ಸೂಕ್ಷ್ಮ ಸಂವೇದನೆ ಇಲ್ಲದ ಬೌದ್ಧಿಕ ವಾತಾವರಣದಲ್ಲಿ ವೈಯುಕ್ತಿಕ ಅಭಿವ್ಯಕ್ತಿ ಹುಸಿಯಾಗಿಬಿಡುತ್ತದೆ
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಯುವಜನರ ಪ್ರತಿಭಟನೆಗಳು ತಮ್ಮ ಅಂತಿಮ ಗುರಿ ತಲುಪಲು ಸಾಧ್ಯವೇ ? ಪ್ರತಿಯೊಂದು ಜನಾಂದೋಲನದ ಸಂದರ್ಭದಲ್ಲೂ ಈ ಜಿಜ್ಞಾಸೆ ಕಾಡುವುದು ಸ್ವತಂತ್ರ ಭಾರತದ ಒಂದು ಲಕ್ಷಣ. ಏಕೆಂದರೆ ಆಡಳಿತಾರೂಢ ಪಕ್ಷಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬದ್ಧತೆ ಹೊಂದಿದ್ದರೂ, ತಳಮಟ್ಟದ ಸಮಾಜದಿಂದ ಉಗಮಿಸುವ ಸಾಮಾನ್ಯ ಜನತೆಯ ನೋವಿನ ದನಿಗಳು ಸಂಘಟಿತ ರೂಪ ಪಡೆದ ಕೂಡಲೇ ತಮ್ಮ ಅಧಿಕಾರದ ಕೋಟೆಗಳ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತವೆ. ರಾಮಲೀಲಾ ಮೈದಾನ, ಶಿವಾಜಿ ಪಾರ್ಕ್, ಜಂತರ್ ಮಂತರ್, ಫ್ರೀಡಂ ಪಾರ್ಕ್ ಈ ಹೋರಾಟದ ಮೈದಾನಗಳಲ್ಲಿ ಒಂದಾಗುವ ಒಕ್ಕೊರಲ ದನಿಗಳು ಸದಾ ಕಾಲವೂ ಆಳುವ ವರ್ಗಗಳಲ್ಲಿ ಕಂಪನ ಮೂಡಿಸುತ್ತಲೇ ಬಂದಿವೆ. ಅದೇ ವೇಳೆ ಈ ದಿಟ್ಟ ದನಿಗಳನ್ನು ಅಡಗಿಸುವ ರಾಜಕೀಯ ತಂತ್ರಗಾರಿಕೆಗಳೂ (Political Manouverinģ) ಮಾತುಕತೆಯ ಮೂಲಕ ಶಮನಗೊಳಿಸುವ ಚಾಣಾಕ್ಷತೆಯೂ ಸರ್ಕಾರಗಳಿಗೆ ಸಿದ್ಧಿಸಿದೆ. (ಸೋನಂ ವಾಂಗ್ಚುಕ್ ಅವರ ಬೌದ್ಧಿಕ ಶೀರ್ಷಾಸನ ಈ ನಿಟ್ಟಿನಲ್ಲೇ ಸಾಗಿದೆ.) ವಾಸ್ತವ
– ನಾ ದಿವಾಕರ
ಈ ವಿಭಿನ್ನ ಸಾಧ್ಯತೆಗಳ ನಡುವೆಯೇ ದೆಹಲಿಯಲ್ಲಿ ದೇಶದ ವಿದ್ಯಾರ್ಥಿ ಯುವಜನರ ಹತಾಶೆ, ಆತಂಕ, ನಿರಾಸೆ ಮತ್ತು ಅಸಮಾಧಾನಗಳು ಧ್ವನಿಸುತ್ತಿವೆ. ಸೋನಂ ವಾಂಗ್ಚುಕ್ ತಮ್ಮ ಬೇಡಿಕೆಗಳನ್ನು ಸಡಿಲಗೊಳಿಸಿ ನಿರಶನವನ್ನು ಹಿಂಪಡೆದಿರುವುದು ಅಂತಿಮ ಫಲಿತಾಂಶದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿದೆ. ಈ ಸಾಧ್ಯಾಸಾಧ್ಯತೆಗಳ ನಡುವೆ ಜಂತರ್ ಮಂತರ್ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಬೌದ್ಧಿಕ ದ್ವಂದ್ವಗಳನ್ನು, ಮಾನಸಿಕ ಕ್ರೌರ್ಯವನ್ನು, ಭೌತಿಕ ಅಪ್ರಾಮಾಣಿಕತೆಯನ್ನು ಸ್ಪಷ್ಟವಾಗಿ ತೆರೆದಿಟ್ಟಿರುವುದು ಯೋಚಿಸಬೇಕಾದ ವಿಚಾರ. ಕಳೆದ 35 ದಿನಗಳಲ್ಲಿ ದೆಹಲಿಯಲ್ಲಿ ಕಾಣದೆ ಹೋಗಿರುವ ಒಂದು ಅಂಶವೆಂದರೆ ‘ಸಹಾನುಭೂತಿ’. ಪ್ರಜಾಪ್ರಭುತ್ವ ಆಡಳಿತದಲ್ಲಿ ಮತ್ತು ನಾಗರಿಕತೆಯ ಸಮಾಜದಲ್ಲಿ, ಮಾನವೀಯತೆ ಉಳಿದಿದೆ ಎನ್ನಲು ಇರುವ ಏಕೈಕ ಸಾಕ್ಷಿ ಈ ಸಹಾನುಭೂತಿ. ವಾಸ್ತವ
ಸಾಮಾಜಿಕ ಮೌಲ್ಯವಾಗಿ ಸಹಾನುಭೂತಿ
ಯಾರಿಗೆ ತೋರಬೇಕು ಸಹಾನುಭೂತಿ ? ನೀಟ್ ಹಗರಣದಿಂದ ಮನನೊಂದು ಜೀವ ಕಳೆದುಕೊಂಡ 21 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೋ ? ತಮ್ಮ ಮಡಿಲಲ್ಲಿಟ್ಟು ಸಾಕಿದ ಮಕ್ಕಳನ್ನು ಶಾಶ್ವತವಾಗಿ ಕಳೆದುಕೊಂಡ ತಂದೆ ತಾಯಿಯರಿಗೋ ? ಈ ಯುವ ಜನಾಂಗದ ಶ್ರೇಯಸ್ಸಿಗಾಗಿ ನಿಸ್ವಾರ್ಥವಾಗಿ ಶ್ರಮಿಸಿದ ಪ್ರಾಮಾಣಿಕ ಬೋಧಕರಿಗೋ ? ಯಾರಿಗೇ ಆದರೂ ಮೂಲತಃ ಕಳೆದುಹೋದ ಜೀವಗಳು ಮರಳಿ ಬರುವುದಿಲ್ಲ. ಸರ್ಕಾರ ನೀಡುವ ಪರಿಹಾರದ ಚೆಕ್ಕುಗಳಲ್ಲಿ ಎಷ್ಟು ಸೊನ್ನೆಗಳಿದ್ದರೂ ಅದು ಹೆತ್ತೊಡಲಿನ ಕಂಬನಿಯಲ್ಲಿ ಮಿಂದು ಅಳಿಸಿಹೋಗುತ್ತವೆ. ಸತ್ತ ಜೀವಗಳಿಗೆ ಬೆಲೆ ಕಟ್ಟುವ ವ್ಯವಸ್ಥೆಯಲ್ಲಿ ಶಾಶ್ವತವಾಗಿ ಉಳಿಯುವುದು ಈ ಕಂಬನಿ ಮತ್ತು ಅದರ ಬೇರುಗಳಾಗಿ ಹೃದಯ ವೇದನೆಗಳೇ ಅಲ್ಲವೇ ? ಈ ಒಳಬೇಗುದಿಗೆ ನಮ್ಮ ಸಮಾಜ/ಸರ್ಕಾರ ಹೇಗೆ ಸ್ಪಂದಿಸಿದೆ ? ವಾಸ್ತವ
ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸೇವೆ ಮಾಡಿದ ಸ್ವಯಂಸೇವಕ ಜುನೈದ್ ಬಿಡುಗಡೆ
ಈ ಪ್ರಶ್ನೆಯೇ ಸೂಕ್ಷ್ಮ ಮನಸ್ಸುಗಳನ್ನು ಅಡ್ಡಾದಿಡ್ಡಿ ಕಲಕಿಬಿಡುತ್ತದೆ. ವಿಚಿತ್ರ ಎಂದರೆ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾದ ಕ್ಷಣದಲ್ಲೇ ಭುಗಿಲೆದ್ದು ಪ್ರತಿಭಟಿಸುವ ಹಿಂದೂ ಸಂರಕ್ಷಕ ಸಂಘಟನೆಗಳಿಗೆ ಅಥವಾ ಪ್ರಚಾರಕರಿಗೆ, ಈ 21 ನತದೃಷ್ಟರ ಅಸಹಜ ಸಾವಿನಿಂದ ಯಾವ ಧಕ್ಕೆಯೂ ಉಂಟಾಗಿಲ್ಲ. ಬದಲಾಗಿ ಈ ನಿರ್ಭಾಗ್ಯರಿಗಾಗಿ ಕಂಬನಿ ಮಿಡಿದು ಭವಿಷ್ಯದಲ್ಲಾದರೂ ಯುವ ಜೀವಗಳು ಹೀಗೆ ಪಯಣದ ಅರ್ಧ ಹಾದಿಯಲ್ಲೇ ನಿರ್ಗಮಿಸುವುದನ್ನು ತಡೆಗಟ್ಟುವ ಸಲುವಾಗಿ, ಜಂತರ್ ಮಂತರ್‌ನಲ್ಲಿ ಹೋರಾಡುತ್ತಿರುವ ಯುವ ಜನರ ಕಣ್ಣ ಹನಿಗಳಲ್ಲಿ ಇವರಿಗೆ ಕಂಡಿದ್ದು ‘ವಿದೇಶೀ ಕೈವಾಡ-ಪಿತೂರಿ’ ಇತ್ಯಾದಿ. ಬಹುಶಃ ‘ಹಿಂದೂ ಧಾರ್ಮಿಕ ಭಾವನೆಗಳು’ ಇವರಿಗೆ ಅನ್ವಯಿಸದೆ ಇರಬಹುದು. ವಾಸ್ತವ
ಆದರೆ ಈ ಅಮಾಯಕ ಜೀವಗಳಿಗೆ ಸಹಾನುಭೂತಿಯನ್ನಾದರೂ ವ್ಯಕ್ತಪಡಿಸಬಹುದಿತ್ತಲ್ಲವೇ ? ಜಂತರ್ ಮಂತರ್ ಹೋರಾಟದಲ್ಲಿ ವಿದೇಶಿ ಪಿತೂರಿಯನ್ನು ಗುರುತಿಸುವ ‘ಸಂಶೋಧಕರಿಗೆ’ ಈ ಮಕ್ಕಳನ್ನು ಹಡೆದವರು ದುಃಖದ ಮಡುವಿನಲ್ಲಿರುವುದನ್ನು ಗುರುತಿಸಲಾಗುವುದಿಲ್ಲವೇ ? ಇದನ್ನೇ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ಬೌದ್ಧಿಕ ದಾರಿದ್ರ್ಯ (Intellectual Poverty) ಎನ್ನಲಾಗುತ್ತದೆ. ಕೇಂದ್ರ ಸರ್ಕಾರದಲ್ಲೂ ಸಹ ನೀಟ್ ಹಗರಣದ ತನಿಖೆ, ತಪ್ಪಿತಸ್ಥರಿಗೆ ಕಾನೂನಾತ್ಮಕ ಶಿಕ್ಷೆ ಇತ್ಯಾದಿಗಳು ಧ್ವನಿಸುತ್ತದೆಯೇ ಹೊರತು, ಈ ಮಕ್ಕಳಿಗಾಗಿ ಸಹಾನುಭೂತಿ ವ್ಯಕ್ತಪಡಿಸುವ ಸೂಚನೆಯೂ ಕಾಣುವುದಿಲ್ಲ. ಭಾರತದ ಜನಪ್ರತಿನಿಧಿಗಳಲ್ಲಿ ಮಾನವೀಯತೆ ಇದ್ದಿದ್ದರೆ, ಸಂಸತ್ತಿನ ಮೊದಲ ದಿನ ಈ ಮಕ್ಕಳ ಸಾವಿಗೆ ಒಂದು ನಿಮಿಷದ ಮೌನ ಆಚರಿಸಬೇಕಿತ್ತು. ವಾಸ್ತವ
ಮಕ್ಕಳ ಜೀವ – ಭವಿಷ್ಯದ ಬದುಕು
“ಹೀಗಾಗಬಾರದಿತ್ತು, ಹೀಗಾಗದಂತೆ ಎಚ್ಚರವಹಿಸುತ್ತೇವೆ ಮಕ್ಕಳ ಅಸಹಜ ಸಾವಿಗೆ ವಿಷಾದ ವ್ಯಕ್ತಪಡಿಸುತ್ತೇವೆ” ಇಂತಹ ದೇಶಾವರಿ ಹೇಳಿಕೆಗಳು ಬೇರೂರಿದ ಅಪ್ರಾಮಾಣಿಕತೆಯನ್ನು ಮರೆಮಾಚುವ ಕವಚಗಳಷ್ಟೆ. ಸಮಾಧಾನಕರ ಅಂಶ ಎಂದರೆ ಕೆಲವು ಹಿರಿಯ (ರಾಜಕೀಯ ನಿವೃತ್ತ) ಬಿಜೆಪಿ ನಾಯಕರಾದರೂ ಹೋರಾಟನಿರತ ಮಕ್ಕಳನ್ನು ಅನುಕಂಪ-ಸಹಾನುಭೂತಿಯಿಂದ ನೋಡುವಂತೆ ಆಗ್ರಹಿಸಿದ್ದಾರೆ. ವಿವೇಕ ಸಂಪೂರ್ಣ ಸತ್ತಿಲ್ಲ ಎನ್ನಬಹುದು. ಈ ನಡುವೆ ಖ್ಯಾತ ನಟ ಕಮಲಹಾಸನ್ “ ಒಂದು ಮಗು ಅತ್ತಾಗಲೇ ನಾವು ಅದರ ನೋವನ್ನು ಆಲಿಸಬೇಕಿತ್ತು, ಆದರೆ ಹಲವಾರು ಮಕ್ಕಳು ಸಾಯುವವರೆಗೂ ಕಾಯುತ್ತಾ ಕುಳಿತೆವು ” (ಪ್ರವಾ 24-7-26) ಎಂದು ಹೇಳಿರುವುದು ವ್ಯವಸ್ಥೆಯ ಆತ್ಮಸಾಕ್ಷಿಗೆ ಕಪಾಳಮೋಕ್ಷ ಮಾಡಿದಂತಿದೆ. ಈ ಮಾತುಗಳಲ್ಲಿ ಕಮಲ್ ಬಳಸುವ ‘ಮಗು’ ಎಂಬ ಪದವೇ ನಮ್ಮೊಳಗಿರಬೇಕಾದ ಸಂವೇದನೆಯನ್ನು ಸಂಕೇತಿಸುತ್ತದೆ. ವಾಸ್ತವ
ಆದರೆ ಬಿಜೆಪಿ ನಾಯಕರಿಗೆ ಈ ಮಕ್ಕಳಿಗಿಂತಲೂ ಹೆಚ್ಚಾಗಿ ಜಂತರ್ ಮಂತರ್‌ನಲ್ಲಿ ಅಮೂರ್ತ ರೂಪದ ವಿದೇಶಿ ಏಜೆಂಟರು ಕಾಣುತ್ತಾರೆ. ಕೇಂದ್ರ ಸರ್ಕಾರದಿಂದ ಈ ಅಭಿಪ್ರಾಯ ವ್ಯಕ್ತವಾಗಿಲ್ಲ. ಆದರೆ ಬಿಜೆಪಿ ನಾಯಕರಿಂದ ಕೇಳಿಬರುತ್ತಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟರೆ ಸಮಸ್ಯೆ ಬಗೆಹರಿಯುವುದೇ ಎಂಬ ಪ್ರಶ್ನೆಗೆ ಹೇಗೆ ಉತ್ತರಿಸುವುದು ? ಇದು ಸಾಂವಿಧಾನಿಕ-ರಾಜಕೀಯ ನೈತಿಕತೆಯ ಪ್ರಶ್ನೆ. ದುರಂತ ಎಂದರೆ ಈ ವಿದೇಶಿ ಏಜೆಂಟ್ ಅಥವಾ ಪಿತೂರಿಯ ನಿರೂಪಣೆಯನ್ನು ಉತ್ಪಾದಿಸಿರುವ ವಾಟ್ಸಾಪ್ ವಿಶ್ವವಿದ್ಯಾಲಯದ ಬೌದ್ಧಿಕ ಕಾರ್ಖಾನೆಗಳಲ್ಲಿ ನೈತಿಕತೆ ಇರುವುದಿಲ್ಲ. ರಾಜಕೀಯ ನಾಯಕರಿಗೆ ಪ್ರತಿಯೊಂದು ಅಸಹಜ ಸಾವಿನಲ್ಲೂ ಸ್ವಾರ್ಥ ರಾಜಕಾರಣದ ಛಾಯೆಯಷ್ಟೇ ಕಾಣುವುದು ಸಹಜ. ಆದರೆ ಬಾಹ್ಯ ಸಮಾಜದಲ್ಲಿರುವ ರಾಜಕೀಯೇತರ ವ್ಯಕ್ತಿಗಳೂ ಇದೇ ಉತ್ಪಾದಿತ ನಿರೂಪಣೆಗಳಿಗೆ (Manufactured Narratives) ಜೋತುಬೀಳುವುದನ್ನು ಹೇಗೆ ವ್ಯಾಖ್ಯಾನಿಸುವುದು ? ವಾಸ್ತವ

ಭವಿಷ್ಯದ ಭಾರತಕ್ಕೆ ಅಪಾಯ ಇರುವುದು ಈ ಹಿತವಲಯದ (Comfort zone) ಅಂಧ ಅಭಿಮಾನಿ ವರ್ಗಗಳಿಂದ. ಅಭಿಜೀತ್ ದೀಪ್ಕೆ ಅಮೆರಿಕದಿಂದ ಬಂದು ಇಲ್ಲೇಕೆ ಹೋರಾಟ ರೂಪಿಸಬೇಕು ಎಂಬ ಪ್ರಶ್ನೆಯೂ ಸಹ ಈ ವಲಯದಲ್ಲಿ ಕೇಳಿಬರುತ್ತಿದೆ. ಬಹುಶಃ ಆತ ದಲಿತ ಎಂಬ ಕಾರಣಕ್ಕೆ ಆಂತರ್ಯದ ಮತ್ಸರ ಇಲ್ಲಿ ಕಚ್ಚಾವಸ್ತುವಾಗುತ್ತದೆ. ಇದನ್ನು ದಾಟಿ ನೋಡಿದಾಗ, ಭಾರತೀಯ ಸಂಜಾತ ವ್ಯಕ್ತಿಯೊಬ್ಬ, ವಿದೇಶದ ವ್ಯಾಮೋಹಗಳನ್ನು ಕಳಚಿ, ತನ್ನ ಸ್ವದೇಶದಲ್ಲಿ ಯುವ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಬಯಸುವುದು ಅಪರಾಧವಾಗುವುದೇ ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿ ಮಾಡಿದ್ದೂ ಇದನ್ನೇ ಅಲ್ಲವೇ ? ಈ ಯುವಕನನ್ನು ‘ವಿದೇಶಿ’ ಅಥವಾ ‘ವಿದೇಶೀಯರ ಏಜೆಂಟ್’ ಎಂದು ನೋಡುವುದೇ ನಮ್ಮ ದೃಷ್ಟಿ ಭ್ರಷ್ಟತೆಯ ಸಂಕೇತ ಅಲ್ಲವೇ ? ವಾಸ್ತವ
ತಮ್ಮದಲ್ಲದ ತಪ್ಪಿಗೆ, ವ್ಯವಸ್ಥೆಯ ಲೋಪಗಳಿಂದ, ಸಮಾಜದೊಳಗಿನ ದುರಾಸೆ ಮತ್ತು ದುಷ್ಟ ಪ್ರವೃತ್ತಿಗಳ ಫಲವಾಗಿ ಜೀವ ಕಳೆದುಕೊಂಡ 21 ವಿದ್ಯಾರ್ಥಿಗಳ ಹಿಂದೆ 42 ಹೆತ್ತ ಜೀವಗಳು ಹಗಲು ರಾತ್ರಿ ನೋವಿನ ಆಸರೆಯಲ್ಲೇ ಕಳೆಯುತ್ತಿರುವುದು ನಮಗೇಕೆ ಕಾಣುತ್ತಿಲ್ಲ ? ಇದಕ್ಕೆ ನೆಹರೂ ಅಂತೂ ಕಾರಣ ಆಗುವುದಿಲ್ಲ. ಅಥವಾ NEET ಪರೀಕ್ಷೆಗಳು ಕಾಂಗ್ರೆಸ್ ಆಡಳಿತಾವಧಿಯಲ್ಲೇ ಆರಂಭವಾಗಿದ್ದರೂ, ಈ ಸಾವುಗಳಿಗೆ, ಕಳೆದ ಹತ್ತು ವರ್ಷಗಳಲ್ಲಿ ನಡೆದ 152 ಪೇಪರ್ ಲೀಕ್ ಪ್ರಕರಣ ಮತ್ತು ನೂರಾರು ಆತ್ಮಹತ್ಯೆಯ ಘಟನೆಗಳಿಗೆ ಕಾಂಗ್ರೆಸ್ ಹೊಣೆಯಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ʼ ನೀಟ್ ಮಾಫಿಯಾ ʼವನ್ನು ಸಂಪೂರ್ಣ ನಿರ್ಮೂಲ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ 12 ವರ್ಷಗಳಿಂದ ಈ ಮಾಫಿಯಾದೊಡನೆಯೇ ಶಿಕ್ಷಣ ವ್ಯವಸ್ಥೆ ಸಾಗುತ್ತಾ ಬಂದಿದೆಯೇ ?
ಉತ್ತರ ಬಯಸುವ ಜಟಿಲ ಪ್ರಶ್ನೆಗಳು
ಇವೆಲ್ಲವೂ ಕೇವಲ ರಾಜಕೀಯ ಪ್ರಶ್ನೆಗಳಲ್ಲ. ವ್ಯಕ್ತಿಗತ ಪ್ರಾಮಾಣಿಕತೆ (Individual Sincerity) ಮತ್ತು ವೈಯುಕ್ತಿಕ ನಿಷ್ಠೆಯ (Personal Integrity) ಪ್ರಶ್ನೆಗಳು. ಭಾರತದ ರಾಜಕಾರಣ ಇವೆರಡನ್ನೂ ಕಳೆದುಕೊಂಡಿದೆ. ಆದರೆ ಕನಿಷ್ಠ ಮಾನವೀಯತೆಯನ್ನೂ ಕಳೆದುಕೊಂಡಿದೆಯೇ ? ಇಲ್ಲ ಎಂದು ಎದೆಮುಟ್ಟಿ ಹೇಳುವ ಮುನ್ನ ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಚಿತ್ರಗಳನ್ನು ನೋಡುವುದು ಕ್ಷೇಮ. ಅಂದು ನಡೆದ ಲಾಠಿ ಪ್ರಹಾರದಲ್ಲಿ ನೊಂದ ಮಕ್ಕಳ ಕಂಬನಿಯೇ ಕಮಲಹಾಸನ್ ಅವರಿಂದ ʼ ಮಗು ʼ ಎಂಬ ಪದವನ್ನು ಹೊರಹೊಮ್ಮಿಸಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಫಲಾನುಭವಿಗಳು ಎಂದೇ ಗುರುತಿಸಬಹುದಾದ 50-60 ಮೇಲ್ಪಟ್ಟ ವಯೋಮಾನದ ಮೇಲ್ಪದರ ಸಮಾಜದಲ್ಲಿ (Elite society) ಕನಿಷ್ಠ ಈ ಅನುಕಂಪವಾದರೂ ಇರಬೇಕಲ್ಲವೇ ?
ಸರ್ಕಾರದ ಕಾನೂನಾತ್ಮಕ ಪ್ರಕ್ರಿಯೆಗಳು, ತ್ವರಿತ ನ್ಯಾಯಾಲಯ, ಕ್ಷಿಪ್ರ ವಿಚಾರಣೆ, ಶೀಘ್ರ ಶಿಕ್ಷೆ, ಮಾಫಿಯಾ ನಿರ್ಮೂಲನೆ ಇವೆಲ್ಲವನ್ನೂ ಮೀರುವುದು ‘ರಾಜಕೀಯ ಉತ್ತರದಾಯಿತ್ವ’ (Political Accountability) . ವರ್ತಮಾನದ ಮಕ್ಕಳಲ್ಲಿ, ಭವಿಷ್ಯದ ಪೀಳಿಗೆಗಳಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ ಮೂಡಬೇಕಾದರೆ ಈ ಉತ್ತರದಾಯಿತ್ವ ಅವರಿಗೆ ಚರಿತ್ರೆಯ ಭಾಗವಾಗಿ ಕಾಣಬೇಕು. ವಿಶ್ವದ ಶ್ರೇಷ್ಠ ಸಂವಿಧಾನ ಎಂದು ಬೆನ್ನುತಟ್ಟಿಕೊಳ್ಳುವ ನಾವು ಭವಿಷ್ಯದ ಪೀಳಿಗೆಗೆ ಎಂತಹ ಪ್ರಜಾಪ್ರಭುತ್ವವನ್ನು ಕೊಡುತ್ತಿದ್ದೇವೆ ? ಪ್ರಾಮಾಣಿಕತೆ ಇಲ್ಲದ, ಆಡಳಿತ ನಿಷ್ಠೆ ಇಲ್ಲದ, ಉತ್ತರದಾಯಿತ್ವ ಇಲ್ಲ, ಸಹಾನುಭೂತಿ ಇಲ್ಲದ ವ್ಯವಸ್ಥೆಯನ್ನೇ ? ಈ ಎಲ್ಲ ಸದ್ಗುಣ, ಸಚ್ಚಾರಿತ್ರ್ಯದ ನಡುವೆಯೇ ಬಾಳಿರುವ ವರ್ತಮಾನದ ಹಿರಿಯ ಪೀಳಿಗೆಯನ್ನು ಈ ಜಿಜ್ಞಾಸೆಯಾದರೂ ಕಾಡಬೇಕಲ್ಲವೇ ? ವಾಸ್ತವ

ಕಾಂಗ್ರೆಸ್ ಆಳ್ವಿಕೆಯಲ್ಲಿ ಇದೇ ರೀತಿಯ ಪೊಲೀಸ್ ದೌರ್ಜನ್ಯಗಳು ನಡೆದಿಲ್ಲವೇ ಎಂಬ ಪ್ರಶ್ನೆಗೆ ಇಲ್ಲ ಎನ್ನಲಾಗುವುದಿಲ್ಲ. ಆದರೆ ವರ್ತಮಾನದಲ್ಲಿ ಅದು ಪ್ರಸ್ತುತತವೇ ? ಸ್ವಾತಂತ್ರ್ಯ ಗಳಿಸಿದ ದಿನದಿಂದ ಇಂದಿನವರೆಗೂ ಪ್ರಭುತ್ವದ ಕ್ರೌರ್ಯವನ್ನು ಭಿನ್ನ ಆಯಾಮಗಳಲ್ಲಿ ಕಾಣುತ್ತಲೇ ಬಂದಿದ್ದೇವೆ. ಆದರೆ ಸಮಾಜದ ಸ್ವಾಸ್ಥ್ಯಕ್ಕೆ ಘಾಸಿ ಉಂಟುಮಾಡುವಂತಹ ಆಡಳಿತಾತ್ಮಕ ಕ್ರಮಗಳನ್ನು ಭೂತ-ವರ್ತಮಾನದ ನಡುವೆ ತುಲನಾತ್ಮಕವಾಗಿ ನೋಡುತ್ತಾ ಹೋದರೆ, ಭವಿಷ್ಯದ ಭಾರತವನ್ನು ಆರೋಗ್ಯಕರವಾಗಿ ಕಟ್ಟಲು ಸಾಧ್ಯವೇ ? ಈ ವಿವೇಕ ಮತ್ತು ವಿವೇಚನೆ ವರ್ತಮಾನದ ಸುಶಿಕ್ಷಿತ, ಆಧುನಿಕ ಹಾಗೂ ನಾಗರಿಕ (Civilised) ಎಂದು ಬೆನ್ನುತಟ್ಟಿಕೊಳ್ಳುವ ಸಮಾಜದಲ್ಲಿ ಇರಬೇಕಲ್ಲವೇ ?
ವಿವೇಕ ಇಲ್ಲದ ಸಮಾಜದ ನಡುವೆ
ಈ ವಿವೇಕ ಮತ್ತು ವಿವೇಚನೆ ಹಂತಹಂತವಾಗಿ ನಾಶವಾಗುತ್ತಿರುವುದೇ ಭವಿಷ್ಯದ ಭಾರತಕ್ಕೆ . ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿದೆ. ಯಾವುದೋ ಒಂದು ನಂಬಿಕೆಗೆ, ವ್ಯಕ್ತಿ ನಿಷ್ಠೆಗೆ ಬದ್ಧರಾಗಿರುವುದು ವೈಯುಕ್ತಿಕ ಆಯ್ಕೆ ಆದರೆ ಸಾಮಾಜಿಕ ವಿವೇಕ ಕಳೆದುಕೊಳ್ಳುವುದು ಸಾರ್ವಜನಿಕ ಅಪರಾಧ. ಸ್ವತಂತ್ರ ಭಾರತದ ಫಲಾನುಭವಿ ಹಿತವಲಯದ ಸಮಾಜಗಳಲ್ಲಿ ಈ ಅರಿವು ಮೂಡಬೇಕಿದೆ. ವಿವೇಕ ಕಳೆದುಕೊಂಡ ಮನಸ್ಸುಗಳು ವ್ಯಕ್ತಿ ನಿಷ್ಠೆ-ಆರಾಧನೆಯ ವಾತಾವರಣದಲ್ಲಿ ವರ್ತಮಾನಕ್ಕೆ ಕುರುಡಾಗುತ್ತವೆ. ಈ ಅಂಧತ್ವವೇ ಜಂತರ್ ಮಂತರ್‌ನಲ್ಲಿ ಸುರಿಯುತ್ತಿರುವ ಎಳೆಯ ಕಂಬನಿಗಳನ್ನು ಅನುಮಾನಿಸುವಂತೆ ಪ್ರಚೋದಿಸುತ್ತದೆ. ಪುನಃ ಕಮಲಹಾಸನ್ ಅವರನ್ನೇ ಉಲ್ಲೇಖಿಸುವುದಾದರೆ, ಅಲ್ಲಿ ಮಕ್ಕಳು ಅಳುತ್ತಿದ್ದಾರೆ. ನಾವು ವಾಸ್ತವಕ್ಕೆ ವಿಮುಖರಾಗಿದ್ದೇವೆ ಎನಿಸುವುದಿಲ್ಲವೇ ?

ಇದು ರಾಜಕೀಯ ಪ್ರಶ್ನೆಯಲ್ಲ. ಸಮಾಜ ತನ್ನ ಅಂತರಾಳದ ಪ್ರಜ್ಞೆಯನ್ನು ಸ್ವಾರ್ಥ ಹಿತಾಸಕ್ತಿಗಳಿಗಾಗಿ ಒತ್ತೆ ಇಟ್ಟಾಗ, ಅದು ಕ್ರಮೇಣವಾಗಿ ಶಿಥಿಲಾವಸ್ಥೆಗೆ ತಲುಪುತ್ತದೆ. ಅಸ್ಥಿಪಂಜರಕ್ಕೆ ಎಷ್ಟೇ ಗಟ್ಟಿಯಾದ ಮುಸುಕು ತೊಡಿಸಿದರೂ ಅದು ಜೀವ ತಳೆಯುವುದಿಲ್ಲ. ಆದರೆ ಜೀವಂತಿಕೆಯಿರುವ ಸಮಾಜದ ದೇಹದೊಳಗೆ ಅವಿವೇಕದ ಕ್ಯಾನ್ಸರ್ ವೈರಾಣುಗಳು ಪ್ರವೇಶಿಸಿದಾಗ ಅದು ಅಸ್ಥಿಪಂಜರವಾಗುವುದನ್ನು ತಡೆಗಟ್ಟುವ ಚಿಕಿತ್ಸಕ ಶಕ್ತಿ ನಮಲ್ಲಿರಬೇಕು. ವಿವೇಕ ಕಳೆದುಕೊಂಡ ಸಮಾಜ ಈ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಈ ಸಮಾಜದಿಂದಲೇ ಉತ್ಪಾದನೆಯಾಗುವ ಸುಳ್ಳು ನಿರೂಪಣೆಗಳು (Faalse Narratives),, ರಾಜಕೀಯ-ಸಾರ್ವಜನಿಕ ಸಂಕಥನದ ಮೇಲೆ ಆಧಿಪತ್ಯ ಸಾಧಿಸಿದಾಗ ಸಮಾಜ ಅವನತಿಯ ಹಾದಿಯಲ್ಲಿ ವೇಗವಾಗಿ ಚಲಿಸುತ್ತದೆ. ಬಹುಶಃ ನವ ಭಾರತ ವಿಕಾಸದ ಹಾದಿಯಲ್ಲಿದ್ದರೂ, ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಈ ಅವನತಿಯ ಹಾದಿಯಲ್ಲಿ ಸಾಗುತ್ತಿದೆ.
ನೊಂದ ಮಕ್ಕಳಿಗೆ ಸಾಂತ್ವನ ಯಾರಿಂದ ?
ಈ ಹಾದಿಯಲ್ಲೇ ದೆಹಲಿಯಲ್ಲಿ ಲಕ್ಷಾಂತರ ಮಕ್ಕಳು ಅಳುತ್ತಿದ್ದಾರೆ. ವ್ಯವಸ್ಥೆಯ ದೌರ್ಜನ್ಯಕ್ಕೊಳಗಾಗಿ ಪೆಟ್ಟು ತಿಂದು ಯಾತನೆ ಅನುಭವಿಸುತ್ತಿದ್ದಾರೆ. ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಆತ್ಮಸ್ಥೈರ್ಯಕ್ಕೆ ಪ್ರೇರಣೆ ಸ್ವಾತಂತ್ರ್ಯದ ಪೂರ್ವಸೂರಿಗಳೇ ಹೊರತು ವರ್ತಮಾನದ ರಾಜಕೀಯ-ಸಾಂಸ್ಕೃತಿಕ ನಾಯಕರಲ್ಲ. ಅಭಿಜೀತ್ ದೀಪ್ಕೆ ಅಥವಾ ಕಾಕ್ರೋಚ್ ಜನತಾ ಪಕ್ಷ ಇಲ್ಲಿ ನಿಮಿತ್ತ ಮಾತ್ರ. ದೊಡ್ಡ ಕಂದಕದಂತಿದ್ದ ನಿರ್ವಾತದಲ್ಲಿ ವಿವೇಕಯುತ ಯುವ ದನಿಯ ಬೀಜ ಬಿತ್ತಲಾಗಿದೆ. ಈ ಹೋರಾಟ ತಾರ್ಕಿಕ ಅಂತ್ಯ ತಲುಪದೆ ಹೋಗಬಹುದು. ಅಪೇಕ್ಷಿಸಿದ ನ್ಯಾಯ ದೊರೆಯದೆ ಇರಬಹುದು. ಆದರೆ ಈ ಬೀಜ ವ್ಯರ್ಥವಾಗುವುದಿಲ್ಲ. ಇಂದಲ್ಲಾ ನಾಳೆ ಮೊಳೆಯುತ್ತದೆ. ಭಾರತದ ಗತ ಚರಿತ್ರೆಯೇ ಇದಕ್ಕೆ ಸಾಕ್ಷಿ.
ವಾಟ್ಸಾಪ್ ವಿಶ್ವವಿದ್ಯಾಲಯಗಳು ಅಭಿಪ್ರಾಯ-ನಿರೂಪಣೆಗಳನ್ನು ಉತ್ಪಾದಿಸಬಹುದು. ಆದರೆ ನೆಲದ ವಾಸ್ತವಗಳನ್ನು ಮರು ಉತ್ಪಾದಿಸಲು ಸಾಧ್ಯವಿಲ್ಲ. ಈ ವಾಸ್ತವಗಳು ಸಮಾಜದ ಗರ್ಭದಿಂದಲೇ ಉಗಮಿಸುತ್ತವೆ. ಮುಂಬೈನಲ್ಲಿ ಪೊಲೀಸ್ ವಾಹನಕ್ಕೆ ಕೈ ಅಡ್ಡ ಇಟ್ಟು ನಿಂತ ಮಹಿಳೆ “ ತಾನಿಲ್ಲದಿದ್ದರೆ ಯಾರೋ ಒಬ್ಬರು ಈ ಧೈರ್ಯ ತೋರುತ್ತಿದ್ದರು…” ಎಂದು ಸಂದರ್ಶನದಲ್ಲಿ ಹೇಳುತ್ತಾರೆ. ಈ ಸಾಮಾಜಿಕ ಮಂಥನವೇ ಭವಿಷ್ಯದ ಹಾದಿಗಳನ್ನು ಹಸನಾಗಿಸುತ್ತದೆ. ದೆಹಲಿಯಲ್ಲಿ 35 ದಿನಗಳಿಂದ ಕೇಳಿಬರುತ್ತಿರುವ ಯುವ ದನಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಅರಿತು, ಅಂತಿಮ ಫಲಿತಾಂಶ ಎದುರುನೋಡೋಣ. ಸೋನಂ ವಾಂಗ್ಚುಕ್ ಅವರನ್ನು ಮರೆತುಬಿಡೋಣ.
ಇದನ್ನೂ ನೋಡಿ: SIR ಕರ್ನಾಟಕ: ಈಗಲೇ 80 ಲಕ್ಷ ಹೊರಗೆ?! ಮುಂದೆಷ್ಟು? | ವಿಶ್ಲೇಷಣೆ – ಕೆ.ಎಸ್. ವಿಮಲಾ Janashakthi Media
