ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ, ಕೋಮುವಾದೀಕರಣದ ವಿರುದ್ಧ ಹೋರಾಟ ಮುಂದುವರಿಸಲು ಕರೆ
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಶಿಕ್ಷಣ ಕ್ಷೇತ್ರದ ವೈಫಲ್ಯಗಳ ವಿರುದ್ಧ ವಿದ್ಯಾರ್ಥಿ-ಯುವಜನರು ನಡೆಸಿದ ಹೋರಾಟಕ್ಕೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ರೂಪದಲ್ಲಿ ಮಹತ್ವದ ಭಾಗಶಃ ಗೆಲುವು ದೊರೆತಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ, ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಹೊಸ ವಿದ್ಯಾರ್ಥಿ-ಯುವಜನ ಚಳುವಳಿಯ ಒಕ್ಕೂಟದ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು, ಕಾರ್ಮಿಕರು, ರೈತರು, ಮಹಿಳೆಯರು, ಮಾನವ ಹಕ್ಕು ಹೋರಾಟಗಾರರು ಹಾಗೂ ಸಮಾಜದ ವಿವಿಧ ವರ್ಗಗಳು ಬೆಂಬಲ ನೀಡಿದ್ದವು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯು ಶಿಕ್ಷಣ ಸಚಿವರ ರಾಜೀನಾಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿತ್ತು ಎಂದು ಅವರು ಹೇಳಿದರು.
ನೀಟ್ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಮತ್ತು ಭ್ರಷ್ಟಾಚಾರ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸಿದೆ. ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸುವಲ್ಲಿ ಮಾತ್ರವಲ್ಲದೆ, ಒಟ್ಟಾರೆಯಾಗಿ ಶಿಕ್ಷಣ ಖಾತೆಯ ನಿರ್ವಹಣೆಯಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಎಂ.ಎ. ಬೇಬಿ ಟೀಕಿಸಿದರು.
ಇದನ್ನೂ ಓದಿ: ಭಯ ಕರಗುತ್ತಿದೆ – ಸಾಮೂಹಿಕ ಧೈರ್ಯ ಸ್ಫೋಟಗೊಂಡಿದೆ
ಶಿಕ್ಷಣ ನೀತಿಯಲ್ಲಿ ‘ಮೂರು ಸಿ’ಗಳ ವಿರುದ್ಧ ಆಕ್ರೋಶ
ಕೇಂದ್ರ ಸರ್ಕಾರದ ಶಿಕ್ಷಣ ನೀತಿಯನ್ನು ಟೀಕಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯಗಳ ಹಾಗೂ ರಾಜ್ಯ ಸರ್ಕಾರಗಳ ಅಸ್ತಿತ್ವವನ್ನು ಕಡೆಗಣಿಸಿ ಶಿಕ್ಷಣ ಕ್ಷೇತ್ರವನ್ನು ಅತಿಯಾಗಿ ಕೇಂದ್ರೀಕರಿಸಲಾಗುತ್ತಿದೆ. ಶಿಕ್ಷಣವನ್ನು ಖಾಸಗಿ ವಲಯದ ಲಾಭದ ಕ್ಷೇತ್ರವನ್ನಾಗಿ ಮಾಡಲಾಗುತ್ತಿದ್ದು, ದೊಡ್ಡ ಏಕಸ್ವಾಮ್ಯ ಸಂಸ್ಥೆಗಳಿಗೆ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಲು ಮುಕ್ತ ಅವಕಾಶ ನೀಡಲಾಗುತ್ತಿದೆ. ಮತ್ತೊಂದೆಡೆ ಶಿಕ್ಷಣದ ಕೋಮುವಾದೀಕರಣ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಮೂರು ‘ಸಿ’ಗಳ ಹಿನ್ನೆಲೆಯಲ್ಲಿ ನೋಡಬೇಕಿದ್ದು, ಅದನ್ನು ಕೈಬಿಡಬೇಕು ಎಂಬುದು ವಿದ್ಯಾರ್ಥಿ ಚಳುವಳಿಗಳ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳ ಮೇಲಿನ ದಮನಕ್ಕೆ ಖಂಡನೆ
ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ದಮನಕಾರಿ ಕ್ರಮ ಕೈಗೊಂಡಿದೆ ಎಂದು ಎಂ.ಎ. ಬೇಬಿ ಆರೋಪಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಕುರಿತು ‘ದಿ ಹಿಂದೂ’ ಪತ್ರಿಕೆಯ ಸಂಪಾದಕೀಯದಲ್ಲಿ ವಿವರವಾಗಿ ಚರ್ಚಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಹೋರಾಟಗಾರರ ಪ್ರಮುಖ ಬೇಡಿಕೆಯಾದ ಶಿಕ್ಷಣ ಸಚಿವರ ರಾಜೀನಾಮೆಯನ್ನು ಒಪ್ಪಿಕೊಳ್ಳದೆ ಕೇಂದ್ರ ಸರ್ಕಾರವು ಹೊಸ ಕಾನೂನು ತರುವುದಾಗಿ ಹೇಳಿ ವಿಷಯವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿತು. ಪರೀಕ್ಷಾ ಅಕ್ರಮದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಕಾನೂನಿಗಿಂತ ಮೊದಲು, ಶಿಕ್ಷಣ ಸಚಿವರು ತಮ್ಮ ರಾಜಕೀಯ ಹೊಣೆಗಾರಿಕೆಯನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕು ಎಂಬುದು ಹೋರಾಟಗಾರರ ನಿಲುವಾಗಿತ್ತು ಎಂದು ಅವರು ಹೇಳಿದರು.
ರೈತರ ಹೋರಾಟದ ಬಳಿಕ ಮತ್ತೊಂದು ಮಹತ್ವದ ಗೆಲುವು
ವಿದ್ಯಾರ್ಥಿ-ಯುವಜನರ ಹೋರಾಟದಿಂದ ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿರುವುದು ಮಹತ್ವದ ಭಾಗಶಃ ಗೆಲುವು. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಸಾಧನೆ ಹಿಂದೆಂದೂ ಕಂಡಿರಲಿಲ್ಲ ಎಂದು ಎಂ.ಎ. ಬೇಬಿ ಹೇಳಿದರು.
ಇದನ್ನು ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಎರಡನೇ ಐತಿಹಾಸಿಕ ಜನಪರ ಗೆಲುವು ಎಂದು ಅವರು ಬಣ್ಣಿಸಿದರು. ಇದಕ್ಕೂ ಮೊದಲು ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಹೋರಾಟದ ಪರಿಣಾಮ ಕೇಂದ್ರ ಸರ್ಕಾರ ಆ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ನೂರಾರು ರೈತರು ಹೋರಾಟದಲ್ಲಿ ಮೃತಪಟ್ಟರೂ ಚಳುವಳಿ ಮುಂದುವರಿದಿತ್ತು. ಅಂತಿಮವಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂದು ಅವರು ನೆನಪಿಸಿದರು.
‘ಶಿಕ್ಷಣ ಎಲ್ಲರ ಹಕ್ಕು’
ದೇಶದ ಬಹುತೇಕ ಪ್ರತಿಯೊಂದು ಕುಟುಂಬದಲ್ಲೂ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಇದ್ದಾರೆ. ಹೀಗಾಗಿ ಭ್ರಷ್ಟಾಚಾರಮುಕ್ತ ಶಿಕ್ಷಣ, ಎಲ್ಲರಿಗೂ ಕೈಗೆಟುಕುವ ಶಿಕ್ಷಣ ಹಾಗೂ ಶಿಕ್ಷಣದ ಸಮಾನ ಅವಕಾಶಗಳು ಜನರ ಪ್ರಮುಖ ಬೇಡಿಕೆಗಳಾಗಿವೆ ಎಂದು ಎಂ.ಎ. ಬೇಬಿ ಹೇಳಿದರು.
ಶಿಕ್ಷಣದ ಕುರಿತ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ದೇಶದ ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು ಸೇರಿದಂತೆ ಎಲ್ಲ ಜನವರ್ಗಗಳು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿ-ಯುವಜನರ ಈ ಐತಿಹಾಸಿಕ ಹೋರಾಟಕ್ಕೆ ವಿವಿಧ ವಿರೋಧ ಪಕ್ಷಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ನೀಡಿದ ಬೆಂಬಲವನ್ನು ಅವರು ಅಭಿನಂದಿಸಿದರು. ವಿಭಿನ್ನ ಕ್ಷೇತ್ರಗಳ ಜನರು ಒಗ್ಗೂಡಿ ನಡೆಸಿದ ಈ ಸಾಮೂಹಿಕ ಹೋರಾಟ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಹೋರಾಟದ ಕಿಡಿ ಜೀವಂತವಾಗಿರಲಿ
ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣದ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟಗಳನ್ನು ನಡೆಸಬೇಕಾಗಬಹುದು. ಜನರು ಒಗ್ಗಟ್ಟಿನಿಂದ ಯಾವುದೇ ಹಿಂಜರಿಕೆಯಿಲ್ಲದೆ ಹೋರಾಟ ಮುಂದುವರಿಸಿದರೆ ಗೆಲುವು ಖಚಿತ ಎಂದು ಎಂ.ಎ. ಬೇಬಿ ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯಾರ್ಥಿ-ಯುವಜನರ ಈ ಹೋರಾಟದ ಗೆಲುವು ಜನಪರ ಚಳುವಳಿಗಳ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯಾಗಿ ಉಳಿಯಲಿದೆ ಎಂದು ಅವರು ಹೇಳಿದರು.
ಇದನ್ನೂ ನೋಡಿ: ಶೇ.33% ಮಹಿಳಾ ಮೀಸಲಾತಿ ತಕ್ಷಣ ಜಾರಿ ಮಾಡಿ! ಬೆಂಗಳೂರಿನಲ್ಲಿ ಮಹಿಳಾ ಸಂಘಟನೆಗಳ ಪ್ರತಿಭಟನೆ Janashakthi Media
