ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಹಾಗೂ ಯುವಜನರ ಪ್ರತಿಭಟನೆಯ ನಡುವೆಯೇ, ಪ್ರತಿಭಟನಾ ಸ್ಥಳದ ಸುತ್ತಮುತ್ತ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಆರೋಪಿಸಿದೆ. ಈ ಕ್ರಮವು ಮತ್ತೊಮ್ಮೆ ಪೊಲೀಸ್ ದಮನಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿರುವ ಸೂಚನೆಯಾಗಿರಬಹುದು ಎಂಬ ಆತಂಕವನ್ನು ಪಕ್ಷ ವ್ಯಕ್ತಪಡಿಸಿದೆ.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, “ಜಂತರ್ ಮಂತರ್‌ನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದೆ. ಸರ್ಕಾರ ಮತ್ತೊಮ್ಮೆ ಕ್ರೂರ ಪೊಲೀಸ್ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಅವರು ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಲಾದ ದೆಹಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳಿಗೆ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡದಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದ ಘಟನೆಗಳ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರಲ್ಲಿ ಆತಂಕ ಹೆಚ್ಚಾಗಿದೆ ಎಂದು ಸಿಜೆಪಿ ಹೇಳಿದೆ.
ಇದನ್ನೂ ಓದಿ : ಮುಂಬೈನಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನೆ; ಮಹಾರಾಷ್ಟ್ರ ಸಚಿವರೊಂದಿಗೆ ಎಐಕೆಎಸ್ ನಿಯೋಗದ ಮಾತುಕತೆ
ಸಿಜೆಪಿ ವಕ್ತಾರ ಅಶುತೋಷ್ ರಂಕಾ ಕೂಡ ಪ್ರತಿಭಟನಾ ಸ್ಥಳದ ವಿಡಿಯೊಗಳನ್ನು ಹಂಚಿಕೊಂಡು, “ನಿನ್ನೆ ಭಾರೀ ಪೊಲೀಸ್ ದಮನ, ಇಂಟರ್‌ನೆಟ್ ಸ್ಥಗಿತ ಮತ್ತು ಲಾಠಿಚಾರ್ಜ್ ನಡೆದರೂ, ಇಂದು ಬೆಳಗ್ಗೆಯೂ ಸಾವಿರಾರು ಜನರು ಜಂತರ್ ಮಂತರ್‌ಗೆ ಆಗಮಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಇದರ ಜೊತೆಗೆ, ಪ್ರತಿಭಟನಾ ಸ್ಥಳದ ಹೊರಭಾಗದಲ್ಲಿ ಸಂಪೂರ್ಣ ಹಾನಿಗೊಳಗಾದ ಕಾರೊಂದನ್ನು ಪೊಲೀಸರು ತಂದು ನಿಲ್ಲಿಸಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ. ನಂತರದ ಬೆಳವಣಿಗೆಗಳಿಗೆ ಪ್ರತಿಭಟನಾಕಾರರನ್ನು ಹೊಣೆಗಾರರನ್ನಾಗಿ ಮಾಡುವ ಉದ್ದೇಶ ಇದಾಗಿರಬಹುದು ಎಂದು ಪಕ್ಷ ಶಂಕೆ ವ್ಯಕ್ತಪಡಿಸಿದ್ದು, ಘಟನೆಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಆರೋಪಗಳ ಬಗ್ಗೆ ದೆಹಲಿ ಪೊಲೀಸರಿಂದ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಆರಂಭವಾದ ಈ ಪ್ರತಿಭಟನೆ ಈಗ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗಳ ಬೇಡಿಕೆಯೊಂದಿಗೆ ಮುಂದುವರಿದಿದೆ. ಇತ್ತೀಚಿನ ಪೊಲೀಸ್ ಕ್ರಮಗಳು ಮತ್ತು ಈಗಿನ ಇಂಟರ್‌ನೆಟ್ ಸ್ಥಗಿತ ಆರೋಪದ ಹಿನ್ನೆಲೆಯಲ್ಲಿ ಜಂತರ್ ಮಂತರ್‌ನ ಪರಿಸ್ಥಿತಿ ಉದ್ವಿಗ್ನವಾಗಿದೆ.
ಇದನ್ನೂ ನೋಡಿ : ನೀಟ್ ಹಗರಣ: ದೆಹಲಿ ಹೋರಾಟಕ್ಕೆ ಮತ್ತಷ್ಟು ಬಲ! ಎನ್‌ಡಿಎ ಮಿತ್ರಪಕ್ಷಗಳ ಮೌನ ಏಕೆ? Janashakthi Media
