ಜಾಗತಿಕ ಹಣಕಾಸು ಬಂಡವಾಳವನ್ನು ತಣಿಸುವುದಕ್ಕಾಗಿ ಬಡವರನ್ನು ಹಸಿವಿನಿಂದ ಪೀಡಿಸುವ ಮೋದಿ ಸರ್ಕಾರ

ಪ್ರೊ. ಪ್ರಭಾತ ಪಟ್ನಾಯಕ್‌

ʼಬಡತನದ ರೇಖೆʼಯನ್ನು ತಲುಪಲು ನಾಲ್ಕು ಸದಸ್ಯರಿರುವ ಒಂದು ಸಣ್ಣ ಕುಟುಂಬಕ್ಕೂ ಗ್ರಾಮೀಣ ಭಾರತದಲ್ಲಿ 60 ಕೆಜಿ ಮತ್ತು ನಗರಪ್ರದೇಶಗಳಲ್ಲಿ 57.6 ಕೆಜಿ ಆಹಾರ ಧಾನ್ಯಗಳು ಬೇಕಾಗುತ್ತವೆ ಎಂದು ಲೆಕ್ಕ ಹಾಕಲಾಗಿದೆ. ಆದರೆ AAY ಮತ್ತು PMGKAY ಅಡಿಯಲ್ಲಿ ಒಟ್ಟಾಗಿ ಈ ಸಣ್ಣ ಕುಟುಂಬಕ್ಕೆ ಈಗ ಸಿಗುತ್ತಿರುವ ಗರಿಷ್ಟ ಆಹಾರಧಾನ್ಯಗಳ ಪ್ರಮಾಣ 55 ಕೆಜಿ (35+20) ಮಾತ್ರ. ಹೀಗಿರುವಾಗ ಅದನ್ನು ಮತ್ತಷ್ಟು ಕಡಿತ ಮಾಡುವ ತಿದ್ದುಪಡಿ ಬಡ ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆಯುವ ಕ್ರಮವಲ್ಲದೆ ಬೇರೇನೂ ಅಲ್ಲ. ಮತ್ತು ಇದಕ್ಕೆ ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ತಣಿಸುವ ಮತ್ತು ಸರ್ಕಾರದ ವೆಚ್ಚಗಳನ್ನು ಇಳಿಕೆ ಮಾಡುವ ಮೂಲಕ ವಿತ್ತೀಯ ಕೊರತೆಯ ಅನುಪಾತವನ್ನು ತಗ್ಗಿಸಬೇಕೆಂಬ ಅದರ ಷರತ್ತನ್ನು ಪಾಲಿಸುವ ಉದ್ದೇಶವಲ್ಲದೆ  ಬೇರೇನೂ ಕಾರಣ ಇಲ್ಲ. ನವ-ಉದಾರವಾದಿ ಬಂಡವಾಳಶಾಹಿ ಅರ್ಥವ್ಯವಸ್ಥೆಯು ಎಷ್ಟು ನಿರ್ದಯವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಪ್ರಸ್ತುತ ಭಾರತದಲ್ಲಿ ಏನಾಗುತ್ತಿದೆಯೋ ಇದಕ್ಕಿಂತ  ಸ್ಫುಟವಾದ ಉದಾಹರಣೆ ಬೇರೆ ಬೇಕಿಲ್ಲ. ಜಾಗತಿಕ

ಅನು:ಕೆ.ಎಂ.ನಾಗರಾಜ್

ಭಾರತವು ಕಳೆದ ಕೆಲವು ದಶಕಗಳಿಂದಲೂ ಹೊಂದಿರುವ ಸಾರ್ವಜನಿಕ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯು ವಿಶ್ವದ ಅತಿ ದೊಡ್ಡ ಧಾನ್ಯ ವಿತರಣಾ ವ್ಯವಸ್ಥೆಗಳಲ್ಲಿ ಒಂದು. ಈ ವ್ಯವಸ್ಥೆಯ ಜೀವಾಳದಂತಿರುವ ‘ಅಂತ್ಯೋದಯ ಅನ್ನ ಯೋಜನೆ’ಯು (AAY) ಗ್ರಾಮೀಣದ ಸುಮಾರು ಶೇ. 75 ಮತ್ತು ನಗರಗಳ ಶೇ. 50 ಜನಸಂಖ್ಯೆಯನ್ನು ಒಳಗೊಂಡಿದೆ ಮತ್ತು ಪ್ರತಿ ಫಲಾನುಭವಿ ಕುಟುಂಬಕ್ಕೆ ತಿಂಗಳಿಗೆ 35 ಕೆಜಿಗಳಷ್ಟು ಆಹಾರ ಧಾನ್ಯಗಳನ್ನು ಸಬ್ಸಿಡಿ ಬೆಲೆಯಲ್ಲಿ ಒದಗಿಸುತ್ತದೆ. ಇದಲ್ಲದೆ, ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಆರಂಭವಾದ ಮತ್ತು 2028ರ ಡಿಸೆಂಬರ್ 31ರವರೆಗೆ ಮಾತ್ರ ಜಾರಿಯಲ್ಲಿರುವ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಅಡಿಯಲ್ಲಿ, 2023ರ ಜನವರಿ 1ರಿಂದ ಪ್ರತಿ ವ್ಯಕ್ತಿಗೆ ತಿಂಗಳಿಗೆ ಅಧಿಕವಾಗಿ 5 ಕೆಜಿಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಗಳ ಹೊರತಾಗಿಯೂ, ಸರಾಸರಿ ಲೆಕ್ಕದಲ್ಲಿ ಜನರ ಆಹಾರ ಧಾನ್ಯ ಸೇವನೆಯ ಪ್ರಮಾಣ ಕಳೆದ ಹಲವಾರು ವರ್ಷಗಳಿಂದಲೂ ಇಳಿಕೆಯಾಗುತ್ತಲೇ ಬಂದಿದೆ. ಈ ಪರಿಸ್ಥಿತಿಯ ಕಾರಣದಿಂದಾಗಿ ಜಾಗತಿಕ ಹಸಿವು ಸೂಚ್ಯಂಕವನ್ನು ಸಿದ್ಧಪಡಿಸಲಾದ ಸುಮಾರು 115 ಹಸಿವು ಬಾಧಿತ ದೇಶಗಳ ಪೈಕಿ ಭಾರತವು ಈ ಸೂಚ್ಯಂಕದ ಪಟ್ಟಿಯಲ್ಲಿ ನೂರರ ಕೆಳಗಿನ ಸ್ಥಾನಗಳಲ್ಲೇ ಕಾಣಿಸಿಕೊಳ್ಳುತ್ತದೆ. ಆದಾಗ್ಯೂ, ನಂಬಲಾಗದ ಸಂಗತಿಯೆಂದರೆ, ಜನರಿಗೆ ಈಗ ವಿತರಿಸಲಾಗುತ್ತಿರುವ ಧಾನ್ಯಗಳ ಪ್ರಮಾಣದಲ್ಲಿ ಕಡಿತ ಮಾಡಲು ಮೋದಿ ಸರ್ಕಾರವು ಯೋಜಿಸುತ್ತಿದೆ. ಈ ಕಡಿತವು ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ತಣಿಸುವ ಮತ್ತು ಸರ್ಕಾರದ ವೆಚ್ಚಗಳನ್ನು ಇಳಿಕೆ ಮಾಡುವ ಮೂಲಕ ವಿತ್ತೀಯ ಕೊರತೆಯ ಅನುಪಾತವನ್ನು ತಗ್ಗಿಸುವ ಉದ್ದೇಶ ಹೊಂದಿದೆಯಲ್ಲದೆ ಬೇರೆ ಯಾವ ಕಾರಣವನ್ನೂ ಹೊಂದಿಲ್ಲ.

ಅಂತ್ಯೋದಯ ಅನ್ನ ಯೋಜನೆಗೆ ಆಧಾರವಾಗಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು (NFSA) ಒಂದು ತಿದ್ದುಪಡಿಯನ್ನು ಸಧ್ಯದಲ್ಲೇ ಕಾಣಲಿದೆ. ಜಾರಿಗೆ ಬರಲಿರುವ ಈ ತಿದ್ದುಪಡಿಯ ಪ್ರಕಾರ, ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆಜಿಗಳ ಬದಲಿಗೆ, ಇನ್ನು ಮುಂದೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 7 ಕೆಜಿಗಳಷ್ಟು ಧಾನ್ಯವನ್ನು ವಿತರಿಸಲಾಗುವುದು. ಅಂದರೆ, ಪ್ರತಿ ಕುಟುಂಬಕ್ಕೆ ಗರಿಷ್ಠ 35 ಕೆಜಿಗಳಷ್ಟು. ಇದು ಪ್ರತಿ ಕುಟುಂಬವೂ ಪಡೆಯುತ್ತಿದ್ದ ಸರಾಸರಿ ಪಡಿತರವನ್ನು ಕಡಿತಗೊಳಿಸುತ್ತದೆ. ಐದಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳ ಪ್ರತಿ ವ್ಯಕ್ತಿಗೂ 7 ಕೆಜಿಯಷ್ಟನ್ನು ಮಾತ್ರ ನೀಡುವ ಮೂಲಕ “ಉಳಿಸಿದ” ಆಹಾರ ಧಾನ್ಯಗಳ ಪ್ರಮಾಣವನ್ನು ಐದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳಿಗೆ ವಿತರಿಸಲಾಗುತ್ತದೆ ಎಂದಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು, ಇಲ್ಲಿಯವರೆಗೆ ಫಲಾನುಭವಿ ಕುಟುಂಬಗಳಿಗೆ ಹಂಚಿಕೆಯಾಗುತ್ತಿದ್ದ ಒಟ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಒಂದು ಭಿನ್ನ ರೀತಿಯಲ್ಲಿ ಅವರಿಗೆ ಮರುಹಂಚಿಕೆ ಮಾಡುವ ವಿಷಯವಲ್ಲ; ಇದು, ಇನ್ನು ಮುಂದೆ ವಿತರಿಸುವ ಆಹಾರ ಧಾನ್ಯಗಳ ಒಟ್ಟು ಪ್ರಮಾಣವನ್ನು ಒಟ್ಟಾರೆಯಾಗಿ ಕಡಿತಗೊಳಿಸುವ ಯೋಜನೆಯಾಗಿದೆ. ಜಾಗತಿಕ

ಇದು, ಇಲ್ಲಿಯವರೆಗೆ ಫಲಾನುಭವಿ ಕುಟುಂಬಗಳಿಗೆ ಹಂಚಿಕೆಯಾಗುತ್ತಿದ್ದ ಒಟ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಒಂದು ಭಿನ್ನ ರೀತಿಯಲ್ಲಿ ಅವರಿಗೆ ಮರುಹಂಚಿಕೆ ಮಾಡುವ ವಿಷಯವಲ್ಲ; ಇದು, ಇನ್ನು ಮುಂದೆ ವಿತರಿಸುವ ಆಹಾರ ಧಾನ್ಯಗಳ ಒಟ್ಟು ಪ್ರಮಾಣವನ್ನು ಒಟ್ಟಾರೆಯಾಗಿ ಕಡಿತಗೊಳಿಸುವ ಯೋಜನೆಯಾಗಿದೆ.

ದಕ್ಷಿಣದ ರಾಜ್ಯಗಳಿಗೆ ಸಿಟ್ಟು ಬರಿಸುವ ಪ್ರಕರಣ ಮಾತ್ರವಲ್ಲ

ಈ ತಿದ್ದುಪಡಿಯ ಒಂದು ಆಯಾಮವು ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಿದ ದಕ್ಷಿಣದ ರಾಜ್ಯಗಳನ್ನು ಅವರ ಯಶಸ್ಸಿನ ಕಾರಣದಿಂದಾಗಿ ದಂಡಿಸುತ್ತದೆ ಎಂಬ ವಿಪರ್ಯಾಸಕರ ಅಂಶವು ಸಾಕಷ್ಟು ಟೀಕೆಗೆ ಗುರಿಯಾಗಿದೆ ಮತ್ತು ಅದು ಸರಿಯಾಗಿಯೇ ಇದೆ. ದಕ್ಷಿಣದ ರಾಜ್ಯಗಳ ಈ ಯಶಸ್ಸಿನ ಪರಿಣಾಮವೆಂದರೆ, ಈ ತಿದ್ದುಪಡಿಯ ಪ್ರಕಾರವಾಗಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 7 ಕೆಜಿ ಧಾನ್ಯಗಳನ್ನು ನೀಡುವ ಲೆಕ್ಕದಲ್ಲಿ, ವಿಶೇಷವಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಕಡಿಮೆ ಸಂಖ್ಯೆಯ ಪ್ರತಿ ಕುಟುಂಬವೂ ಇಲ್ಲಿಯವರೆಗೆ ಪಡೆಯುತ್ತಿದ್ದ ತಿಂಗಳಿಗೆ 35 ಕೆಜಿ ಧಾನ್ಯಗಳ ಬದಲಾಗಿ ಇನ್ನು ಮುಂದೆ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಧಾನ್ಯಗಳನ್ನು ಪಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸಾಮಾಜಿಕ ಸೂಚಕಗಳ ವಿಷಯದಲ್ಲಿ ಬಹಳ ಹಿಂದುಳಿದಿರುವ ಮತ್ತು ಜನಸಂಖ್ಯಾ ನಿಯಂತ್ರಣದಲ್ಲಿ ಅಲ್ಪ ಪ್ರಗತಿ ಸಾಧಿಸಿರುವ, ಅಂದರೆ ಪ್ರತಿ ಕುಟುಂಬವೂ ಹೆಚ್ಚು ಸಂಖ್ಯೆಯ ವ್ಯಕ್ತಿಗಳನ್ನು ಹೊಂದಿರುವ, ಉತ್ತರದ ರಾಜ್ಯಗಳು ವಿತರಿಸಲು ಕೇಂದ್ರದಿಂದ ಪಡೆಯುವ ಧಾನ್ಯಗಳ ವಿಷಯದಲ್ಲಿ ಅವುಗಳಿಗೆ ಹೆಚ್ಚು ನಷ್ಟವಾಗುವುದಿಲ್ಲ. ಆದ್ದರಿಂದ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ತಿದ್ದುಪಡಿಯ ವಿಪರ್ಯಾಸವೆಂದರೆ, ಅದು ಜನಸಂಖ್ಯಾ ನಿಯಂತ್ರಣದಲ್ಲಿ ಹೆಚ್ಚು ಯಶಸ್ವಿಯಾದ ರಾಜ್ಯಗಳನ್ನು ದಂಡಿಸುತ್ತದೆ. ಆದ್ದರಿಂದ, ಸಂಪೂರ್ಣ ತಪ್ಪು ಕಲ್ಪನೆಯಿಂದ ಕೂಡಿದ ಈ ತಿದ್ದುಪಡಿಯನ್ನು ವಿರೋಧಿಸುವಲ್ಲಿ ತಮಿಳುನಾಡು ಮತ್ತು ಕೇರಳ ಮುಂಚೂಣಿಯಲ್ಲಿವೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ, ಇದು ಹೆಚ್ಚು ಪ್ರಗತಿಪರ ದಕ್ಷಿಣದ ರಾಜ್ಯಗಳಿಗೆ ಸಿಟ್ಟು ಬರಿಸುವ ಪ್ರಕರಣ ಮಾತ್ರವಲ್ಲ; ಇದು ಪ್ರತಿ ರಾಜ್ಯದ ಬಡ ಮತ್ತು ಸಣ್ಣ ಕುಟುಂಬಗಳಿಗೆ ಸಿಟ್ಟು ಬರಿಸುವ ಪ್ರಕರಣವೂ ಹೌದು. ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಒಂದು ಸರಾಸರಿ ಸಣ್ಣ ಕುಟುಂಬವು ಸರ್ಕಾರವು ನೀಡಿರುವ ಭರವಸೆಯ ಪ್ರಕಾರ, ತಿಂಗಳಿಗೆ ಪ್ರತಿ ಕುಟುಂಬವೂ 35 ಕೆಜಿ ಮತ್ತು ಪ್ರತಿ ವ್ಯಕ್ತಿಯೂ 5 ಕೆಜಿ ಧಾನ್ಯಗಳನ್ನು ಪಡೆಯುತ್ತಾರೆ ಎಂದಿಟ್ಟುಕೊಂಡರೂ ಸಹ, ಆ ಕುಟುಂಬ ಈಗಲೂ ಅಪೌಷ್ಟಿಕತೆಯ ಸ್ಥಿತಿಯಲ್ಲಿಯೇ ಇದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರತಿ ಕುಟುಂಬಕ್ಕೂ ಅಧಿಕೃತವಾಗಿ ಪ್ರಸ್ತುತ ನೀಡಲಾಗುತ್ತಿರುವ ಧಾನ್ಯಗಳ ಒಟ್ಟು ಪ್ರಮಾಣವು ಕೂಡ ಸರಾಸರಿಯಾಗಿ ಆ ಕುಟುಂಬಕ್ಕೆ ಅಗತ್ಯವಿರುವ ಕನಿಷ್ಠ ಪೋಷಣೆಯನ್ನು ಒದಗಿಸಲು ಸಾಕಾಗುವುದಿಲ್ಲ. ಇದರಲ್ಲಿಯೂ ಸರ್ಕಾರವು ಈಗ ಮತ್ತಷ್ಟು ಕಡಿತವನ್ನು ಪ್ರಸ್ತಾಪಿಸಿದೆ.

ತನ್ನ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ಒಂದು ರಾಜ್ಯವನ್ನು ನೋಡೋಣ. ಅಲ್ಲಿ ಗರಿಷ್ಟ ಮಟ್ಟದ ಸಾಧನೆಯೆಂದರೆ ಜನಸಂಖ್ಯೆ ಸ್ಥಿತಿವಾಗಿರುತ್ತದೆ. ಅಂದರೆ ಒಂದು ಕುಟುಂಬವು ಕನಿಷ್ಠ ನಾಲ್ಕು ಜನರನ್ನು ಹೊಂದಿರುತ್ತದೆ: ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು. ಅದೇ ರೀತಿಯಲ್ಲಿ, ತನ್ನ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ನಿರ್ದಿಷ್ಟವಾಗಿ ಯಶಸ್ವಿಯಾಗದ ರಾಜ್ಯದಲ್ಲಿಯೂ ಸಹ, ನಾವು ಕುಟುಂಬದ ಕನಿಷ್ಠ ಗಾತ್ರವನ್ನು ನಾಲ್ಕು ವ್ಯಕ್ತಿಗಳೆಂದು ತೆಗೆದುಕೊಳ್ಳಬಹುದು: ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು.

ಇದನ್ನೂ ಓದಿ : ಜೀತದಿಂದ ತಪ್ಪಿಸಿಕೊಂಡ ಮೊಗಳ್ಳಿ ಗಣೇಶ್‌; ಹಳ್ಳಿಯ ಹಿಂಸೆಯೇ ಕಥೆಗಾರನನ್ನು ರೂಪಿಸಿತು: ನಟರಾಜ ಹುಳಿಯಾರ

ಇದು ಹೆಚ್ಚು ಪ್ರಗತಿಪರ ದಕ್ಷಿಣದ ರಾಜ್ಯಗಳಿಗೆ ಸಿಟ್ಟು ಬರಿಸುವ ಪ್ರಕರಣ ಮಾತ್ರವಲ್ಲ,  ಪ್ರತಿ ರಾಜ್ಯದ ಬಡ ಮತ್ತು ಸಣ್ಣ ಕುಟುಂಬಗಳಿಗೆ ಸಿಟ್ಟು ಬರಿಸುವ ಪ್ರಕರಣವೂ ಹೌದು. ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ,  ಪ್ರತಿ ಕುಟುಂಬಕ್ಕೂ ಅಧಿಕೃತವಾಗಿ ಪ್ರಸ್ತುತ ನೀಡಲಾಗುತ್ತಿರುವ ಧಾನ್ಯಗಳ ಒಟ್ಟು ಪ್ರಮಾಣವು ಕೂಡ ಸರಾಸರಿಯಾಗಿ ಆ ಕುಟುಂಬಕ್ಕೆ ಅಗತ್ಯವಿರುವ ಕನಿಷ್ಠ ಪೋಷಣೆಯನ್ನು ಒದಗಿಸಲು ಸಹ ಸಾಕಾಗುವುದಿಲ್ಲ. ಇದರಲ್ಲಿಯೂ ಸರ್ಕಾರವು ಈಗ ಮತ್ತಷ್ಟು ಕಡಿತವನ್ನು ಪ್ರಸ್ತಾಪಿಸಿದೆ.

ಈಗ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಗಳು ವಯಸ್ಸು, ಲಿಂಗ ಮತ್ತು ಕೆಲಸದ ಸ್ವರೂಪವನ್ನು ಆಧರಿಸಿ ಭಾರತೀಯರ ದೈನಂದಿನ ಆಹಾರದ ಅವಶ್ಯಕತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಒದಗಿಸುತ್ತವೆ. ಆದರೆ, ಈ “ಅವಶ್ಯಕತೆಯ ಮಾದರಿಗಳು” ಒಂದು ಆದರ್ಶ ಎಂದಿಟ್ಟುಕೊಂಡ ಆಹಾರಕ್ರಮಕ್ಕೆ ಸಂಬಂಧಿಸಿವೆ. ಆದಾಗ್ಯೂ, ಇಲ್ಲಿ ನಮ್ಮ ಕಾಳಜಿಯು ಆಹಾರ ಪದ್ಧತಿಯನ್ನು ವಾಸ್ತವವಾಗಿ ಆಧರಿಸಿದ ಆಹಾರ ಧಾನ್ಯದ ಅವಶ್ಯಕತೆಗಳ ಅಂಶದ ಬಗ್ಗೆ ಇರುವುದರಿಂದ, ಈ ಅಂಶವನ್ನು ಅಂದಾಜು ಮಾಡಲು ನಾವು ಒಂದು ಸರಳ ವಿಧಾನವನ್ನು ಅನುಸರಿಸೋಣ.

ಎಲ್ಲ ಬಡ ಕುಟುಂಬಗಳ ಹೊಟ್ಟೆಯ ಮೇಲೂ ಹೊಡೆಯುವ ತಿದ್ದುಪಡಿ

ಹಿಂದಿನ ಯೋಜನಾ ಆಯೋಗವು ಬಡತನ ಎಂದರೆ ಗ್ರಾಮೀಣ ಭಾರತದಲ್ಲಿ ದೈನಿಕ ತಲಾ 2200 ಕ್ಯಾಲೋರಿಗಳ ಮತ್ತು ನಗರ ಭಾರತದಲ್ಲಿ 2100 ಕ್ಯಾಲೋರಿಗಳ ಲಭ್ಯವಿಲ್ಲದಿರುವುದು ಎಂದು ವ್ಯಾಖ್ಯಾನಿಸಿತ್ತು. ಭಾರತದ ಕಡಿಮೆ ವರಮಾನದ ಕುಟುಂಬಗಳಿಗೆ ಒದಗುವ ಒಟ್ಟು ದೈನಂದಿನ ತಲಾ ಕ್ಯಾಲೋರಿಗಳಲ್ಲಿ ಸರಿಸುಮಾರು ಶೇ. 80ರಷ್ಟು ಆಹಾರ ಧಾನ್ಯಗಳಿಂದಲೇ ಒದಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ಗ್ರಾಂ ಅಕ್ಕಿ ಅಥವಾ ಒಂದು ಗ್ರಾಂ ಗೋಧಿ, 3.5 ಕ್ಯಾಲೋರಿಗಳನ್ನು ನೀಡುತ್ತದೆ. ಆದ್ದರಿಂದ, ಪೌಷ್ಟಿಕಾಂಶದ “ಬಡತನ ರೇಖೆ”ಯನ್ನು ದಾಟುವ ವ್ಯಕ್ತಿಗೆ ಗ್ರಾಮೀಣ ಪ್ರದೇಶಗಳಲ್ಲಿ ದಿನಾ 502 ಗ್ರಾಂ ಆಹಾರ ಧಾನ್ಯಗಳು ಮತ್ತು ನಗರ ಪ್ರದೇಶಗಳಲ್ಲಿ ದಿನಾ 479 ಗ್ರಾಂ ಆಹಾರ ಧಾನ್ಯಗಳು ಬೇಕಾಗುತ್ತವೆ. ಈ ಅಂಕಿಅಂಶಗಳನ್ನು ಸರಳವಾಗಿ ನಾವು 500 ಗ್ರಾಂ ಮತ್ತು 480 ಗ್ರಾಂ ಎಂದು ತೆಗೆದುಕೊಂಡರೆ, ನಾಲ್ಕು ಜನರ ಒಂದು ಕುಟುಂಬಕ್ಕೆ ತಿಂಗಳಿಗೆ ಕ್ರಮವಾಗಿ 60 ಕೆಜಿ ಮತ್ತು 57.6 ಕೆಜಿ ಆಹಾರ ಧಾನ್ಯಗಳು ಬೇಕಾಗುತ್ತವೆ.

ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆಜಿಗಳಷ್ಟನ್ನು ಆಹಾರ ಧಾನ್ಯಗಳನ್ನು ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ (ಅಂದರೆ, ನಾಲ್ಕು ಜನರ ಕುಟುಂಬಕ್ಕೆ ತಿಂಗಳಿಗೆ 20 ಕೆಜಿ) ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ. ಒಂದು ಕನಿಷ್ಠ ಗಾತ್ರದ ಕುಟುಂಬವು ಪಡೆಯುವ (ಗ್ರಾಮೀಣದಲ್ಲಿ 60 ಕೆಜಿ ಬದಲಿಗೆ, ಮತ್ತು ನಗರಗಳಲ್ಲಿ 57.6 ಕೆಜಿ ಬದಲಿಗೆ 55 ಕೆಜಿ) ಆಹಾರ ಧಾನ್ಯಗಳಿಂದ, ಪೌಷ್ಠಿಕಾಂಶದ ದೃಷ್ಟಿಯಿಂದ ಅಧಿಕೃತವಾಗಿ “ಬಡತನ ರೇಖೆ” ಎಂದು ಪರಿಗಣಿಸಲ್ಪಟ್ಟ ಮಟ್ಟವನ್ನು ತಲುಪುವುದು ಸಾಧ್ಯವಿಲ್ಲ.

ಈಗ, ಈ ಕುಟುಂಬದ ಆಹಾರ ಧಾನ್ಯದ ಲಭ್ಯತೆಯನ್ನು ಮಾಸಿಕ 35 ಕೆಜಿಗಳಿಂದ 28 ಕೆಜಿಗೆ ಇಳಿಕೆ ಮಾಡುವುದಾಗಿ ಸರ್ಕಾರವು ಸೂಚಿಸಿದೆ. ಇದು ಅವರ ಆಹಾರ ಧಾನ್ಯಗಳ ಲಭ್ಯತೆಯನ್ನು ತಿಂಗಳಿಗೆ 48 ಕೆಜಿಗೆ ಇಳಿಸುತ್ತದೆ. ಅಂದರೆ, ಇದು ಗ್ರಾಮೀಣ ಭಾರತದಲ್ಲಿ “ಬಡತನ ರೇಖೆ”ಯನ್ನು ತಲುಪಲು ಅಗತ್ಯವಿರುವುದಕ್ಕಿಂತಲೂ ಶೇ.20ರಷ್ಟು ಕಡಿಮೆ ಇದೆ ಮತ್ತು ನಗರ ಭಾರತದಲ್ಲಿ “ಬಡತನ ರೇಖೆ”ಯನ್ನು ತಲುಪಲು ಅಗತ್ಯವಿರುವದಕ್ಕಿಂತ ಶೇ. 16.7ರಷ್ಟು ಕಡಿಮೆ ಇದೆ. ಈ ರೀತಿಯಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ದಕ್ಷಿಣ ರಾಜ್ಯಗಳಿಗೆ ಮಾತ್ರವೇ ತಾರತಮ್ಯ ಮಾಡಲಾಗುತ್ತದೆ ಎಂಬುದಷ್ಟೇ ಅಲ್ಲ. ಪ್ರತಿ ರಾಜ್ಯದ ಸರಾಸರಿ ಕನಿಷ್ಠ ಗಾತ್ರದ ಪ್ರತಿ ಕುಟುಂಬಕ್ಕೂ ಸಹ ತಾರತಮ್ಯ ಮಾಡಲಾಗುತ್ತದೆ. ಮತ್ತು, ಪ್ರತಿ ಕುಟುಂಬಕ್ಕೂ ದೊರಕುವ ಆಹಾರ ಧಾನ್ಯ ಪಡಿತರವು ಅಧಿಕೃತವಾಗಿ ವ್ಯಾಖ್ಯಾನಿಸಲಾದ “ಬಡತನ ರೇಖೆ”ಯನ್ನು ತಲುಪಲು ಅಗತ್ಯವಿರುವ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. ಹಾಗಾಗಿ, ತಿದ್ದುಪಡಿಯು ಎಲ್ಲ ಬಡ ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆತವೇ ಮತ್ತು ಅದುವೇ ಈ ತಿದ್ದುಪಡಿಯ ಹೂರಣ.

ಒಂದು ಸಣ್ಣ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ತಿಂಗಳಿಗೆ 55 ಕೆಜಿ ಧಾನ್ಯಗಳು “ಬಡತನ ರೇಖೆ”ಯನ್ನು ತಲುಪುವ ಪರಿಭಾಷೆಯ ವ್ಯಾಖ್ಯಾನದ ಪ್ರಕಾರ ಸಾಕಾಗುತ್ತದೆ ಎಂದಿದ್ದರೆ  ಈ ವಾದವು,  ಮಾನ್ಯವಾಗುತ್ತಿರಲಿಲ್ಲ. ಆದರೆ, ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒದಗಿಸುವ 55 ಕೆಜಿ ಧಾನ್ಯಗಳೂ ಸಹ ಈ “ಅವಶ್ಯಕತಾ ಮಾದರಿ”ಗಿಂತಲೂ ಕಡಿಮೆ ಇರುವಾಗ, ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ನೀಡಲಾಗುವ ಧಾನ್ಯಗಳ ಪ್ರಮಾಣದಲ್ಲಿ ಮತ್ತಷ್ಟು ಕಡಿತ ಮಾಡುವ ಕ್ರಮವು ಬಡವರ ಮೇಲೆ ಮಾಡುವ ದಾಳಿಯೇ ಆಗುತ್ತದೆ. ಇಂತಹ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ.

ಅದಕ್ಕಿಂತಲೂ ಮಿಗಿಲಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (PMGKAY) ಸಾಂಕ್ರಾಮಿಕದ ಸಮಯದಲ್ಲಿ ಒಂದು ತುರ್ತಿನ ಕ್ರಮವಾಗಿ ಪರಿಚಯಿಸಲಾಗಿತ್ತು ಮತ್ತು ಅದು 2028ರ ಡಿಸೆಂಬರ್ 31ರವರೆಗೆ ಮಾತ್ರ ಇರುತ್ತದೆ ಎಂದು ಭಾವಿಸಲಾಗಿತ್ತು. ಈ ಬಗ್ಗೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ (NFSA) ತಿದ್ದುಪಡಿಯನ್ನು ಸಾರ್ವಜನಿಕ ಚರ್ಚೆಗಾಗಿ ಮಂಡಿಸುವ ಸಂದರ್ಭದಲ್ಲಿ ಸರ್ಕಾರವು ಯಾವುದೇ ನಿರ್ದಿಷ್ಟ ವಾದವನ್ನು ಮಂಡಿಸಲಿಲ್ಲ ಮತ್ತು PMGKAY ಅನ್ನು 2028ರ ಆಚೆಗೆ ವಿಸ್ತರಿಸಲಾಗುವುದೇ ಅಥವಾ ಅದನ್ನು ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯ ಶಾಶ್ವತ ಭಾಗವನ್ನಾಗಿ ಮಾಡಲಾಗುವುದೇ ಎಂಬುದರ ಬಗ್ಗೆ ಯಾವುದೇ ಸಲಹೆಯನ್ನೂ ಮಂಡಿಸಿಲ್ಲ. ಆದ್ದರಿಂದ, 2028ರ ನಂತರ, ಗ್ರಾಮೀಣ ಮತ್ತು ನಗರ ಭಾರತದ ಜನತೆಗೆ ಸಂಬಂಧಿಸಿದಂತೆ ವಿಷಯಗಳು ಇನ್ನಷ್ಟು ಕಠೋರವಾಗುತ್ತವೆ ಎಂಬ ಅಂಶವನ್ನು ನಾವು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ.

ಇಂತಹ ಕಡಿತ ಏತಕ್ಕಾಗಿ?

ಹಾಗಾಗಿ, ಒಂದು ಪ್ರಶ್ನೆ ಸ್ಪಷ್ಟವಾಗಿ ಉದ್ಭವಿಸುತ್ತದೆ: ಅಂತಹ ಒಂದು ಕಡಿತವನ್ನು ಸರ್ಕಾರ ಏಕೆ ಯೋಜಿಸುತ್ತಿದೆ? ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಆಹಾರ ಧಾನ್ಯ ಸ್ವಾವಲಂಬನೆಯನ್ನು ಭಾರತವು ತ್ಯಜಿಸುವಂತೆ ಮತ್ತು ಆಮದಿನ ಮೇಲೆ ಅವಲಂಬಿತವಾಗುವಂತೆ ಅಮೆರಿಕದ ಒತ್ತಡ ಇರಬಹುದು ಎಂಬುದು ಒಂದು ಉತ್ತರ. ಇದು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸರ್ಕಾರವು ಇಲ್ಲಿಯವರೆಗೆ ನಿರ್ವಹಿಸುತ್ತಿದ್ದ ಗಾತ್ರದಲ್ಲೇ ಇನ್ನು ಮುಂದೆಯೂ ನಿರ್ವಹಿಸುವ ಸಾಮರ್ಥ್ಯದ ಮೇಲೆ ದೊಡ್ಡ ಪ್ರಶ್ನೆ ಚಿಹ್ನೆಯನ್ನು ಹಾಕುತ್ತದೆ. ಆದ್ದರಿಂದ, ಸರ್ಕಾರವು ಭವಿಷ್ಯದ ತಯಾರಿಯಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕ್ಷೀಣಿಸುವ ಪ್ರಯತ್ನದಲ್ಲಿದೆ.

ಇದಲ್ಲದೆ, ಈ ಕಡಿತದ ಸಂಬಂಧವಾಗಿ ಸರ್ಕಾರವನ್ನು ಬಲವಂತ ಪಡಿಸುವ ಒಂದು ಹೆಚ್ಚುವರಿ ಮತ್ತು ತತ್‌ಕ್ಷದ ಕಾರಣವೂ ಇದೆ. ಅದು ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (FRBM) ಅಡಿಯಲ್ಲಿ ನಿಗದಿಪಡಿಸಿದ ವಿತ್ತೀಯ ಕೊರತೆಯ ಮಿತಿಯನ್ನು ಮೀರುವ ಭಯಕ್ಕೆ ಸಂಬಂಧಿಸಿದೆ. ವಿಶ್ವ ತೈಲ ಬೆಲೆಗಳ ಏರಿಕೆಯ ಕಾರಣದಿಂದಾಗಿ ಸರ್ಕಾರವು ಹಲವಾರು ಪೆಟ್ರೋ-ಉತ್ಪನ್ನ ಬಳಕೆದಾರರಿಗೆ ಬಜೆಟ್‌ನಿಂದ ಬೃಹತ್‌ ಸಬ್ಸಿಡಿಗಳನ್ನು ನೀಡಿದೆ. ಈ ಬೃಹತ್‌ ಸಬ್ಸಿಡಿಗಳಿಗೆ ಬೇಕಾಗುವ ಹಣವನ್ನು ಶ್ರೀಮಂತರ ಮೇಲೆ ಅಧಿಕ ತೆರಿಗೆಗಳನ್ನು ವಿಧಿಸುವ ಮೂಲಕ ಒದಗಿಸಿಕೊಳ್ಳುವುದರ ಬದಲು, ಸರ್ಕಾರವು ವಿವಿಧ ವಲಯಗಳ ಅಗತ್ಯ ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ನಿರತವಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಬಜೆಟ್‌ಅನ್ನು ಮತ್ತು ಆ ಮೂಲಕ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಮೀಸಲಿಟ್ಟ ಹಣವನ್ನು ಸರ್ಕಾರವು ಕಡಿತಗೊಳಿಸಿದೆ ಎಂಬ ವರದಿಗಳಿವೆ. ಅದೇ ರೀತಿಯಲ್ಲಿ, ಅಂತ್ಯೋದಯ ಅನ್ನ ಯೋಜನೆಯ (AAY) ಮೇಲಿನ ವೆಚ್ಚವನ್ನೂ ಕಡಿತಗೊಳಿಸುತ್ತಿದೆ. ಈ FRBM ಕಾಯ್ದೆಯನ್ನು ಹಣಕಾಸು ಬಂಡವಾಳದ ಒತ್ತಾಯದ ಮೇರೆಗೆ ಜಾರಿಗೆ ತರಲಾಗಿರುವುದರಿಂದ, ಬಡವರ ಮೇಲಿನ ಈ ದಾಳಿಯು ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ತಣಿಸುವ ಪ್ರಯತ್ನದ ಒಂದು ಭಾಗವೂ ಹೌದು. ನವ-ಉದಾರವಾದಿ ಬಂಡವಾಳಶಾಹಿ ಅರ್ಥವ್ಯವಸ್ಥೆಯು ಎಷ್ಟು ನಿರ್ದಯವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಪ್ರಸ್ತುತ ಭಾರತದಲ್ಲಿ ಏನಾಗುತ್ತಿದೆಯೋ ಅದು ಅತ್ಯಂತ ಸ್ಫುಟವಾಗಿ ತೋರಿಸುತ್ತದೆ.  ಇದಕ್ಕಿಂತಲೂ ಹೆಚ್ಚು ಸ್ಪಷ್ಟವಾದ ವಿವರಣೆಯನ್ನು ಬೇರೆ ಯಾವ ಉದಾಹರಣೆಯೂ ಕೊಡುವುದಿಲ್ಲ.

ಇಂತಹ ಒಂದು ಕಡಿತವನ್ನು ಸರ್ಕಾರ ಏಕೆ ಯೋಜಿಸುತ್ತಿದೆ? ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಆಹಾರ ಧಾನ್ಯ ಸ್ವಾವಲಂಬನೆಯನ್ನು ಭಾರತವು ತ್ಯಜಿಸುವಂತೆ ಮತ್ತು ಆಮದಿನ ಮೇಲೆ ಅವಲಂಬಿತವಾಗುವಂತೆ ಅಮೆರಿಕದ ಒತ್ತಡ ಇರಬಹುದು ಎಂಬುದು ಒಂದು ಉತ್ತರ. ಇದು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸರ್ಕಾರವು ಇಲ್ಲಿಯವರೆಗೆ ನಿರ್ವಹಿಸುತ್ತಿದ್ದ ಗಾತ್ರದಲ್ಲೇ ಇನ್ನು ಮುಂದೆಯೂ ನಿರ್ವಹಿಸುವ ಸಾಮರ್ಥ್ಯದ ಮೇಲೆ ದೊಡ್ಡ ಪ್ರಶ್ನೆ ಚಿಹ್ನೆಯನ್ನು ಹಾಕುತ್ತದೆ. ಆದ್ದರಿಂದ, ಸರ್ಕಾರವು ಭವಿಷ್ಯದ ತಯಾರಿಯಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕ್ಷೀಣಿಸುವ ಪ್ರಯತ್ನದಲ್ಲಿದೆ.

 

ಇದನ್ನೂ ನೋಡಿ : “ಮುತ್ತು ಬಂದಿದೆ ಕೇರಿಗೆ” — ಕನಕದಾಸರ ಕುರಿತ ನೃತ್ಯ ರೂಪಕ Janashakthi Media

Donate Janashakthi Media

Leave a Reply

Your email address will not be published. Required fields are marked *