ಜೀತದಿಂದ ತಪ್ಪಿಸಿಕೊಂಡ ಮೊಗಳ್ಳಿ ಗಣೇಶ್‌; ಹಳ್ಳಿಯ ಹಿಂಸೆಯೇ ಕಥೆಗಾರನನ್ನು ರೂಪಿಸಿತು: ನಟರಾಜ ಹುಳಿಯಾರ

ಬೆಂಗಳೂರು: “ಜೀತಕ್ಕೆ ಸಿಲುಕುವುದರಿಂದ ತಪ್ಪಿಸಿಕೊಂಡು ಮೈಸೂರಿಗೆ ಓಡಿ ಬಂದ ಮೊಗಳ್ಳಿ ಗಣೇಶ್‌ ಅವರನ್ನು ಅಲ್ಲಿನ ಪ್ರಗತಿಪರ ವಾತಾವರಣ ಬೆಳೆಸಿತು. ಹಳ್ಳಿಯ ಬದುಕಿನಲ್ಲಿ ಅನುಭವಿಸಿದ ಜಾತಿ ದೌರ್ಜನ್ಯ, ಶೋಷಣೆ ಮತ್ತು ಅಸಮಾನತೆಗಳು ಅವರೊಳಗಿನ ಕಥೆಗಾರನನ್ನು ರೂಪಿಸಿದರೆ, ನಗರವು ಆ ಹಿಂಸೆಯನ್ನು ವಿಶಾಲವಾಗಿ ನೋಡುವ ದೃಷ್ಟಿಯನ್ನು ನೀಡಿತು” ಎಂದು ಚಿಂತಕ ಹಾಗೂ ಸಾಹಿತಿ ಪ್ರೊ. ನಟರಾಜ ಹುಳಿಯಾರ ಹೇಳಿದರು.

ಜಯನಗರದ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗ ಹಾಗೂ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ಮೊಗಳ್ಳಿ ಗಣೇಶ್‌ ಅವರ ಸಾಹಿತ್ಯ’ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀತ

ಗಣೇಶ್‌ ಅವರ ನೆನಪು ಈ ವಿಚಾರ ಸಂಕಿರಣಕ್ಕೆ ನೆಪವಾದರೂ, ಅವರ ಸಾಹಿತ್ಯದ ಮೂಲಕ ಕನ್ನಡದ ಸಮಕಾಲೀನ ಬದುಕು, ಗ್ರಾಮೀಣ ಸಮಾಜ, ಜಾತಿ ವ್ಯವಸ್ಥೆ ಮತ್ತು ಸಂಸ್ಕೃತಿಯ ಬೆಳವಣಿಗೆಗಳನ್ನು ಚರ್ಚಿಸುವ ಅವಕಾಶ ದೊರೆಯಿತು ಎಂದು ಅವರು ಹೇಳಿದರು. ಜೀತ

ಇದನ್ನೂ ಓದಿ: ಆಗಸ್ಟ್ 1ರಂದು ‘ಅಳವು ಅರಿಯದ ಭಾಷೆ: ಕರಾವಳಿಯ ಸಾಂಸ್ಕೃತಿಕ ರಾಜಕಾರಣ’ – ಒಂದು ದಿನದ ವಿಚಾರ ಮಥನ

“ಜೀತದ ವಿರುದ್ಧ ಓಡಿ ಮೊಗಳ್ಳಿ ಗಣೇಶ್‌ ಸ್ವಾತಂತ್ರ್ಯ ಪಡೆದರು. ಆದರೆ ನಾವು ನಮ್ಮ ಮನಸ್ಸಿನ ಜೀತದಿಂದ ಹೊರಬರಬೇಕಿದೆ. ಸಂತೆಮೊಗಳ್ಳಿಯಿಂದ ಮೈಸೂರಿಗೆ ಬಂದ ಮೊಗಳ್ಳಿ ಗಣೇಶ್‌ ಅವರಿಗೆ ಪ್ರೊ. ರಾಮದಾಸ್‌, ಎಂ. ನಂಜುಂಡಸ್ವಾಮಿ, ಪಿ. ಲಂಕೇಶ್‌, ರಾಜಪ್ಪ ದಳವಾಯಿ ಮತ್ತಿತರರು ನೀಡಿದ ಪ್ರೋತ್ಸಾಹ ಅವರ ಸಾಹಿತ್ಯಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಇದು ಕನ್ನಡ ಸಾಹಿತ್ಯದ ಜಾತ್ಯತೀತ ನಡೆಗೆ ಉದಾಹರಣೆ” ಎಂದರು.

ಮೊಗಳ್ಳಿ ಗಣೇಶ್‌ ಅವರ ಕಥೆಗಾರಿಕೆಯನ್ನು ರೂಪಿಸಿದ್ದು ಕೇವಲ ಸಾಹಿತ್ಯದ ಓದು ಅಥವಾ ಬರವಣಿಗೆಯ ಅಭ್ಯಾಸವಲ್ಲ. ಅವರು ಬದುಕಿನಲ್ಲಿ ಎದುರಿಸಿದ ಶೋಷಣೆ, ಜಾತಿ ವ್ಯವಸ್ಥೆಯ ಹಿಂಸೆ ಹಾಗೂ ಗ್ರಾಮೀಣ ಸಮಾಜದ ಅಸಮಾನತೆಗಳೇ ಅವರ ಕಥೆಗಳ ಮೂಲದ್ರವ್ಯವಾದವು. ಹಳ್ಳಿಯ ಜನರು, ಮಹಿಳೆಯರು, ದಲಿತರು ಎದುರಿಸುವ ದೌರ್ಜನ್ಯಗಳನ್ನು ಅವರು ಸಾಹಿತ್ಯದ ಮೂಲಕ ದಾಖಲಿಸಿದರು ಎಂದು ಹುಳಿಯಾರ ಹೇಳಿದರು.

ಅವರ ಬದುಕಿನಲ್ಲಿ ಮಾರ್ಕ್ಸ್‌ವಾದ, ಸಮಾಜವಾದ ಮತ್ತು ಅಂಬೇಡ್ಕರ್‌ವಾದದ ಚಿಂತನೆಗಳು ಪ್ರಭಾವ ಬೀರಿದ್ದವು. ಈ ವಿಚಾರಧಾರೆಗಳು ಅವರ ಸಾಹಿತ್ಯದಲ್ಲಿ ಶೋಷಣೆಯ ವಿರುದ್ಧದ ಪ್ರಶ್ನೆ ಮತ್ತು ಮಾನವೀಯ ದೃಷ್ಟಿಕೋನವಾಗಿ ವ್ಯಕ್ತವಾಗಿವೆ ಎಂದರು.

ಕಥೆ ಮೊಗಳ್ಳಿ ಗಣೇಶ್‌ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್‌ ಕೂಡ ಕಥೆಯನ್ನು ಬೆಳೆಸಿದರು

“‘ಅರೇಬಿಯನ್ ನೈಟ್ಸ್‌’ನಲ್ಲಿ ಶೆಹಜಾದೆ ಕಥೆ ಹೇಳುತ್ತಾ ಸಾವನ್ನು ಮುಂದೂಡುತ್ತಾಳೆ. ಮೊಗಳ್ಳಿ ಗಣೇಶ್‌ ಕೂಡ ತಮ್ಮ ಬದುಕಿನಲ್ಲಿ ಹಲವು ಬಾರಿ ಸಾವನ್ನು ಎದುರಿಸಿದರೂ, ಕೊನೆಯವರೆಗೂ ಕಥೆ ಬರೆಯುತ್ತಲೇ ಇದ್ದರು. ಕಥೆ ಅವರನ್ನು ಬೆಳೆಸಿತು; ಅದೇ ವೇಳೆ ಮೊಗಳ್ಳಿ ಗಣೇಶ್‌ ಕೂಡ ಕಥೆಯನ್ನು ಬೆಳೆಸಿದರು” ಎಂದು ನಟರಾಜ ಹುಳಿಯಾರ ಹೇಳಿದರು.

ಮೊಗಳ್ಳಿ ಗಣೇಶ್‌ ಅವರ ಸಾಹಿತ್ಯಕ್ಕೆ ವಿಮರ್ಶಾ ವಲಯದಲ್ಲಿ ಸಿಗಬೇಕಾದಷ್ಟು ಮನ್ನಣೆ ದೊರೆಯಲಿಲ್ಲ ಎಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಟೀಕಿಸುವ ಪ್ರವೃತ್ತಿ ಹೆಚ್ಚಾಗಿರುವ ಸಂದರ್ಭದಲ್ಲಿ, ಗಂಭೀರವಾದ ಸಾಹಿತ್ಯಿಕ ಮೌಲ್ಯಮಾಪನದ ಅಗತ್ಯವಿದೆ ಎಂದರು.

ಎಚ್. ನರಸಿಂಹಯ್ಯ ಹಾಗೂ ಮೊಗಳ್ಳಿ ಗಣೇಶ್‌ ಅವರ ಭಾವಚಿತ್ರಗಳತ್ತ ಗಮನ ಸೆಳೆದ ಹುಳಿಯಾರ, ಇಬ್ಬರೂ ತಮ್ಮ ಬದುಕಿನ ದಾರಿಯನ್ನು ತಾವೇ ನಿರ್ಮಿಸಿಕೊಂಡವರು. ಸಾಂಪ್ರದಾಯಿಕ ಚೌಕಟ್ಟುಗಳಿಗೆ ಸೀಮಿತವಾಗದೆ ಸ್ವಂತ ಚಿಂತನೆ ಮತ್ತು ಹೋರಾಟದ ಮೂಲಕ ಬೆಳೆದವರು ಎಂದು ವಿಶ್ಲೇಷಿಸಿದರು.

ಜಾತಿ ವ್ಯವಸ್ಥೆಯ ಕರಾಳ ಮುಖ ಅನಾವರಣ: ಶಿವಾರೆಡ್ಡಿ

ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಸಿ. ಶಿವಾರೆಡ್ಡಿ ಮಾತನಾಡಿ, ಮೊಗಳ್ಳಿ ಗಣೇಶ್‌ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಲ್ಲಿ ಕಾಣುವ ಕೆಲವು ಸಾಮ್ಯತೆಗಳನ್ನು ಪ್ರಸ್ತಾಪಿಸಿದರು. ಇಬ್ಬರೂ ಭಾರತೀಯ ಜಾತಿ ವ್ಯವಸ್ಥೆಯ ಕರಾಳ ಮುಖಗಳನ್ನು ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯದ ಮೂಲಕ ಅನಾವರಣಗೊಳಿಸಿದ್ದಾರೆ ಎಂದರು.

‘ಗೋವಿನ ಹಾಡು’ ಕುರಿತಾಗಿ ಮೊಗಳ್ಳಿ ಗಣೇಶ್‌ ಮತ್ತು ತೇಜಸ್ವಿ ಬರೆದ ಬರಹಗಳು ಸಾಹಿತ್ಯ, ಸಾಂಸ್ಕೃತಿಕ ಮತ್ತು ವಿಮರ್ಶಾ ವಲಯದಲ್ಲಿ ಗಮನಾರ್ಹ ಚರ್ಚೆ ಹುಟ್ಟುಹಾಕಿದ್ದವು ಎಂದು ಅವರು ಹೇಳಿದರು. ಅರ್ಹತೆಯ ಪ್ರಶ್ನೆಗಳನ್ನು ಕಡೆಗಣಿಸಿ ಕೆಲ ಲೇಖಕರಿಗೆ ಪ್ರಶಸ್ತಿಗಳು ದೊರೆಯುತ್ತಿರುವುದರ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರ ಸಂಕಿರಣವು ಯುವ ಓದುಗರು ಹಾಗೂ ಸಂಶೋಧಕರಿಗೆ ಮೊಗಳ್ಳಿ ಗಣೇಶ್‌ ಅವರ ಸಾಹಿತ್ಯದ ಅಭಿವ್ಯಕ್ತಿ, ಸಾಮಾಜಿಕ ಹಿನ್ನೆಲೆ ಮತ್ತು ಕಥನದ ವೈಶಿಷ್ಟ್ಯಗಳನ್ನು ಪರಿಚಯಿಸುವ ವೇದಿಕೆಯಾಯಿತು.

ಕಾರ್ಯಕ್ರಮದ ಆರಂಭದಲ್ಲಿ, ಕೆಲವು ವರ್ಷಗಳ ಹಿಂದೆ ನಟರಾಜ ಹುಳಿಯಾರ ಅವರ ‘ಕಥಾನಂತರ’ ಕೃತಿ ಬಿಡುಗಡೆ ಸಂದರ್ಭದಲ್ಲಿ ಮೊಗಳ್ಳಿ ಗಣೇಶ್‌ ಮಾತನಾಡಿದ್ದ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಮೊಗಳ್ಳಿ ಗಣೇಶ್‌ ಅವರ ನೆನಪನ್ನು ಜೀವಂತವಾಗಿಸುವ ಈ ಪ್ರದರ್ಶನ ವಿಚಾರ ಸಂಕಿರಣದ ವಿಶೇಷ ಆಕರ್ಷಣೆಯಾಗಿತ್ತು.

ನ್ಯಾಷನಲ್ ಕಾಲೇಜು ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಎಚ್.ಎನ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ, ರಾಮಮೋಹನ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಿ.ಎಂ. ರವೀಂದ್ರ, ಪ್ರಾಂಶುಪಾಲರಾದ ಸಿ. ವಿಜಯಲಕ್ಷ್ಮಿ, ಪ್ರೊ. ಜಯದೇವಪ್ಪ, ಕೇಶವ ಮಳಗಿ, ಎಂ.ಸಿ. ರವೀಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಇದನ್ನೂ ನೋಡಿ: ನೀಟ್ ಅಕ್ರಮ ವಿರೋಧಿಸಿ ರಾಜಭವನ ಚಲೋ: ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಎಸ್‌ಎಫ್‌ಐ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *