ಮುಂಬೈನಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನೆ; ಮಹಾರಾಷ್ಟ್ರ ಸಚಿವರೊಂದಿಗೆ ಎಐಕೆಎಸ್‌ ನಿಯೋಗದ ಮಾತುಕತೆ

ಮುಂಬೈ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಸಾವಿರಾರು ರೈತರು ಜುಲೈ 21ರಂದು ಮುಂಬೈನ ಆಜಾದ್ ಮೈದಾನದಲ್ಲಿ ಬೃಹತ್ ರಾಜ್ಯಮಟ್ಟದ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಕೃಷಿ ಸಂಕಷ್ಟ, ಭೂಹಕ್ಕು, ಬೆಳೆ ವಿಮೆ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದರು. ಮುಂಬೈ

ಪ್ರತಿಭಟನೆಯಲ್ಲಿ ದೆಹಲಿಯಲ್ಲಿ ವಿದ್ಯಾರ್ಥಿ-ಯುವಜನರ ಹೋರಾಟದ ಮೇಲೆ ನಡೆದಿರುವ ಪೊಲೀಸ್ ದಮನವನ್ನು ಖಂಡಿಸಿ, ಹೋರಾಟಗಾರರಿಗೆ ಐಕ್ಯತೆ ವ್ಯಕ್ತಪಡಿಸಲಾಯಿತು. ಅಲ್ಲದೆ, ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವು ದೇಶದ ಕೃಷಿ ಕ್ಷೇತ್ರಕ್ಕೆ ಹಾನಿಕಾರಿಯಾಗಲಿದೆ ಎಂದು ಆರೋಪಿಸಿ ಅದನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.

ರಾಷ್ಟ್ರೀಯ ಅಧ್ಯಕ್ಷ ಡಾ. ಅಶೋಕ್ ಧವಳೆ, ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಪಿ. ಗಾವಿತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಜಿತ್ ನವಲೆ, ರಾಜ್ಯಾಧ್ಯಕ್ಷ ಉಮೇಶ್ ದೇಶಮುಖ್, ಸಿಐಟಿಯು ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಹಾಗೂ ಸಿಪಿಐ(ಎಂ) ಶಾಸಕ ವಿನೋದ್ ನಿಕೋಲೆ ಸೇರಿದಂತೆ ಎಐಕೆಎಸ್‌ನ ಹಲವು ರಾಜ್ಯ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹಿರಿಯ ಪತ್ರಕರ್ತ ಹಾಗೂ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಸಂಸ್ಥಾಪಕ-ಸಂಪಾದಕ ಪಿ. ಸಾಯಿನಾಥ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ : ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ರೈತರ ವಿರೋಧ: ದೆಹಲಿ ಚಲೋಗೆ ಕರೆ

ರೈತರು ರಾಜ್ಯ ಸರ್ಕಾರದ ಕೃಷಿ ಸಾಲಮನ್ನಾ ಯೋಜನೆಗೆ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು, ದೇವಾಲಯ ಟ್ರಸ್ಟ್‌ಗಳ ಭೂಮಿ, ಮನೆ ನಿವೇಶನ ಹಾಗೂ ಗೋಮಾಳ ಭೂಮಿಯಲ್ಲಿ ದೀರ್ಘಕಾಲದಿಂದ ಕೃಷಿ ಮಾಡುತ್ತಿರುವ ರೈತರಿಗೆ ಮಾಲೀಕತ್ವ ಹಕ್ಕು ನೀಡಬೇಕು, ಬೆಳೆ ವಿಮೆ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು ಹಾಗೂ ಕೃಷಿ ಕ್ಷೇತ್ರದ ಇತರ ಬಾಕಿ ಸಮಸ್ಯೆಗಳನ್ನು ತಕ್ಷಣ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ಎಐಕೆಎಸ್ ನಿಯೋಗವು ಮಹಾರಾಷ್ಟ್ರದ ಕೃಷಿ ಸಚಿವ ದತ್ತಾತ್ರೇಯ ಭರಣೆ ಹಾಗೂ ಕಂದಾಯ ಸಚಿವ ಚಂದ್ರಕಾಂತ್ ಬಾವಂಕುಳೆ ಅವರನ್ನು ಸಚಿವಾಲಯದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ರೈತರ ಪ್ರಮುಖ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ನಿಯೋಗ, ಬಾಕಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಷ್ಕರಿಸಿ ರೈತರಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಐಕೆಎಸ್ ಮುಖಂಡರು, ರೈತರ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳು ಈಡೇರುವವರೆಗೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ರಾಜ್ಯದ ಗ್ರಾಮೀಣ ಜನತೆಯಲ್ಲಿ ಹೆಚ್ಚುತ್ತಿರುವ ಅಸಮಾಧಾನಕ್ಕೆ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ರೈತರ ಸಂಕಷ್ಟ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ನೋಡಿ : ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್‌ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *