ವಿದ್ಯಾರ್ಥಿನಿಯರ ಕಿರುಕುಳ ಪ್ರಕರಣ: ವೈದ್ಯರ ಪರ ನಿಂತ ಅಧಿಕಾರಿಗಳ ಮೇಲೆ ಕೋರ್ಟ್ ಕಿಡಿ

ಬೆಂಗಳೂರು: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್) ಸಹ ಪ್ರಾಧ್ಯಾಪಕರಾದ ಡಾ. ಅಶ್ವಿನ್ ಹೆಬ್ಬಾರ್ ಅವರ ಅಮಾನತು ಹಿಂಪಡೆಯುವ ಆದೇಶವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಲೈಂಗಿಕ ಕಿರುಕುಳದ ಗಂಭೀರ ಆರೋಪಗಳ ನಡುವೆಯೇ ಅವರನ್ನು ಪುನರ್‌ನಿಯಮಿಸಿದ್ದಕ್ಕಾಗಿ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ವಿದ್ಯಾರ್ಥಿನಿ

ಅಶ್ವಿನ್ ಹೆಬ್ಬಾರ್ ಅವರನ್ನು “ಬಿಳಿ ಕೋಟ್‌ನಲ್ಲಿರುವ ನರಿಯಂತೆ” ಎಂದು ಕರೆಯುವ ಮೂಲಕ ನ್ಯಾಯಾಲಯ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ವೃತ್ತಿಪರ ಕಾಲೇಜಿನಲ್ಲಿ ಅವರ ವರ್ತನೆ “ಹೃದಯ ಕಂಗೆಡುವಂತದ್ದು” ಎಂದು ಅಭಿಪ್ರಾಯಪಟ್ಟಿದೆ.

ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರು ಕೂಡ ಗಂಭೀರ ಆರೋಪಗಳ ನಡುವೆಯೇ ಅಶ್ವಿನ್ ಅವರನ್ನು ಮರುನಿಯಮಿಸಲು ಶಿಫಾರಸು ಮಾಡಿದ ಹಿನ್ನೆಲೆ, ಅವರ ವಿರುದ್ಧವೂ ಇಲಾಖಾ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ನ್ಯಾನೋ ತಂತ್ರಜ್ಞಾನ: ಕಡಿಮೆ ವೆಚ್ಚದ ಇಮ್ಯುನೋಥೆರಪಿಗೆ ದಾರಿ

“ವಿದ್ಯಾರ್ಥಿನಿಯರ ಮಾನ–ಗೌರವ, ಅವಮಾನ, ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಅವರು (ಮೊಹ್ಸಿನ್ ಮತ್ತು ವಿರೂಪಾಕ್ಷಪ್ಪ) ಸರ್ಕಾರಿ ನೌಕರರಿಗೆ ಯೋಗ್ಯವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ. ಆರೋಪಿಯನ್ನು ರಕ್ಷಿಸುವ ಮೂಲಕ ಸ್ವತಃ ಗಂಭೀರ ತಪ್ಪು ನಡೆಸಿದ್ದಾರೆ,” ಎಂದು ನ್ಯಾಯಾಲಯ ಕಟುವಾಗಿ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಸಿಮ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದೆ. ಏಕಸದಸ್ಯ ನ್ಯಾಯಾಧೀಶರು ನೀಡಿದ್ದ ತಾತ್ಕಾಲಿಕ ತಡೆ ಆದೇಶವನ್ನೂ ಪೀಠ ಪ್ರಶ್ನಿಸಿದೆ.

ಅಶ್ವಿನ್ ಹೆಬ್ಬಾರ್ ಅವರನ್ನು ಸಿಮ್ಸ್‌ನಿಂದ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಹಿಮ್ಸ್) ತಾತ್ಕಾಲಿಕ ವರ್ಗಾವಣೆ ಮಾಡಿದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಏಕಸದಸ್ಯ ನ್ಯಾಯಾಲಯದ ಆದೇಶದ ಕುರಿತು ಪೀಠ, “ಲೈಂಗಿಕ ಕಿರುಕುಳ ಅನುಭವಿಸಿದ ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ಪರಿಗಣಿಸದೇ ವರ್ಗಾವಣೆಯನ್ನು ತಡೆದಿರುವುದು ವಿಷಾದನೀಯ,” ಎಂದು ಅಭಿಪ್ರಾಯಪಟ್ಟಿದೆ.

2025ರ ನವೆಂಬರ್ 17ರ ಅಮಾನತು ಹಿಂಪಡೆಯುವ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೂ (NMC) ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ಆರೋಪ ಸಾಬೀತಾದರೆ ಅವರ ವೈದ್ಯಕೀಯ ಪರವಾನಗಿಯನ್ನು ರದ್ದುಪಡಿಸಬೇಕೆಂದು ತಿಳಿಸಿದೆ.

“ಶಿಸ್ತು ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಅಮಾನತಿನಲ್ಲೇ ಇರುತ್ತಾರೆ. ಆದರೆ ಹಾವೇರಿ ಸಂಸ್ಥೆಗೆ ನಿಯೋಜಿತರಾಗಿರುತ್ತಾರೆ,” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

2025ರ ಜೂನ್ 14ರಂದು ನಡೆದ ಘಟನೆ ಸಂಬಂಧ, ಶಸ್ತ್ರಚಿಕಿತ್ಸಾ ವಿಭಾಗದ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಡಾ. ಅಶ್ವಿನ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಹಾಸ್ಟೆಲ್‌ನಲ್ಲಿ ನಡೆದ ಔತಣ ಕೂಟದ ವೇಳೆ ಈ ಘಟನೆ ನಡೆದಿತ್ತು.

ಪೀಡಿತೆಯನ್ನು ತನ್ನ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಹೇಳಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಜೂನ್ 20ರಂದು ಎಫ್‌ಐಆರ್ ದಾಖಲಾಗಿದ್ದು, ಬಳಿಕ ಅವರನ್ನು ಬಂಧಿಸಿ ಅಮಾನತು ಮಾಡಲಾಗಿತ್ತು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿಯಲ್ಲಿ (POSH) ಸಮಿತಿಯ ಅಂತಿಮ ವರದಿ ಕೂಡ ಅಶ್ವಿನ್ ವಿರುದ್ಧದ ಆರೋಪಗಳನ್ನು ದೃಢಪಡಿಸಿದೆ.

ನ್ಯಾಯಾಲಯದ ಪ್ರಕಾರ, ಅಶ್ವಿನ್ ಹೆಬ್ಬಾರ್ ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ರಾಜಕೀಯ ವ್ಯಕ್ತಿಗಳು ಹಾಗೂ ಸಂಘಟನೆಗಳಿಂದ ಅವರ ಅಮಾನತು ಹಿಂಪಡೆಯಲು ಒತ್ತಡ ಬಂದಿತ್ತು. ಈ ಒತ್ತಡಕ್ಕೆ ಮಣಿದು ಮೊಹ್ಸಿನ್ ಅವರು ಸಿಮ್ಸ್ ನಿರ್ದೇಶಕರಿಗೆ ಶಿಫಾರಸು ಮಾಡಲು ಸೂಚಿಸಿದ್ದು, ನಿರ್ದೇಶಕರು ಅವರ ವರ್ತನೆ ಕುರಿತು ಯಾವುದೇ ಉಲ್ಲೇಖವಿಲ್ಲದೆ ಶ್ಲಾಘನಾ ಪತ್ರ ಬರೆದಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಇದನ್ನೂ ನೋಡಿ: ಕುಡತಿನಿ ಭೂ ಹೋರಾಟ | “ಭೂಮಿ ಕಿತ್ತುಕೊಂಡು ಬದುಕು ಕಸಿದವರನ್ನು ಸೋಲಿಸಿ” – ಜಸ್ಟೀಸ್ ವಿ. ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *