2030 ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ: ಭಾರತದ ಮುಂದೆ ಸವಾಲುಗಳ ಪರ್ವ

ಅಹಮದಾಬಾದ್: ಆಗಸ್ಟ್‌ 2ರ ರಾತ್ರಿ ಭಾರತದ ಅಥ್ಲೆಟಿಕ್ಸ್ ಕ್ಷೇತ್ರದ ಪ್ರಮುಖ ವ್ಯಕ್ತಿಗಳಾದ ನೀರಾಜ್ ಚೋಪ್ರಾ ಮತ್ತು ಪಿ.ಟಿ. ಉಷಾ ಅವರು 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯದ ಬ್ಯಾಟನ್ ಸ್ವೀಕರಿಸಿದ ಕ್ಷಣ ಭಾವನಾತ್ಮಕವಾಗಿತ್ತು. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಪ್ರತಿಬಿಂಬಿಸಿದ ಈ ಕ್ಷಣವು ಹೆಮ್ಮೆಯ ಸಂಗತಿಯೇ ಸರಿ, ಆದರೆ ಗೇಮ್ಸ್‌ಗೆ ಅಗತ್ಯವಿರುವ ಭಾರೀ ಹೂಡಿಕೆ ನ್ಯಾಯಸಮ್ಮತವಾಗುತ್ತದೆಯೇ ಎಂಬ ಪ್ರಶ್ನೆಗಳು ಇನ್ನೂ ಉಳಿದಿವೆ.

ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಸತತವಾಗಿ ನಾಲ್ಕನೇ ಬಾರಿ ಪಡೆದಿರುವುದು ಭಾರತದಲ್ಲಿ ಅಪಾರ ಸಾಮರ್ಥ್ಯವಿದೆ ಎಂಬುದನ್ನು ತೋರಿಸಿದರೂ, ಆತಿಥ್ಯ ನೀಡುವ ಹೊಣೆಗಾರಿಕೆಗೆ ಸಂಬಂಧಿಸಿದ ಸವಾಲುಗಳು ಸ್ಪಷ್ಟವಾಗಿವೆ.

ಭಾರತವು 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ತನ್ನ ಅರ್ಜಿಯನ್ನು ಬಲಪಡಿಸಲು 2024ರ ಮಾರ್ಚ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಮುಂದಾಗಿತ್ತು. ಅಹಮದಾಬಾದ್ ಅನ್ನು ಮೂಲ ನಗರವಾಗಿ ಆಯ್ಕೆ ಮಾಡಲಾಗಿದೆ. ಆದರೆ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 2036ರ ಆತಿಥ್ಯ ಕುರಿತ ಅಂತಿಮ ತೀರ್ಮಾನವನ್ನು 2028-29ರಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಆ ವೇಳೆ ಭಾರತ ಆಯ್ಕೆ ಆಗದಿದ್ದರೆ ಅದರ ಸ್ಥಿತಿ ಹೇಗಿರಲಿದೆ ಎಂಬುದೂ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ: 19 ಹೊಸ ಸಚಿವರು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಕಾಮನ್‌ವೆಲ್ತ್ ಗೇಮ್ಸ್, ಶತಮಾನ ಪೂರ್ಣಗೊಳ್ಳಲಿರುವ ಈ ಕ್ರೀಡಾಕೂಟದ ಪ್ರಸ್ತುತತೆಯ ಬಗ್ಗೆ ಈಗಾಗಲೇ ಪ್ರಶ್ನೆಗಳು ಕೇಳಿಬರುತ್ತಿವೆ. ಬ್ರಿಟಿಷ್ ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿರುವ ಈ ಗೇಮ್ಸ್‌ನ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಇತ್ತೀಚಿನ ಬರ್ಮಿಂಗ್‌ಹ್ಯಾಮ್ ಮತ್ತು ಗ್ಲಾಸ್ಗೋ ಆತಿಥ್ಯಗಳು ಕೂಡ ಮೂಲ ಆತಿಥೇಯರು ಹಿಂದೆ ಸರಿದ ನಂತರ ನಡೆದವು.

ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘು ಅಯ್ಯರ್ ಈ ಕುರಿತು ಎಚ್ಚರಿಕೆಯ ನಿಲುವು ವ್ಯಕ್ತಪಡಿಸಿದ್ದಾರೆ. “ಯಾವುದೇ ಖಾತರಿ ನೀಡಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

ವೆಚ್ಚದ ವಿಚಾರದಲ್ಲಿ ಗ್ಲಾಸ್ಗೋ ಮಾದರಿ ಮತ್ತು ಅಹಮದಾಬಾದ್ ಮಾದರಿ ವಿಭಿನ್ನವಾಗುವ ಸಾಧ್ಯತೆ ಇದೆ. ಗ್ಲಾಸ್ಗೋವು ಕೇವಲ 10 ಕ್ರೀಡೆಗಳಿಗೆ ಸೀಮಿತಗೊಳಿಸಿ, ಕ್ರೀಡಾಪಟುಗಳನ್ನು ಹೋಟೆಲ್‌ಗಳಲ್ಲಿ ವಸತಿಗೊಳಿಸುವ ಮೂಲಕ ವೆಚ್ಚವನ್ನು ಸುಮಾರು £160 ಮಿಲಿಯನ್‌ಗೆ ಮಿತಿಗೊಳಿಸಿತು. ಆದರೆ ಭಾರತದಲ್ಲಿ ವೆಚ್ಚ ಕನಿಷ್ಠ ಎರಡು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಮುಖ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಗಾಂಧಿನಗರ, ವಡೋದರಾ ಮತ್ತು ಏಕ್ತಾ ನಗರಗಳಲ್ಲಿ ಹೊಸ ಮೂಲಸೌಕರ್ಯಗಳನ್ನು ನಿರ್ಮಿಸುವ ಯೋಜನೆ ಇದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಎರಡನೇ ಟರ್ಮಿನಲ್ ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟು ವಿಸ್ತರಣೆ ನಡೆಯಲಿದೆ.

ಇದರ ನಡುವೆ, 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ವೆಚ್ಚದ ಪರಿಣಾಮವನ್ನು ಭಾರತ ಇನ್ನೂ ಅನುಭವಿಸುತ್ತಿದೆ. ವರದಿಗಳ ಪ್ರಕಾರ, 2025-26ರಲ್ಲಿ ₹28.05 ಕೋಟಿ ಬಾಕಿ ಪಾವತಿಸಲಾಗಿದ್ದು, 2026-27ಕ್ಕೆ ಇನ್ನೂ ₹50 ಕೋಟಿ ಮೀಸಲಿಡಲಾಗಿದೆ. ಕಾನೂನು ಮತ್ತು ಮಧ್ಯಸ್ಥಿಕೆ ವೆಚ್ಚಗಳಿಗೆ ಈಗಾಗಲೇ ₹13 ಕೋಟಿಗೂ ಹೆಚ್ಚು ಖರ್ಚಾಗಿದೆ, ಮತ್ತು ಇನ್ನೂ 29 ಪ್ರಕರಣಗಳು ಬಾಕಿಯಿವೆ.

ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ ಸಂಘವಿ, “ಇದು ದೊಡ್ಡ ಹೊಣೆಗಾರಿಕೆ, ಆದರೆ ನಾವು ಸಿದ್ಧರಾಗಿದ್ದೇವೆ,” ಎಂದು ಹೇಳಿದ್ದಾರೆ. ಕ್ರೀಡಾ ಇಲಾಖೆ ಕಾರ್ಯದರ್ಶಿ ಶ್ರೀ ಹರಿ ರಂಜನ್ ರಾವ್ ಕೂಡ ಈ ಕಾರ್ಯಕ್ರಮವು 2036ರ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಆತಿಥ್ಯ ಪಡೆಯಲು ಸಹಾಯಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವನ್ನು ಸಮೀಪದ ಅವಧಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಿರುವ ಉದಾಹರಣೆಗಳಿವೆ. ಆದರೆ ಭಾರತದಲ್ಲಿ ಎರಡೂ ಗೇಮ್ಸ್‌ಗಳಿಗೆ ಅಹಮದಾಬಾದ್ ಒಂದೇ ಕೇಂದ್ರವಾಗಿರುವುದು ವಿಶೇಷ.

ಇದೀಗ ಶತಮಾನೋತ್ಸವ ಗೇಮ್ಸ್‌ಗಾಗಿ ಕೌಂಟ್‌ಡೌನ್ ಆರಂಭವಾಗಿದ್ದು, ಕಾಮನ್‌ವೆಲ್ತ್ ಸ್ಪೋರ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೇಟಿ ಸ್ಯಾಡ್ಲರ್ ಅವರ ಪ್ರಕಾರ, 2030ರ ಗೇಮ್ಸ್‌ನಲ್ಲಿ ಸಂಪ್ರದಾಯಬದ್ಧ “15ರಿಂದ 17” ಕ್ರೀಡೆಗಳ ಬದಲು ಕಡಿಮೆ ಸಂಖ್ಯೆಯ ಕ್ರೀಡೆಗಳು ಇರಬಹುದಾಗಿದೆ. ಕ್ರಿಕೆಟ್ ಮತ್ತೆ ಸೇರ್ಪಡೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಒಟ್ಟಾರೆ, 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ಭಾರತಕ್ಕೆ ದೊಡ್ಡ ಅವಕಾಶವಾದರೂ, ಅದಕ್ಕೆ ಸಮಾನವಾದ ಸವಾಲುಗಳೂ ಎದುರಾಗಲಿವೆ.

ಇದನ್ನೂ ನೋಡಿ: ಕನಿಷ್ಠ ವೇತನ ಪುನರ್‌ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *