದಿರ ದೇಣಿಗೆ, ವಿದ್ಯಾರ್ಥಿಗಳ ಮೇಲಿನ ಕ್ರಮದ ವಿಚಾರದಲ್ಲಿ ಪ್ರತಿಪಕ್ಷದ ಸಭಾತ್ಯಾಗ
ಮಸೂದೆ ಮಂಡನೆಯ ಸಂದರ್ಭದಲ್ಲಿ ರಾಮಮಂದಿರದ ದೇಣಿಗೆ ಹಣದ ದುರುಪಯೋಗದ ಆರೋಪ ಹಾಗೂ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೆಲೆಟ್ ಗನ್ ಬಳಕೆಯ ಆರೋಪವನ್ನು ಪ್ರಸ್ತಾಪಿಸಲು ಪ್ರತಿಪಕ್ಷ ಸದಸ್ಯರು ಪ್ರಯತ್ನಿಸಿದರು. ಆದರೆ ಸಭಾಧ್ಯಕ್ಷರು ಮಸೂದೆಗೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಚರ್ಚಿಸಬೇಕು ಎಂದು ಸೂಚಿಸಿದರು.
ಈ ವಿಚಾರದಲ್ಲಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಜುಲೈ 20ರಂದು ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆಯ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಉತ್ತರಿಸಬೇಕು ಎಂದು ಪ್ರತಿಪಕ್ಷ ಒತ್ತಾಯಿಸುತ್ತಿದೆ. ರಾಮಮಂದಿರದ ದೇಣಿಗೆ ಹಣದ ಕುರಿತ ಆರೋಪಗಳಿಗೂ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದೆ.
ಇದನ್ನೂ ನೋಡಿ : ಪುರೋಹಿತಶಾಹಿ ಆರೆಸ್ಸೆಸ್ ನ ಖೆಡ್ಡಾ ಕುರಿತು ಮೈಯೆಲ್ಲಾ ಕಣ್ಣಾಗಿರಿ ಜೆನ್ ಜಿಗಳೇ… Janashakthi Media
