ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಹಾಗೂ ಮಾನಸಿಕ ಕಿರುಕುಳದ ಆರೋಪ ಮಾಡಿದ್ದು, ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಪಾಲ್
ಕಲ್ಯಾಣನಗರ ನಿವಾಸಿ ರಮಾ ಕುಲಕರ್ಣಿ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದೆ ಹಾಗೂ ತಮಗೆ ಮತ್ತು ಕುಟುಂಬದ ಸದಸ್ಯರಿಗೆ ಬೆದರಿಕೆ ಇದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
2022ರ ಮೇ 29ರಂದು ಮಾಳಮಡ್ಡಿಯ ಪೂರ್ಣ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ನಿವಾಸಕ್ಕೆ ಗೋಪಾಲ್ ಜೋಶಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾವು ವಿರೋಧ ವ್ಯಕ್ತಪಡಿಸಿದಾಗ ತಮ್ಮ ಹಾಗೂ ಕುಟುಂಬದವರ ಜೀವಕ್ಕೆ ಅಪಾಯವಿದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ರಮಾ ಕುಲಕರ್ಣಿ ತಿಳಿಸಿದ್ದಾರೆ.
ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗೋಪಾಲ್
ಇದನ್ನೂ ಓದಿ : ಗ್ರಾಮ ಕಾಯಕ ಮಿತ್ರರ ಪ್ರತಿಭಟನೆ: 9 ಬೇಡಿಕೆಗಳ ಈಡೇರಿಕೆಗೆ ಶೀಘ್ರ ಕ್ರಮ – ಸರ್ಕಾರದ ಭರವಸೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್ ಜೋಶಿ ಅವರು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಮಹಿಳೆ ತಮ್ಮನ್ನು ಹಣಕ್ಕಾಗಿ ಬೆದರಿಸುತ್ತಿದ್ದರು ಹಾಗೂ ಹಣ ನೀಡದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆ ಎಂದು ಅವರು ಪ್ರತಿದೂರಿನಲ್ಲಿ ಆರೋಪಿಸಿದ್ದಾರೆ.
ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಮಹಿಳೆಯ ಆರೋಪಗಳು ಆಧಾರರಹಿತವಾಗಿದ್ದು, ವಾಸ್ತವದಲ್ಲಿ ತಾವೇ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಗೋಪಾಲ್ ಜೋಶಿ ಪ್ರತಿದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ಮಹಿಳೆ ಮಾಡಿರುವ ಆರೋಪಗಳು ಹಾಗೂ ಗೋಪಾಲ್ ಜೋಶಿ ನೀಡಿರುವ ಪ್ರತಿದೂರು ಎರಡನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗೋಪಾಲ್
ಇದನ್ನೂ ನೋಡಿ : ಪುರೋಹಿತಶಾಹಿ ಆರೆಸ್ಸೆಸ್ ನ ಖೆಡ್ಡಾ ಕುರಿತು ಮೈಯೆಲ್ಲಾ ಕಣ್ಣಾಗಿರಿ ಜೆನ್ ಜಿಗಳೇ… Janashakthi Media
