ಜಮ್ಮು-ಕಾಶ್ಮೀರ ಪ್ರವಾಹ ದುರಂತ ತೀವ್ರ: ಮೃತರ ಸಂಖ್ಯೆ 20 ದಾಟಿದೆ, ಹಲವರು ನಾಪತ್ತೆ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಜುಲೈ 19ರ ಬೆಳಗಿನ ಜಾವ ಸಂಭವಿಸಿದ ಮೋಡ ಸ್ಫೋಟಗಳಿಂದ ಉಂಟಾದ ಅಚಾನಕ್ ಪ್ರವಾಹದ ದುರಂತದಲ್ಲಿ ಸಾವಿನ ಸಂಖ್ಯೆ 20 ದಾಟಿದ್ದು, ಇನ್ನೂ ಹಲವರು ಕಾಣೆಯಾಗಿರುವ ಕಾರಣ ಆತಂಕ ಹೆಚ್ಚಾಗಿದೆ.

ಈ ಪ್ರಕೃತಿ ವಿಕೋಪವು ವ್ಯಾಪಕ ಹಾನಿ ಉಂಟುಮಾಡಿದ್ದು, ಮನೆಗಳು, ವಾಹನಗಳು ಮತ್ತು ಪಶುಸಂಪತ್ತು ಹೊಯ್ದೊಯ್ಯಲ್ಪಟ್ಟಿವೆ. ಸಾರ್ವಜನಿಕ ಮೂಲಸೌಕರ್ಯಕ್ಕೂ ಭಾರೀ ಹಾನಿಯಾಗಿದ್ದು, ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಉಪರಾಜ್ಯಪಾಲ ಮನೋಜ್ ಸಿನ್ಹಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಜಮ್ಮುವಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ವೇಗಗೊಳಿಸಲು ಸೂಚಿಸಿದ್ದಾರೆ. ಪೀಡಿತರಿಗೆ ಸರ್ಕಾರ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ: ಪ್ರಧಾನಿ ಮಧ್ಯಸ್ಥಿಕೆಗಾಗಿ ಕಾಂಗ್ರೆಸ್ ಒತ್ತಾಯ

ಪೂಂಚ್ ಜಿಲ್ಲೆಯ ಸುರಂಕೋಟೆ ಪ್ರದೇಶದಲ್ಲಿ ಅತೀ ಭೀಕರ ಹಾನಿ ಸಂಭವಿಸಿದ್ದು, ಪ್ರವಾಹ ಮತ್ತು ಭೂಕುಸಿತಗಳಿಂದ ಮನೆಗಳು ಸಂಪೂರ್ಣವಾಗಿ ಕುಸಿದು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ. ಸೇನೆ, ಪೊಲೀಸರು, SDRF, ನಾಗರಿಕ ಆಡಳಿತ ಮತ್ತು ಸ್ಥಳೀಯ ಸ್ವಯಂಸೇವಕರು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮರ್ರಾ ಗ್ರಾಮದಲ್ಲಿ ಮನೆ ಒಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಎಂಟು ಮಂದಿ ಕಾಣೆಯಾಗಿದ್ದಾರೆ. ಕೆಲವರ ಮೃತದೇಹ ಪತ್ತೆಯಾಗಿದ್ದರೂ ಉಳಿದವರಿಗಾಗಿ ಶೋಧ ಮುಂದುವರಿದಿದೆ. ಸಂಗ್ಲಾ ಗ್ರಾಮದಲ್ಲೂ ಇದೇ ರೀತಿಯ ಘಟನೆ ಸಂಭವಿಸಿ ಮತ್ತೊಂದು ಕುಟುಂಬ ತೀವ್ರ ಹಾನಿಗೊಳಗಾಗಿದೆ.

ಹವೆಲಿ ಪ್ರದೇಶದಲ್ಲಿ ಮಣ್ಣಿನ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಪತಿಯನ್ನು ರಾಜೌರಿಯ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿದೆ.

ಇನ್ನೊಂದೆಡೆ, ಪೂಂಚ್‌ನಲ್ಲಿ ನದಿಯ ಬಳಿ ಸಿಲುಕಿದ್ದ 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಣಾ ತಂಡಗಳು ಸುರಕ್ಷಿತವಾಗಿ ರಕ್ಷಿಸಿವೆ.

ರಾಜೌರಿ ಜಿಲ್ಲೆಯಲ್ಲಿ ಕೂಡ ಪ್ರವಾಹ ಭಾರೀ ಹಾನಿ ಉಂಟುಮಾಡಿದೆ. ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿದು ತಗ್ಗು ಪ್ರದೇಶಗಳು ಮುಳುಗಿದ್ದು, ಮನೆಗಳು, ಅಂಗಡಿಗಳು, ರಸ್ತೆ ಮತ್ತು ಕೃಷಿಭೂಮಿಗಳು ಹಾನಿಗೊಳಗಾಗಿವೆ. ಒಬ್ಬ ಮಹಿಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದು, ಜಲ್ ಶಕ್ತಿ ಇಲಾಖೆಯ ದೈನಂದಿನ ಕಾರ್ಮಿಕನೊಬ್ಬ ಕಾಣೆಯಾಗಿದ್ದಾನೆ.

ಬೆಲಾ ಕಾಲೊನಿ ಪ್ರದೇಶದಲ್ಲಿ ನದಿ ತಡೆಗೋಡೆ ಒಡೆದು ನೀರು ನುಗ್ಗಿ ನ್ಯೂ ಬೆಲಾ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳನ್ನು ಮುಳುಗಿಸಿತು. ಅಲ್ಲಿ ನಿಲ್ಲಿಸಿದ್ದ ಸುಮಾರು 20 ವಾಹನಗಳು ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಅನೇಕ ವಾಹನಗಳು ಹಾನಿಗೊಳಗಾಗಿವೆ. ಅಬ್ದುಲ್ಲಾ ಸೇತುವೆ ಮತ್ತು ತಾರಿಕ್ ಸೇತುವೆ ಸಮೀಪದ ಜೋಪಡಿ ಪ್ರದೇಶಗಳು ನೀರಿನಲ್ಲಿ ಮುಳುಗಿ 50ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿವೆ.

ವಿದ್ಯುತ್ ಮೂಲಸೌಕರ್ಯಕ್ಕೂ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳು ಹೊಯ್ದೊಯ್ಯಲ್ಪಟ್ಟ ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಸೇನೆ, SDRF, ಪೊಲೀಸ್, ಸಿವಿಲ್ ಡಿಫೆನ್ಸ್ ಮತ್ತು ಜಿಲ್ಲಾಡಳಿತದ ತಂಡಗಳು ಸೋಮವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದು, ಹಾನಿಯ ಪ್ರಮಾಣದ ಮೌಲ್ಯಮಾಪನ ನಡೆಯುತ್ತಿದೆ.

ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯ ಎಚ್ಚರಿಕೆ ನೀಡಿದ್ದು, ನದಿ ಮತ್ತು ಹೊಳೆಗಳ ಬಳಿ ವಾಸಿಸುವವರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ನೋಡಿ: “19ನೇ ದಿನಕ್ಕೆ ಸೋನಮ್‌ ವಾಂಗ್‌ಚುಕ್‌ ಉಪವಾಸ – ಕೇಂದ್ರಕ್ಕೆ ಎಚ್ಚರಿಕೆಯ ಗಂಟೆ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *