ಸಿದ್ದಾಪುರ: ಸಮಾಜಮುಖಿ ಕಾರ್ಯಕರ್ತ, ಜನಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ ಹಾಗೂ ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿಯಾಗಿದ್ದ ಕಮಲಾಕರ ಭಂಡಾರಿ ಅವರು ಜುಲೈ 27ರ ಬೆಳಗಿನ ಜಾವ ಸುಮಾರು 3 ಗಂಟೆಗೆ ಉಡುಪಿ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕುಟುಂಬಸ್ಥರು, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದವರು ಮತ್ತು ವಿವಿಧ ಜನಪರ ಚಳುವಳಿಗಳ ಸಹಚರರು ಅಂತಿಮ ನಮನ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆ ಸಲ್ಲಿಸಿದ್ದ ಕಮಲಾಕರ ಭಂಡಾರಿ ಅವರು ತಮ್ಮ ಕ್ರಿಯಾಶೀಲತೆ ಮತ್ತು ಸಮಾಜಮುಖಿ ಕಾಳಜಿಯಿಂದ ಗುರುತಿಸಿಕೊಂಡಿದ್ದರು. ಬಂಡಾಯ ಸಾಹಿತಿ ಡಾ. ಆರ್.ವಿ. ಭಂಡಾರಿ ಅವರ ಅಳಿಯ ಹಾಗೂ ಡಾ. ವಿಠ್ಠಲ ಭಂಡಾರಿ ಅವರ ಬಾವನಾಗಿದ್ದ ಅವರು, ಸಿದ್ದಾಪುರದ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.
ತಮ್ಮ ಹುಟ್ಟೂರು ಇಟಗಿಯಲ್ಲಿ ವಾರಗಟ್ಟಲೆ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಆರ್ಥಿಕವಾಗಿ ಬಡತನದ ಪರಿಸ್ಥಿತಿ ಇದ್ದರೂ ಸಮಾಜಮುಖಿ ಚಟುವಟಿಕೆಗಳಿಂದ ಹಿಂದೆ ಸರಿಯದ ಅವರು, ಆರೈಕೆ ಮತ್ತು ಆತಿಥ್ಯಕ್ಕೆ ಸದಾ ಮುಂಚೂಣಿಯಲ್ಲಿದ್ದರು. ಸಾರ್ವಜನಿಕ ಜೀವನದಲ್ಲಿರುವವರು ಪ್ರಾಮಾಣಿಕತೆ ಹಾಗೂ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲರೊಂದಿಗೂ ಚರ್ಚಿಸುತ್ತಿದ್ದ ಅವರು, ಅಧಿಕಾರಸ್ಥರು ‘ಕೈಬಾಯಿ ಸ್ವಚ್ಛ’ವಾಗಿಟ್ಟುಕೊಳ್ಳಬೇಕೆಂಬ ನಿಲುವನ್ನು ಪ್ರತಿಪಾದಿಸುತ್ತಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ಪ್ರಧಾನಿ ಮೋದಿ ಕ್ಷಮೆ ಕೇಳಬೇಕು – ವೇಣುಗೋಪಾಲ್ ಕಿಡಿ
ಕಾಲಕ್ರಮೇಣ ಜನಚಳುವಳಿಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪುಸ್ತಕ ಪರಿಚಾರಿಕೆಯೊಂದಿಗೆ ತಮ್ಮನ್ನು ಇನ್ನಷ್ಟು ಸಕ್ರಿಯವಾಗಿ ಬೆಸೆದುಕೊಂಡರು. ಬಂಡಾಯ ಪ್ರಕಾಶನದ ಪರವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸಿದ್ದ ಅವರು, ಸಹಯಾನ ಕೆರೆಕೋಣದ ವಿವಿಧ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಕೈಜೋಡಿಸಿದ್ದರು.
ಸಿದ್ದಾಪುರದಲ್ಲಿದ್ದ ಡಾ. ಆರ್.ವಿ. ಭಂಡಾರಿ ಪುಸ್ತಕ ಮನೆಯನ್ನು ಕೆಲವು ವರ್ಷಗಳ ಕಾಲ ತಮ್ಮ ಮಗನೊಂದಿಗೆ ನಡೆಸಿದರು. ಸಿದ್ದಾಪುರದಲ್ಲಿ ಸಿಐಟಿಯು ನೇತೃತ್ವದ ಅಂಗನವಾಡಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘಟನೆ ಕಟ್ಟುವ ಕಾರ್ಯಕ್ಕೆ ಸಾಧ್ಯವಾದಷ್ಟು ನೆರವು ನೀಡಿದ್ದರು. ಕರ್ನಾಟಕ ಪ್ರಾಂತ ರೈತ ಸಂಘವನ್ನು ಸಿದ್ದಾಪುರದಲ್ಲಿ ಸಂಘಟಿಸಲು ಪ್ರಯತ್ನಿಸಿದ್ದರು. ಕಟ್ಟಡ ಕಾರ್ಮಿಕರ ಸಂಘಟನೆ ರೂಪಿಸುವ ಉದ್ದೇಶದಿಂದ ನಡೆದ ಆರಂಭಿಕ ಸಭೆಗಳಿಗೂ ಸಹಕಾರ ನೀಡಿದ್ದರು.
ತಮ್ಮ ಸುತ್ತಮುತ್ತಲಿನವರು ಅಥವಾ ಪರಿಚಿತರಲ್ಲಿ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಮಿಡಿಯುತ್ತಿದ್ದ ಕಮಲಾಕರ ಭಂಡಾರಿ, ಅಗತ್ಯವಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲೇ ಇದ್ದು ಆರೈಕೆ ಮಾಡುವಷ್ಟು ಮಾನವೀಯ ಕಾಳಜಿ ಹೊಂದಿದ್ದರು. ತಮ್ಮ ಬಾಳಸಂಗಾತಿ ಇಂದಿರಾ ಭಂಡಾರಿ ಅವರನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸಹಕಾರಿ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಗಿತ್ತು.
ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಉಡುಪಿಯಲ್ಲಿದ್ದ ಮಕ್ಕಳ ಆರೈಕೆಯಲ್ಲಿದ್ದರು. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಜುಲೈ 27ರಂದು ಬೆಳಗಿನ ಜಾವ ಕೊನೆಯುಸಿರೆಳೆದರು.
ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರೂ ವೈಜ್ಞಾನಿಕ ತಿಳಿವಳಿಕೆಯತ್ತ ಸಾಗಿದ್ದ ಕಮಲಾಕರ ಭಂಡಾರಿ ಅವರು ಮರಣಾನಂತರವೂ ಸಮಾಜಕ್ಕೆ ಕೊಡುಗೆ ನೀಡುವ ಸಂಕಲ್ಪ ಹೊಂದಿದ್ದರು. ತಮ್ಮ ಕಣ್ಣುಗಳನ್ನು ದಾನ ಮಾಡಲು ಈಗಾಗಲೇ ನೋಂದಣಿ ಮಾಡಿಕೊಂಡಿದ್ದ ಅವರು, ತಮ್ಮ ಅಂತಿಮ ಆಶಯದಂತೆ ಹಾಗೂ ಬಾಳಸಂಗಾತಿ ಇಂದಿರಾ, ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಅವರು ಬಾಳಸಂಗಾತಿ ಇಂದಿರಾ ಭಂಡಾರಿ, ಮಕ್ಕಳಾದ ಛಾಯಾ ಐಕೆ, ಅನಿಲ್ ಐಕೆ, ಅಳಿಯ ವೆಂಕಟೇಶ, ಸೊಸೆ ಶ್ವೇತಾ, ಮೊಮ್ಮಕ್ಕಳಾದ ರೋಹನ್, ಸಾನಿಧ್ಯಾ, ಸಾರ್ಥಕ, ಹಿರಿಯಣ್ಣ ನಾರಾಯಣ ಭಂಡಾರಿ ಸೇರಿದಂತೆ ಅಪಾರ ಬಂಧುಬಳಗ, ಸಾಹಿತ್ಯ ಸಹೃದಯರು ಹಾಗೂ ಆಪ್ತರ ವಲಯವನ್ನು ಅಗಲಿದ್ದಾರೆ.
ಸಮಾಜಮುಖಿ ಬದುಕು, ಜನಪರ ಚಳುವಳಿಗಳ ಬದ್ಧತೆ ಮತ್ತು ವೈಜ್ಞಾನಿಕ ಮನೋಭಾವದ ಮೂಲಕ ಗುರುತಿಸಿಕೊಂಡ ಕಮಲಾಕರ ಭಂಡಾರಿ ಅವರ ನಿಧನಕ್ಕೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಜನಪರ ಚಳುವಳಿಗಳ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಇದನ್ನೂ ನೋಡಿ: ಯುವಜನತೆ ಪ್ರತಿಭಟನೆ: ಜೆನ್ ಜಿಫಿಕೇಶನ್ Janashakthi Media
