ಹಾವೇರಿ: ಅಂಗವಿಕಲರ ಮಾಸಾಶನ ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ವಾರ್ಷಿಕ ಆದಾಯ ಮಿತಿಗೆ ಸಂಬಂಧಿಸಿದ ಸರ್ಕಾರದ ಆದೇಶವನ್ನು ಹಿಂಪಡೆಯಬೇಕು ಹಾಗೂ ಮಾಸಾಶನವನ್ನು ತಿಂಗಳಿಗೆ ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ (ಕೆಎಸ್‌ಡಿಸಿಎಫ್) ಹಾವೇರಿ ಜಿಲ್ಲಾ ಸಂಚಾಲಕ ಸಮಿತಿ ವತಿಯಿಂದ ಸೋಮವಾರ ನಗರದ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು. ಬಳಿಕ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ವಾರ್ಷಿಕ ₹32 ಸಾವಿರಕ್ಕಿಂತ ಹೆಚ್ಚು ಆದಾಯ ಹೊಂದಿರುವ ಅಂಗವಿಕಲರ ಮಾಸಾಶನವನ್ನು ಪರಿಶೀಲಿಸಿ ಸ್ಥಗಿತಗೊಳಿಸುವಂತೆ ಸರ್ಕಾರ ಹೊರಡಿಸಿರುವ ಆದೇಶದಿಂದ ಸಾವಿರಾರು ಅಂಗವಿಕಲರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಮಾಸಾಶನ ಸ್ಥಗಿತಗೊಂಡ ಪರಿಣಾಮ ಔಷಧೋಪಚಾರ, ಚಿಕಿತ್ಸೆ, ಪ್ರಯಾಣ ವೆಚ್ಚ ಸೇರಿದಂತೆ ದೈನಂದಿನ ಅಗತ್ಯಗಳನ್ನು ಪೂರೈಸಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ವೈಯಕ್ತಿಕ ಅಗತ್ಯಗಳಿಗೂ ಕುಟುಂಬದ ಸದಸ್ಯರನ್ನು ಅವಲಂಬಿಸುವಂತಾಗಿದೆ ಎಂದು ಹೇಳಿದರು. ಅಂಗವಿಕಲರ
ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರ ಎಂದು ನಿಗದಿಪಡಿಸಿರುವುದು ಅವೈಜ್ಞಾನಿಕ ಹಾಗೂ ಹಾಸ್ಯಾಸ್ಪದವಾಗಿದೆ. ಇದು ತಿಂಗಳಿಗೆ ₹2,700ಕ್ಕೂ ಕಡಿಮೆ ಆದಾಯವಾಗುತ್ತದೆ. ಇಂತಹ ಆದಾಯದಲ್ಲಿ ಒಂದು ಕುಟುಂಬ ಬದುಕು ನಡೆಸುವುದು ಅಸಾಧ್ಯ. ಬಿಪಿಎಲ್ ಪಡಿತರ ಚೀಟಿಗೆ ಈಗಾಗಲೇ ₹1.20 ಲಕ್ಷ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಲಾಗಿದ್ದು, ಅಂಗವಿಕಲರ ಮಾಸಾಶನಕ್ಕೂ ಅದೇ ಮಾನದಂಡ ಅನ್ವಯಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಮತದಾರ ಪಟ್ಟಿ ಪರಿಷ್ಕರಣೆ ಹೊಡೆತ: ಶಾಲೆಗಳಲ್ಲಿ ಪಾಠ ಸ್ಥಗಿತ
ಅಂಗವಿಕಲರು ಶಿಕ್ಷಣ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಅವರ ಗೌರವಯುತ ಬದುಕಿಗೆ ಅತ್ಯಗತ್ಯವಾಗಿವೆ. ಅಂಗವಿಕಲರ ಮಾಸಾಶನವು ಕೇವಲ ಕಲ್ಯಾಣ ಯೋಜನೆಯಲ್ಲ, ಅದು ಅವರ ಮೂಲಭೂತ ಹಕ್ಕಿನ ಭಾಗವಾಗಿದೆ. ವಿಶ್ವಸಂಸ್ಥೆಯ ಅಂಗವಿಕಲರ ಹಕ್ಕುಗಳ ಒಪ್ಪಂದ (ಯುಎನ್‌ಸಿಆರ್‌ಪಿಡಿ) ಹಾಗೂ ವಿಕಲಚೇತನರ ಹಕ್ಕುಗಳ ಕಾಯ್ದೆ–2016ರ ಪ್ರಕಾರವೂ ಸರ್ಕಾರ ಸಾಮಾಜಿಕ ಭದ್ರತೆ ಒದಗಿಸುವ ಹೊಣೆಗಾರಿಕೆ ಹೊಂದಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ತಮಿಳುನಾಡಿನಲ್ಲಿ ಅಂಗವಿಕಲರ ಸಾಮಾಜಿಕ ಭದ್ರತಾ ಯೋಜನೆಗೆ ವಾರ್ಷಿಕ ₹3 ಲಕ್ಷ ಆದಾಯ ಮಿತಿ, ಆಂಧ್ರಪ್ರದೇಶದಲ್ಲಿ ಗ್ರಾಮೀಣ ಪ್ರದೇಶಕ್ಕೆ ₹1.20 ಲಕ್ಷ ಹಾಗೂ ನಗರ ಪ್ರದೇಶಕ್ಕೆ ₹1.44 ಲಕ್ಷ, ತೆಲಂಗಾಣದಲ್ಲಿ ಗ್ರಾಮೀಣ ಪ್ರದೇಶಕ್ಕೆ ₹1.50 ಲಕ್ಷ ಹಾಗೂ ನಗರ ಪ್ರದೇಶಕ್ಕೆ ₹2 ಲಕ್ಷ ಆದಾಯ ಮಿತಿ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವೂ ಅವೈಜ್ಞಾನಿಕ ಆದಾಯ ಮಿತಿಯನ್ನು ರದ್ದುಪಡಿಸಿ, ಕನಿಷ್ಠ ಬಿಪಿಎಲ್ ಪಡಿತರ ಚೀಟಿಗೆ ಅನ್ವಯಿಸುವ ₹1.20 ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ಅಂಗವಿಕಲರ ಮಾಸಾಶನಕ್ಕೂ ಅನ್ವಯಿಸಬೇಕು. ಅಲ್ಲದೆ, ಮಾಸಾಶನವನ್ನು ತಿಂಗಳಿಗೆ ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒಕ್ಕೂಟ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಕರ್ನಾಟಕ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದ ಹಸೀನಾ ಹೆಡಿಯಾಳ, ಖಲಂದರ್ ಅಲ್ಲಿಗೌಡ್ರ, ಗಿರೀಜಾ ಗೌಳಿ, ಬಸಪ್ಪ ಮಲ್ಲಪ್ಪನವರ, ಪುಟ್ಟವ್ವ ಕಲ್ಲೇದೇವರ, ಅಕ್ಕಮ್ಮ ಲಮಾಣಿ, ಖುತೇಜಾ ನದಾಫ್, ಪಂಡಿತ ಫಕ್ಕೀರಪ್ಪ, ಪರ್ವತಗೌಡ ಕರೇಗೌಡ್ರು ಸೇರಿದಂತೆ ಹಲವರು ಭಾಗವಹಿಸಿದ್ದರು. ಅಂಗವಿಕಲರ
ಇದನ್ನೂ ನೋಡಿ : “19ನೇ ದಿನಕ್ಕೆ ಸೋನಮ್ ವಾಂಗ್‌ಚುಕ್ ಉಪವಾಸ – ಕೇಂದ್ರಕ್ಕೆ ಎಚ್ಚರಿಕೆಯ ಗಂಟೆ | ಗುರುರಾಜ ದೇಸಾಯಿ
