ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ಖಾಲಿ ವಿವರ ಮುಚ್ಚಿಡಲಾಗುತ್ತಿದೆಯೇ? – ಸಂಸದ ವಿ. ಸಿವದಾಸನ್‌ ಆರೋಪ

ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಆರೋಪ
ನವದೆಹಲಿ: ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸರ್ಕಾರದ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳು, ಮೀಸಲು ವರ್ಗಗಳ ಬ್ಯಾಕ್‌ಲಾಗ್‌ ಹುದ್ದೆಗಳು ಹಾಗೂ ಹೊಸದಾಗಿ ಸೃಷ್ಟಿಸಿರುವ ಬೋಧಕ ಹುದ್ದೆಗಳ ಕುರಿತು ಕೇಂದ್ರ ಸರ್ಕಾರ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ವಿ. ಸಿವದಾಸನ್‌ ಆರೋಪಿಸಿದ್ದಾರೆ. ಬೋಧಕ

ರಾಜ್ಯಸಭೆಯಲ್ಲಿ ಶಿವದಾಸನ್‌ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಸುಕಾಂತ ಮಜುಮ್ದಾರ್‌ ನೀಡಿರುವ ಉತ್ತರದಲ್ಲಿ ಹಲವು ಪ್ರಮುಖ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಸಂಸ್ಥಾವಾರು ಬೋಧಕ ಹುದ್ದೆಗಳ ಖಾಲಿ ವಿವರ, ಕಳೆದ ಐದು ವರ್ಷಗಳ ವರ್ಷವಾರು ಖಾಲಿ ಹುದ್ದೆಗಳ ಸಂಖ್ಯೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲು ಹುದ್ದೆಗಳ ಬ್ಯಾಕ್‌ಲಾಗ್‌, ಹೊಸದಾಗಿ ಸೃಷ್ಟಿಸಲಾದ ಬೋಧಕ ಹುದ್ದೆಗಳು ಮತ್ತು ಪಿಎಚ್‌ಡಿ ಸೀಟುಗಳ ಹೆಚ್ಚಳದ ವಿವರಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದು ಸಿವದಾಸನ್‌ ತಿಳಿಸಿದ್ದಾರೆ.

ಬೋಧಕರ ಲಭ್ಯತೆ ಪಿಎಚ್‌ಡಿ ಪ್ರವೇಶ, ಸಂಶೋಧನೆಗೆ ಮಾರ್ಗದರ್ಶನ ಹಾಗೂ ಸಂಶೋಧನೆಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸರ್ಕಾರವೇ ತನ್ನ ಉತ್ತರದಲ್ಲಿ ಒಪ್ಪಿಕೊಂಡಿದೆ. ಆದರೆ ಪಿಎಚ್‌ಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಅವರಿಗೆ ಮಾರ್ಗದರ್ಶನ ನೀಡಲು ಎಷ್ಟು ಹೊಸ ಬೋಧಕ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಅಥವಾ ಎಷ್ಟು ಸಂಶೋಧನಾ ಮಾರ್ಗದರ್ಶಕರನ್ನು ನೇಮಿಸಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಪಿಎಚ್‌ಡಿ ಪ್ರವೇಶ ಪಡೆದವರ ಸಂಖ್ಯೆ 2014–15ರಲ್ಲಿ ಸುಮಾರು 1.17 ಲಕ್ಷದಿಂದ 2023–24ರಲ್ಲಿ 3.43 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಈ ಅವಧಿಯಲ್ಲಿ ಬೋಧಕರ ಸಂಖ್ಯೆ ಮತ್ತು ಸಂಶೋಧನಾ ಮೂಲಸೌಕರ್ಯವನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ ಎಂದು ಸಿವದಾಸನ್‌ ಹೇಳಿದ್ದಾರೆ. ಬೋಧಕ

ಇದನ್ನೂ ಓದಿ : ಪೊಲೀಸ್‌ ಪೇದೆ ಪರೀಕ್ಷೆ ಸಮಯ ಬದಲಾವಣೆ ; ಜನಶಕ್ತಿ ಮೀಡಿಯಾ ವರದಿಯ ಫಲಶೃತಿ

ಮೀಸಲು ವರ್ಗಗಳ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಪ್ರಸ್ತುತ ಎಷ್ಟು ಬ್ಯಾಕ್‌ಲಾಗ್‌ ಹುದ್ದೆಗಳಿವೆ, ಯಾವ ಸಂಸ್ಥೆಗಳಲ್ಲಿ ಅವು ಖಾಲಿ ಇವೆ ಮತ್ತು ಯಾವ ಮೀಸಲು ವರ್ಗಗಳು ಹೆಚ್ಚು ಬಾಧಿತವಾಗಿವೆ ಎಂಬ ಮಾಹಿತಿಯನ್ನು ನೀಡಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಬೋಧಕರ ನೇಮಕಾತಿ ಸ್ವಾಯತ್ತ ಸಂಸ್ಥೆಗಳ ಜವಾಬ್ದಾರಿ ಎಂದು ಸಚಿವರು ಹೇಳಿರುವುದನ್ನೂ ಶಿವದಾಸನ್‌ ಪ್ರಶ್ನಿಸಿದ್ದಾರೆ. ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಅನುದಾನಿತ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಸಮಯಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಹಾಗೂ ಮೀಸಲಾತಿ ನೀತಿ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಖಚಿತಪಡಿಸುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಪ್ರಸ್ತುತ 57 ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು 130ಕ್ಕೂ ಹೆಚ್ಚು ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಿವೆ. ಇಂತಹ ಸಂಸ್ಥೆಗಳಲ್ಲಿ ಬೋಧಕ ಹುದ್ದೆಗಳು ದೀರ್ಘಕಾಲ ಖಾಲಿ ಉಳಿದರೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಅವಕಾಶಗಳು ಕಡಿಮೆಯಾಗಬಹುದು ಎಂದು ಸಿವದಾಸನ್‌ ಎಚ್ಚರಿಸಿದ್ದಾರೆ.

ಬೋಧಕ ಹುದ್ದೆಗಳ ಕೊರತೆ ಕೇವಲ ಆಡಳಿತಾತ್ಮಕ ಲೋಪವಲ್ಲ. ಅದು ದೇಶದ ಸಂಶೋಧನಾ ಸಾಮರ್ಥ್ಯ, ಶೈಕ್ಷಣಿಕ ಗುಣಮಟ್ಟ ಮತ್ತು ಸಾಮಾಜಿಕ ನ್ಯಾಯದ ಮೇಲಿನ ಪರಿಣಾಮ ಬೀರುವ ಗಂಭೀರ ವಿಚಾರ ಎಂದು ಅವರು ಹೇಳಿದ್ದಾರೆ.

ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿನ ಬೋಧಕ ಹುದ್ದೆಗಳ ಸಂಸ್ಥಾವಾರು ಹಾಗೂ ವರ್ಗವಾರು ಸಂಪೂರ್ಣ ಮಾಹಿತಿಯನ್ನು ತಕ್ಷಣ ಸಂಸತ್ತಿನ ಮುಂದಿಡಬೇಕು ಮತ್ತು ಎಲ್ಲ ಖಾಲಿ ಬೋಧಕ ಹುದ್ದೆಗಳನ್ನು ಯಾವುದೇ ವಿಳಂಬವಿಲ್ಲದೆ ಭರ್ತಿ ಮಾಡಬೇಕು ಎಂದು ಸಿವದಾಸನ್‌ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೋಧಕ

ಇದನ್ನೂ ನೋಡಿ : “ಮುತ್ತು ಬಂದಿದೆ ಕೇರಿಗೆ” — ಕನಕದಾಸರ ಕುರಿತ ನೃತ್ಯ ರೂಪಕ Janashakthi Media

Donate Janashakthi Media

Leave a Reply

Your email address will not be published. Required fields are marked *